ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ಯೋಜನೆ ಶತಃಸಿದ್ಧ

ಅಕ್ಷರ ಗಾತ್ರ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಾಪಿಸ­ಲಾಗಿದ್ದ ನ್ಯಾಯಮಂಡಳಿಯು 2007ರ ಫೆಬ್ರುವರಿ 5ರಂದು ನೀಡಿರುವ ಅಂತಿಮ ತೀರ್ಪಿನ ಅನ್ವಯ, ಎರಡೂ ರಾಜ್ಯಗಳಿಗೆ ಗಡಿಯಾಗಿರುವ ಬಿಳಿಗುಂಡ್ಲು­ವಿನಿಂದ ಕರ್ನಾಟಕವು ಪ್ರತಿ ವರ್ಷ 192 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕು.

ನಿಗದಿತ ಪ್ರಮಾಣದ ನೀರು ಬಿಟ್ಟ ನಂತರವೂ ಉಳಿಯುವ ಹೆಚ್ಚುವರಿ ನೀರನ್ನು ಕುಡಿಯುವ ನೀರು, ವಿದ್ಯುತ್‌ ಉತ್ಪಾದನೆ ಸೇರಿದಂತೆ ಇತರ ಉದ್ದೇಶಗಳಿಗೆ ಬಳಸಲು ಕಾನೂನಿನಲ್ಲಿ ಅವಕಾಶ ಇದೆ. ನ್ಯಾಯ­ಮಂಡಳಿ ಕೂಡ ತನ್ನ ತೀರ್ಪಿನಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹಾಗಾಗಿ, ಕಾವೇರಿ ಕಣಿವೆಯಲ್ಲಿ ಹರಿಯುವ ಹೆಚ್ಚುವರಿ ನೀರನ್ನು ಬಳಸಲು ನಾವು ಯಾರನ್ನೂ ಕೇಳ­ಬೇಕಾದ ಅವಶ್ಯಕತೆ ಇಲ್ಲ.

ರಾಜ್ಯದಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರಿನ ಪ್ರಮಾಣವನ್ನು 1990ರಿಂದಲೂ ನಾನು ಗಮನಿಸುತ್ತಾ ಬಂದಿದ್ದೇನೆ. ನಾಲ್ಕು ವರ್ಷಗಳನ್ನು ಬಿಟ್ಟು (2002, 2003, 2004 ಮತ್ತು 2012) ಉಳಿದೆಲ್ಲ ವರ್ಷಗಳಲ್ಲೂ 192 ಟಿಎಂಸಿ ಅಡಿಗಿಂತ ಹೆಚ್ಚು ನೀರನ್ನು ಅತ್ತ ಬಿಡಲಾಗಿದೆ. ವಾಸ್ತವವಾಗಿ ಶಿವನಸಮುದ್ರ ನಂತರ ಕಾವೇರಿ ಕಣಿವೆಯಲ್ಲಿ 192 ಟಿಎಂಸಿ ಅಡಿಗೂ ಹೆಚ್ಚು ನೀರು ಹರಿಯುತ್ತದೆ. ಆ ನೀರು ಯಾರದ್ದು? ನಮ್ಮದಲ್ಲವೇ?

ಅಂದಾಜಿನ ಪ್ರಕಾರ, ಸರಾಸರಿ 60ರಿಂದ 70 ಟಿಎಂಸಿ ಅಡಿ ಕಾವೇರಿ ನೀರು ಸಮುದ್ರ ಸೇರುತ್ತದೆ. ತಮಿಳುನಾಡಿಗೆ ಬಿಡಬೇಕಾದ ನೀರನ್ನು ಬಿಟ್ಟು, ವೃಥಾ ಪೋಲಾಗುವ ಉಳಿಕೆ ನೀರನ್ನು ಮೇಕೆ­ದಾಟು­­ವಿನಲ್ಲಿ ಸಂಗ್ರಹಿಸಿ ಕುಡಿಯುವ ನೀರಿಗೂ, ವಿದ್ಯುತ್‌ ಉತ್ಪಾದನೆಗೂ ಬಳಸುವುದು ಸರ್ಕಾರದ ಯೋಚನೆ. ಅಂದಾಜು 45ರಿಂದ 50 ಟಿಎಂಸಿ ಅಡಿ ನೀರನ್ನು ಇಲ್ಲಿ ಸಂಗ್ರಹಿಸಬಹುದು. ಸುಮಾರು 500 ಮೆ.ವಾ. ವಿದ್ಯುತ್‌ ಉತ್ಪಾದನೆಯನ್ನೂ ಮಾಡಬಹುದು.

2007ರಲ್ಲಿ ನ್ಯಾಯ­ಮಂಡಳಿಯ ತೀರ್ಪು ಹೊರಬಿದ್ದಾಗಲೇ ಈ ಯೋಜನೆ ಕೈಗೆತ್ತಿಕೊಳ್ಳಬೇಕಿತ್ತು. ಆದರೆ, ಆಗಿನ ಸರ್ಕಾರ ಅದಕ್ಕೆ

ಉಪ ಸಮಿತಿ ಬೇಕು

‘ಅಂತರ ರಾಜ್ಯ ನದಿ ವಿವಾದಗಳಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸು­ವುದ­ಕ್ಕಾಗಿ ಎಚ್‌.ಡಿ.ದೇವೇಗೌಡ ಅವರ  ಕಾಲದವರೆಗೆ ರಾಜ್ಯದಲ್ಲಿ ಸದನದ ಉಪಸಮಿತಿಯೊಂದಿತ್ತು. ಇದರಲ್ಲಿ ಮುಖ್ಯಮಂತ್ರಿ, ನೀರಾವರಿ, ಕಾನೂನು ಸಚಿವರು ಹಾಗೂ ಸಂಬಂಧಪಟ್ಟ ಇನ್ನಿತರರು ಸದಸ್ಯರಾಗಿರುತ್ತಿದ್ದರು. ಆದರೆ, ಈಗ ಆ ಸಮಿತಿ ಇಲ್ಲ. ಇಂತಹ ಮಹತ್ವದ ಯೋಜನೆಗಳ ಬಗ್ಗೆ ಚರ್ಚಿಸಲು ಆ ಸಮಿತಿಯ ಅಗತ್ಯವಿದೆ’.‘ಈಗ ಕಾನೂನು ತಜ್ಞರ ತಂಡ, ತಾಂತ್ರಿಕ ತಜ್ಞರ ತಂಡ ಬೇರೆ ಬೇರೆ­ಯಾಗಿವೆ. ಇದರಿಂದಾಗಿ ಸಂವಹನಕ್ಕೆ ತೊಂದರೆಯಾಗುತ್ತಿದೆ. ಒಂದು ವೇಳೆ ಉಪಸಮಿತಿ ಇದ್ದರೆ ಈ ಸಮಸ್ಯೆ ಬರದು’ ಎಂದು ಸಚಿವ ಜಯಚಂದ್ರ ಹೇಳುತ್ತಾರೆ.ಮನಸ್ಸು ಮಾಡಲಿಲ್ಲ. ನಾನು ಈ ವಿಚಾರವನ್ನು ಹಲವು ಬಾರಿ ಸದನದಲ್ಲಿ ಪ್ರಸ್ತಾಪಿಸಿ­ದಾಗಲೂ ಯಾರೂ ಕಾಳಜಿ ತೋರಿಸಿರಲಿಲ್ಲ.

ಕಾನೂನು ಸಚಿವನಾಗಿ ಅಧಿಕಾರ ವಹಿಸಿ­ಕೊಂಡ ನಂತರ ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ನಡೆಸುವಂತೆ ದೆಹಲಿ­ಯಲ್ಲಿರುವ ಎಫ್.ಎಸ್‌.ನಾರಿಮನ್‌ ಅವರನ್ನು ಕೋರಿದ್ದೆ. ‘ಮೇಕೆದಾಟು ಕರ್ನಾಟಕಕ್ಕೆ ಸೇರಿದ್ದು, ಅಲ್ಲಿ ಹರಿಯುತ್ತಿರುವ ನೀರೂ ರಾಜ್ಯದ್ದೇ. ಹಾಗಾಗಿ ಯೋಜನೆಗೆ ಕಾನೂನಿನ ತೊಡಕಿಲ್ಲ. ನಿಶ್ಚಿಂತೆಯಿಂದ ಯೋಜನೆ ಆರಂಭಿಸ­ಬಹುದು’ ಎಂದು ಅವರು ಸಲಹೆ ನೀಡಿದ್ದರು.

ಆದರೆ, ಕಾನೂನಿನ ಅಡಿಯಲ್ಲಿ ಇರುವ ಅವಕಾಶವನ್ನು ನಿರ್ದಿಷ್ಟವಾಗಿ ವಿವರಿಸುವಂತೆ ಮನವಿ ಮಾಡಿದ್ದೆ. ಅದರಂತೆ ಅವರು ತಮ್ಮ ಅಭಿಪ್ರಾಯ ನೀಡಿದ್ದಾರೆ. ನಾರಿಮನ್‌ ಅಭಿಪ್ರಾಯ­ವನ್ನು ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌ ಮುಂದಿಟ್ಟಿದ್ದೆ. ಅವರು ಕೂಡ ನಾರಿಮನ್‌ ಅಭಿಪ್ರಾಯ­ವನ್ನು ಅನುಮೋದಿಸಿದ್ದಾರೆ. ಇಬ್ಬರ ಅಭಿಪ್ರಾಯವನ್ನು ಪಡೆದು, ಇಡೀ ಯೋಜನೆ, ಅದರ ಉದ್ದೇಶದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವರಿಸಿದ್ದೇನೆ.  ಈ ಮಹತ್ವದ ಯೋಜನೆಗೆ ಅವರು ಅನುಮತಿ ನೀಡಿದ್ದಾರೆ.

ಮೇಕೆದಾಟು ಪ್ರದೇಶದಲ್ಲಿ ಎಷ್ಟು ಅಣೆಕಟ್ಟು ನಿರ್ಮಿಸಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಬೇಕು. ಅರಣ್ಯ, ಪರಿಸರ ಸೇರಿದಂತೆ ವಿವಿಧ ಇಲಾಖೆಗಳು ಅನುಮತಿ ನೀಡಬೇಕು. ಇದಕ್ಕೆಲ್ಲ ಒಂದು ವರ್ಷ ಹಿಡಿಯ­ಬಹುದು. ಆದಷ್ಟು ಬೇಗ ಈ ಯೋಜನೆ ಜಾರಿಯಾಗಬೇಕು ಎಂಬುದು ನಮ್ಮ ಅಪೇಕ್ಷೆ.
ಬೆಂಗಳೂರಿಗೆ 25 ಟಿಎಂಸಿ ಅಡಿ ನೀರು: ಈ ಯೋಜನೆ ಅನುಷ್ಠಾನಕ್ಕೆ ಬಂದರೆ,  ಹೇಮಾವತಿ ಜಲಾಶಯದಿಂದ 25 ಟಿಎಂಸಿ ಅಡಿ ನೀರನ್ನು ಹೆಚ್ಚು ಶ್ರಮಪಡದೆ ಬೆಂಗಳೂರು ನಗರಕ್ಕೆ ತರಬಹುದು!

ಸದ್ಯ ಹೇಮಾವತಿ ಜಲಾಶಯದಿಂದ 20ರಿಂದ 25 ಟಿಎಂಸಿ ಅಡಿ ನೀರನ್ನು ಕೆ.ಆರ್.ಎಸ್‌.ಗೆ ಹರಿಸಲಾಗುತ್ತಿದೆ. ಒಂದು ವೇಳೆ ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಿದರೆ, ಕಬಿನಿ, ಹಾರಂಗಿ ಮತ್ತು ಕೆಆರ್‌ಎಸ್‌ ಅಣೆಕಟ್ಟುಗಳಿಂದಲೇ ತಮಿಳುನಾಡಿಗೆ 192 ಟಿಎಂಸಿ ಅಡಿ ನೀರು ಬಿಡಬಹುದು. ಹೇಮಾವತಿ ನೀರನ್ನು ತುಮಕೂರಿನಿಂದ 22 ಕಿ.ಮೀ ದೂರದಲ್ಲಿರುವ ಶಿವಗಂಗೆಗೆ ತಂದು ಅಲ್ಲಿಂದ ಒಂದು ಕಾಲದಲ್ಲಿ ಬೆಂಗಳೂರಿನ ನೀರಿನ ಮೂಲವಾಗಿದ್ದ ತಿಪ್ಪಗೊಂಡನಹಳ್ಳಿ ಮತ್ತು ಹೆಸರಘಟ್ಟ ಕೆರೆಗಳಿಗೆ ಹರಿಸಬಹುದು. ಇದರಿಂದಾಗಿ ಮಿತಿ ಮೀರಿ ಬೆಳೆಯುತ್ತಿರುವ ಬೆಂಗಳೂರು ನಗರದ ನೀರಿನ ದಾಹ ತಣಿಸಬಹುದು.

ನಾರಿಮನ್‌ ಹೇಳಿದ್ದೇನು...?
ಮೇಕೆದಾಟು ಯೋಜನೆ­ಯನ್ನು ಕರ್ನಾಟಕ ಕೈಗೆತ್ತಿಕೊಳ್ಳಬಹುದು ಎಂದು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿನ ಕರ್ನಾಟಕದ ಪರ ವಕೀಲ ಎಫ್‌.ಎಸ್‌.ನಾರಿಮನ್‌  ರಾಜ್ಯ ಕಾನೂನು ಇಲಾಖೆಗೆ ಸಲಹೆ ನೀಡಿದ್ದಾರೆ.
‘ಕಾವೇರಿ ಕಣಿವೆಯಲ್ಲಿ ಜಲ ವಿದ್ಯುತ್‌ ಉತ್ಪಾದನೆ­ಯಂತಹ ಯೋಜನೆ­ಗಳಿ­ಗಾಗಿ ಅಣೆಕಟ್ಟೆ ಕಟ್ಟಿದರೂ, ತಮಿಳುನಾಡಿಗೆ ನಿಗದಿಯಾಗಿರುವ ನೀರನ್ನು ನಿರಂ­ತರ­ವಾಗಿ ಹರಿಸಲೇಬೇಕು. ನೀರಾವರಿ ಉದ್ದೇಶಕ್ಕೆ ಯಾವುದೇ ತೊಂದರೆ­ಯಾಗ­ಬಾರದು’ ಎಂದು ಕಾವೇರಿ ನ್ಯಾಯಮಂಡಳಿ ತನ್ನ ತೀರ್ಪಿನಲ್ಲಿ ವಿಧಿಸಿರುವ ಷರತ್ತನ್ನು ಅವರು ಉಲ್ಲೇಖಿಸಿದ್ದಾರೆ. ಈ ಯೋಜನೆಗಳಿಂದ ಆಗುವ 4 ಪ್ರಮುಖ ಲಾಭಗಳನ್ನು ಪಟ್ಟಿ ಮಾಡಿದ್ದಾರೆ.

*ನೈಸರ್ಗಿಕವಾಗಿ ಹರಿಯುವ ನೀರಿನಿಂದ ವಿದ್ಯುತ್‌ ಉತ್ಪಾದನೆ
*ಬೆಂಗಳೂರಿನ ಬಳಕೆಗೆ ಅಗತ್ಯವಿರುವಷ್ಟು ನೀರಿನ ಸಂಗ್ರಹ
*ಕೆ.ಆರ್.ಎಸ್‌, ಕಬಿನಿ ಅಣೆಕಟ್ಟೆಗಳಿಂದ ಹರಿಯುವ ಹೆಚ್ಚುವರಿ ನೀರಿನ ಸಂಗ್ರಹ
*ವಿದ್ಯುತ್‌ ಉತ್ಪಾದನೆ ಜೊತೆಗೆ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಅನ್ವಯ ತಮಿಳುನಾಡಿಗೆ ಹರಿಸಬೇಕಾದ ನೀರಿನ ನಿಯಂತ್ರಣ

ತಮಿಳುನಾಡಿಗೂ ಪ್ರಯೋಜನ: ಈ ಯೋಜನೆಯಿಂದ ತಮಿಳು­ನಾಡಿಗೂ ಲಾಭವಿದೆ. ಅಣೆಕಟ್ಟೆಯಲ್ಲಿ ಸಂಗ್ರಹ­ವಾಗುವ ನೀರನ್ನು ಕಾಲಕ್ಕೆ ತಕ್ಕಂತೆ ನೆರೆಯ ರಾಜ್ಯಕ್ಕೆ ಬಿಡಬಹುದು. ಒಂದು ವೇಳೆ ನಾವು ಅಲ್ಲಿ ಜಲ ವಿದ್ಯುತ್‌ ಯೋಜನೆ ಕೈಗೆತ್ತಿ­ಕೊಂಡರೆ, ವಿದ್ಯುತ್‌ ಉತ್ಪಾದನೆಯ ನಂತರದ ನೀರು ಸಹಜವಾಗಿ ತಮಿಳುನಾಡಿಗೆ ಹರಿಯುತ್ತದೆ. ಹಾಗಾಗಿ ಹರಿಯುವ ನೀರಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ.

ಆದರೆ, ಕ್ಯಾತೆ ತೆಗೆಯುವುದನ್ನೇ ಚಾಳಿಯನ್ನಾಗಿಸಿಕೊಂಡಿರುವ ತಮಿಳು­ನಾಡು ಈ ಯೋಜನೆಯ ವಿರುದ್ಧವೂ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಈ ಯೋಜನೆಯಿಂದ ತನ್ನ ಹಿತಾಸಕ್ತಿಗೆ ಧಕ್ಕೆ ಇಲ್ಲ ಎಂಬುದು ಗೊತ್ತಿದ್ದರೂ ಅದು ವಿರೋಧಿಸುತ್ತಿರುವುದು ದುರದೃಷ್ಟಕರ.
ಬ್ರಿಟಿಷರ ಕಾಲದಿಂದಲೂ ತಮಿಳುನಾಡು ಕಾವೇರಿ ವಿಚಾರದಲ್ಲಿ ತಕರಾರು ತೆಗೆಯುತ್ತಿದೆ. ತನಗೆ ನೀರಿಲ್ಲ, ರೈತರಿಗೆ ಕಷ್ಟವಾಗು­ತ್ತದೆ ಎಂದು ಅದು ಕಣ್ಣೀರು ಸುರಿಸುತ್ತಿದ್ದರೂ, ಅಲ್ಲಿನ ರೈತರು ಪ್ರತಿ ವರ್ಷ ಎರಡು – ಮೂರು ಬೆಳೆ ಬೆಳೆಯುತ್ತಾರೆ. ನೀರು ಸಾಕಷ್ಟು ಇಲ್ಲದಿದ್ದರೆ ಕೃಷಿ ಮಾಡಲು ಹೇಗೆ ಸಾಧ್ಯ? ನಮ್ಮಲ್ಲಿ ಮಂಡ್ಯ ಭಾಗದಲ್ಲಿ ಕಬ್ಬು ಬೆಳೆಯುವುದನ್ನು ಬಿಟ್ಟರೆ, ಬೇರೆಲ್ಲೂ ಇಂತಹ ಸ್ಥಿತಿ ಇಲ್ಲ.
ಈ ಯೋಜನೆ ವಿಚಾರದಲ್ಲಿ ಕಾನೂನು ನಮ್ಮ ಪರವಾಗಿ ಇದೆ. ತಮಿಳುನಾಡು ಸುಪ್ರೀಂ­-ಕೋರ್ಟ್‌ಗೆ ಹೋಗಿದೆ. ನಾವೂ ಹೋರಾಟ ಮಾಡುತ್ತೇವೆ. ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ.

ಸದ್ಯ ಯೋಜನೆಯ ಪ್ರಸ್ತಾವಕ್ಕೆ ಅನುಮತಿ ಮಾತ್ರ ದೊರೆತಿದೆ. ಯೋಜನೆ ಜಾರಿಗೆ ಇನ್ನಷ್ಟು ದೂರ ಸಾಗಬೇಕು. ಕೇಂದ್ರ ಜಲ ಆಯೋಗದ ಒಪ್ಪಿಗೆ ದೊರೆಯಬೇಕಿದೆ. ಹಣಕಾಸು ಸೇರಿದಂತೆ ನಮ್ಮ ವಿವಿಧ ಇಲಾಖೆಗಳ ಒಪ್ಪಿಗೆ ಪಡೆಯಬೇಕು. ಹಾಗಾಗಿ, ನಾವು ಹೆಚ್ಚು ಸದ್ದುಗದ್ದಲ ಮಾಡದೇ ಯೋಜನೆ­ಯನ್ನು ಅನುಷ್ಠಾನಕ್ಕೆ ತರುವ ಅವಶ್ಯಕತೆ ಇದೆ. ನಮ್ಮ  ಉದ್ದೇಶದಂತೆ ಈ ಯೋಜನೆ ಜಾರಿ­­ಗೊಂಡರೆ, ಇದೊಂದು  ರಾಜ್ಯದ ಅತ್ಯುತ್ತಮ ಯೋಜನೆ­ಯಾಗಲಿದೆ ಎಂಬುದಂತೂ ನಿಜ.
(ಲೇಖಕರು ರಾಜ್ಯದ ಕಾನೂನು ಸಚಿವರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT