ಕಾಳಗಿ: ಇಲ್ಲಿ ನೀರಿಗಿಲ್ಲ ಕಿಮ್ಮತ್ತು!

ಬುಧವಾರ, ಜೂಲೈ 17, 2019
25 °C

ಕಾಳಗಿ: ಇಲ್ಲಿ ನೀರಿಗಿಲ್ಲ ಕಿಮ್ಮತ್ತು!

Published:
Updated:

ಕಾಳಗಿ: ಹನಿ ನೀರು ಸಕಾಲಕ್ಕೆ ಸಿಗದ ಇಂದಿನ ಪರಿಸ್ಥಿತಿಯಲ್ಲಿ ಅದೆಷ್ಟೋ ಜನ ಜಾನುವಾರುಗಳು ಬಾಯಾರಿಕೆಯಿಂದ ನರಳುತ್ತಿವೆ. ನಗರ ಪಟ್ಟಣಗಳಲ್ಲಿ ಎಷ್ಟು ದುಡ್ಡು ಕೊಟ್ಟರೂ ಕುಡಿಯಲು ಶುದ್ಧ ನೀರು ಕೈಗೆ ಬರದೆ ಪರಿತಪಿಸುವ ಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಹಲವು ಹಳ್ಳಿಗಳು ನೀರಿನ ಬವಣೆಯಲ್ಲಿ ಬಳಲುತ್ತಿವೆ. ಹೀಗೆ ಏನೆಲ್ಲ ತೊಂದರೆ ಉಂಟಾಗಿದ್ದನ್ನು ಕಣ್ಣಾರೆ ಕಂಡು, ಕಿವಿಗಳಿಂದ ಕೇಳಿದರೂ ಕಾಳಗಿಯ ಜನತೆ ಮಾತ್ರ ಯಾವುದಕ್ಕೂ ಜುಮ್ ಎನ್ನುತ್ತಿಲ್ಲ. ಕಾರಣ ಇಷ್ಟೇ, ಇಲ್ಲಿ ಜಲ ಸಂಪನ್ಮೂಲದ ಮಟ್ಟ ವಿಪರೀತ ಇದೆ ಎಂಬ ಭ್ರಮೆಯಿಂದ.ಹೀಗಾಗಿ ಹಾಲಿಗಿಂತ ನೀರಿನ ದರ ದುಬಾರಿ ಇದ್ದರೂ ಹಾಲಿಗೆ ಕೊಡುವಷ್ಟು ಮಾನ್ಯತೆ ನೀರಿಗೆ ದೊರಕದ ಇಲ್ಲಿ ಎಲ್ಲಿ ನೋಡಿದರಲ್ಲಿ ನೀರೇ ನೀರು ಕಾಣುವುದು ರೂಢಿ ಯಾಗಿ ಬಿಟ್ಟಿದೆ. ಇದಕ್ಕೆಲ್ಲ ಗ್ರಾಮದ ಆರಾಧ್ಯದೈವ ನೀಲಕಂಠ ಕಾಳೇಶ್ವರ ಕೃಪಾಶೀರ್ವಾದ ಎಂಬುದು ಹೊರಗಿನ ಜನತೆಗೆ ಗೊತ್ತಾಗಿದ್ದರೂ ಸ್ಥಳೀಯರಿಗೆ ಮಾತ್ರ ಅರಿವಿಗೆ ಬಾರದ ಅವ್ಯವಸ್ಥೆ ನಿರ್ಮಾಣವಾಗಿ ಊರೆಲ್ಲ ಕೆಸರು ಮುಸುರಿಯಿಂದ ಕಾಣತೊಡಗಿದೆ.ದಿನ ಬೆಳಗಾದರೆ ನೀರಿನ ನಳಗಳು ಭರ್ ಎನ್ನುತ್ತವೆ. ಕೆಲ ಸಮಯ ಕಳೆಯುತ್ತಿದ್ದಂತೆ ನೀರಿನ ಪೂರೈಕೆ ಪೂರ್ಣಗೊಂಡು ರಸ್ತೆಗಳ ಮೇಲೆ ಹರಿಯುವ ನೀರಿಗೆ ಲಗಾಮು ಇರುವುದೇ ಇಲ್ಲ. ಸಣ್ಣಪುಟ್ಟ ಕೆಲಸಗಳಿಗೂ ಅಧಿಕ ನೀರಿನ ಪೋಲು ಮಾಮೂಲಾಗಿ ಬಿಟ್ಟಿದೆ.ದೊಡ್ಡದಾದ ಹಳ್ಳವಿದ್ದರೂ ಬಹುತೇಕ ಜನ ಮಹಿಳೆಯರು ಬಟ್ಟೆಬರೆ ತೊಳೆಯುವ ಕೆಲಸ ಮನೆಯಲ್ಲೆ ಮಾಡುವುದು ಸಾಮಾನ್ಯವಾಗಿದೆ. ಇನ್ನೂ ಅನೇಕ ಕೆಲಸಗಳಿಗೆ ಮಿತಿಮೀರಿದ ನೀರು ಹಾಳಾಗತೊಡಗಿ ರಸ್ತೆ ತುಂಬೆಲ್ಲ ಹರಿದಾಡುವುದು ಓಡಾಡುವ ಇದೇ ಜನಾಂಗಕ್ಕೆ ತೊಂದರೆ ಉಂಟು ಮಾಡುತ್ತಿದೆ.ವಿದ್ಯುತ್ ಅಥವಾ ನೀರು ಸರಬರಾಜಿನ ಮೋಟರ್ ಕೈಕೊಟ್ಟಾಗ ತೆರೆದ ಅಥವಾ ಕೊಳವೆ ಬಾವಿಯತ್ತ ಮುಗಿಬಿದ್ದು ಹನಿ ನೀರಿಗೂ ಒದ್ದಾಡುವ ಸ್ಥಿತಿ ಪ್ರತಿಯೊಬ್ಬರಿಗೂ ಗೊತ್ತಿರದೆ ಇಲ್ಲಂತಿಲ್ಲ. ಅಷ್ಟಾದರೂ ಅನಾವಶ್ಯಕ ನೀರು ರಸ್ತೆ ಮೇಲೆ ಹರಿಬಿಡುವ ದುಃಸ್ಥಿತಿ ಬಿಡದಿರುವುದು ನೋಡುಗರಿಗೆ ಆಶ್ಚರ್ಯ ಎನಿಸುತ್ತಿದೆ. ಕಾರಣ ಗ್ರಾಮಾಡಳಿತ ಮತ್ತು ನೀರು ಸಂರಕ್ಷಣೆಯ ಮೇಲಧಿಕಾರಿಗಳು ಈಕಡೆ ಶೀಘ್ರದಲ್ಲಿ ಗಮನ ಹರಿಸಿ ನೀರಿನ ಬಗ್ಗೆ ಅರಿವು ಮೂಡಿಸಿ ಬೇಕಾಬಿಟ್ಟಿ ಹರಿಯುವ ನೀರು ಸಂರಕ್ಷಿಸಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry