‘ನೃತ್ಯಗಾಥಾ’ ಏಕವ್ಯಕ್ತಿ ರಂಗಪ್ರಯೋಗ ಇಂದು

7

‘ನೃತ್ಯಗಾಥಾ’ ಏಕವ್ಯಕ್ತಿ ರಂಗಪ್ರಯೋಗ ಇಂದು

Published:
Updated:
Deccan Herald

ರಂಗಭೂಮಿಯ ಆಯಾಮಗಳನ್ನು ಅವಲೋಕನ ಮಾಡಿದಾಗ ವಿಭಿನ್ನವಾದ ಪ್ರಯೋಗಗಳನ್ನು ಕಟ್ಟಿಕೊಡುವ ಕೆಲಸ ರಂಗದ ಮೇಲೆ ನಡೆದಿದೆ.ಇವೆಲ್ಲದರ ಮಧ್ಯೆ ‘ನೃತ್ಯಗಾಥಾ’– ಏಕವ್ಯಕ್ತಿ ರಂಗ ಪ್ರಯೋಗ ಹೊಸ ಅಲೆಯೊಂದಿಗೆ ಭಿನ್ನ ಅನುಭವವನ್ನು ಕಟ್ಟಿಕೊಡುವ ಕಾರ್ಯಮಾಡಿದೆ.ಅದರ ಜತೆಗೆ ನೃತ್ಯದ ಮೂಲಕ ಕಥೆಯ ಅನಾವರಣ, ಅಭಿನಯದ ವಿಸ್ತಾರ ಹರಿವು, ರಂಗದ ಪ್ರಯೋಗದ ಅನಾವರಣ ಮಾಡಿಕೊಡುತ್ತದೆ.

ನರ್ತಕಿಯರ ಕಲೆಯೇ ಬದುಕಾದ ಅಪರೂಪದ ಕತೆಗಳು ನಾಟಕದ ವೇಷ ತೊಟ್ಟು ತನ್ನ ಒಳಗುದಿಯನ್ನೆಲ್ಲ ಪ್ರೇಕ್ಷಕರೆದುರು ವಿಸ್ತಾರ ಮಾಡಿಕೊಡುತ್ತದೆ. ಈ ಸಂಧರ್ಭದಲ್ಲಿ ನರ್ತಕಿಯೇನೋ ನಿರಾಳ ಆಗಿ ಬಿಡುತ್ತಾಳೆ. ಆದರೆ ಪ್ರೇಕ್ಷಕರ ಎದೆ ಭಾರವಾಗುತ್ತದೆ. ‘ಬಂಧಿಯಾದ ಮೇಲೆ ಪಂಜರವ
ಪ್ರೀತಿಸದೆ ಗತಿಯಿಲ್ಲ’ ಅನ್ನುವ ಉಮ್ರಾವ್ ಜಾನ್ ವೇಶ್ಯೆ ಅನ್ನುವ ಪದವನ್ನೇ ಯಾರೂ ಕುಹಕ ವಾಡದಷ್ಟು ಸ್ವಚ್ಛ ಮಾಡುತ್ತಾಳೆ.

‘ನಾನು ರಾಣಿಯಾಗಿ ಅರಮನೆಯೊಳಗೆ ಬಂದೆ. ಆದರೆ ನನ್ನೊಳಗಿನ ನರ್ತಕಿ ಬಾಗಿಲಲ್ಲೆ ಇದ್ದಳು’ ಎನ್ನುವ ಶಾಂತಲೆಯ ಕಲಾ ಬದುಕು ಮುಗಿದೆ ಹೋಯಿತು ಅನ್ನುವಾಗ ಶಿಲೆ ಯಾಗಿಯಾದರೂ ಉಳಿಯಬೇಕು ಎನ್ನುವ ಆಯ್ಕೆ ಹೆಚ್ಚು ಆಪ್ತವಾಗುತ್ತದೆ.

ವಿನೂತನ ಕಲ್ಪನೆ: ಇದು ನೃತ್ಯ ಪ್ರದರ್ಶನವಲ್ಲ, ಬದಲಿಗೆ ನೃತ್ಯವನ್ನು ತನ್ನ ಮೈ ಮನಸ್ಸಿಗೆ ಹಚ್ಚಿಕೊಂಡ ಆಧುನಿಕ ನೃತ್ಯಗಾತಿಯೊಬ್ಬಳು ನೃತ್ಯವನ್ನು ಓದುವ,ನೃತ್ಯದ ಸಾಧ್ಯತೆಗಳನ್ನು ಹುಡುಕುವ ಅದನ್ನು ವಿಸ್ತರಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನದ ಒಂದು ಮಾದರಿ. ಕಲೆಗಳಲ್ಲಿ ಎಲ್ಲವನ್ನೂ ಒಳಗೊಂಡ ಕಲೆಯಾದ ನೃತ್ಯದ ಆಯಾಮಗಳನ್ನು ರಂಗದ ಮೇಲೆ ತರುವ ಒಂದು ಹೊಸ ಪ್ರಯೋಗವಿದು. ಕಾವ್ಯ, ಕಥೆ, ಕಾದಂಬರಿ,ಒಂದು ವಸ್ತುವಿನ ಸುತ್ತ ಇತಿಹಾಸದ ಪುಟಗಳಿಂದ ಆಯ್ದು ಕಟ್ಟಿದ ನೃತ್ಯಗಾರ್ತಿಯರ ಕಥನವನ್ನು ಮರು ರೂಪಿಸಿಕೊಳ್ಳುತ್ತ, ಅದರಿಂದ ದೊರೆತ ವಿವೇಕವನ್ನು ವರ್ತಮಾನದ ನೃತ್ಯ ಬದುಕಿಗಾಗಿ ಆವಿಷ್ಕರಿಸಿಕೊಳ್ಳುವ ಒಂದು ಸಾಧ್ಯತೆಯನ್ನು ಕಾಣಿಸಲು ಇಲ್ಲಿ ಪ್ರಯತ್ನಿಸಿದೆ. ಇದರಲ್ಲಿ ನೀಲಾಂಜನೆ, ಶಾಂತಲೆ, ಉಮ್ರಾವ್ ಜಾನ್ ಇವರೆಲ್ಲ ಇಲ್ಲಿ ಆಧುನಿಕ ಯುಗದ ನರ್ತಕಿಯೊಬ್ಬಳ ದೇಹ ಧರಿಸಿ ಮಾತನಾಡುತ್ತಾರೆ. ಆಖ್ಯಾನಗಳನ್ನು ವ್ಯಾಖ್ಯಾನಗೊಳಿಸುವ, ನೃತ್ಯ ಮೀಮಾಂಸೆಯನ್ನು ರಂಗದ ಮೇಲೆ ಮಂಡಿಸುವ ನಮ್ರ ಪ್ರಯತ್ನವಿದು. ಕಲಾಮಾರ್ಗವೊಂದರ ಸಾಧ್ಯತೆಯ ಅನ್ವೇಷಣೆಯ ಈ ಪ್ರಯೋಗದಲ್ಲಿ ಪ್ರಬಂಧದ ಸ್ವರೂಪ ಪಡೆಯುವುದನ್ನು ಸಹ ಕಾಣಬಹುದು.

ನೃತ್ಯ ಕಲಾವಿದೆ ಅನಘಶ್ರೀ
ಡಾ.ವೀರಕುಮಾರ ಮತ್ತು ಡಾ.ಉಷಾಪಾರ್ವತಿ ಅವರ ಮಗಳು ಅನಘಶ್ರೀ ಚಿಕ್ಕಂದಿನಲ್ಲೆ ತನ್ನ ಭರತನಾಟ್ಯದ ಶಿಕ್ಷಣವನ್ನು ನೃತ್ಯನೀಕೇತನದ ಕೊಡವೂರಿನ ವಿದ್ವಾನ್ ಸುಧೀರ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ ಅವರಲ್ಲಿ ನಡೆಸಿ ಭರತನಾಟ್ಯದ ವಿದ್ವತ್ ಪರೀಕ್ಷೆಯನ್ನು ಪ್ರಥಮ ಶ್ರೇಣಿಯಲ್ಲಿ ಪೂರೈಸಿದ್ದಾರೆ. ಇವರು ದೇಶದಾದ್ಯಂತ ವಿವಿಧ ತಂಡಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಯಕ್ಷಗಾನ ಮತ್ತು ನಾಟಕಗಳಲ್ಲಿ ಅಭಿನಯಿಸಿ ಸೈಎನಿಸಿಕೊಂಡಿದ್ದಾರೆ. ಎಂಜಿನಿಯರಿಂಗ್‌ ಪದವಿ ಪೊರೈಸಿರುವ ಇವರು ನೃತ್ಯಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಂಡು ಅಧ್ಯಯನ ನಡೆಸುತ್ತಿದ್ದಾರೆ. ನೃತ್ಯಗಾಥಾದ ಮೂಲಕ ಹೊಸಪ್ರಯೋಗದ ಏಕವ್ಯಕ್ತಿ ರಂಗ ಪ್ರಯೋಗ ಮಾಡುತ್ತಿದ್ದಾರೆ.

–ಮಾರ್ತಾಂಡಪ್ಪ ಎಂ. ಕತ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !