ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಹಾಂಕಾಂಗ್‌ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು

ಶಿಖರ್‌ ಧವನ್‌ ಶತಕದ ಮಿಂಚು: ನಿಜಾಕತ್‌–ರಥ್‌ ಅಮೋಘ ಜೊತೆಯಾಟ
Last Updated 18 ಸೆಪ್ಟೆಂಬರ್ 2018, 20:19 IST
ಅಕ್ಷರ ಗಾತ್ರ

ದುಬೈ:ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ಎದುರಿನ ಪಂದ್ಯಕ್ಕೆ ‘ಅಭ್ಯಾಸ’ ನಡೆಸಲು ವೇದಿಕೆ ಎನಿಸಿದ್ದ ಹಾಂಕಾಂಗ್‌ ವಿರುದ್ಧದ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಹಣಾಹಣಿಯಲ್ಲಿ ಭಾರತ ತಂಡ ಗೆಲುವಿಗಾಗಿ ಪರದಾಡಿತು.

ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದ ಹೋರಾಟದಲ್ಲಿ ರೋಹಿತ್‌ ಶರ್ಮಾ ಬಳಗ 26ರನ್‌ಗಳಿಂದ ಗೆದ್ದು ನಿಟ್ಟುಸಿರುಬಿಟ್ಟಿತು.ಮೊದಲು ಬ್ಯಾಟ್‌ ಮಾಡಿದ ಭಾರತ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅಬ್ಬರದ ಶತಕ ಮತ್ತು ಅಂಬಟಿ ರಾಯುಡು ಅವರ ಅರ್ಧಶತಕದ ಬಲದಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 285 ರನ್‌ ದಾಖಲಿಸಿತು. ಹಾಂಕಾಂಗ್ ತಂಡ 8 ವಿಕೆಟ್‌ಗೆ 259ರನ್‌ ಗಳಿಸಿ ಹೋರಾಟ ಮುಗಿಸಿತು.

ಬ್ಯಾಟಿಂಗ್‌ ಆರಂಭಿಸಿದ ಭಾರತ ಎಂಟನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ (23; 22ಎ, 4ಬೌಂ) ವಿಕೆಟ್‌ ಕಳೆದುಕೊಂಡಿತು. ಆದರೆ ಶಿಖರ್ (127; 120ಎ, 15 ಬೌಂ, 2ಸಿ) ಮತ್ತು ರಾಯುಡು (60; 70ಎ, 3ಬೌಂ, 2ಸಿ) ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 115 ರನ್‌ಗಳನ್ನು ಸೇರಿಸಿದರು. ಹೀಗಾಗಿ ತಂಡ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು.

ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿರುವುದರಿಂದ ರೋಹಿತ್ ಈ ಟೂರ್ನಿಯಲ್ಲಿ ತಂಡದ ನಾಯಕತ್ವ ವಹಿಸಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ದಿನೇಶ್ ಕಾರ್ತಿಕ್ (33; 38ಎ, 3ಬೌಂ) ದೊಡ್ಡ ಮೊತ್ತ ಗಳಿಸಲಿಲ್ಲ. ಅನುಭವಿ ಮಹೇಂದ್ರಸಿಂಗ್ ಧೋನಿ ಶೂನ್ಯಕ್ಕೆ ಔಟಾದರು. ಇದರಿಂದಾಗಿ ಮಧ್ಯಮ ಕ್ರಮಾಂಕವು ಬೇಗನೆ ಕುಸಿಯಿತು. ಹಾಂಕಾಂಗ್ ತಂಡದ ಕಿಂಚಿತ್ ಶಾ ಮೂರು ವಿಕೆಟ್‌ಗಳನ್ನು ಪಡೆದು ವಿಜೃಂಭಿಸಿದರು.

ಹಾಂಕಾಂಗ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಸೋತಿತ್ತು. ಆದರೆ ಬಲಿಷ್ಠ ಭಾರತದ ವಿರುದ್ಧ ದಿಟ್ಟತನದಿಂದ ಆಡಿ ಗಮನ ಸೆಳೆಯಿತು. 285 ರನ್‌ಗಳಗುರಿ ಬೆನ್ನತ್ತಿದ ಈ ತಂಡಕ್ಕೆ ನಿಜಾಕತ್‌ ಖಾನ್ (92; 115ಎ, 12ಬೌಂ, 1ಸಿ) ಮತ್ತು ಅನ್ಸುಮನ್ ರಥ್ (73; 97ಎ,4 ಬೌಂ, 1ಸಿ) ಉತ್ತಮ ಆರಂಭ ನೀಡಿದರು.

ಇವರು ಅನುಭವಿ ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್ ಮತ್ತು ಪದಾರ್ಪಣೆ ಪಂದ್ಯ ಆಡಿದ ಖಲೀಲ್ ಅಹಮದ್ ಅವರ ಎಸೆತಗಳನ್ನು ದಿಟ್ಟತನದಿಂದ ಎದುರಿಸಿದರು. 35ನೇ ಓವರ್‌ ಬೌಲ್‌ ಮಾಡಿದ ಕುಲದೀಪ್ ಯಾದವ್‌, ಮೊದಲ ಎಸೆತದಲ್ಲಿ ರಥ್‌ ವಿಕೆಟ್‌ ಉರುಳಿಸಿ ಭಾರತದ ಆಟಗಾರರು ನಿಟ್ಟುಸಿರು ಬಿಡುವಂತೆ ಮಾಡಿದರು.

ನಂತರ ಮೆಕೆನಿ ಪಡೆ ಕುಸಿತದ ಹಾದಿ ಹಿಡಿಯಿತು. ಕೊನೆಯ ಮೂರು ಓವರ್‌ಗಳಲ್ಲಿ ಈ ತಂಡದ ಜಯಕ್ಕೆ 40ರನ್‌ಗಳ ಅಗತ್ಯವಿತ್ತು. ಭಾರತದ ಬೌಲರ್‌ಗಳು ಪರಿಣಾಮಕಾರಿ ದಾಳಿ ನಡೆಸಿ ಎದುರಾಳಿಗಳ ಗೆಲುವಿನ ಕನಸಿಗೆ ತಣ್ಣೀರು ಸುರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT