ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ 5ನೇ ಚುನಾವಣೆ:37ಮಂದಿ ಕಣದಲ್ಲಿ, ರಂಗೇರಿದ ಅಖಾಡ

7

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ 5ನೇ ಚುನಾವಣೆ:37ಮಂದಿ ಕಣದಲ್ಲಿ, ರಂಗೇರಿದ ಅಖಾಡ

Published:
Updated:
Deccan Herald

ವಿಜಯಪುರ: ರೈತರಿಂದ, ರೈತರಿಗಾಗಿ, ರೈತರಿಗೋಸ್ಕರವೇ ಎರಡೂವರೆ ದಶಕದ ಹಿಂದೆ ಆರಂಭಗೊಂಡು, ರಜತ ಮಹೋತ್ಸವದ ಸಂಭ್ರಮದಲ್ಲಿರುವ ಬಬಲೇಶ್ವರ ತಾಲ್ಲೂಕಿನ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸೆ 18ರ ಮಂಗಳವಾರ ಚುನಾವಣೆ ನಡೆಯಲಿದೆ.

ವಿಜಯಪುರ, ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿನ ಬಬಲೇಶ್ವರ, ಬೀಳಗಿ ಸೇರಿದಂತೆ ಆಸುಪಾಸಿನ ತಾಲ್ಲೂಕುಗಳ ಕಬ್ಬು ಬೆಳೆಗಾರರ ಪಾಲಿನ ಕಾಮಧೇನುವಂತಿರುವ ಸಹಕಾರಿ ಸಕ್ಕರೆ ಕಾರ್ಖಾನೆ ಇದೀಗ ಐದನೇ ಚುನಾವಣೆಗೆ ಸಜ್ಜಾಗಿದೆ.

ಕಬ್ಬಿನ ಧಾರಣೆಯನ್ನು ಬೆಳೆಗಾರರೇ ನಿರ್ಧರಿಸುವ ಏಕೈಕ ಕಾರ್ಖಾನೆ ಎಂಬ ಖ್ಯಾತಿ ಹೊಂದಿರುವ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆಗೆ ಈ ಬಾರಿ ಪರೋಕ್ಷವಾಗಿ ಕಾಂಗ್ರೆಸ್‌–ಬಿಜೆಪಿ ರಾಜಕಾರಣ ನುಸುಳಿದೆ. ಪ್ರಚಾರಕ್ಕಿಂತಲೂ ಅಪಪ್ರಚಾರದ ಅಬ್ಬರವೇ ಹೆಚ್ಚಿದೆ.

ಅವಿರೋಧ ಆಯ್ಕೆ

17 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಸಾಮಾನ್ಯ ವರ್ಗದಿಂದ ಒಂಭತ್ತು, ಸಾಮಾನ್ಯ ಮಹಿಳಾ ಮೀಸಲಿನ ಎರಡು, ಹಿಂದುಳಿದ ವರ್ಗದ ಎರಡು, ಪರಿಶಿಷ್ಟ ಜಾತಿ, ಪಂಗಡದ ತಲಾ ಒಂದು ಕ್ಷೇತ್ರ ಸೇರಿದಂತೆ ಡ ವರ್ಗದಿಂದ ಸೊಸೈಟಿಗಳ ಮೂಲಕ ನಡೆಯುವ ಒಂದು ನಿರ್ದೇಶಕ ಸ್ಥಾನದ ಚುನಾವಣೆಗೆ ಹಾಲಿ ಅಧ್ಯಕ್ಷ ಕುಮಾರ ಚಂದ್ರಕಾಂತ ದೇಸಾಯಿ ಹಾಗೂ ಮಾಜಿ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಬಣದಿಂದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

16 ನಿರ್ದೇಶಕ ಸ್ಥಾನದ ಚುನಾವಣೆಗೆ ಪಕ್ಷೇತರರು ಸೇರಿದಂತೆ ಎರಡೂ ಬಣದಿಂದ ಒಟ್ಟು 32 ಮಂದಿ ಅಖಾಡದಲ್ಲಿದ್ದಾರೆ. ಬಣಗಳ ತಿಕ್ಕಾಟದಲ್ಲಿ ಯಶಸ್ಸು ಸಾಧಿಸುವ ಉಮೇದಿನಿಂದ ಪಕ್ಷೇತತರಾಗಿ ಐವರು ಸ್ಪರ್ಧಿಸಿದ್ದು, ಚುನಾವಣಾ ಕಣ ರಂಗೇರಿದೆ.

ಯಶಸ್ಸಿನ ಉತ್ತುಂಗದ ಪಥದಲ್ಲಿ ಸಾಗಿರುವ ಸಹಕಾರಿ ಕಾರ್ಖಾನೆಯ ಚುಕ್ಕಾಣಿಯನ್ನು ತಮ್ಮ ಬೆಂಬಲಿಗರ ಕೈಗಿಡಲು ಬಿಜೆಪಿ, ಕಾಂಗ್ರೆಸ್‌ನ ಕೃಷ್ಣಾ ತೀರದ ರಾಜಕಾರಣಿಗಳು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಇದಕ್ಕೆ ಪೂರಕವಾಗಿ ಹಾಲಿ–ಮಾಜಿ ಅಧ್ಯಕ್ಷರ ಬಣಗಳು ಚುಕ್ಕಾಣಿಗಾಗಿ ನೇರ ಹಣಾಹಣಿ ನಡೆಸಿರುವುದು ವಿಶೇಷ.

ಕಬ್ಬು ಬೆಳೆಗಾರರಲ್ಲದ ಕ್ಷೇತ್ರದಿಂದ ಉದ್ಯಮಿ ಆನಂದ ಮಂಗಳವೇಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಾಮನಿರ್ದೇಶಿತ ಮಂಡಳಿ

ಚುನಾಯಿತ ಮಂಡಳಿಗೂ ಮುನ್ನ ನಾಮನಿರ್ದೇಶಿತ ಮಂಡಳಿ ಅಧಿಕಾರದಲ್ಲಿತ್ತು. ಮಂಡಳಿ ರಚನೆಗೂ ಮುನ್ನವೇ ಮಾಜಿ ಶಾಸಕ ಜಿ.ಎನ್‌.ಪಾಟೀಲ ಕಾಖಂಡಕಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮೊದಲ ಅಧ್ಯಕ್ಷರಾಗಿದ್ದರು.

1992ರಿಂದ 1998ರವರೆಗೆ ನಾಮನಿರ್ದೇಶಿತ ಮಂಡಳಿ ಕಾರ್ಖಾನೆಯ ಅಧಿಕಾರ ನಡೆಸಿತು. ಮಾಜಿ ಸಚಿವ ಬಿ.ಎಸ್‌.ಪಾಟೀಲ ಮನಗೂಳಿ, ಜಮಖಂಡಿಯ ಮಾಜಿ ಶಾಸಕ ಆರ್‌.ಎಂ.ಕಲ್ಲೂತಿ, ಬಸವನಬಾಗೇವಾಡಿಯ ಮಾಜಿ ಶಾಸಕ ಕುಮಾರಗೌಡ ಪಾಟೀಲ ಕುದರಿಸಾಲವಾಡಗಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಬಹುಮತ ದೊರಕದಿದ್ದಕ್ಕೆ ದೂರ ಉಳಿದರು..!

‘1998ರಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮೊದಲ ಬಾರಿ ಚುನಾವಣೆ ನಡೆಯಿತು. ಆಗ ಬೀಳಗಿ ತಾಲ್ಲೂಕಿನ ಡಾ.ಎಂ.ಆರ್‌.ದೇಸಾಯಿ ಯಡಹಳ್ಳಿ ನಿರ್ದೇಶಕರ ಬೆಂಬಲದಿಂದ ಅಧ್ಯಕ್ಷರಾಗಿ ಆಯ್ಕೆಯಾದರು.

ಎಂ.ಆರ್‌.ದೇಸಾಯಿ ಯಡಹಳ್ಳಿ ಬೀಳಗಿಯ ಮಾಜಿ ಶಾಸಕ, ಮಾಜಿ ಸಂಸದ ಆರ್‌.ಎಂ.ದೇಸಾಯಿ ಪುತ್ರ. ಕಾರ್ಖಾನೆಯ ಪ್ರಗತಿಗೆ ಮುನ್ನುಡಿ ಬರೆದರು. 2003ರಲ್ಲಿ ನಡೆದ ಚುನಾವಣೆಯಲ್ಲಿ ಮರು ಆಯ್ಕೆಯಾಗಿ 10 ವರ್ಷ ಕಾರ್ಖಾನೆಯ ಚುಕ್ಕಾಣಿ ಹಿಡಿದಿದ್ದರು. ಇದೇ ಸಮಯ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಹಾಮಂಡಲದ ಅಧ್ಯಕ್ಷರಾಗಿದ್ದ ಕೀರ್ತಿಯೂ ಇವರದ್ದೇ. ಕಾರ್ಖಾನೆಗಳ ಒಕ್ಕೂಟದ ಅಧ್ಯಕ್ಷರಾಗಿಯೂ ಒಳ್ಳೆಯ ಹೆಸರು ಗಳಿಸಿದ್ದರು.

2008ರ ಚುನಾವಣೆಯಲ್ಲಿ ದೇಸಾಯಿ, ಶಶಿಕಾಂತಗೌಡ ಪಾಟೀಲ ಬಣಗಳು ಸಮಬಲ ಸಾಧಿಸಿದ್ದವು. ದೇಸಾಯಿ ಜನರ ಬೆಂಬಲವಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿಯಬಾರದು ಎಂದು ದೂರ ಉಳಿದರು’ ಎಂದು ಈ ಅವಧಿಯಲ್ಲೂ ನಿರ್ದೇಶಕರಾಗಿದ್ದ ಎಚ್‌.ಎಸ್‌.ಕೋರಡ್ಡಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

2013ರ ಚುನಾವಣೆಯಲ್ಲಿ ಕುಮಾರ ಚಂದ್ರಕಾಂತ ದೇಸಾಯಿ ಬಣ ವಿಜಯ ಸಾಧಿಸಿ ಕಾರ್ಖಾನೆಯ ಚುಕ್ಕಾಣಿ ಹಿಡಿದಿತ್ತು. ಇದೀಗ ಸಹಕಾರಿ ರಂಗದ ಹಿಡಿತಕ್ಕಾಗಿ ದೇಸಾಯಿ–ಪಾಟೀಲ ಬಣದ ನಡುವೆ ತುರುಸಿನ ಪೈಪೋಟಿ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !