ಭಾನುವಾರ, ಜನವರಿ 26, 2020
28 °C
ಕ್ವಿಂಟಲ್‌ ತೊಗರಿಗೆ ಕನಿಷ್ಠ ₨6,450 ಬೆಂಬಲ ಬೆಲೆಗೆ ಒತ್ತಾಯ

ಹೋರಾಟಕ್ಕೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ತೊಗರಿಗೆ ಕ್ವಿಂಟಲ್‌ಗೆ ₨6,450 ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ಹಂತ ಹಂತದ ಸಭೆಗಳು, ಸರಣಿ ಪ್ರತಿಭಟನೆ, ರಸ್ತೆ ತಡೆ  ನಡೆಸಲು ವಿವಿಧ ಸಂಸ್ಥೆಗಳು, ಸಂಘಟನೆಗಳು ನಿರ್ಧರಿಸಿವೆ. ನಗರದಲ್ಲಿ ಮಂಗಳವಾರ ಪತ್ರಿಕಾ­ಗೋಷ್ಠಿ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು, ‘ಬೆಳಗಾವಿ ಅಧಿವೇಶ­ನದ ಸಂದರ್ಭದಲ್ಲಿ ತೊಗರಿ ಬೆಳೆಗಾರರ ನಿಯೋಗವು ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರನ್ನು ಭೇಟಿಯಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಕೋರಿತ್ತು. ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು.ಶೀಘ್ರವೇ ಸಂಪುಟ ಉಪಸಮಿತಿಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದರು. ನಿಯೋಗದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಶಾಸಕರಾದ ಬಿ.ಆರ್. ಪಾಟೀಲ್‌, ಮಾಲೀಕಯ್ಯ ಗುತ್ತೇದಾರ್‌, ರಾಜಶೇಖರ ಪಾಟೀಲ್‌, ಶಿವಾನಂದ ಪಾಟೀಲ್‌, ಬಾದರ್ಲಿ ಹಂಪನಗೌಡ, ಅಜಯ್‌ ಸಿಂಗ್‌, ವಿಧಾನ ಪರಿಷತ್‌ ಸದಸ್ಯ ಅಲ್ಲಮಪ್ರಭು ಪಾಟೀಲ್‌ ಮತ್ತಿತರರರು ಇದ್ದರು. ಈ ತನಕ ಯಾವುದೇ ಪ್ರಕ್ರಿಯೆಗಳು ಸರ್ಕಾರದ ಮಟ್ಟದಲ್ಲಿ ಆರಂಭವಾಗಿಲ್ಲ. ಆದರೆ ಮಾರುಕಟ್ಟೆಯಲ್ಲಿ ತೊಗರಿ ಆವಕ ಆರಂಭವಾಗಿದೆ’ ಎಂದು ತಿಳಿಸಿದರು.  ಕರ್ನಾಟಕ ಪ್ರಾಂತ ರೈತ ಸಂಘದ ಮಾರುತಿ ಮಾನ್ಪಡೆ ಮಾತನಾಡಿ, ‘15 ದಿನಗಳೊಳಗೆ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದೆವು. ಆದರೆ ಸರ್ಕಾರದಿಂದ ಸೂಚನೆ ಕಂಡುಬಾರದ ಹಿನ್ನೆಲೆಯಲ್ಲಿ ತೊಗರಿ ಬೆಳೆಯುವ ಐದು ಜಿಲ್ಲೆಗಳಲ್ಲಿ ಹೋರಾಟ ರೂಪಿಸಲು ನಿರ್ಧರಿಸಲಾಗಿದೆ.ಮೊದಲ ಹಂತವಾಗಿ ಡಿಸೆಂಬರ್‌ 11ರಂದು ಚಿತ್ತಾಪುರ, ಸೇಡಂ, 12ರಂದು ಶಹಾಬಾದ, ಜೇವರ್ಗಿ, 14ರಂದು ಚಿಂಚೋಳಿ, 15ರಂದು ಬೀದರ್‌, 17ರಂದು ಆಳಂದ, ಅಫಜಲಪುರ, 18ರಂದು ವಿಜಾಪುರ ಹಾಗೂ ಬಾಗಲಕೋಟೆ (ದಿನ ನಿಗದಿಯಾಗಿಲ್ಲ) ರೈತರ ಸಭೆ ನಡೆಸಲಾಗುವುದು. ಈ ನಡುವೆ 16ರಂದು ಬೀದರ್‌, ಗುಲ್ಬರ್ಗ, ಯಾದಗಿರಿ, ವಿಜಾಪುರದಲ್ಲಿ ರಸ್ತೆತಡೆ ನಡೆಸಲಾಗುವುದು. ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಡಿಸೆಂಬರ್ 30ರಂದು ಗುಲ್ಬರ್ಗದಲ್ಲಿ ಬೃಹತ್‌ ರೈತರ ಪ್ರತಿಭಟನಾ ಜಾಥಾ ನಡೆಸಲಾಗುವುದು’ ಎಂದು ವಿವರಿಸಿದರು.‘ಕಳೆದ ವರ್ಷಕ್ಕಿಂತ ಈ ಬಾರಿ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಳವಾಗಿದೆ. ಎಕರೆಗೆ ಸುಮಾರು ₨30 ಸಾವಿರ  ಖರ್ಚು ಬೀಳುತ್ತಿದೆ.  ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ತೊಗರಿ ಆವಕ ಶುರುವಾಗಿದೆ. ಕೆಲವೆಡೆ ರೈತರು ಮಹಾರಾಷ್ಟ್ರ ಮಾರುಕಟ್ಟೆಗೆ ಹೋಗುತ್ತಿದ್ದಾರೆ. ಹೀಗಾಗಿ ಬೆಂಬಲ ಬೆಲೆ ತುರ್ತು ಅವಶ್ಯಕವಾಗಿದೆ’ ಎಂದರು.ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿ, ‘ಕೇಂದ್ರ ಸರ್ಕಾರವು ತೊಗರಿ ಆಮದಿನ ಮೇಲೆ ಸುಂಕ ವಿಧಿಸದೇ ಇರುವುದೇ ಬೆಲೆ ಕುಸಿತಕ್ಕೆ ಕಾರಣ. ಒಂದೆಡೆ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇನ್ನೊಂದೆಡೆ ಟಾಂಜಾನಿಯ, ಬರ್ಮಾದಿಂದ ಕಳಪೆ ತೊಗರಿ ಆಮದಾಗುತ್ತಿದ್ದು, ಗ್ರಾಹಕರಿಗೆ ವಂಚನೆಯಾಗುತ್ತಿದೆ.

ಸರ್ಕಾರದ ನೀತಿಯಿಂದಾಗಿ ಕಳೆದ ವರ್ಷ ಕೇಂದ್ರಕ್ಕೆ ₨1,206 ನಷ್ಟವಾಗಿದೆ ಎಂದು ಮಹಾಲೇಖಪಾಲ (ಸಿಎಜಿ) ವರದಿಯಲ್ಲಿ ತಿಳಿಸಲಾಗಿದೆ. ಕೇಂದ್ರ ಸರ್ಕಾರ ಶೇ30 ಆಮದು ಸುಂಕ ವಿಧಿಸಬೇಕು. ರಾಜ್ಯವು ತೊಗರಿ ಮಂಡಳಿಗೆ 100 ಕೋಟಿ ರೂಪಾಯಿ ಅನುದಾನ ನೀಡಬೇಕು’ ಎಂದು ಅವರು ಒತ್ತಾಯಿಸಿದರು.ಮುಖಂಡರಾದ ಬಸವರಾಜ ಇಂಗಿನ, ಸಿದ್ರಾಮಪ್ಪ ಧಂಗಾಪುರ, ಕರಿಸಿದ್ದಪ್ಪ ಪಾಟೀಲ್‌, ಉಮಾಪತಿ ಪಾಟೀಲ್‌, ಮೌಲ್ಲಾ ಮುಲ್ಲಾ, ಬಸವರೆಡ್ಡಿ, ಸಿದ್ದಲಿಂಗ ರೆಡ್ಡಿ, ಚಂದ್ರಶೇಖರ, ಶರಣಬಸಪ್ಪ, ಚಿತ್ರಶೇಖರ, ಗುರುಲಿಂಗಪ್ಪಗೌಡ ಮತ್ತಿತರರು ಇದ್ದರು. ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ಪ್ರಾಂತ ರೈತ ಸಂಘ, ತೊಗರಿ ಬೆಳೆಗಾರರ ಸಂಘ, ಕೃಷಿಕ ಸಮಾಜ, ಅಖಿಲ ಭಾರತ ಕಿಸಾನ್‌ ಸಭಾ, ದಾಲ್‌ಮಿಲ್ಲರ್ಸ್‌ ಅಸೋಸಿಯೇಶನ್‌, ಗ್ರೈನ್‌ ಆಂಡ್‌ ಸೀಡ್‌ ಮರ್ಚೆಂಟ್ಸ್‌ ಅಸೋಸಿಯೇಶನ್‌, ಎಚ್‌ಕೆಸಿಸಿಐ ಸೇರಿದಂತೆ ವಿವಿಧ ಸಂಸ್ಥೆ ಹಾಗೂ ಸಂಘಟನೆಗಳು ಕೈ ಜೋಡಿಸಿವೆ.

ಗುಲ್ಬರ್ಗದಲ್ಲೂ ‘ಆಮ್‌ ಆದ್ಮಿ ಎಫೆಕ್ಟ್‌’!

ದಕ್ಷಿಣ ಕರ್ನಾಟಕದಲ್ಲಿ ಅಡಿಕೆ, ಕಾಫಿ, ಕಬ್ಬು, ಭತ್ತದ ಸಮಸ್ಯೆ ಬಂದ ತಕ್ಷಣವೇ ಅಲ್ಲಿನ ರಾಜಕೀಯ ಮುಖಂಡರು ಹೋರಾಟಕ್ಕೆ ಧುಮುಕುತ್ತಾರೆ. ಆದರೆ ತೊಗರಿ ಬೆಳೆಗಾರರ ಸಮಸ್ಯೆ ರಾಜಕೀಯ ಸ್ವರೂಪದ ಹೋರಾಟ ಪಡೆಯದ ಕಾರಣ ಮುಖಂಡರು ಸ್ಪಂದಿಸುತ್ತಿಲ್ಲ.

ಹೀಗಾಗಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಪಕ್ಷ ಭೇದ ಮರೆತ ರಾಜಕೀಯ ಹೋರಾಟವಾಗಿ ರೂಪಿಸಲು ಯತ್ನಿಸಲಾಗುವುದು. ಗುಲ್ಬರ್ಗ, ಬೀದರ್‌, ಯಾದಗಿರಿ, ರಾಯಚೂರು, ವಿಜಾಪುರ ಹಾಗೂ ಬಾಗಲಕೋಟೆಯಲ್ಲಿ ಹೋರಾಟವನ್ನು ಸಜ್ಜುಗೊಳಿಸಲಾಗುವುದು. ಶಾಸಕರು, ಸಂಸದರು, ಸಚಿವರು ಸ್ಪಂದಿಸದೇ ಇದ್ದಲ್ಲಿ ಚುನಾವಣೆ ವೇಳೆಯಲ್ಲಿ ದೆಹಲಿಯ ‘ಆಮ್ ಆದ್ಮಿ’ ಮಾದರಿಯಲ್ಲಿ ತೊಗರಿ ಸಮಸ್ಯೆಯನ್ನು ರಾಜಕೀಯ ಹೋರಾಟವಾಗಿ ರೂಪಿಸಲಾಗುವುದು ಎಂದು ಮುಖಂಡರು ತಿಳಿಸಿದರು.

ಪ್ರತಿಕ್ರಿಯಿಸಿ (+)