ಕಟ್ಟಳೆ ಮೀರಿ ಸಾಗುವ ಕಾವ್ಯ: ಸಬರದ

7

ಕಟ್ಟಳೆ ಮೀರಿ ಸಾಗುವ ಕಾವ್ಯ: ಸಬರದ

Published:
Updated:

ಗುಲ್ಬರ್ಗ: ಹೊಟ್ಟೆಗಾಗಿ ಬಂದವನು ನೀನು ಕಳ್ಳನಲ್ಲ

ಇಟ್ಟು ಇಟ್ಟು ತಿನ್ನೋ ನಾನು ಕಳ್ಳನಾದೆನಲ್ಲ

ಬಟ್ಟೆ ಬರೆ ಒಡವೆ ಇಟ್ಟ ತಾಣ ನೋಡಲಿಲ್ಲ

ಅಡುಗೆ ಮನೆ ಪಾತ್ರೆ ನೋಡ್ವ ನೀನು ಕಳ್ಳನಲ್ಲ- ಸಾಲುಗಳ `ಕಳ್ಳ ಹಸಿವು~ ಮತ್ತಿತರ ಕವನಗಳ ಡಾ.ಎಸ್.ಎಸ್.ಗುಬ್ಬಿ ಅವರ `ಚೈತನ್ಯ~ ಕವನ ಸಂಕಲನವನ್ನು ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಭಾನುವಾರ ಕನ್ನಡ ಭವನದಲ್ಲಿ ಬಿಡುಗಡೆ ಮಾಡಿದರು. `ವೈದ್ಯ ವೃತ್ತಿಯಲ್ಲಿ ಬಡವರ ಸಮಸ್ಯೆಗಳಿಗೆ ಸ್ಪಂದಿಸಿಕೊಂಡು ಬೆಳೆದವರು ಗುಬ್ಬಿ. ಅವರ ಕವನಗಳು ಭಾವಪೂರ್ಣವಾಗಿವೆ~ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗುಬ್ಬಿ ಪ್ರಕಾಶನ ಕಾರ್ಯಕ್ರಮ ಆಯೋಜಿಸಿತ್ತು.ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಬಸವರಾಜ ಸಬರದ ಮಾತನಾಡಿ, `ಕಾವ್ಯವು ಕಟ್ಟಳೆಗಳನ್ನು ಮೀರಿ ಪ್ರಜಾಸತ್ತವಾಗಿ ಸಾಗುತ್ತಿದೆ. ಸಂಸ್ಕೃತ ಆಧರಿತವಾಗಿದ್ದ ಕಾವ್ಯ ಮೀಮಾಂಸೆಯ ದಿಕ್ಕು ಈಗ ಬದಲಾಗಿದೆ. ಕವಿ, ಬಳಿಕ ಕೃತಿ ಕೇಂದ್ರಿತವಾದ ಸಾಹಿತ್ಯವು ಈಗ ಓದುಗ ಕೇಂದ್ರಿತ ಆಗುತ್ತಿದೆ. ವಿಮರ್ಶೆಗಿಂತಲೂ ಜನತೆಯನ್ನು ತಲುಪುದೇ ಮುಖ್ಯವಾಗಿದೆ. ಪ್ರಾಧ್ಯಾಪಕರು, ಶಿಕ್ಷಕರು, ಪಂಡಿತರು ಮಾತ್ರ `ಸಾಹಿತಿ~ಗಳಲ್ಲ. ಕಾರಂತರು ಓದಿದ್ದು ಎಸ್ಸೆಸ್ಸೆಲ್ಸಿ, ನಿಸ್ಸಾರ್ ಅಹ್ಮದ್‌ರು ಭೂಗರ್ಭ ವಿಜ್ಞಾನ. ಅನುಭವ ಮತ್ತು ಪರಿಣತಿ ಕಲೆತರೆ ಕಾವ್ಯ ಹುಟ್ಟುತ್ತದೆ. ಸಾಹಿತ್ಯ ಮುಕ್ತವಾಗಿದೆ~ ಎಂದರು.ಕಾವ್ಯವು ಅನನ್ಯ ಅನುಭವ ಮತ್ತು ಭಾಷೆಯ ಸಂವಾದ. ಹಿಂದೆ ಛಂದಸ್ಸಿತ್ತು. ನವೋದಯದಲ್ಲಿ ಪ್ರಾಸ ಬಂತು. ನವ್ಯದವರು ಅದನ್ನೂ ಓಡಿಸಿದರು. ಎಚ್.ಎಸ್.ಮುಕ್ತಾಯಕ್ಕ, ಸಿದ್ಧಲಿಂಗಯ್ಯ ಮತ್ತಿತರರು ಹೊಸ ಭಾಷ್ಯವನ್ನೇ ಬರೆದರು. ಅಂತಹವುಗಳನ್ನು ಜನತೆ ಅಪ್ಪಿಕೊಂಡಾಗ ಪಂಡಿತರು ಒಪ್ಪಿಕೊಂಡರು. `ಯಾರು ಹೇಳಿದರು~ ಎನ್ನುವುದಕ್ಕಿಂತ `ಏನು ಹೇಳಿದರು~ ಎಂಬುದಕ್ಕೆ ಆದ್ಯತೆ ನೀಡಬೇಕು ಎಂದರು.`ಗುಬ್ಬಿ ಈ ಭಾಗದ ಮೊದಲ ಸೃಜನಶೀಲ ವೈದ್ಯ ಕವಿ. ಅವರ ಕವನಗಳು ದಿನ ನಿತ್ಯದ ಜೀವನದ ವರದಿಯ ಸಾರ. ಕಾಮಲೆ, ಪುನರ್ಜನ್ಮ ಮತ್ತಿತರ ಕವನಗಳ ಮೂಲಕ ಪ್ರಸ್ತುತ ಕಾಲಘಟ್ಟಕ್ಕೆ ಸ್ಪಂದಿಸಿದ್ದಾರೆ. ಆದರೆ ಅವರು ವೃತ್ತಿಯ ಪ್ರತಿಮೆಗಳನ್ನು ಹೆಚ್ಚಾಗಿ ಬಳಸಬೇಕಿತ್ತು~ ಎಂದರು.`ನನಗೆ ಪರಿಸರವೇ ಪ್ರೇರಣೆ. ಅದರಲ್ಲಿ ರೋಗಿಯಿಂದ ಹಿಡಿದು ಮುಖಂಡರ ತನಕ ಎಲ್ಲ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಇದ್ದಾರೆ. ವೈದ್ಯಯೇ ನನ್ನ ಸೌಭಾಗ್ಯ~ ಎಂದು ಡಾ.ಎಸ್.ಎಸ್.ಗುಬ್ಬಿ ಅಭಿವ್ಯಕ್ತಿಸಿದರು.

`ದುಬಾರಿ ವೈದ್ಯಕೀಯ ಲೋಕದಲ್ಲಿ ಬಡವರಿಗೂ ಸೇವೆ ನೀಡುವ ಗುಬ್ಬಿ ಶ್ರೇಷ್ಠ ವೈದ್ಯ~ ಎಂದು ಪತ್ರಕರ್ತ ಟಿ.ವಿ.ಶಿವಾನಂದನ್ ಬಣ್ಣಿಸಿದರು.ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ `ರಾಜ್ಯದಲ್ಲೇ ಮೊದಲ ಬಾರಿಗೆ ಕಸಾಪ ಜಿಲ್ಲಾ ಘಟಕದ ವೆಬ್‌ಸೈಟ್ ಆರಂಭ, `ಸಾಹಿತ್ಯ ಸಾರಥಿ~ ದ್ವೈಮಾಸಿಕ ಪತ್ರಿಕೆ, ರಾಷ್ಟ್ರೀಯ ವಿಚಾರ ಸಂಕಿರಣ, ಹೈ-ಕ ಸಾಹಿತಿ ಲೇಖಕರ ಸಮ್ಮಿಲನ, ಸಿನಿಮಾದಲ್ಲಿನ ಕನ್ನಡ ಕವಿಗಳ ಹಾಡುಗಳ ಗಾಯನ, ಕೃತಿಗಳ ಬಿಡುಗಡೆ ಮತ್ತಿತರ `ಕನ್ನಡ ನಿತ್ಯೋತ್ಸವ~ ಕಾರ್ಯಕ್ರಮಗಳನ್ನು ಜಿಲ್ಲಾ ಕಸಾಪ ಘಟಕ ನಡೆಸಲಿದೆ ಎಂದರು.ವಿಜಯಕುಮಾರ ತೇಗಲತಿಪ್ಪಿ ನಿರೂಪಿಸಿದರು. ಸಿ.ಎಸ್.ಮಾಲಿಪಾಟೀಲ ಹಾಗೂ ಸಂಗಡಿಗರು  ಸಂಗೀತ ಹಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry