ಪಬ್ಲಿಕ್ ಪರೀಕ್ಷೆ ಸ್ಥಗಿತವೇ ಪರಿಹಾರ?

ಸೋಮವಾರ, ಮೇ 20, 2019
31 °C
ಶೈಕ್ಷಣಿಕ ಸಮಾನತೆಗಾಗಿ ಪರೀಕ್ಷಾ ಪ್ರಕ್ರಿಯೆಗೆ ಸುಧಾರಣೆ ತರಲೇಬೇಕಿದೆ

ಪಬ್ಲಿಕ್ ಪರೀಕ್ಷೆ ಸ್ಥಗಿತವೇ ಪರಿಹಾರ?

Published:
Updated:

ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಈ ವರ್ಷ ಹಾಸನ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯಿತು. ಅದರ ಕೀರ್ತಿ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ಮುಡಿಗೇರಿತು. ಅವರ ಮುಡಿಯಿಂದ ಅದನ್ನು ಹಾಸನ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆ ಭವಾನಿ ರೇವಣ್ಣ ಅವರ ಮುಡಿಗೇರಿಸುವ ಮಾತು ಎಚ್‌.ಡಿ.ರೇವಣ್ಣ ಅವರಿಂದಲೇ ಕೇಳಿಬಂತು. ಅಂತೂ ಅದನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮುಡಿಗೇರಿಸುವ ಇರಾದೆ ಯಾರಿಂದಲೂ ವ್ಯಕ್ತವಾಗಲಿಲ್ಲ.

ಈಗ ಪ್ರಶ್ನೆ ಏನೆಂದರೆ, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ಅಳತೆಗೋಲಾಗಿ ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ಪರಿಗಣಿಸಬಹುದೇ? ರಾಜ್ಯದಾದ್ಯಂತ ಒಂದೇ ಪ್ರಶ್ನೆಪತ್ರಿಕೆ ಎಂಬುದನ್ನು ಬಿಟ್ಟರೆ ಇದರಲ್ಲಿ ಮತ್ತೇನಾದರೂ ಸಮಾನತೆ ಇರುತ್ತದೆಯೇ? ಎಲ್ಲಾ ಶಾಲೆಗಳಲ್ಲಿ ಒಂದೇ ಮಟ್ಟದಲ್ಲಿ ಪಾಠಪ್ರವಚನಗಳು ನಡೆದಿರುತ್ತವೆಯೇ? ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ನೀತಿ ನಿಯಮಗಳನ್ನು ಸಮಾನವಾಗಿ ಪಾಲಿಸಲಾಗಿರುತ್ತದೆಯೇ? ಅಕ್ರಮಗಳಾಗದಂತೆ ಕರಾರುವಾಕ್ಕಾಗಿ ಎಚ್ಚರ ವಹಿಸಲಾಗುತ್ತದೆಯೇ? ಮೌಲ್ಯಮಾಪನ ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಕುಳಿತ ಶಿಕ್ಷಕರೆಲ್ಲ ಸಮಾನ ಸಾಮರ್ಥ್ಯ ಉಳ್ಳವರೇ? ಉತ್ತರಪತ್ರಿಕೆಯಲ್ಲಿರುವುದು ನಕಲು, ಬೇರೆಯವರು ಬರೆದದ್ದು ಅಥವಾ ಡಿಕ್ಟೇಟ್ ಮಾಡಿ ಬರೆಸಿದ ಉತ್ತರಗಳೆಂದು ಗುಮಾನಿ ಬಂದರೂ, ಅದರ ಬಗ್ಗೆ ಮೌಲ್ಯಮಾಪಕರು ತಮ್ಮ ಮೇಲ್ವಿಚಾರಕರಿಗೆ ದೂರು ನೀಡುತ್ತಾರೆಯೇ? ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡುವಾಗ ಅಂಕ ನೀಡುವುದರಲ್ಲಿ ಅತಿ ಉದಾರಿಗಳಾಗಿರಬೇಕೆಂಬ ಮೇಲ್ವಿಚಾರಕರ ಮೌಖಿಕ ಸೂಚನೆಯನ್ನು ಶಿಕ್ಷಕರು ಅನುಸರಿಸಿದ್ದಲ್ಲದೆ ಪ್ರಶ್ನಿಸಿದ್ದಿದೆಯೇ? ಈ ಔದಾರ್ಯವನ್ನು ತೋರದಿದ್ದರೆ ಎದುರಿಸಬೇಕಾಗುವ ಪರಿಣಾಮಗಳ ಭಯಕ್ಕೆ ಶರಣಾಗದ ಶಿಕ್ಷಕರಿರಬಹುದೇ?

ಮೇಲಿನ ಎಲ್ಲ ಪ್ರಶ್ನೆಗಳಿಗೂ ‘ಇಲ್ಲ’ ಎಂಬ ಉತ್ತರ ಸಿಕ್ಕುತ್ತದೆ. ಮುಖ್ಯವಾಗಿ, ಎಲ್ಲಾ ಶಾಲೆಗಳಲ್ಲೂ ಸಮಾನ ಮಟ್ಟದಲ್ಲಿ ಪಾಠ ಪ್ರವಚನ ನಡೆದಿರುವುದಿಲ್ಲ. ಪ್ರತಿ ವಿಷಯಕ್ಕೂ ತಜ್ಞ ಶಿಕ್ಷಕರಿರುವ ಖಾಸಗಿ ಶಾಲೆಗಳಿಂದ ತೊಡಗಿ, ಕೆಲವು ವಿಷಯಗಳಿಗೆ ಪೂರ್ಣಕಾಲಿಕ ಶಿಕ್ಷಕರೇ ಇಲ್ಲದ ಸರ್ಕಾರಿ ಪ್ರೌಢಶಾಲೆಗಳ ನಡುವೆ ಸಮಾನ ಮಟ್ಟದ ಪಾಠ ಪ್ರವಚನ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರಶ್ನೆಪತ್ರಿಕೆಯನ್ನು ತಯಾರಿಸಿದವರು ಯಾವುದೇ ಮಟ್ಟವನ್ನು ಗಮನದಲ್ಲಿ ಇಟ್ಟುಕೊಂಡರೂ ಅದು ಇನ್ನುಳಿದ ಮಟ್ಟಗಳ ವಿದ್ಯಾರ್ಥಿಗಳಿಗೆ ಆತಂಕಕಾರಿಯಾಗುತ್ತದೆ. ನಿಷ್ಠೆಯಿಂದ ಕಲಿಸದ ಹಾಗೂ ಸರಿಯಾಗಿ ಕಲಿಸಲು ಗೊತ್ತಿಲ್ಲದ ಶಿಕ್ಷಕರಿದ್ದಲ್ಲಿ ಈ ಆತಂಕ ಹೆಚ್ಚಾಗುತ್ತದೆ. ಅಂತಹ ಕಡೆ ಪರೀಕ್ಷೆಯ ನಿಯಮಗಳು ಗಾಳಿಗೆ ತೂರಿಹೋಗಿ ಅಕ್ರಮಗಳು ನಡೆದರೂ ಅಂತಹ ಕೇಂದ್ರಗಳಿಂದ ಬಂದ ಉತ್ತರ ಪತ್ರಿಕೆಗಳನ್ನೂ ಸಮಾನ ನೆಲೆಯಲ್ಲಿ ಪರಿಗಣಿಸಬೇಕಾಗುತ್ತದೆ. ಆದರೂ ಒಬ್ಬ ಮೌಲ್ಯಮಾಪಕ, ಅಕ್ರಮದ ಬಗ್ಗೆ ಆರೋಪ ಮಾಡುವ ಧೈರ್ಯ ತೋರಿದರೆ ಆತನ ಮುಂದಿರುವ ಹೋರಾಟದ ದುರ್ಗಮ ಹಾದಿಯ ಬಗ್ಗೆ ಮೇಲ್ವಿಚಾರಕರು ಎಚ್ಚರಿಸುತ್ತಾರೆ. ಸಹಜವಾಗಿಯೇ, ಯಾರಿಗಾಗಿ ಹೋರಾಟ ಬೇಕಾಗಿದೆ ಎಂಬ ಪ್ರಶ್ನೆ ಮೂಡುತ್ತದೆ. ಮೇಲಿನಿಂದ ಬಂದ ಸೂಚನೆಗಳಂತೆ ಕೆಳಗಿನವರು ದುಡಿಯುತ್ತಾರೆ. ಯಶಸ್ವಿಯಾಗಿ ಮೌಲ್ಯಮಾಪನ ನಡೆದು ಫಲಿತಾಂಶ ಬರುತ್ತದೆ. ಇಂತಹ ಫಲಿತಾಂಶದ ಕೀರ್ತಿಯು ಆತ್ಮಸಾಕ್ಷಿ ಉಳ್ಳವರನ್ನು ಕುಟುಕದೆ ಇರುತ್ತದೆಯೇ?

ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಶಿಕ್ಷಕರ ಸ್ವಜನ ಪಕ್ಷಪಾತವನ್ನು ತಡೆಯುವ ನಿಟ್ಟಿನಲ್ಲಿ ಒಂದು ಮಹತ್ವದ ಕ್ರಮ ಅನುಸರಿಸುತ್ತಿದೆ. ಅದೇನೆಂದರೆ, ಒಂದು ಜಿಲ್ಲೆಯ ಉತ್ತರ ಪತ್ರಿಕೆಗಳನ್ನು ಮತ್ಯಾವುದೋ ಜಿಲ್ಲೆಗೆ ಕಳಿಸುವುದು. ಮೌಲ್ಯಮಾಪಕರಿಗೆ ತಮ್ಮ ಕೈಗೆ ಸಿಕ್ಕಿದ ಉತ್ತರ ಪತ್ರಿಕೆಗಳು ಯಾವ ಜಿಲ್ಲೆಗೆ ಸೇರಿದವುಗಳೆಂದು ಗೊತ್ತಿರುವುದಿಲ್ಲ, ಹಾಗಾದಾಗ ಮೌಲ್ಯಮಾಪಕರು ನಿಷ್ಪಕ್ಷಪಾತವಾಗಿ ಅಂಕಗಳನ್ನು ನೀಡಲು ಅನುಕೂಲ. ಇದು ತಾತ್ವಿಕವಾಗಿ ಸರಿಯಾದ ಕ್ರಮ. ಆದರೆ ವಾಸ್ತವಿಕವಾಗಿ ಯಾವ ಜಿಲ್ಲೆಯ ಉತ್ತರ ಪತ್ರಿಕೆಗಳೆಂದು ತಿಳಿಯುತ್ತದಂತೆ. ಹೀಗೆ ತಿಳಿದಾಗ, ಯಾವ ಜಿಲ್ಲೆಯಲ್ಲಿ ನಕಲು ಮತ್ತು ಅಕ್ರಮಗಳು ನಡೆದಿವೆಯೆಂಬ ಅನುಭವಜನ್ಯ ಸತ್ಯ ಶಿಕ್ಷಕರಿಗೆ ತಿಳಿಯುತ್ತದೆ. ಫಲಿತಾಂಶ ಬಂದಾಗ ಅಂತಹ ಜಿಲ್ಲೆಗಳೇ ಫಲಿತಾಂಶದ ಪ್ರಮಾಣದಲ್ಲಿ ಮೇಲಕ್ಕೆ ಜಿಗಿದಿದ್ದರೆ ಇತರರಿಗೆ ಅಚ್ಚರಿ ಆಗದಿರುತ್ತದೆಯೇ?

ಮೌಲ್ಯಮಾಪನವು ತೃಪ್ತಿದಾಯಕವಾಗಿಲ್ಲ ಎನ್ನುವುದು ಪುನರ್ ಮೌಲ್ಯಮಾಪನಕ್ಕೆ ಬರುವ ಅರ್ಜಿಗಳ ಸಂಖ್ಯೆಯಿಂದಲೇ ತಿಳಿಯುತ್ತದೆ. ಇದನ್ನೂ ಪರೀಕ್ಷಾ ಮಂಡಳಿಯು ಲಾಭದಾಯಕ ದಂಧೆಗೆ ತಿರುಗಿಸಿರುವಂತೆ ಕಾಣುತ್ತದೆ. ಅರ್ಜಿದಾರರ ಸಂಖ್ಯೆ ಹೆಚ್ಚಿದಂತೆ ಶುಲ್ಕದಲ್ಲಿಯೂ ಹೆಚ್ಚಳ ಮಾಡುವ ಮಂಡಳಿಯ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಒಂದು ವೇಳೆ ಅರ್ಹವಾಗಿಯೇ ಸರಿಯಾದ ಅಂಕಗಳನ್ನು ಪಡೆದರೂ ಅವು ದಕ್ಕುವ ವೇಳೆಗೆ ಆಯ್ಕೆಯ ಕಾಲೇಜು ತಪ್ಪುವ ಹಾಗೂ ಆಸಕ್ತಿಯ ಕೋರ್ಸ್ ತಪ್ಪುವ ನಷ್ಟಗಳು ಆಗಿಯೇ ಆಗುತ್ತವೆ.

ಪ್ರತಿವರ್ಷ ಆಗಸ್ಟ್‌ನಲ್ಲಿ ನಾಮಿನಲ್ ರೋಲ್ ಕಳಿಸುವಲ್ಲಿಂದ ಆರಂಭಿಸಿ, ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಫಲಿತಾಂಶ ನೀಡುವ ಒಂಬತ್ತು ತಿಂಗಳ ಪರೀಕ್ಷಾ ಮಂಡಳಿಯ ಪ್ರಕ್ರಿಯೆ ಒಂದು ದೊಡ್ಡ ಯಜ್ಞವೇ ಸರಿ. ಆದರೆ, ಅದು ಶೈಕ್ಷಣಿಕ ಅಸಮಾನತೆಗಳನ್ನು ಪೋಷಿಸಿಕೊಂಡು ಬರುವುದರಿಂದಾಗಿ, ಸಾಮಾಜಿಕ ಸಮಾನತೆಗೆ ಯಾವ ತಳಹದಿಯನ್ನೂ ಒದಗಿಸುವುದಿಲ್ಲ. ಹಾಗಿದ್ದ ಬಳಿಕ ಇದರಲ್ಲಿ ಸುಧಾರಣೆ ತರಲೇಬೇಕು. ಸುಧಾರಣೆಗೆ ನನ್ನಲ್ಲಿ ಎರಡು ಪ್ರಸ್ತಾವಗಳಿವೆ. ಒಂದು ತೀರಾ ಕ್ರಾಂತಿಕಾರಿಯಾದದ್ದು. ಅದು ಅಸಂಬದ್ಧ ಎನಿಸಿದರೂ ವಾಸ್ತವಿಕವಾಗಿ ಸುಸಂಬದ್ಧವೇ ಆಗಿದೆ. ಅದೇನೆಂದರೆ, ರಾಜ್ಯ ಮಟ್ಟದ ಪಬ್ಲಿಕ್ ಪರೀಕ್ಷೆಯನ್ನು ರದ್ದುಗೊಳಿಸುವುದು. ಆಯಾ ಶಾಲೆಗಳೇ ಪರೀಕ್ಷೆ ಮಾಡಿ, ತೇರ್ಗಡೆಯಾದವರಿಗೆ ಸರ್ಟಿಫಿಕೇಟ್ ನೀಡುವುದು. ಅದರ ಆಧಾರದ ಮೇಲೆ ಪಿ.ಯು. ಕಾಲೇಜುಗಳು ತಾವೇ ಪರೀಕ್ಷೆ ನಡೆಸಿ ತಮಗೆ ಸೂಕ್ತವೆನ್ನಿಸಿದ ಅಭ್ಯರ್ಥಿಗಳನ್ನು ಸೇರ್ಪಡೆಗಾಗಿ ಆಯ್ದುಕೊಳ್ಳುವುದು. ಹೀಗೆ ಮಾಡುವುದರಿಂದ ಪಿ.ಯು. ಕಾಲೇಜುಗಳು ಗುಣಮಟ್ಟ ಕಾಯ್ದುಕೊಳ್ಳಬಹುದು. ಮುಂದಿನ ಹಂತದ ಕಾಲೇಜುಗಳಿಗೂ ಇದೇ ರೀತಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಸೂಕ್ತ. ಆಗ ಶಿಕ್ಷಣ ಸಂಸ್ಥೆಗಳೆಲ್ಲಾ ತಮ್ಮ ಗುಣಮಟ್ಟವನ್ನು ಉನ್ನತ ಮಟ್ಟದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಸರ್ಕಾರಕ್ಕೆ ಎಸ್ಎಸ್ಎಲ್‌ಸಿ ಪರೀಕ್ಷೆಯ ವೆಚ್ಚಗಳೂ ಇಲ್ಲ, ಮೌಲ್ಯಮಾಪನ ಬಹಿಷ್ಕಾರದ ಭಯವೂ ಇಲ್ಲ, ಪಬ್ಲಿಕ್ ಪರೀಕ್ಷಾ ಮಂಡಳಿಯ ಅಗತ್ಯವೂ ಇಲ್ಲ. ಅಲ್ಲಿರುವ ಸಿಬ್ಬಂದಿಯನ್ನು ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡಲು ಕಳಿಸಬಹುದು.

ಪಿ.ಯು. ಹಂತದಲ್ಲಿಯೂ ಪಬ್ಲಿಕ್ ಪರೀಕ್ಷೆ ಬೇಡ. ಆಯಾ ಕಾಲೇಜುಗಳೇ ಗುಣಮಟ್ಟವನ್ನು ಕಾಪಾಡಿಕೊಂಡು ಪರೀಕ್ಷೆ ನಡೆಸಿ ಸರ್ಟಿಫಿಕೇಟನ್ನು ನೀಡಲಿ. ವೃತ್ತಿಪರ ಶಿಕ್ಷಣಕ್ಕೆ ಸೇರಿಸಿಕೊಳ್ಳಲು ಹೇಗೂ ಸಿಇಟಿ, ‘ನೀಟ್’ ಮುಂತಾದವು ಇದ್ದೇ ಇವೆಯಲ್ಲ. ಸುಮ್ಮನೆ ಪಬ್ಲಿಕ್ ಪರೀಕ್ಷೆ ಮಾಡಲು ಹೋಗಿ ಪ್ರಶ್ನೆಪತ್ರಿಕೆಗಳ ಸೋರಿಕೆ ಆಗುವುದು, ಒಳಗೇ ಅಡಗಿರುವ ಆ ಕಳ್ಳರನ್ನು ಹಿಡಿಯುವ ನಾಟಕವಾಡುವುದು, ಉಪನ್ಯಾಸಕರಿಂದ ಮುಷ್ಕರದ ಬೆದರಿಕೆ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುವುದು ಇವೆಲ್ಲಾ ಯಾಕೆ ಬೇಕು? ಪಬ್ಲಿಕ್ ಪರೀಕ್ಷೆ ಎಂಬ ಪ್ರಕ್ರಿಯೆಗೆ ಬೈ ಬೈ ಹೇಳುವುದೇ ಒಳ್ಳೆಯದು. ಹತ್ತನೇ ತರಗತಿ ಮತ್ತು ಪಿ.ಯು. ಹಂತದಲ್ಲಿ ಪಬ್ಲಿಕ್ ಪರೀಕ್ಷೆ ನಿಲ್ಲಿಸಿದ್ದು ಯಶಸ್ವಿಯಾದರೆ, ವಿಶ್ವವಿದ್ಯಾಲಯಗಳೂ ಇದೇ ಹಾದಿ ಹಿಡಿಯುವುದರಲ್ಲಿ ಅನುಮಾನವಿಲ್ಲ.

ಲೇಖಕ: ಶಿಕ್ಷಣ ತಜ್ಞ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !