ಮಂಗಳವಾರ, ಜನವರಿ 28, 2020
29 °C

ಬೆಂಗಳೂರಿಗೆ ಹೊರಟ ‘ಹಂಚಿನಮನಿ ಪರಸಪ್ಪ’!

ಪ್ರಜಾವಾಣಿ ವಾರ್ತೆ / ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಗುಲ್ಬರ್ಗ ವಿಶ್ವವಿದ್ಯಾಲ­ಯದ ‘ಹಂಚಿನಮನಿ ಪರಸಪ್ಪ’ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಹೊರಡಲು ಅಣಿಯಾಗುತ್ತಿದ್ದಾನೆ! ಅದರಲ್ಲೂ ರೈಲಿನಲ್ಲಿ ಪ್ರಯಾಣಿಸುತ್ತಿ­ರುವುದು ‘ಪರಸಪ್ಪ’ನ ಖುಷಿ ಹೆಚ್ಚಿಸಿದೆ. ಯಾರಿದು ಪರಸಪ್ಪ ಎಂದು ಯೋಚಿಸುತ್ತಿದ್ದರೆ ನೀವೊಮ್ಮೆ ಗುಲ್ಬರ್ಗ ವಿ.ವಿ ಬಯಲು ರಂಗಮಂದಿರಕ್ಕೆ ಭೇಟಿ ನೀಡಬೇಕು. ಆಗ ಗೊತ್ತಾಗುತ್ತದೆ ಪರಸಪ್ಪ ವ್ಯಕ್ತಿ ಅಲ್ಲ, ನಾಟಕದ ಪಾತ್ರ­ಧಾರಿ ಎಂದು.ಡಿ.19 ರಿಂದ 23ರ ವರೆಗೆ ಐದು ದಿನ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ‘ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಯುವ ಜನೋತ್ಸವ’ದಲ್ಲಿ ಗುಲ್ಬರ್ಗ ವಿ.ವಿಯ 40 ವಿದ್ಯಾರ್ಥಿಗಳು ಭಾಗವಹಿಸುತ್ತಿ­ದ್ದಾರೆ. ಅದರಲ್ಲೂ ‘ಹಂಚಿನಮನಿ ಪರಸಪ್ಪ’ ನಾಟಕ ಪ್ರದರ್ಶಿಸುವ ಮೂಲಕ ‘ಚಿನ್ನದ ಪದಕ’ ಮುಡಿಗೇರಿಸಿ­ಕೊಳ್ಳುವ ಗುರಿಯೊಂದಿಗೆ ಭರ್ಜರಿ ತಾಲೀಮು ನಡೆಸಿದ್ದಾರೆ.ವಿ.ವಿಯಲ್ಲಿ ಈಚೆಗೆ ನಡೆದ ಅಂತರ ಮಹಾವಿದ್ಯಾಲಯ ಯುವಜನೋತ್ಸವ­ದಲ್ಲಿ ಪ್ರಥಮ ಬಹುಮಾನ ಪಡೆದ ತಂಡ ಮತ್ತು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, 20 ಕಲಾ ಪ್ರಕಾರ­ಗಳಲ್ಲಿ ಪ್ರದರ್ಶನ ನೀಡಲು ವಿದ್ಯಾರ್ಥಿ­ಗಳು ಸಿದ್ಧತೆ ನಡೆಸಿದ್ದಾರೆ. ಏಕವ್ಯಕ್ತಿ ಸ್ವರಗಾಯನ, ಲಘು ಸಂಗೀತ, ವೃಂದ ಗಾಯನ, ಶಾಸ್ತ್ರೀಯ ನೃತ್ಯ, ಏಕಾಂಕ ನಾಟಕ, ಪ್ರಹಸನ ಮತ್ತು ಮೂಕಾಭಿನಯ ಸೇರಿದಂತೆ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.ಗಜಾನನ ಶರ್ಮಾ ರಚಿಸಿರುವ ಮನಕಲಕುವ ಕಥೆ ಹೊಂದಿರುವ ‘ಹಂಚಿ­ನಮನಿ ಪರಸಪ್ಪ’ ನಾಟಕವನ್ನು ನಾಟಕ ಶಿಕ್ಷಕ ರಾಘವೇಂದ್ರ ಹಳೇಪೇಟೆ ನಿರ್ದೇಶಿಸುತ್ತಿದ್ದಾರೆ. ಪಂಚಾಕ್ಷರಿ ಕಣವಿ, ಪುಟ್ಟರಾಜು, ತಿಮ್ಮಣ್ಣ, ಕಲ್ಯಾಣಿ, ನಿಖಿಲ್ ಸಂಗೀತ ಮತ್ತು ಸ್ವರ ಸಂಯೋಜನೆ ಮಾಡಿದ್ದಾರೆ.ಹಿಂದುಳಿದ ಕೇರಿಯಲ್ಲಿ ವಾಸವಾಗಿ­ರುವ ಪರಸಪ್ಪ ಶಾಲೆಗೆ ಹೋಗುತ್ತಿರು­ತ್ತಾನೆ. ಒಂದು ಹಂತದಲ್ಲಿ ಸಹಪಾಠಿಗ­ಳೊಂದಿಗೆ ಜಗಳವಾಗುತ್ತದೆ. ಆಗ, ಮತ್ತೊಂದು ಕೇರಿಯ ವಿದ್ಯಾರ್ಥಿಗಳು ‘ಲೋ ಪರಸಪ್ಪ ನೀನು ಹಂಚಿನಮನಿ ಅಡ್ಡ ಹೆಸರು ಇಟ್ಟುಕೊಂಡು ಹುಲ್ಲಿನ ಮನೆಯಲ್ಲಿ ವಾಸಿಸುತ್ತಿದ್ದಿಯಲ್ಲ’ ಎಂದು ವ್ಯಂಗ್ಯವಾಡುತ್ತಾರೆ. ಇದರಿಂದ ಆಕ್ರೋಶಗೊಂಡ ಪರಸಪ್ಪ ತಾನೂ ಹಂಚಿನಮನೆ ಕಟ್ಟಿಸುವ ಬಗ್ಗೆ ಯೋಚಿಸುತ್ತಾನೆ.ಈ ಬಗ್ಗೆ ಸಹಪಾಠಿ ಹಾಗೂ ತಾಯಿಯ ಬಳಿ ಮಾತನಾಡುತ್ತಾನೆ. ‘ನೀನು ಚೆನ್ನಾಗಿ ಓದಿ, ದೊಡ್ಡ ಅಧಿಕಾರಿಯಾದರೆ ಮಾತ್ರ ಮನೆ ಕಟ್ಟಿಸಲು ಸಾಧ್ಯ’ ಎಂದು ಅವರಿಬ್ಬರೂ ಸಲಹೆ ನೀಡುತ್ತಾರೆ. ಇದರಿಂದ ಪ್ರೇರೇಪಿತನಾದ ಪರಸಪ್ಪ ಓದಿನಲ್ಲಿ ತೊಡಗಿಸಿಕೊಳ್ಳುತ್ತಾನೆ. ಇಲ್ಲಿಗೆ ನಾಟಕ ಮುಕ್ತಾಯವಾಗುತ್ತದೆ.ಪಸರಪ್ಪನ ಗೆಳೆಯನೊಬ್ಬ, ‘ಮಗಾ ಹುಲ್ಲಿನ ಮನೆಗೆ ಬೆಂಕಿ ಹಚ್ಚು. ಆಗ ಸರ್ಕಾರ ಪರಿಹಾರ ಕೊಡುತ್ತೆ, ಅದರಲ್ಲಿ ಹಂಚಿನಮನಿ ಕಟ್ಟಿಸಬಹುದು’ ಎಂಬ ಸಲಹೆ ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ. ಗುಲ್ಬರ್ಗ ವಿ.ವಿ, ಎನ್.ವಿ.     ಕಾಲೇಜು, ಎಸ್.ಬಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೇಷ್ಮಾ ಕಾಲೇಜು ಹಾಗೂ ರಾಯಚೂರಿನ ಎಲ್.ವಿ.ಡಿ ಹಾಗೂ ಬಿ.ಆರ್.ಬಿ ಕಾಲೇಜಿನ 8 ವಿದ್ಯಾರ್ಥಿಗಳು ಈ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ.ಡಿ. 15 ರಂದು ಬೆಳಿಗ್ಗೆ 10 ಗಂಟೆಗೆ ವಿ.ವಿ ಕಾರ್ಯಸೌಧದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಅಂತಿಮ ತಾಲೀಮು ನಡೆಸಲಿರುವ ವಿದ್ಯಾರ್ಥಿಗಳು ಡಿ. 18 ರಂದು ಬೆಂಗಳೂರಿಗೆ ತೆರಳಲಿದ್ದಾರೆ.

‘ಹೆಚ್ಚು ಪದಕಗಳ ನಿರೀಕ್ಷೆ’

ಪ್ರತಿ ವರ್ಷ 5–6 ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕನಿಷ್ಠ 3 ಪದಕ ಪಡೆ­ಯು­ತ್ತಿದ್ದೆವು. ಈ ಬಾರಿ 40 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಬೆಂಗಳೂರಿ­ನಲ್ಲಿ ನಡೆಯಲಿರುವ ದಕ್ಷಿಣ ವಲಯ ಯುವ ಜನೋತ್ಸವದಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದರೆ, ಹರಿಯಾಣದ ಕುರುಕ್ಷೇತ್ರದಲ್ಲಿ ಫೆಬ್ರುವರಿಯಲ್ಲಿ ಜರುಗಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ.

ಕುಲಪತಿ ಈ.ಟಿ.ಪುಟ್ಟಯ್ಯ ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಅಗತ್ಯ ಅನುದಾನ ನೀಡಿದ್ದಾರೆ. ಹೀಗಾಗಿ, ಈ ಬಾರಿ ಹೆಚ್ಚಿನ ಪದಕಗಳ ನಿರೀಕ್ಷೆಯಲ್ಲಿದ್ದೇವೆ.

–ಡಾ.ಕೆ.ಲಿಂಗಪ್ಪ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ.

ಪ್ರತಿಕ್ರಿಯಿಸಿ (+)