ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್ ಕ್ರಿಕೆಟ್: ಪಾಕ್ ಎದುರು ವಿಜೃಂಭಿಸುವುದೇ ಭಾರತ?

ರೋಹಿತ್ ಶರ್ಮಾ ನಾಯಕತ್ವಕ್ಕೆ ಸವಾಲು
Last Updated 19 ಸೆಪ್ಟೆಂಬರ್ 2018, 12:37 IST
ಅಕ್ಷರ ಗಾತ್ರ

ದುಬೈ: ಹದಿನಾಲ್ಕು ತಿಂಗಳುಗಳ ನಂತರ ಏಷ್ಯಾ ಖಂಡದ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲಿವೆ.

ಬುಧವಾರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಉಭಯ ತಂಡಗಳು ಕಣಕ್ಕಿಳಿಯಲಿವೆ. ಹೋದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಪಾಕ್ ವಿರುದ್ಧ ಭಾರತ ತಂಡವು ಸೋಲನುಭವಿಸಿತ್ತು. ಅದರ ನಂತರ ಎರಡೂ ದೇಶಗಳು ಮುಖಾಮುಖಿಯಾಗಿಲ್ಲ. ದ್ವಿಪಕ್ಷೀಯ ಸರಣಿಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸುವ ಪಾಕ್ ಕ್ರಿಕೆಟ್ ಸಂಸ್ಥೆಯ ಪ್ರಯತ್ನಗಳು ಸಾಕಾರವಾಗಿಲ್ಲ. ಆದ್ದರಿಂದ ಐಸಿಸಿ ಚಾಂಪಿಯನ್‌ಷಿಪ್‌ಗಳಲ್ಲಿ ಮಾತ್ರ ಎರಡೂ ತಂಡಗಳು ಸೆಣಸಾಡುವುದನ್ನು ನೋಡಲು ಕ್ರಿಕೆಟ್‌ಪ್ರೇಮಿಗಳೂ ಕಾತರಿಸಿದ್ದಾರೆ.

ಏಷ್ಯಾ ಕಪ್ ಟೂರ್ನಿ ಆರಂಭವಾಗಿ 34 ವರ್ಷಗಳಾಗಿವೆ. ಈ ಹಂತದಲ್ಲಿ ಭಾರತ ಮತ್ತು ಪಾಕ್ ತಂಡಗಳು 12 ಬಾರಿ ಪೈಪೋಟಿ ಮಾಡಿವೆ. ಭಾರತವು ಆರರಲ್ಲಿ ಗೆದ್ದು, ಪಾಕ್ ಐದರಲ್ಲಿ ಜಯ ಕಂಡಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಭಾರತವು ಒಟ್ಟು ಆರು ಬಾರಿ ಏಷ್ಯಾ ಕಪ್ ಗೆದ್ದಿದೆ. ಪಾಕ್ ತಂಡವು ಎರಡು ಸಲ ಚಾಂಪಿಯನ್ ಆಗಿತ್ತು.

ಇದರಿಂದಾಗಿ ರೋಹಿತ್ ಶರ್ಮಾ ನಾಯಕತ್ವದ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ ಶಿಖರ್ ಧವನ್, ಅರ್ಧಶತಕ ಹೊಡೆದ ಅಂಬಟಿ ರಾಯುಡು ಉತ್ತಮ ಲಯದಲ್ಲಿದ್ದಾರೆ. ಆದರೆ ಇನಿಂಗ್ಸ್‌ ಆರಂಭಿಸಿದ ರೋಹಿತ್ ಶರ್ಮಾ ಕೇವಲ 23 ರನ್‌ ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಮಹೇಂದ್ರಸಿಂಗ್ ಧೋನಿ ಅವರು ಸೊನ್ನೆ ಸುತ್ತಿದ್ದರು. ಇಬ್ಬರು ಅನುಭವಿಗಳು ಪಾಕ್ ವಿರುದ್ಧದ ಪಂದ್ಯದಲ್ಲಿ ಲಯಕ್ಕೆ ಮರಳಿದರೆ ಭಾರತದ ಬ್ಯಾಟಿಂಗ್ ಸಬಲವಾಗುವುದು ಖಚಿತ.

ಪಾಕ್ ಪರ ಸರ್ಫರಾಜ್ ಅಹಮದ್, ಫಖ್ರ್ ಜಮಾನ್, ಬಾಬರ್ ಆಜಂ ಮತ್ತು ಶೋಯಬ್ ಮಲಿಕ್ ಅವರನ್ನು ಕಟ್ಟಿಹಾಕುವುದು ಭಾರತ ಬೌಲರ್‌ಗಳ ಮುಂದಿರುವ ಪ್ರಮುಖ ಸವಾಲು. ಮೂರು ದಿನಗಳ ಹಿಂದೆ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಪಾಕ್ ಗೆದ್ದಿತ್ತು. ಒಂದೊಮ್ಮೆ ಭಾರತವನ್ನು ಮಣಿಸಿದರೆ ಸೂಪರ್ ಫೋರ್ ಹಂತಕ್ಕೆ ಸಾಗಲಿದ್ದಾರೆ. ಸೋತರೆ ಹಾದಿ ಕಠಿಣವಾಗಲಿದೆ.

ಏಕದಿನ ಕ್ರಿಕೆಟ್‌ನಲ್ಲಿ ಭಾರತ–ಪಾಕಿಸ್ತಾನ ಮುಖಾಮುಖಿ

129 –ಒಟ್ಟು ಪಂದ್ಯಗಳು

52 – ಭಾರತ ಜಯಿಸಿದ ಪಂದ್ಯಗಳು

73– ಪಾಕಿಸ್ತಾನ ಜಯಿಸಿದ ಪಂದ್ಯಗಳು

4– ಫಲಿತಾಂಶ ರಹಿತ ಪಂದ್ಯಗಳು

******

ಏಷ್ಯಾ ಕಪ್‌ನಲ್ಲಿ ಭಾರತ–ಪಾಕ್‌ ಹಣಾಹಣಿ

12 – ಒಟ್ಟು ಪಂದ್ಯಗಳು

6– ಭಾರತ ಗೆದ್ದ ಪಂದ್ಯಗಳು

5– ಪಾಕಿಸ್ತಾನ ಗೆದ್ದ ಪಂದ್ಯಗಳು

1– ಫಲಿತಾಂಶ ರಹಿತ ಪಂದ್ಯ

******

2- ಏಕದಿನ ಕ್ರಿಕೆಟ್‌ನಲ್ಲಿ 50 ವಿಕೆಟ್‌ ಸಾಧನೆ ಮಾಡಲು ಕುಲದೀಪ್‌ ಯಾದವ್‌ ಅವರಿಗೆ ಬೇಕಿರುವ ವಿಕೆಟ್‌ಗಳು

5–ಏಕದಿನ ಕ್ರಿಕೆಟ್‌ನಲ್ಲಿ 50 ವಿಕೆಟ್‌ ಸಾಧನೆ ಮಾಡಲು ಯಜುವೇಂದ್ರ ಚಾಹಲ್‌ ಅವರಿಗೆ ಬೇಕಿರುವ ವಿಕೆಟ್‌ಗಳು

10– ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಸಾಧನೆ ಮಾಡಲು ಭುವನೇಶ್ವರ್‌ ಕುಮಾರ್‌ ಅವರಿಗೆ ಬೇಕಿರುವ ವಿಕೆಟ್‌ಗಳು

27– ಏಕದಿನ ಕ್ರಿಕೆಟ್‌ನಲ್ಲಿ 2000 ರನ್‌ ಪೂರೈಸಲು ಬಾಬರ್‌ ಅಜಮ್‌ ಅವರಿಗೆ ಬೇಕಿರುವ ರನ್‌ಗಳು

*******

ತಂಡ ಇಂತಿದೆ:

ಭಾರತ: ರೋಹಿತ್‌ ಶರ್ಮಾ (ನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಅಂಬಟಿ ರಾಯುಡು, ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ಮಹೇಂದ್ರ ಸಿಂಗ್‌ ಧೋನಿ (ವಿಕೆಟ್‌ಕೀಪರ್‌), ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬೂಮ್ರಾ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಶಾರ್ದೂಲ್‌ ಠಾಕೂರ್‌, ದಿನೇಶ್‌ ಕಾರ್ತಿಕ್‌, ಖಲೀಲ್‌ ಅಹ್ಮದ್‌.

ಪಾಕಿಸ್ತಾನ: ಸರ್ಫರಾಜ್‌ ಅಹ್ಮದ್‌ (ನಾಯಕ/ ವಿಕೆಟ್‌ಕೀಪರ್‌), ಫಕ್ರ್‌ ಜಮಾನ್‌, ಶಾನ್‌ ಮಸೂದ್‌, ಬಾಬರ್‌ ಅಜಮ್‌, ಹ್ಯಾರಿಸ್‌ ಸೊಹೇಲ್‌, ಇಮಾಮ್‌ ಉಲ್‌ ಹಕ್‌, ಆಸಿಫ್‌ ಅಲಿ, ಶಾದಾಬ್‌ ಖಾನ್‌, ಮೊಹಮ್ಮದ್‌ ನವಾಜ್‌, ಫಾಹೀಮ್‌ ಆಶ್ರಫ್‌, ಹಸನ್‌ ಅಲಿ, ಮೊಹಮ್ಮದ್‌ ಅಮೀರ್‌, ಶೊಯೆಬ್‌ ಮಲೀಕ್‌, ಜುನೈದ್‌ ಖಾನ್‌, ಉಸ್ಮಾನ್‌ ಖಾನ್‌, ಶಾಹೀನ್‌ ಅಫ್ರಿದಿ.

ಆರಂಭ: ಸಂಜೆ 5 (ಭಾರತೀಯ ಕಾಲಮಾನ). ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT