ಸೋಮವಾರ, ಜನವರಿ 20, 2020
21 °C
ಸಭೆಯಲ್ಲಿ ಕಬ್ಬು ಬೆಳೆಗಾರರಿಂದ ಆಕ್ರೋಶ

ಆದೇಶ ಪಾಲಿಸದ ಸಕ್ಕರೆ ಕಾಖಾರ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಾಕಿ ಪಾವತಿ ಮತ್ತು ಖಾಲಿ ಬಾಂಡ್‌ ಮೇಲೆ ರೈತರ ಸಹಿ ಪಡೆಯದಂತೆ ಜಿಲ್ಲಾಧಿಕಾರಿ ಮೌಖಿಕ­ವಾಗಿ ಆದೇಶಿಸಿದ್ದರೂ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಅನುಸರಿಸುತ್ತಿಲ್ಲ ಎಂದು ಜಿಲ್ಲೆಯ ಕಬ್ಬು ಬೆಳೆಗಾರರ ಸಂಘಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ­ಧಿಕಾರಿ ಅಧ್ಯಕ್ಷತೆಯಲ್ಲಿ ಗುರುವಾರ ಕರೆದಿದ್ದ ಸಕ್ಕರೆ ಕಾರ್ಖಾನೆಗಳು ಹಾಗೂ ರೈತ ಮುಖಂಡರ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಯಿತು. 2011–12ನೇ ಸಾಲಿನಲ್ಲಿ ಪ್ರತಿ ಟನ್‌ ಕಬ್ಬಿಗೆ ₨1900 ದರ ನಿಗದಿ­ಯಾಗಿದ್ದರೂ ₨ 1800 ಮಾತ್ರ ನೀಡ­ಲಾಗಿದೆ. 2012–13ರಲ್ಲಿ ₨ 2400 ನಿಗದಿಯಾಗಿದ್ದರೂ ₨ 2200 ಮಾತ್ರ ಹಂಚಿಕೆಯಾಗಿದೆ. ನವೆಂಬರ್‌ 25ರಂದು ಜಿಲ್ಲಾಧಿಕಾರಿ ಸಭೆ ನಡೆಸಿ, ಬಾಕಿ ಪಾವತಿಸುವಂತೆ ಸೂಚಿಸಿದ್ದರು.

ಆದರೆ ಇಲ್ಲಿಯವರೆಗೂ ಬಾಕಿ ಪಾವತಿ­ಯಾಗುತ್ತಿಲ್ಲ. ರೈತರಿಗೆ ಬಿಲ್‌ ಹಂಚಿಕೆ­ಯಲ್ಲಿ ಒಂದೇ ನೀತಿ ಅನುಸರಿಸಿಲ್ಲ. ಅದರಲ್ಲೂ ವ್ಯತ್ಯಾಸ ಮಾಡಲಾಗಿದೆ. ರೈತರ ಬಾಕಿ ಹಣವನ್ನು ಪಾವತಿಸಲು ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಆದೇಶಿಸ­ಬೇಕು. ಆದೇಶ ಪಾಲಿಸದ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.ರೇಣುಕಾ ಶುಗರ್‍ಸ್‌ ಕಂಪೆನಿಯು ಅಫಜಲಪುರ ಸಕ್ಕರೆ ಕಾರ್ಖಾನೆ ವ್ಯಾಪ್ತಿ ರೈತರಿಗೆ ರಾಯಭಾಗ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರಿಗಿಂತ ₨100 ಕಡಿಮೆ ದರ ನಿಗದಿ ಮಾಡಿದೆ. ಕಬ್ಬಿನಿಂದ ಸಿಗುವ ಸರಾಸರಿ ಸಕ್ಕರೆ ಪ್ರಮಾಣ ಒಂದೇ­ಯಾಗಿದ್ದರೂ ದರ ನೀಡಿಕೆಯಲ್ಲಿ ವ್ಯತ್ಯಾಸ ಮಾಡುತ್ತಿದೆ. ರೈತರಿಗೆ ನ್ಯಾಯ ಒದಗಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳ­ಬೇಕು ಎಂದು ಕೋರಿದರು.ಅಧಿಕಾರಿಗಳ ಸಮ್ಮುಖದಲ್ಲಿ ಎಲ್ಲಕ್ಕೂ ತಲೆಬಾಗಿಸುವ ಸಕ್ಕರೆ ಕಾರ್ಖಾ­ನೆಗಳು, ರೈತರಿಗೆ ಸಿಗಬೇಕಾದ ನ್ಯಾಯ­ಯುತ ಕಬ್ಬಿನ ಬೆಲೆಯನ್ನು ಕೊಡುತ್ತಿಲ್ಲ. ರೈತರು ಅಸಂಘಟಿತರಾಗಿರುವುದರಿಂದ ಕಾರ್ಖಾನೆಗಳು ಇದರ ಲಾಭ ಪಡೆದು­ಕೊಳ್ಳುತ್ತಿವೆ. ಒಂದೇ ಪ್ರದೇಶದಲ್ಲಿ ಕಬ್ಬು ಬೆಳೆಯುವ ರೈತರಿಗೆ ವಿಭಿನ್ನ ರೀತಿಯಲ್ಲಿ ದರ ನಿಗದಿ ಮಾಡುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನ ಹರಿಸಿ ಕಾರ್ಖಾ­ನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಅಫಜಲಪುರ ರೇಣುಕಾ ಶುಗರ್‍ಸ್‌ ಸಕ್ಕರೆ ಕಾರ್ಖಾನೆಯು ಕಬ್ಬು ಕಟಾವು ಮಾಡಿಸಿದ ರೈತನಿಂದ ಪಹಣಿ, ಒಂದು ಭಾವಚಿತ್ರ ಹಾಗೂ ಗುರುತಿನ ಚೀಟಿ­ಗಳನ್ನು ಪಡೆದುಕೊಳ್ಳುತ್ತಿದೆ. ಜಿಲ್ಲೆಯ ಯಾವ ಕಾರ್ಖಾನೆಯಲ್ಲೂ ಈ ವ್ಯವಸ್ಥೆ ಇಲ್ಲ. ರೈತರ ಪ್ರಮಾಣಪತ್ರಗಳನ್ನು ಕಾರ್ಖಾನೆಗಳು ದುರುಪಯೋಗ ಮಾಡಿ­ಕೊಳ್ಳುವ ಬಗ್ಗೆ ಶಂಕೆ ಉಂಟಾ­ಗಿದೆ. ಆರ್‌ಟಿಜಿಎಸ್‌ ಮಾಡಿಸಲು ಗುರುತಿನ ಪತ್ರಗಳ ಅಗತ್ಯ ಇರುವುದಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.ಚಿಂಚೋಳಿಯಲ್ಲಿ ಕಬ್ಬು ಬೆಳೆದಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಯಾವ ಕಾರ್ಖಾನೆಗೆ ಕಬ್ಬು ರವಾನಿಸಬೇಕು ಎನ್ನುವ ಗೊಂದಲ ನಿರ್ಮಾಣವಾಗಿದೆ. ಕೂಡಲೇ ಈ ಸಮಸ್ಯೆಯನ್ನು ಪರಿಹರಿಸ­ಬೇಕು. ಯಾದಗಿರಿ ಸಕ್ಕರೆ ಕಾರ್ಖಾನೆ ಹಾಗೂ ಚಿಂಚೋಳಿ ರೈತರ ನಡುವೆ ಮಧ್ಯವರ್ತಿಗಳು ಕೆಲಸ ಮಾಡುತ್ತಿ­ದ್ದಾರೆ. ಇದಕ್ಕೆ ಆಸ್ಪದ ಕೊಡದಂತೆ, ಚಿಂಚೋಳಿ ರೈತರ ಕಬ್ಬುಗಳನ್ನು ಕಾರ್ಖಾ­ನೆ­ಯವರು ಕಟಾವು ಮಾಡಿ­ಸಲು ಸೂಚಿಸಬೇಕು ಎಂದು ಜಿಲ್ಲಾ­ಧಿಕಾರಿಗೆ ಮನವಿ ಮಾಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ­ರೆಡ್ಡಿ, ಬೇಹುಗಾರಿಕೆ ಎಸ್‌ಪಿ ಮಹೇಶ­ಕುಮಾರ್‌, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೋಕಾಶಿ, ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧಾರ್ಥ ಬಸರಿಗಿಡದ, ರೈತ ಮುಖಂಡರಾದ ಜಗದೀಶ ಪಾಟೀಲ ರಾಜಾಪುರ, ರಮೇಶ ಹೂಗಾರ, ಶರಣು ಬಿಲ್ಲಾಳ, ಶ್ರೀಮಂತರಾವ ಆಳಂದ, ಶಿವಲಿಂಗಪ್ಪ ಚೋರಗಸ್ತಿ, ನರಹರಿ ಪಾಟೀಲ, ಬಿ.ವಿ. ಕುಲಕರ್ಣಿ, ಶಾಂತವೀರಪ್ಪ ಕಲಬುರ್ಗಿ, ಮೈಲಾರಪ್ಪ ಮಾಳಗಿ, ಮಹಾದೇವಪ್ಪ ಕರಗೊಂಡ ಮತ್ತಿತರರು ಇದ್ದರು.

ಬಾಕಿ ಪಾವತಿಗೆ ಡಿ. 31ರ ಗಡುವು

ಸಕ್ಕರೆ ಕಾರ್ಖಾನೆಗಳಿಗೆ ಈ ಹಿಂದೆ ತಿಳಿಸಿರುವಂತೆ ಕೂಡಲೇ 2012–13ನೇ ಸಾಲಿನ ಕಬ್ಬು ಬೆಳೆ­ಗಾ­ರರ ಬಾಕಿ ಪಾವತಿಸಬೇಕು. ಖಾಲಿ ಬಾಂಡ್‌ಗೆ ಸಹಿ ಮಾಡಿಸುತ್ತಿ­ರುವ ಪ್ರಕರಣಗಳು ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗು­ವುದು ಎಂದು ಸಕ್ಕರೆ ಕಾರ್ಖಾನೆ ಪ್ರತಿ­ನಿಧಿಗಳಿಗೆ ಜಿಲ್ಲಾಧಿಕಾರಿ ಡಾ.­ ­ಎನ್‌.ವಿ. ಪ್ರಸಾದ್‌ ಎಚ್ಚರಿಕೆ ನೀಡಿದರು.ರೇಣುಕಾ ಶುಗರ್‍ಸ್‌ ಕಂಪೆನಿ ದರ ತಾರತಮ್ಯ ಮಾಡುತ್ತಿದೆ ಎಂದು ರೈತರು ಮನವಿ ಸಲ್ಲಿಸಿದ್ದಾರೆ. ಕೂಡಲೇ ಅದನ್ನು ರಾಜ್ಯ ಕಬ್ಬು ನಿರ್ದೇಶಕ ಇಲಾಖೆಗೆ ರವಾನಿಸಲಾ­ಗು­ವುದು. ಈ ಬಗ್ಗೆ ಆದೇಶ ಹೊರ­ಡಿಸಲು ಜಿಲ್ಲಾಧಿಕಾರಿಗೆ ಅಧಿಕಾರ­ವಿಲ್ಲ ಎಂದು ಸ್ಪಷ್ಟಪಡಿಸಿದರು.

ಚಿಂಚೋಳಿ ವ್ಯಾಪ್ತಿಯಲ್ಲಿ ಬೆಳೆ­ದಿರುವ ಕಬ್ಬನ್ನು ಕಟಾವು ಮಾಡು­ವು­ದಕ್ಕೆ ಕ್ರಮ ಕೈಗೊಳ್ಳಲಾ­ಗು­ವುದು.

ರೈತರೊಂದಿಗೆ ಸಕ್ಕರೆ ಕಾರ್ಖಾ­ನೆಗಳು ಸ್ನೇಹ­ಪೂರ್ವ­ಕ­ವಾಗಿ ನಡೆದುಕೊಳ್ಳಬೇಕು. ಯಾವುದೇ ಸಮಸ್ಯೆಗಳ ಬಗ್ಗೆ ರೈತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಸಕ್ಕರೆ ಕಾರ್ಖಾನೆ ಸಂಬಂಧಿಸಿದ ವ್ಯಾಜ್ಯಗಳು ಜಿಲ್ಲಾ­ಡಳಿ­ತ­ದವರೆಗೂ ಬರದಂತೆ ಪರಿ­ಹರಿಸಿ­ಕೊಳ್ಳಬೇಕು ಎಂದು ಸಭೆ­ಯಲ್ಲಿ ಸೂಚಿಸಿದರು.

ರಸ್ತೆ ದುರಸ್ತಿಗೊಳಿಸಿ

ಚಿಂಚೋಳಿ ತಾಲ್ಲೂಕಿನ ಅನೇಕ ಕಡೆ ರಸ್ತೆಗಳು ತುಂಬಾ ಹಾಳಾಗಿ­ರುವು­ದರಿಂದ ಕಟಾವು ಮಾಡಿದ ಕಬ್ಬು ತರಲು ಲಾರಿ ಚಾಲಕರು ನಿರಾಕರಿ­ಸುತ್ತಿ­ದ್ದಾರೆ. ಜಿಲ್ಲಾಡಳಿತವು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಯಾದಗಿರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯ ಮನವಿ ಮಾಡಿದರು.ಬಾಕಿ ಪಾವತಿಸುವ ಕೆಲಸ ಆರಂಭಿಸಲಾಗಿದೆ. ಜನವರಿ ಮೊದಲ ವಾರದೊಳಗೆ ಬಾಕಿ ಪಾವತಿಸಲಾಗುವುದು. ಚಿಂಚೋಳಿ ತಾಲ್ಲೂಕಿನ ರೈತರು ಕಬ್ಬು ಪೂರೈಸಲು ಸಿದ್ದರಾದರೆ, ಪಡೆದುಕೊಳ್ಳಲಾಗುವುದು. ಕಾರ್ಖಾನೆಯಿಂದ ಸಾಲ ಪಡೆದಿರುವ ರೈತರಿಗೆ ನೀಡುವ ಬಿಲ್‌ನಲ್ಲಿ ಕಡತಗೊಳಿಸಲಾಗುವುದು. ಆದರೆ ‘ಎಚ್‌ ಆ್ಯಂಡ್‌ ಟಿ’ ಕಡಿತ ಮಾಡುವುದಿಲ್ಲ ಎಂದರು.ಶಾಸಕರಿಲ್ಲದ ಸಭೆ

ಜಿಲ್ಲೆಯ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದರೂ ಯಾವುದೇ ಶಾಸಕರು ಅಹವಾಲು ಆಲಿಸುತ್ತಿಲ್ಲ. ಸ್ವತಃ ರೈತರೆ ಜಿಲ್ಲಾಡಳಿತಕ್ಕೆ ಬಂದು ಕಷ್ಟ ಹೇಳಿ­ಕೊ­ಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಹೊರಡಿಸುವ ಆದೇಶಗಳೆಲ್ಲವನ್ನು ಸಕ್ಕರೆ ಕಾರ್ಖಾನೆಗಳು ಪಾಲಿಸಿದರೆ ಸಮಸ್ಯೆಯೇ ಉದ್ಭವಿಸುವುದಿಲ್ಲ. ಸಕ್ಕರೆ ಕಾರ್ಖಾನೆಗಳು ರೈತರ ಹಿತಕ್ಕಾಗಿ ಇವೆಯೋ ಕೇವಲ ಲಾಭಕ್ಕಾಗಿ ಸ್ಥಾಪನೆ­ಯಾ­ಗಿ­ವೆಯೋ ಎನ್ನುವ ಪ್ರಶ್ನೆ ಕಾಡುತ್ತಿದೆ. ಸಭೆಯಲ್ಲಿ ಶಾಸಕರಿದ್ದರೆ ಒಳ್ಳೆಯದಾ­ಗುತ್ತಿತ್ತು ಎಂದು ಕಬ್ಬು ಬೆಳೆಗಾರರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)