ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಬರ್ ಕಪ್: ಕ್ವಾರ್ಟರ್‌ಗೆ ಭಾರತದ ಮಹಿಳಾ ತಂಡ

Published 29 ಏಪ್ರಿಲ್ 2024, 4:36 IST
Last Updated 29 ಏಪ್ರಿಲ್ 2024, 4:36 IST
ಅಕ್ಷರ ಗಾತ್ರ

ಚೆಂಗ್ಡು, ಚೀನಾ: ಭಾರತದ ಇಶಾರಾಣಿ ಬರೂವಾ ಮತ್ತು ಅನ್ಮೋಲ್ ಖರಬ್ ಅವರ ಅಮೋಘ ಆಟದ ನೆರವಿನಿಂದ ಭಾರತ ಮಹಿಳಾ ತಂಡ ಇಲ್ಲಿ ನಡೆಯುತ್ತಿರುವ ಉಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು. 

ಭಾನುವಾರ ನಡೆದ  'ಎ' ಗುಂಪಿನ ಎರಡನೇ ಪಂದ್ಯದಲ್ಲಿ  ಭಾರತವು ಸಿಂಗಪುರ ತಂಡವನ್ನು 4-1 ಗೋಲುಗಳಿಂದ ಮಣಿಸಿತು. 

ಆರಂಭಿಕ ಪಂದ್ಯದಲ್ಲಿ ಅಶ್ಮಿತಾ ಚಾಲಿಹಾ ಅವರ ಸೋಲಿನಿಂದ ಚೇತರಿಸಿಕೊಂಡ ಭಾರತ, ಉಳಿದ ಪಂದ್ಯಗಳನ್ನು ಸುಲಭವಾಗಿ ಗೆದ್ದುಕೊಂಡಿತು. ಪ್ರಮುಖ ಆಟಗಾರರ ಗೈರುಹಾಜರಿಯಲ್ಲಿ ಯುವ ಮತ್ತು ಅನನುಭವಿ ಆಟಗಾರ್ತಿಯರು ತಮ್ಮ ಕೌಶಲ ಪ್ರದರ್ಶಿಸಿ ಎರಡು ಪಂದ್ಯಗಳಲ್ಲಿ ಗೆದ್ದರು.  

'ಎ' ಗುಂಪಿನ ಮತ್ತೊಂದು ಪಂದ್ಯದಲ್ಲಿ ಚೀನಾ 3-0 ಗೋಲುಗಳಿಂದ ಕೆನಡಾವನ್ನು ಮಣಿಸಿತು.  ಈ ಗೆಲುವಿನೊಂದಿಗೆ ಭಾರತ 'ಎ' ಗುಂಪಿನಲ್ಲಿ ಚೀನಾ ನಂತರ ಎರಡನೇ ಸ್ಥಾನದಲ್ಲಿದೆ. ಅಗ್ರಸ್ಥಾನವನ್ನು ನಿರ್ಧರಿಸಲು ಉಭಯ ತಂಡಗಳು ಮಂಗಳವಾರ ಗುಂಪಿನ ಅಂತಿಮ ಪಂದ್ಯದಲ್ಲಿ ಸೆಣಸಲಿವೆ.

ಶನಿವಾರ ಕೆನಡಾದ ಮಿಚೆಲ್ ಲೀ ಅವರನ್ನು ಸೋಲಿಸಿದ್ದ ಚಾಲಿಹಾ, ಭಾನುವಾರ ನಡೆದ ಪಂದ್ಯದಲ್ಲಿ ವಿಶ್ವದ 18ನೇ ಕ್ರಮಾಂಕದ ಯೆಯೊ ಜಿಯಾ ಮಿನ್ ವಿರುದ್ಧ 15-21, 18-21 ಅಂತರದಲ್ಲಿ ಸೋತರು.

ರಾಷ್ಟ್ರೀಯ ಚಾಂಪಿಯನ್ ಪ್ರಿಯಾ ಕೊಂಜೆಂಗ್ಬಾಮ್ ಮತ್ತು ಶೃತಿ ಮಿಶ್ರಾ ಅವರು ಮೊದಲ ಮಹಿಳಾ ಡಬಲ್ಸ್‌ನಲ್ಲಿ ಕ್ಸಿಯಾವೊ ಎನ್ ಹೆಂಗ್ ಮತ್ತು ಜಿನ್ ಯು ಜಿಯಾ ವಿರುದ್ಧ 21-15, 21-16 ಅಂತರದಲ್ಲಿ ಗೆಲುವು ಸಾಧಿಸಿದರು.

ಇಶಾರಾಣಿ ಎರಡನೇ ಸಿಂಗಲ್ಸ್‌ನಲ್ಲಿ ಇನ್ಸಿರಾ ಖಾನ್ ವಿರುದ್ಧ 21-13, 21-16 ಗೇಮ್ ಗಳಿಂದ ಗೆಲುವು ಸಾಧಿಸುವ ಮೂಲಕ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿದರು.  ಸಿಮ್ರಾನ್ ಸಿಂಘಿ ಮತ್ತು ರಿತಿಕಾ ಥಾಕರ್ ಜೋಡಿ ಯಿ ಟಿಂಗ್ ಎಲ್ಸಾ ಲೈ ಮತ್ತು ಜಾನ್ ಮಿಚೆಲ್ ವಿರುದ್ಧ 21-8, 21-11 ಅಂತರದಲ್ಲಿ ಜಯ ಸಾಧಿಸಿತು.

ಉದಯೋನ್ಮುಖ ತಾರೆ ಅನ್ಮೋಲ್ ಮೂರನೇ ಸಿಂಗಲ್ಸ್ ನಲ್ಲಿ ಲೀ ಕ್ಸಿನ್ ಮೇಗನ್ ವಿರುದ್ಧ 21-15, 21-13 ಅಂತರದಲ್ಲಿ ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT