ಬುಧವಾರ, ಫೆಬ್ರವರಿ 1, 2023
26 °C

ಗುಜರಾತ್‌ ಅಖಾಡದಲ್ಲೊಂದು ಸುತ್ತು | ಪಾಟೀದಾರರ ಓಲೈಕೆಗೆ ‘ಖಾಪ್‌’ ಸಮೀಕರಣದ ಮೊರೆ

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

ಗಾಂಧಿನಗರ (ಗುಜರಾತ್‌): ಗುಜರಾತ್‌ ವಿಧಾನಸಭಾ ಚುನಾವಣೆಯ ಟಿಕೆಟ್‌ ಹಂಚಿಕೆಯ ವೇಳೆ ಬಿಜೆಪಿ


ಮಂಜುನಾಥ ಹೆಬ್ಬಾರ್‌

ಹಾಗೂ ಕಾಂಗ್ರೆಸ್‌ ಪಕ್ಷಗಳು ‘ಕ್ಷತ್ರಿಯ–ದಲಿತ (ಹರಿಜನ)–ಆದಿವಾಸಿ–ಪಾಟೀದಾರ್‌ (ಪಟೇಲರು)’ ಸಮುದಾಯಗಳನ್ನೊಳಗೊಂಡ ‘ಖಾಪ್‌’ ಸೂತ್ರದ ಮೊರೆ ಹೋಗಿದ್ದು, ಈ ಜಾತಿ ಸಮೀಕರಣ ದಿಂದ ಭರಪೂರ ರಾಜಕೀಯ ಲಾಭ ಪಡೆಯುವ ಹವಣಿಕೆಯಲ್ಲಿವೆ. 

ಕಾಂಗ್ರೆಸ್‌ನ ಮಾಧವಸಿನ್ಹ ಸೋಲಂಕಿ ಅವರು 1980 ಹಾಗೂ 1985ರ ಚುನಾವಣೆಗಳಲ್ಲಿ ‘ಖಾಮ್‌ (ಕ್ಷತ್ರಿಯ–ದಲಿತ (ಹರಿಜನ)–ಆದಿವಾಸಿ–ಮುಸ್ಲಿಂ) ಕೂಟ ಕಟ್ಟಿ ಪಕ್ಷವು 142 ಹಾಗೂ 149 ಕ್ಷೇತ್ರಗಳಲ್ಲಿ ಗೆಲ್ಲುವಂತೆ ಮಾಡಿದ್ದರು. ಬಿಜೆಪಿ ಈ ಸಲ ಸೋಲಂಕಿ ಅವರ ಸೂತ್ರವನ್ನು ಸ್ವಲ್ಪ ಪರಿಷ್ಕರಿಸಿದೆ. ಮುಸ್ಲಿಮರ ಬದಲು ಪಾಟೀದಾರರನ್ನು ಈ ಗುಂಪಿಗೆ ಸೇರಿಸಿಕೊಂಡಿದೆ. 

ರಾಜ್ಯದಲ್ಲಿ ಶೇ 9ರಷ್ಟು ಜನಸಂಖ್ಯೆ ಇರುವ ಮುಸ್ಲಿಮರಿಗೆ ಒಂದೂ ಕ್ಷೇತ್ರದಲ್ಲೂ ಕೇಸರಿ ಪಡೆ ಟಿಕೆಟ್‌ ನೀಡಿಲ್ಲ. 2017ರಲ್ಲಿ ಪಕ್ಷದ ಉತ್ತಮ ಸಾಧನೆಗೆ ಕಾರಣರಾಗಿದ್ದ ಪಟೇಲರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನಕ್ಕೆ ‘ಕೈ’ ಪಡೆ ಪ್ರಯತ್ನಿಸಿರುವುದು ಟಿಕೆಟ್‌ ಹಂಚಿಕೆಯಲ್ಲಿ ಕಾಣಬಹುದು. ಪಕ್ಷವು ಆರು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ. ಕಳೆದ ಸಲ 10 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡಿತ್ತು. 

2017ರ ಚುನಾವಣೆಯಲ್ಲಿ ಕಮಲ ಪಾಳಯವು 34 ಕ್ಷೇತ್ರಗಳಲ್ಲಿ ಪಾಟೀದಾರರಿಗೆ ಟಿಕೆಟ್‌ ನೀಡಿತ್ತು. ಈ ಸಲ 45ಕ್ಕೆ ಏರಿದೆ. ಕಳೆದ ಚುನಾವಣೆಯ ಒಬಿಸಿ ಸಮುದಾಯದ 39 ಮಂದಿಯನ್ನು ಹುರಿಯಾಳುಗಳನ್ನಾಗಿ ಮಾಡಿದ್ದರೆ, ಈ ಸಲ 59ಕ್ಕೆ ಏರಿದೆ. ಕಾಂಗ್ರೆಸ್‌ ಸಹ ಸಮೀಕರಣದಲ್ಲಿ ಹಿಂದೆ ಬಿದ್ದಿಲ್ಲ. ಒಬಿಸಿ ಸಮುದಾಯದ 48 ಹಾಗೂ ಪಾಟೀದಾರ್ ಸಮುದಾಯದ 42 ಮಂದಿಯನ್ನು ಕಣಕ್ಕೆ ಇಳಿಸಿದೆ.

2017ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ, ಆಮ್ ಆದ್ಮಿ ಪಕ್ಷ (ಎಎಪಿ) ಸಹ ಜಾತಿ ಸಮೀಕರಣದತ್ತ ಒಲವು ತೋರಿತ್ತು. 2021ರ ಸೂರತ್‌ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಪಾಟೀದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಸಿ 27 ವಾರ್ಡ್‌ಗಳಲ್ಲಿ ಗೆದ್ದು ಯಶಸ್ಸು ಗಳಿಸಿತ್ತು. ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ಪಟೇಲ್‌ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಹೆಚ್ಚಿನ ಮನ್ನಣೆ ನೀಡಿದೆ. ಒಬಿಸಿ ಸಮುದಾಯಕ್ಕೆ ಸೇರಿದ ಈಸುದಾನ್‌ ಗಢವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಆ ಸಮುದಾಯವನ್ನು ಸೆಳೆಯುವ ಯತ್ನ ಮಾಡಿದೆ.

ಪಾಟೀದಾರ್‌ ಸಮುದಾಯವು ಗುಜರಾತ್‌ನಲ್ಲಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯವಾಗಿದೆ. ರಾಜ್ಯದ ಒಟ್ಟು 6 ಕೋಟಿ ಜನಸಂಖ್ಯೆಯಲ್ಲಿ ಪಟೇಲ್‌ ಸಮುದಾಯದವರು ಶೇ 14ರಷ್ಟು ಇದ್ದಾರೆ ಎಂದು ಅಂದಾಜಿಸಲಾಗಿದೆ. ರಾಜ್ಯದ 182 ವಿಧಾನಸಭಾ ಕ್ಷೇತ್ರಗಳ ಪೈಕಿ 60ರಿಂದ 65 ಕ್ಷೇತ್ರಗಳಲ್ಲಿ ಪಟೇಲರು ನಿರ್ಣಾಯಕರಾಗುವಷ್ಟು ಸಂಖ್ಯೆಯಲ್ಲಿದ್ದಾರೆ. 1980ರ ದಶಕದವರೆಗೆ ಕಾಂಗ್ರೆಸ್‌ ಪಕ್ಷದ ಜತೆಗೆ ಈ ಸಮುದಾಯ ಇತ್ತು. ಆದರೆ, ಕಾಂಗ್ರೆಸ್‌ ಪಕ್ಷವು ‘ಖಾಮ್‌’ ಸಮೀಕರಣಕ್ಕೆ ಒತ್ತು ನೀಡಿದ ನಂತರ ಈ ಸಮುದಾಯವು ಬಿಜೆಪಿಯತ್ತ ವಾಲಿತು.

ತಮ್ಮ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳಡಿ ಮೀಸಲಾತಿ ನೀಡಬೇಕು ಎಂದು ಪಾಟೀದಾರರು 2015ರಲ್ಲಿ ಚಳವಳಿ ಆರಂಭಿಸುವ ಮೂಲಕ ಸಮುದಾಯದ ಬಿಜೆಪಿ ನಿಷ್ಠೆಯ ತಳಪಾಯವು ಅಲುಗಾಡಿತು. ಈ ದೀರ್ಘಕಾಲದ ಹೋರಾಟದ ನೇತೃತ್ವ ವಹಿಸಿದ್ದು ಹಾರ್ದಿಕ್‌ ಪಟೇಲ್‌. ಈ ಹೋರಾಟದ ಮೂಲಕವೇ ಅವರು ಪ್ರವರ್ಧಮಾನಕ್ಕೆ ಬಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾರ್ದಿಕ್‌ ಪಟೇಲ್‌, ಒಬಿಸಿ ಮುಖಂಡ ಅಲ್ಪೆಶ್‌ ಠಾಕೂರ್‌ ಹಾಗೂ ದಲಿತ ನಾಯಕ ಜಿಗ್ನೇಶ್ ಮೆವಾನಿ ಅವರು ಕಾಂಗ್ರೆಸ್‌ಗೆ ವೇಗ ಹಾಗೂ ಹುರುಪು ತುಂಬಿದರು. 

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಪಾಟೀದಾರ್‌ ಮೀಸಲು ಹೋರಾಟವನ್ನು ಬಹುವಾಗಿ ನೆಚ್ಚಿಕೊಂಡಿತು. ತ್ರಿವಳಿ ನಾಯಕರ ಬಲದ ನೆರವಿನಿಂದ ಕಾಂಗ್ರೆಸ್‌ ಪಕ್ಷವು ಬಿಜೆಪಿಗೆ ಭಾರಿ ಸ್ಪರ್ಧೆ ಒಡ್ಡಿತು. ಪರಿಣಾಮವಾಗಿ ಬಿಜೆಪಿ ಸೀಟುಗಳ ಸಂಖ್ಯೆ 99ಕ್ಕೆ ಕುಸಿಯಿತು. ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ನೀಡುವ ತೀರ್ಮಾನದಿಂದಾಗಿ ಪಾಟೀದಾರ್‌ ಸಮುದಾಯದ ಮತಗಳು ತಮ್ಮ ಪಕ್ಷಕ್ಕೆ ಮರಳಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಶೇ 10ರಷ್ಟು ಮೀಸಲಾತಿ ನೀಡುವುದಾಗಿ ಗುಜರಾತ್‌ ಸರ್ಕಾರ ಈಗಾಗಲೇ ಘೋಷಿಸಿದೆ.

ಈ ವರ್ಷ ಬಿಜೆಪಿಗೆ ಸೇರಿರುವ ಹಾರ್ದಿಕ್‌ ಪಟೇಲ್‌, ‘ಕೇಂದ್ರದ ನಿರ್ಧಾರದಿಂದಾಗಿ ಗುಜರಾತ್‌ನ ಪಟೇಲ್‌ ಸಮುದಾಯದ ಹಲವು ಸಮಸ್ಯೆಗಳು ಪರಿಹಾರ ಆಗಿವೆ. ಹಾಗಾಗಿ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುವಂತೆ ಈ ಸಮುದಾಯ ನೋಡಿಕೊಳ್ಳಲಿದೆ’ ಎಂದು ಹೇಳಿಕೊಂಡಿದ್ದರು.

ಕಳೆದ ವರ್ಷ ಇಡೀ ಸಂಪುಟ ಬದಲಾವಣೆಯ ಸಂದರ್ಭದಲ್ಲಿ, ಪಾಟೀದಾರ್ ಸಮುದಾಯಕ್ಕೆ ಏಳು ಸಚಿವ ಸ್ಥಾನ ನೀಡುವ ಮೂಲಕ, ಸಮುದಾಯವನ್ನು ಸಮಾಧಾನ
ಪಡಿಸಲು ಬಿಜೆಪಿ ಯತ್ನಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.  ಇತರೆ ಹಿಂದುಳಿದ ವರ್ಗಗಳ ಆರು ಶಾಸಕರಿಗೆ, ಪರಿಶಿಷ್ಟ ಪಂಗಡದ ಆರು ಜನರಿಗೆ ಮತ್ತು ಪರಿಶಿಷ್ಟ ಜಾತಿಗಳ ಮೂವರಿಗೆ ಸಚಿವ ಸ್ಥಾನ ನೀಡಿ ಈ ಸಮುದಾಯಗಳನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿತ್ತು. ಅದರ ಮುಂದುವರಿಕೆಯ ಭಾಗವಾಗಿ ಟಿಕೆಟ್ ಹಂಚಿಕೆಯಲ್ಲಿ ‘ಖಾಪ್‌’ ಸೂತ್ರ ಅನುಸರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು