ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಾಂಸ್ಕೃತಿಕ ಹೊರೆ ಮತ್ತು ರಾಜಕೀಯ ಲಾಭ

ಅಧಿಕಾರ ರಾಜಕಾರಣದ ಅಸೂಕ್ಷ್ಮ ನಡೆಯು ಸಮಾಜದ ಎಲ್ಲ ಸ್ತರಗಳಿಗೂ ವ್ಯಾಪಿಸಿದ್ದು, ಅವು ಮೂಲ ಸ್ಥಾಯಿ ಸ್ವರೂಪವನ್ನು ಕಳೆದುಕೊಳ್ಳುವಂತೆ ಮಾಡಿದೆ
ನಾ.ದಿವಾಕರ
Published 1 ಮಾರ್ಚ್ 2024, 23:30 IST
Last Updated 1 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಸಮಕಾಲೀನ ಭಾರತದ ರಾಜಕೀಯ ಪಲ್ಲಟಗಳ ಹಿನ್ನೆಲೆಯಲ್ಲಿ ನೋಡಿದಾಗ, ಇಲ್ಲಿನ ಅಧಿಕಾರ ರಾಜಕಾರಣವು ಸಂಪೂರ್ಣವಾಗಿ ಸಾಂಸ್ಕೃತಿಕ ನೆಲೆಯಲ್ಲಿ ನಿರ್ವಹಿಸಲ್ಪಡುತ್ತಿರುವುದು ಸ್ಪಷ್ಟವಾಗುತ್ತದೆ. ಜೊತೆಗೇ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ನಂತರದಲ್ಲಿ ಧಾರ್ಮಿಕ ಅಸ್ಮಿತೆಗಳು ಹಾಗೂ ಮತಾಚರಣೆಯ ವಿಭಿನ್ನ ಆಯಾಮಗಳು ಚುನಾವಣಾ ರಾಜಕಾರಣವನ್ನೂ ನಿರ್ದೇಶಿಸುವ ಲಕ್ಷಣಗಳು ಕಾಣುತ್ತಿವೆ. ಸಾಂಸ್ಕೃತಿಕ ರಾಜಕಾರಣ ತನ್ನ ಪರಾಕಾಷ್ಠೆ ತಲುಪಿದೆ. ಸಾಹಿತ್ಯ, ಸಂಗೀತ, ಚಲನಚಿತ್ರರಂಗ, ರಂಗಭೂಮಿಯಂತಹ ಕಲಾ ಪ್ರಕಾರಗಳನ್ನೂ ಆವರಿಸಿರುವ ಈ ರಾಜಕೀಯ ಲಕ್ಷಣವು ಭಾರತದ ಸಾಂಸ್ಕೃತಿಕ ಭೂನಕ್ಷೆಯನ್ನೇ ಬದಲಾಯಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.

ಇಂತಹ ಸನ್ನಿವೇಶದಲ್ಲಿ ಭಾರತದ ಬಹುಸಾಂಸ್ಕೃತಿಕ ನೆಲೆಗಳನ್ನು ಪ್ರತಿನಿಧಿಸುವ ಮತ್ತು ಬಲವಾಗಿ ಪ್ರತಿಪಾದಿಸುವ ಯಾವುದೇ ರಾಜಕೀಯ ಪಕ್ಷದ ಮುಂದೆ ಇರುವ ಬಹುದೊಡ್ಡ ಜವಾಬ್ದಾರಿ ಎಂದರೆ, ಈ ದೇಶದ ಬಹುಧರ್ಮೀಯ-ಬಹುತ್ವದ ಸಾಂಸ್ಕೃತಿಕ ಸಮನ್ವಯವನ್ನು ಕಾಪಾಡಿಕೊಳ್ಳುವುದು. ಈ ಜವಾಬ್ದಾರಿ
ಯನ್ನು ಮರೆತು ಅಥವಾ ನಿರ್ಲಕ್ಷಿಸಿ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದು ಆತ್ಮದ್ರೋಹ
ಆಗುತ್ತದೆ. ಏಕೆಂದರೆ, ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಡುತ್ತಲೇ ಇರುವ ಕೋಟ್ಯಂತರ ಸಂಖ್ಯೆಯ ತಳಸಮುದಾಯದವರಿಗೆ ಬಹುತ್ವವೇ ಪ್ರಧಾನ ತಳಹದಿಯಾಗಿರುತ್ತದೆ. ಭಾರತದ ಸಂವಿಧಾನ ಅಪೇಕ್ಷಿಸುವ ಸ್ವಾತಂತ್ರ್ಯ-ಸಮಾನತೆ-ಭ್ರಾತೃತ್ವ, ಈ ಮೂರೂ ಉನ್ನತಾದರ್ಶಗಳ ತಾತ್ವಿಕ ಮೂಲ ತಳಸಮಾಜದ ಸಾಂಸ್ಕೃತಿಕ ನೆಲೆಗಳಲ್ಲೇ ಅಡಗಿದೆ.

ಹಾಗಾಗಿ, ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ನಿಷ್ಠೆಯನ್ನು ಪ್ರತಿಪಾದಿಸುವ ಒಂದು ಚುನಾಯಿತ ಸರ್ಕಾರಕ್ಕೆ ಈ ಬಹುಸಾಂಸ್ಕೃತಿಕ ತಳಪಾಯವನ್ನು ಮತ್ತಷ್ಟು ಬಲಪಡಿಸುವುದು ಮುಖ್ಯ ಕಾರ್ಯಸೂಚಿಯಾಗಿ ಇರಬೇಕಾಗುತ್ತದೆ. ಸಂವಿಧಾನ ಪೀಠಿಕೆಯ ಪಠಣ ಅಥವಾ ಸಂವಿಧಾನ ಜಾಗೃತಿ ಜಾಥಾದಂತಹ ಕಾರ್ಯಕ್ರಮಗಳು ಆಕರ್ಷಣೀಯವಾಗಿ ಕಾಣುತ್ತವಾದರೂ ಈ ಅಭಿಯಾನಗಳು ಅಂತಿಮವಾಗಿ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವಂತೆ ಎಚ್ಚರ ವಹಿಸಬೇಕಾದದ್ದು ಸರ್ಕಾರದ ಆದ್ಯತೆಯಾಗಬೇಕು.

ಸಾಮಾನ್ಯವಾಗಿ ತಳಸಮುದಾಯಗಳಿಗೆ ಅಥವಾ ಮಹಿಳಾ ಸಂಕುಲಕ್ಕೆ ಸಾಂವಿಧಾನಿಕ ನಿಯಮಗಳ ಅನುಸಾರ ಕಲ್ಪಿಸಲಾಗುವ ಸಮಾನ ಅವಕಾಶಗಳನ್ನೇ ‘ಸಮಾನತೆ’ ಎಂದು ಬಿಂಬಿಸಲಾಗುತ್ತದೆ. ಆಡಳಿತಾತ್ಮಕವಾಗಿ, ಶಾಸನಬದ್ಧತೆಯಿಂದ ಕಲ್ಪಿಸಲಾಗುವ ‘ಸಮಾನ ಅವಕಾಶಗಳು’ ಸಮಾನತೆಯೆಡೆಗೆ ಸಾಗಲು ನೆರವಾಗುವ ಸಾಧನಗಳಷ್ಟೇ ಎನ್ನುವುದು ವಾಸ್ತವ.

ಈ ಸಮಾನ ಅವಕಾಶಗಳು ಕಟ್ಟಕಡೆಯ ವ್ಯಕ್ತಿಗೆ ಅಥವಾ ಅತ್ಯಂತ ನಿಕೃಷ್ಟವಾಗಿ ಕಾಣಲಾಗುವ ಸಮುದಾಯಗಳಿಗೆ, ಅತ್ಯಂತ ದಯನೀಯ ಸ್ಥಿತಿಯಲ್ಲಿಇರುವ ಸಮಾಜಕ್ಕೆ ತಲುಪುವಂತೆ ಮಾಡಲು ತಳಮಟ್ಟದ ಸಾಂಸ್ಕೃತಿಕ ನೆಲೆಗಳನ್ನು ಬಲಪಡಿಸಬೇಕಾಗುತ್ತದೆ. ಚಿತ್ರಕಲೆ, ದೃಶ್ಯಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ, ಚಲನಚಿತ್ರರಂಗ ಹಾಗೂ ಇತರ ಸಂವಹನ ಸಾಧನಗಳು ತಮ್ಮದೇ ಆದ ಸೃಜನಶೀಲ ಪ್ರಯತ್ನಗಳ ಮೂಲಕ ಜನಸಾಮಾನ್ಯರಲ್ಲಿ ಸಮನ್ವಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ನೆರವಾಗುತ್ತವೆ. ಹಿಂದಿನ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣದ ಪರಿಣಾಮ ಈ ಎಲ್ಲ ವಲಯಗಳೂ ಇಂದು ಬಹುಸಂಖ್ಯಾವಾದದ ರಾಜಕಾರಣದಿಂದ ಪ್ರಭಾವಿತವಾಗಿ ತಮ್ಮ ಮೂಲ ಸ್ಥಾಯಿ ಸ್ವರೂಪವನ್ನು ಕಳೆದುಕೊಂಡಿವೆ. ಈ ವಲಯಗಳನ್ನು ಪ್ರತಿನಿಧಿಸುವ ವಿದ್ವತ್‌ ವಲಯವೂ ಸೈದ್ಧಾಂತಿಕವಾಗಿ ಇಬ್ಭಾಗವಾಗಿದೆ. ಇಲ್ಲಿರಬೇಕಾದ ಸೃಜನಶೀಲತೆಯು ಹಂತಹಂತವಾಗಿ ಶಿಥಿಲಗೊಳ್ಳುತ್ತಿದೆ.

ಈ ಸನ್ನಿವೇಶದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಬದ್ಧತೆಯನ್ನು ಪ್ರತಿಪಾದಿಸುವ ಒಂದು ಚುನಾಯಿತ ಸರ್ಕಾರ ತನ್ನ ಸಾಂಸ್ಕೃತಿಕ ಜವಾಬ್ದಾರಿಯನ್ನು ಅರಿತು ಹೆಜ್ಜೆ ಇಡಬೇಕಾಗುತ್ತದೆ. ಅಧಿಕಾರ ರಾಜಕಾರಣದ ಚೌಕಟ್ಟುಗಳನ್ನು ಕಾಪಾಡಿಕೊಳ್ಳಲು ಹಾಗೂ ಚುನಾವಣಾ ರಾಜಕಾರಣದ ಅವಶ್ಯಕತೆ
ಗಳನ್ನು ನೀಗಿಸಲು ನೆರವಾಗುವ ವಿವಿಧ ಸ್ತರಗಳ- ಕ್ಷೇತ್ರಗಳ ಅಧಿಕಾರ ಕೇಂದ್ರಗಳತ್ತ ಗಮನಹರಿಸುವುದಕ್ಕೆ ರಾಜಕೀಯ ಒತ್ತಾಸೆಗಳೂ ಕಾರಣವಾಗಿರಬಹುದು. ಹಾಗಾಗಿಯೇ ನಿಗಮ-ಮಂಡಳಿಗಳ ಮುಖ್ಯಸ್ಥರನ್ನು ನೇಮಿಸುವ ಪ್ರಕ್ರಿಯೆಗೆ ಆದ್ಯತೆ ನೀಡಲಾಗಿದೆ. ಆದರೆ ಇದಕ್ಕೂ ಮೀರಿದ ನೈತಿಕ ಜವಾಬ್ದಾರಿ ಸಾಂಸ್ಕೃತಿಕ ವಲಯದಲ್ಲಿ ಕಾಣಬೇಕಲ್ಲವೇ? ರಾಜ್ಯ ಸರ್ಕಾರ ಬಹುಶಃ ತನ್ನ ಈ ಜವಾಬ್ದಾರಿಯನ್ನು ಮರೆತಿದೆ ಎನ್ನಿಸುತ್ತದೆ.

ಸಾಹಿತ್ಯ, ಲಲಿತಕಲೆ, ದೃಶ್ಯಕಲೆ, ರಂಗಭೂಮಿಯನ್ನು ಒಳಗೊಂಡ ಸಾಂಸ್ಕೃತಿಕ ನೆಲೆಗಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉದ್ದೀಪನಗೊಳಿಸುವ ಮೂಲಕ ಮಾತ್ರವೇ ಈ ಹೊಣೆಯನ್ನು ನಿರ್ವಹಿಸಲು ಸಾಧ್ಯ. ಆದರೆ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಒಂಬತ್ತು ತಿಂಗಳ ಆಡಳಿತದ ನಂತರವೂ ಈ ಬಗ್ಗೆ ಗಮನಹರಿಸಿದಂತಿಲ್ಲ. ಸಾಹಿತ್ಯವಷ್ಟೇ ಅಲ್ಲದೆ ಇತರ ಎಲ್ಲ ಸಾಂಸ್ಕೃತಿಕ ಅಕಾಡೆಮಿ
ಗಳನ್ನು, ರಂಗಸಮಾಜ ಮತ್ತು ರಂಗಾಯಣಗಳನ್ನು‌ ಪ್ರಜಾತಂತ್ರದ ಮೌಲ್ಯಗಳ ನೆಲೆಯಲ್ಲಿ ಮರುಕಟ್ಟುವ ಅವಶ್ಯಕತೆಯನ್ನು ಮನಗಂಡಿದ್ದರೂ, ಸರ್ಕಾರವು ಈ ಕ್ಷೇತ್ರದಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಿದ್ದ ಉಪಕ್ರಮಗಳನ್ನು ನಿರ್ಲಕ್ಷಿಸಿರುವುದು ಅಸೂಕ್ಷ್ಮ ನಡೆ ಎಂದೇ ಹೇಳಬೇಕಿದೆ.

ಇಲ್ಲಿ ಚುನಾವಣಾ ಲಾಭ-ನಷ್ಟಗಳಿಗಿಂತಲೂ ಮುಖ್ಯವಾಗುವುದು ತಳಮಟ್ಟದ ಸಮಾಜದಲ್ಲಿ ಶಿಥಿಲ
ವಾಗುತ್ತಿರುವ ಬಹುಸಾಂಸ್ಕೃತಿಕ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಬೇಕಾದ ನೈತಿಕ ಜವಾಬ್ದಾರಿ. ಇನ್ನಾದರೂ ಸರ್ಕಾರ ಈ ಕುರಿತು ಯೋಚಿಸುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT