ವಕ್ಫ್‌ ಭೂಮಿ ಸಮೀಕ್ಷೆ ಪೂರ್ಣಗೊಳಿಸಲು ಸೂಚನೆ

6

ವಕ್ಫ್‌ ಭೂಮಿ ಸಮೀಕ್ಷೆ ಪೂರ್ಣಗೊಳಿಸಲು ಸೂಚನೆ

Published:
Updated:

ಗುಲ್ಬರ್ಗ: ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳ ಸಮೀಕ್ಷೆಯನ್ನು 1992ರಿಂದ ಪ್ರಾರಂಭಿಸಲಾಗಿದ್ದು, ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ. ಎಲ್ಲ ಆಸ್ತಿಗಳ ಸಮೀಕ್ಷೆಯನ್ನು ಕಂದಾಯ ಇಲಾಖೆಯ ಮೂಲಕ ಕೈಗೊಳ್ಳುವುದರ ಮೂಲಕ ಶೀಘ್ರ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು  ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಹೇಳಿದರು.ಗುಲ್ಬರ್ಗದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ನಡೆದ ವಕ್ಫ್ ಆಸ್ತಿಗಳ ಹಾಗೂ ಅಲ್ಪಸಂಖ್ಯಾತರ  ಕಲ್ಯಾಣ ಯೋಜನೆಗಳ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿಗಳ ಸಮೀಕ್ಷೆಯು ಶೇ.50 ರಷ್ಟು ಪೂರ್ಣಗೊಂಡಿದ್ದು, ತಕರಾರು ಇಲ್ಲದ ಆಸ್ತಿಗಳನ್ನು ಕಾಯಂಗೊಳಿಸಲು ಕಂದಾಯ ಇಲಾಖೆಯಿಂದ ಡಿಸೆಂಬರ್ ಅಂತ್ಯದೊಳಗೆ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಸೂಚಿಸಲಾಗಿದೆ ಎಂದರು.ಗುಲ್ಬರ್ಗ ಜಿಲ್ಲೆಯಲ್ಲಿ ಒಟ್ಟು 3,790 ವಕ್ಫ್ ಆಸ್ತಿಗಳಿದ್ದು ಈ ಪೈಕಿ 3435 ಆಸ್ತಿಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಈ ಪೈಕಿ 1,889 ಆಸ್ತಿಗಳನ್ನು ಕಾಯಂಗೊಳಿಸಲಾಗಿದ್ದು, ಉಳಿದ ಸಮೀಕ್ಷೆಯ ವಿವರಗಳು ತಹಶೀಲ್ದಾರರಲ್ಲಿ ಬಾಕಿ ಉಳಿದಿವೆ.ರಾಯಚೂರು ಜಿಲ್ಲೆಯಲ್ಲಿ ಒಟ್ಟು 2,553 ವಕ್ಫ್ ಆಸ್ತಿಗಳಿದ್ದು, ಈ ಪೈಕಿ 1,532 ಆಸ್ತಿಗಳ ಸಮೀಕ್ಷೆ ಕೈಗೊಳ್ಳಲಾಗಿದ್ದು, ಎಲ್ಲ ಆಸ್ತಿಗಳ ವಿವರಗಳು ತಹಶೀಲ್ದಾರರಲ್ಲಿ ಬಾಕಿ ಉಳಿದಿವೆ. ಯಾದಗಿರಿಯಲ್ಲಿ 960 ವಕ್ಫ್ ಆಸ್ತಿಗಳಿದ್ದು ಈ ಪೈಕಿ 682 ಆಸ್ತಿಗಳ ಸಮೀಕ್ಷೆ ಕೈಗೊಳ್ಳಲಾಗಿದ್ದು, ಈ ಎಲ್ಲ ಆಸ್ತಿ ವಿವರಗಳನ್ನು ತಹಶೀಲ್ದಾರರು ಕಾಯಂಗೊಳಿಸಿದ್ದಾರೆ.ಬೀದರ್‌ನಲ್ಲಿ ಒಟ್ಟು 2,603 ಆಸ್ತಿಗಳಿದ್ದು, ಈ ಪೈಕಿ 1,032 ಆಸ್ತಿಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಈ ಪೈಕಿ 203 ಆಸ್ತಿಗಳನ್ನು ಕಾಯಂಗೊಳಿಸಲಾಗಿದ್ದು, ಇನ್ನುಳಿದ ಆಸ್ತಿಗಳ ವಿವರಗಳು ತಹಶೀಲ್ದಾರರಲ್ಲಿ ಬಾಕಿ ಉಳಿದಿವೆ.ಬಳ್ಳಾರಿ ಜಿಲ್ಲೆಯಲ್ಲಿ 836 ಆಸ್ತಿಗಳಿದ್ದು ಈ ಪೈಕಿ 446 ಆಸ್ತಿಗಳ ಸಮೀಕ್ಷೆ ಕೈಗೊಂಡು ತಹಶೀಲ್ದಾರರಿಗೆ ಕಾಯಂಗೊಳಿಸಲು ಸಲ್ಲಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 1,188 ಆಸ್ತಿಗಳ ಪೈಕಿ 189 ಆಸ್ತಿಗಳ ಸಮೀಕ್ಷೆ ಕೈಗೊಂಡು 101 ಆಸ್ತಿಗಳನ್ನು ಕಾಯಂಗೊಳಿಸಲಾಗಿದೆ. 88 ಆಸ್ತಿಗಳ ವಿವರಗಳು ತಹಶೀಲ್ದಾರರಲ್ಲಿ ಬಾಕಿ ಉಳಿದಿವೆ.ಬಾಗಲಕೋಟೆ ಜಿಲ್ಲೆಯಲ್ಲಿ 744 ಆಸ್ತಿಗಳ ಪೈಕಿ 450 ಆಸ್ತಿಗಳ ಸಮೀಕ್ಷೆ ಕೈಗೊಳ್ಳಲಾಗಿದ್ದು, ಎಲ್ಲ ಆಸ್ತಿಗಳನ್ನು ಕಾಯಂಗೊಳಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ 1,762 ಆಸ್ತಿಗಳ ಪೈಕಿ 693 ಆಸ್ತಿಗಳ ಸಮೀಕ್ಷೆ ಕೈಗೊಳ್ಳಲಾಗಿದ್ದು, ಈ ಪೈಕಿ 553 ಆಸ್ತಿಗಳನ್ನು ಕಾಯಂಗೊಳಿಸಲಾಗಿದೆ. ಉಳಿದಿರುವ ಎಲ್ಲ ಆಸ್ತಿಗಳ ಸಮೀಕ್ಷೆಯನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಕಾರ್ಯಪಡೆಯು ಪ್ರತಿ ತಿಂಗಳು ಸಭೆ ಸೇರಿ ಪ್ರಗತಿ ವಿವರವನ್ನು ಚರ್ಚಿಸಿ ವರದಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾ ಸಚಿವರು ತಿಳಿಸಿದರು.ವಕ್ಫ್ ಪ್ರಧಾನ ಕಾರ್ಯದರ್ಶಿ ಬಿ.ಎಚ್. ಅನಿಲಕುಮಾರ್, ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್, ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಆರ್. ಅಬ್ದುಲ್ ರಿಯಾಜ್ ಖಾನ್, ಅಲ್ಪಸಂಖ್ಯಾತರ ನಿರ್ದೇಶಕ ಅಕ್ರಂ ಪಾಶಾ, ಗುಲ್ಬರ್ಗ ಜಿಲ್ಲಾಧಿಕಾರಿ ಎನ್.ವಿ. ಪ್ರಸಾದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry