ವೋಟ್‌ನಲ್ಲಿ ಮಜಾ ಇದೆ

ಸೋಮವಾರ, ಏಪ್ರಿಲ್ 22, 2019
31 °C
ವೋಟ್‌ನಲ್ಲಿ ಮಜಾ ಇದೆ

ವೋಟ್‌ನಲ್ಲಿ ಮಜಾ ಇದೆ

Published:
Updated:

ಬಿಸಿಲಿನ ತಾಪಮಾನದ ಜತೆಗೆ ಈ ಬಾರಿಯ ಲೋಕಸಭಾ ಚುಣಾವಣೆಯ ಕಾವೂ ಏರುತ್ತಿದೆ. ಅಭ್ಯರ್ಥಿಗಳು ಪರಸ್ಪರ ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಈ ನಡುವೆ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸಲು ಬಿಬಿಎಂಪಿ, ರೇಡಿಯೊ ಸಿಟಿಯ (ಕನ್ನಡ) ಆರ್‌ಜೆಗಳಾದ ರಜಸ್ ಮತ್ತು ಸೋನು ವೇಣುಗೋಪಾಲ್ ಅವರನ್ನು ಬಿಬಿಎಂಪಿ ಬ್ರ್ಯಾಂಡ್ ರಾಯಭಾರಿಗಳನ್ನಾಗಿ ನೇಮಿಸಿದೆ. 

ಬೆಂಗಳೂರಿನಲ್ಲಿ ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಸ್ಥಳಗಳನ್ನು ಗುರುತಿಸಿ ಅಲ್ಲಿನ ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಟಕ, ಜಾಗೃತಿ ಗೀತೆಗಳು, ಪೋಸ್ಟರ್‌ಗಳನ್ನು ಪ್ರದರ್ಶಿಸುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಬಿಬಿಎಂಪಿ ನೇಮಿಸಿರುವ ಈ ರೇಡಿಯೊ ಜಾಕಿಗಳು ರಾಜ್ಯದ ಇತರ ಸ್ಥಳಗಳಲ್ಲೂ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ವಿಶೇಷ. ತಮ್ಮ ಮಾತಿನ ಕೌಶಲದ ಮೂಲಕ ಎಲ್ಲಾ ವಯೋಮಾನ ಮತ್ತು ವರ್ಗದ ಜನರಲ್ಲಿ ಮತದಾನ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.    

ವೋಟಿಂಗ್ ಫಸ್ಟ್ ವೆಕೇಷನ್ ನೆಕ್ಸ್ಟ್‌

ಬೆಂಗಳೂರು ನಗರ, ಗ್ರಾಮೀಣ ಸೇರಿದಂತೆ 14 ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ಏ. 18ರಂದು ನಡೆಯಲಿದೆ. ಏ. 18 ಗುರುವಾರ ಬರುವುದರಿಂದ ರಾಜಧಾನಿಯ ಬಹುತೇಕರು ತಮ್ಮ ವಾರಾಂತ್ಯದ ದಿನಗಳನ್ನು ಇದಕ್ಕೆ ಹೊಂದಿಸಿಕೊಂಡು ರಜೆಯ ಮಜಾ ಅನುಭವಿಸಲು ಸಜ್ಜಾಗುತ್ತಿದ್ದಾರೆ. ಇದನ್ನು ಮನಗಂಡು ರೇಡಿಯೊ  ಸಿಟಿ ‘ವೋಟಿಂಗ್ ಫಸ್ಟ್ ವೆಕೇಷನ್ ನೆಕ್ಸ್ಟ್‌’ ಅನ್ನುವ ಟ್ಯಾಗ್‌ಲೈನ್ ರೂಪಿಸಿದೆ.

ವೋಟ್‌ನಲ್ಲಿ ಮಜಾ ಇದೆ

‘ವೋಟ್‌ನಲ್ಲಿ ಮಜಾ ಇದೆ’ ಅನ್ನುವ ವಿಶೇಷ ಮತದಾನದ ಗೀತೆಯನ್ನೂ ರೇಡಿಯೊ ಸಿಟಿ ರೂಪಿಸಿದೆ. ಇದರಲ್ಲಿ ಆರ್‌ಜೆಗಳ ಸಮೂಹವೇ ಪಾಲ್ಗೊಂಡು ಯುವ ಮತದಾರರನ್ನು ಸೆಳೆಯುತ್ತಿದೆ. 

‘ಲೈಫ್ ಈಸ್ ಫುಲ್ ಆಫ್ ಪ್ರಾಬ್ಲಂ, ಅದಕ್ಕೆ ಬೇಕಾ ಸಲ್ಯೂಷನ್... ರೇಡಿಯಾಗಿದೆ ನೇಷನ್  ಐದು ವರ್ಷಕ್ಕೊಮ್ಮೆ ಎಲೆಕ್ಷನ್...’ಎಂದು ಆರಂಭವಾಗುವ ಹಾಡು ‘ನೀವು ಏನೇ ಹೇಳಿ ವೋಟ್‌ನಲ್ಲಿ ಮಜಾ ಇದೆ’ಎಂದು ಮುಕ್ತಾಯವಾಗುತ್ತದೆ. ಗಾಯಕ ಅಭಿನಂದನ್ ಮಹಿಷಾಲೆ ಧ್ವನಿಯಲ್ಲಿ ಮೂಡಿಬಂದಿರುವ 1 ನಿಮಿಷ 7 ಸೆಕೆಂಡ್‌ನ ಈ ಹಾಡು ಕೆಲವೇ ಶಬ್ದಗಳಲ್ಲಿ ಬೆಂಗಳೂರಿನ ಸಮಸ್ಯೆಗಳ ಜತೆಗೆ ಜನಪ್ರತಿನಿಧಿಗಳ ಸಮರ್ಪಕ ಆಯ್ಕೆಗಾಗಿ ಮತದಾನ ಮಹತ್ವವನ್ನೂ ಸಾರುತ್ತದೆ. 

‘ಬಿಬಿಎಂಪಿ, ರೇಡಿಯೊಸಿಟಿ ಜಂಟಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲೂ ಮತದಾನ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ನಗರದಲ್ಲಿ ಈ ಹಿಂದೆ ಕಡಿಮೆ ಮತದಾನವಾದ ಕ್ಷೇತ್ರಗಳಿಗೆ ತೆರಳಿ ಅಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹಿಂದಿನ ಬಾರಿ ಸೇಂಟ್ ಜಾನ್ಸ್ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಮತದಾನವಾಗಿತ್ತು. ಅಲ್ಲಿನ ಹಾಸ್ಟೆಲ್‌ನಲ್ಲಿದ್ದವರಿಗೆ ಆಗ ಮತದಾನಕ್ಕೆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಬಿಬಿಎಂಪಿ ಅಲ್ಲಿನ ಆಡಳಿತ ವರ್ಗದ ಜತೆಗೆ ಮಾತುಕತೆ ನಡೆಸಿ ಮತದಾನಕ್ಕಾಗಿಯೇ 2 ಗಂಟೆಗಳ ಅವಕಾಶ ಕಲ್ಪಿಸಿದೆ’ ಎನ್ನುತ್ತಾರೆ ರೇಡಿಯೊ ಸಿಟಿ ಆರ್‌ಜೆ ರಜಸ್. 

‘ಗೋಕರ್ಣದಲ್ಲಿ ಪೈ ರೆಸ್ಟೊರೆಂಟ್ ಏ. 18 ಮತ್ತು 23ರಂದು ಮತದಾನ ಮಾಡಿದ ಷಾಹಿ ಗುರುತು ತೋರಿಸಿದರಷ್ಟೇ ಆ ಗ್ರಾಹಕರಿಗೆ ಊಟ, ತಿಂಡಿ ನೀಡುತ್ತದೆಯಂತೆ. ಅಂತೆಯೇ ಕುಂದಾಪುರದಲ್ಲಿ ಮೇ ತಿಂಗಳಲ್ಲಿ  ಮದುವೆಯಾಗಲಿರುವ ಜೋಡಿಯೊಂದು ಮತದಾನ ಮಾಡಿದವರಿಗೆ ₹ 250 ಮೌಲ್ಯದ ಪುಸ್ತಕ ಉಡುಗೊರೆಯಾಗಿ ನೀಡಲಿದೆ. ಬೆಂಗಳೂರಿನ ಅವೆನ್ಯೂ ರಸ್ತೆಯ ಕುಸುಂ ಸ್ಟೋರ್ಸ್‌ನ ಮಾಲೀಕರು ಮತದಾನ ಮಾಡಿದವರಿಗೆ ಉಡುಗೊರೆ ನೀಡಲಿದ್ದಾರೆ. ಮುಂಬೈನಲ್ಲಿರುವ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಮತ ಹಾಕಲಿಕ್ಕಾಗಿಯೇ ಅಲ್ಲಿಂದ ಬೆಂಗಳೂರಿಗೆ ಬರಲಿದ್ದಾರೆ’ ಎಂದು ತಮ್ಮ ರಾಯಭಾರಿಯ ಅನುಭವಗಳನ್ನು ಹಂಚಿಕೊಳ್ಳುತ್ತಾರೆ ಅವರು. 

ಮತ ಹಾಕಿದವನೇ ಜಾಣ

‘ಹಿಂದಿನ ಚುನಾವಣೆಯಲ್ಲಿ ಶೇ 60ರಷ್ಟು ಮಾತ್ರ ಮತದಾನವಾಗಿದೆ. ಶೇ 40ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿಯೇ ಇಲ್ಲ. ಅದರಲ್ಲಿ ವಿದ್ಯಾವಂತರು, ನಗರವಾಸಿಗಳೇ ಹೆಚ್ಚು. ಈ ಬಾರಿ ಅವರನ್ನು ಮತದಾನದತ್ತ ಸೆಳೆಯಲು ‘ವೋಟ್‌ನಲ್ಲಿ ಮಜಾ ಇದೆ’ ಅಭಿಮಾನ ನಡೆಸುತ್ತಿದ್ದೇವೆ’ ಅನ್ನುತ್ತಾರೆ ಮತ್ತೊಬ್ಬ ಬಿಬಿಎಂಪಿ ರಾಯಭಾರಿ ಆರ್‌ಜೆ ಸೋನು ವೇಣುಗೋಪಾಲ್. 

‘ಪ್ರಜಾಪ್ರಭುತ್ವ ದೇಶದ ಭವಿಷ್ಯವನ್ನು ನಿರ್ಧರಿಸಲು ನಮಗೊಂದು ಸುವರ್ಣಾವಕಾಶ ಸಿಕ್ಕಿದೆ. ಚುನಾವಣೆಯಲ್ಲಿ  ನಾವು ಮತದಾನ ಮಾಡದಿದ್ದರೆ ನಮ್ಮಷ್ಟು ಮೂರ್ಖರು ಮತ್ತೊಬ್ಬರಿಲ್ಲ. ಮತ ಹಾಕಿದವನೇ ಜಾಣ. ರಜೆಯ ಮಜಾ ಖಂಡಿತಾ ಅನುಭವಿಸಿ, ಆದರೆ, ಅದಕ್ಕೂ ಮುನ್ನ ತಪ್ಪದೇ ವೋಟ್ ಮಾಡಿ. ಒಂದು ದಿನದ ರಜೆಯ ಮಜಕ್ಕಾಗಿ ಐದು ವರ್ಷದ ಕೆಟ್ಟ ಆಡಳಿತ ಸಹಿಸಿಕೊಳ್ಳುತ್ತೀರಾ?’ ಅಂತ ಪ್ರಶ್ನೆ ಮಾಡ್ತೀನಿ ಅನ್ನುವ ಸೋನು, ಎಷ್ಟೋ ಬಾರಿ ಕಚೇರಿಗಳಲ್ಲಿ ಹೆಚ್ಚುವರಿ ಸಂಬಳ ಕೊಡ್ತಾರೆ ಅಂತ ಹಬ್ಬ–ಹರಿದಿನಗಳಲ್ಲೂ ಕೆಲಸ ಮಾಡಲು ಸಿದ್ದವಿರುತ್ತೇವೆ. ಅಂತೆಯೇ ಚುನಾವಣೆ ಕೂಡಾ ಜನತಂತ್ರದ ಹಬ್ಬ. ಹಾಗಾಗಿ, ತಪ್ಪದೇ ಮತದಾನ ಮಾಡಿ ಅನ್ನೋದು ನನ್ನ ಮನವಿ. ನಿಜ ಹೇಳಬೇಕೆಂದರೆ ಸೆಕ್ಯೂರಿಟಿ ಗಾರ್ಡ್, ವಾಚ್‌ಮನ್‌ಗಳು, ಕೆಲಸದವರು ತಪ್ಪದೇ ಓಟ್ ಮಾಡ್ತಾರೆ. ಅವರಿಗೆ ಮತದ ಮೌಲ್ಯ ತಿಳಿದಿದೆ. ಆದರೆ, ಐಟಿ–ಬಿಟಿಯ ಕೆಲವರು ಮತದಾನದ ಬಗ್ಗೆ ನಿರ್ಲಕ್ಷ್ಯ ತಾಳುತ್ತಿದ್ದಾರೆ. ಅಂಥವರನ್ನು ಎಚ್ಚರಿಸುವ ಕೆಲಸವೂ ನಡೆಯುತ್ತಿದೆ’ ಅನ್ನುತ್ತಾರೆ ಸೋನು.

ವೋಟ್‌ನಲ್ಲಿ ಮಜಾ ಇದೆ ಹಾಡಿನ ಲಿಂಕ್:  https://www.youtube.com/watch?v=IXg3JexUVGY

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !