ಶುಕ್ರವಾರ, ಡಿಸೆಂಬರ್ 6, 2019
21 °C

ಮೆಕ್ಕಾ ಮಸೀದಿಯ ನಿಯಮ ಪಾಲನೆಯಾಗಲಿ

Published:
Updated:

‘ಮಸೀದಿಗಳಿಗೆ ಮಹಿಳೆಯರಿಗೆ ಪ್ರವೇಶ ಇಲ್ಲ. ಹಾಗೆಯೇ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಸರಿಯಲ್ಲ’ ಎಂಬ ಪೇಜಾವರ ಶ್ರೀಗಳ ಹೇಳಿಕೆ ಪತ್ರಿಕೆಗಳಲ್ಲಿ ಬಂದದ್ದು ಓದಿ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ.

ಪ್ರತಿಯೊಂದಕ್ಕೂ ಮುಸ್ಲಿಮರನ್ನು ಎಳೆದು ತರಬೇಡಿ ಸ್ವಾಮಿ. ನಮಗೆ ನಮ್ಮ ಬಡತನ, ಅನಕ್ಷರತೆಯ ತಾಪತ್ರಯಗಳು ಸಾಕಷ್ಟಿವೆ. ಶಬರಿಮಲೆಯ ನಿಯಮಗಳ ಬಗ್ಗೆ ನಾವು ಮುಸ್ಲಿಮರು ಯಾರೂ ಮಾತನಾಡುವುದಿಲ್ಲ. ಅದು ಆ ದೇವಸ್ಥಾನಕ್ಕೆ ಬಿಟ್ಟ ವಿಷಯ.

ಪೇಜಾವರ ಸ್ವಾಮೀಜಿ ಅವರು ಮಸೀದಿಯ ನಿಯಮಗಳೇ ತಮಗೂ ಮಾದರಿ ಎಂದು ಭಾವಿಸುವುದಾದರೆ, ಮುಸ್ಲಿಮರ ಜಾಗತಿಕ ಶ್ರದ್ಧಾಕೇಂದ್ರವಾಗಿರುವ ಮೆಕ್ಕಾದ ಕಾಬಾ ಮಸೀದಿಯ ನಿಯಮಗಳನ್ನು ಪಾಲಿಸಲು ಹೇಳುವುದು ಒಳ್ಳೆಯದು. ಕಾಬಾ ಮಸೀದಿಯಲ್ಲಿ ಮುಸ್ಲಿಂ ಪುರುಷರು ಮತ್ತು ಮಹಿಳೆಯರಿಗೆ ಮುಕ್ತ ಪ್ರವೇಶವಿದೆ. ಇಬ್ಬರೂ ಜೊತೆಯಾಗಿ ಅಲ್ಲಿ ನಮಾಜ್ ಮಾಡುತ್ತಾರೆ.

ಪ್ರವಾದಿ ಮೊಹಮ್ಮದ್ ಪೈಗಂಬರರ ಕಾಲದಲ್ಲಿ ಮತ್ತು ಆ ಬಳಿಕದ ಇಬ್ಬರು ಖಲೀಫರ ಕಾಲದಲ್ಲಿ ಮುಸ್ಲಿಂ ಮಹಿಳೆಯರು ಮಸೀದಿಗಳಲ್ಲಿ ಮುಕ್ತವಾಗಿ ಪ್ರವೇಶ ಹೊಂದಿದ್ದರು. ಆ ಬಳಿಕ ಸಾಮಾಜಿಕ ವೈಷಮ್ಯದ ಕಾರಣಗಳಿಗಾಗಿ ಮಹಿಳೆಯರಿಗೆ ಪ್ರತ್ಯೇಕ ಮಸೀದಿಗಳ ವ್ಯವಸ್ಥೆ ಆಯಿತು. ಈಗಲೂ ಮಹಿಳೆಯರು ಪ್ರತ್ಯೇಕ ಮಸೀದಿಗಳಲ್ಲಿ ನಮಾಜ್ ಮಾಡುತ್ತಾರೆ.

ಪೇಜಾವರ ಶ್ರೀಗಳು ಈ ಬಗ್ಗೆ ಮುಸ್ಲಿಂ ಧರ್ಮಗುರುಗಳನ್ನು ಸಂಪರ್ಕಿಸಿ ಸರಿಯಾದ ಮಾಹಿತಿ ಪಡೆಯುವುದು ಒಳ್ಳೆಯದು. ಕಾಬಾ ಮಸೀದಿಯ ಮಾದರಿಯನ್ನು ಇಟ್ಟುಕೊಂಡು ಸ್ವಾಮೀಜಿ, ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವುದಾದಲ್ಲಿ ನಮ್ಮ ಅಭ್ಯಂತರ ಏನೂ ಇಲ್ಲ.

ಎಂ. ನವಾಝ್, ಬೆಂಗಳೂರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು