ಶಿಕ್ಷಣಕ್ಕೆ ಹೆಚ್ಚಿನ ಒತ್ತು: ಸಚಿವ ಖಮರುಲ್

7

ಶಿಕ್ಷಣಕ್ಕೆ ಹೆಚ್ಚಿನ ಒತ್ತು: ಸಚಿವ ಖಮರುಲ್

Published:
Updated:

ಗುಲ್ಬರ್ಗ:  ರಾಜ್ಯ ಸರ್ಕಾರ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವ ನೀಡಿದ್ದು, ಅದಕ್ಕಾಗಿ ಬಜೆಟ್‌ನಲ್ಲಿ ಸಾಕಷ್ಟು ಹಣವನ್ನು ಮೀಸಲಿರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಹೇಳಿದರು.ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹೈದರಾಬಾದ್ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿರುವ ಸರ್ಕಾರ ಸಂವಿಧಾನದ ಕಲಂ 371(ಜೆ)ಗೆ ತಿದ್ದುಪಡಿ ತಂದು ಅದನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆಯಲ್ಲಿ ಹೆಜ್ಜೆಯಿಟ್ಟಿದೆ.371-ಜೆ ಕಲಂನ ರೂಪುರೇಷೆಗೆ ರಾಷ್ಟ್ರಪತಿಯವರ ಅಂಕಿತ ಬಿದ್ದ ನಂತರ ಈ ಭಾಗದಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಜಾರಿಯಾಗುವುದು. ಈ ಭಾಗದಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆ ಭರ್ತಿಗೆ ಸಾಕಷ್ಟು ಒತ್ತಡವಿದೆ. ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಸರ್ಕಾರ ಮನಗಂಡಿದ್ದು, ಈ ನಿಟ್ಟಿನಲ್ಲಿ ಹೆಜ್ಜೆ ಹಾಕಲಾಗುವುದು ಎಂದರು.ಶಿಕ್ಷಣಕ್ಕೆ ಆದ್ಯತೆ ನೀಡಲು ಸರ್ಕಾರ ಇತ್ತೀಚೆಗೆ ಅಂಗನವಾಡಿಯಿಂದ ಎಸ್ಸೆಸ್ಸೆಲ್ಸಿವರೆಗಿನ ಮಕ್ಕಳಿಗೆ ಶಾಲೆಯಲ್ಲಿಯೇ ಹಾಲು ವಿತರಿಸುವ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ಮಕ್ಕಳಲ್ಲಿ ಪೌಷ್ಟಿಕಾಂಶ  ವೃದ್ಧಿಯಾಗಿ ಮಕ್ಕಳು ಓದಿನತ್ತ ಚಿತ್ತ ಕೇಂದ್ರೀಕರಿಸಬಹುದು. ಕಡು ಬಡವರು ಕೂಡ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಸಂವಿಧಾನದ ಆಶಯ ಕೂಡ ಅದೇ ಆಗಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಅಂಗನವಾಡಿಯಿಂದ ವಿಶ್ವವಿದ್ಯಾಲಯದ ವರೆಗಿನ ಶಿಕ್ಷಣದಲ್ಲಿ ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದೆ.ಶಿಕ್ಷಣದಿಂದ ಪ್ರತಿಯೊಬ್ಬರು ವೈಯಕ್ತಿಕವಾಗಿ ಉನ್ನತಿ ಹೊಂದಲು ಸಾಧ್ಯ. ಇದರಿಂದ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಅಖಿಲ ಭಾರತ ಮಟ್ಟದ ಪರೀಕ್ಷೆಗಳಾದ ಐಎಎಸ್, ಐಪಿಎಸ್ ಸೇರಿದಂತೆ ಇತರೆ ಸೇವೆಗಳಿಗೆ ಭರ್ತಿಯಾಗಲು ಅಧ್ಯಯನ ನಡೆಸುವ ಅಭ್ಯರ್ಥಿಗಳಿಗೆ ಸರ್ಕಾರ ಶಿಷ್ಯವೇತನ ನೀಡುತ್ತಿದೆ. ಅದರೊಂದಿಗೆ ಅವರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿದೇಶಕ್ಕೆ ತೆರಳಿ ವಿದ್ಯಾಭ್ಯಾಸ ಮಾಡುವವರಿಗೂ ಅತಿ ಹೆಚ್ಚಿನ ಶಿಷ್ಯವೇತನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.ಶಿಕ್ಷಕ ವೃತ್ತಿಗೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಇದಕ್ಕೆ ಮೆರಗು ತಂದು ಕೊಟ್ಟಿದ್ದಾರೆ. ಶಿಕ್ಷಕರಾಗಿ ಅಪಾರ ಪಾಂಡಿತ್ಯಗಳಿಸಿದ ಅವರು ದೇಶದ ಅತಿ ಉನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆರಿದರು. ಅವರ ಜನ್ಮ  ದಿನವನ್ನು  ರಾಷ್ಟ್ರದಾದ್ಯಂತ ಶಿಕ್ಷಕರ ದಿನ ಎಂದು ಆಚರಿಸಲಾಗುತ್ತದೆ. ಇದಕ್ಕೆ ಅವರ ಅಪಾರ ಸಾಧನೆಯೆ ಕಾರಣ. ಶಿಕ್ಷಕರು ದೇಶದ ಆಸ್ತಿ, ಅವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮಾರ್ಗದರ್ಶನದಲ್ಲಿ ಸಾಗಬೇಕು ಎಂದು ಸಚಿವರು ಹೇಳಿದರು.ಪ್ರಶಸ್ತಿ ಪ್ರದಾನ: ಜಿಲ್ಲೆಯ ವಿವಿಧ ಪ್ರಾಥಮಿಕ ಶಾಲೆಯ ಎಂಟು ಶಿಕ್ಷಕರಿಗೆ, ಪ್ರೌಢಶಾಲೆಗಳ ಐದು ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. 2012-13ನೇ ಸಾಲಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಂದ ನಿವೃತ್ತಿ ಹೊಂದಿದ ಶಿಕ್ಷಕ/ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.ಆಳಂದ ಶಾಸಕ ಬಿ.ಆರ್. ಪಾಟೀಲ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಲ್ಲವಿ ಆಕುರಾತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಸಯ್ಯದ್ ಅಬ್ದುಲ್ ರಬ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯ ನಿರ್ದೇಶಕ ರುದ್ರಪ್ಪ, ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿಶ್ವನಾಥ ಕಟ್ಟಿಮನಿ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ, ಉತ್ತರ ವಲಯದ ಅಧ್ಯಕ್ಷರಾದ ಪರಮೇಶ್ವರ ಓಕಳಿ ಹಾಗೂ ದಕ್ಷಿಣ ವಲಯದ ಅಧ್ಯಕ್ಷ ಕರಬಸಯ್ಯ ಮಠ  ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ. ಜಯರಾಂ                                ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry