ದಟ್ಟಕಾಡಿನ ಮಧ್ಯೆ ಕಂಗೆಟ್ಟ ನಿವಾಸಿಗಳು

7

ದಟ್ಟಕಾಡಿನ ಮಧ್ಯೆ ಕಂಗೆಟ್ಟ ನಿವಾಸಿಗಳು

Published:
Updated:
ದಟ್ಟಕಾಡಿನ ಮಧ್ಯೆ ಕಂಗೆಟ್ಟ ನಿವಾಸಿಗಳು

ಶೇರಿಭಿಕನಳ್ಳಿ (ಚಿಂಚೋಳಿ ತಾ.): ಈ ತಾಂಡಾಕ್ಕೆ ಉತ್ತಮ ರಸ್ತೆ ಇಲ್ಲ. ಈವರೆಗೆ ಬಸ್ ಬಂದಿಲ್ಲ. ವಿದ್ಯುತ್ ಇಲ್ಲ. ಏನಾದರೂ ಪದಾರ್ಥ ಬೇಕೆಂದರೆ, ಸಮೀಪದ ಧರ್ಮಾಸಾಗರ ಗ್ರಾಮಕ್ಕೆ ಮೂರು ಕಿಲೊಮೀಟರ್ ದೂರ ಹೋಗಬೇಕು. “ಬ್ಯಾರೆ ಕಡೆ ಜಾಗ ಕೊಟ್ರ ಇವತ್ತ ಈ ತಾಂಡಾ ಬಿಟ್ ಹೋಗ್ತೀವ್ರಿ” ಎಂದು ಅಲವತ್ತುಕೊಳ್ಳುವ ಶೇರಿ ಭಿಕನಳ್ಳಿ ತಾಂಡಾದ ಜನರ ಸಂಕಷ್ಟ ಇನ್ನೆಷ್ಟು ದಿನವೋ?!ಚಿಂಚೋಳಿ ತಾಲ್ಲೂಕು ಕೊಂಚಾವರಂ ಅರಣ್ಯ ಪ್ರದೇಶದ ಕೇಂದ್ರ ಬಿಂದು ಈ ತಾಂಡಾ. ಸುತ್ತಲೂ ದಟ್ಟ ಕಾಡು. ತುರ್ತಾಗಿ ಹೋಗಲು ವಾಹನ ಸೌಕರ್ಯವಿಲ್ಲ. ಮಳೆ ಬಂದರಂತೂ ದೇವರೇ ಗತಿ ಎಂಬ ಸ್ಥಿತಿ. ಸೌಲಭ್ಯಗಳಿಲ್ಲದೇ ಪರದಾಡುತ್ತಿರುವ ತಾಂಡಾದ ನಿವಾಸಿಗಳು ಕಂಗೆಟ್ಟು ಕುಳಿತಿದ್ದಾರೆ.ದಟ್ಟ ಕಾಡಿನಲ್ಲಿರುವ ತಾಂಡಾಗಳ ಪೈಕಿ ಶೇರಿಭಿಕನಳ್ಳಿ ಕೂಡ ಒಂದು. 40ಕ್ಕೂ ಹೆಚ್ಚು ಮನೆಗಳಿದ್ದು, 220 ಜನಸಂಖ್ಯೆಯಿದೆ. ಸುತ್ತ ಹಚ್ಚಹಸಿರಿನ ನೋಟ. ಮಳೆಗಾಲದಲ್ಲಂತೂ ರಮಣೀಯ ದೃಶ್ಯ. ಹಿಂಡುಹಿಂಡಾಗಿ ಜಿಂಕೆ, ನವಿಲುಗಳ ಓಡಾಟ ಕಾಣಸಿಗುತ್ತದೆ. ಆದರೆ ಇದೆಲ್ಲದರ ಜತೆಗೆ ತಾಂಡಾದ ನಿವಾಸಿಗಳು ಅನುಭವಿಸುತ್ತಿರುವ ಕಷ್ಟಗಳೂ ಸಾಕಷ್ಟಿವೆ.`ಫುಲ್ ಖಲಾಸ್~

ಕೆಲವು ಜನರಿಗೆ ಹೊಲಗಳಿವೆ. ಉಳಿದವರು ಕೂಲಿ ಕೆಲಸ ಮಾಡುತ್ತಾರೆ. ತಾಂಡಾಕ್ಕೆ ಸಮೀಪವಿರುವ ಜಮೀನಿನಲ್ಲಿ ಮಳೆಯಾಶ್ರಿತ ಉದ್ದು, ಹೆಸರು, ಜೋಳ, ತೊಗರಿ ಬೆಳೆಯುತ್ತಾರೆ. ಕಷ್ಟಪಟ್ಟು ಬೆಳೆದ ಬೆಳೆಯನ್ನೆಲ್ಲ ಹಾಳು ಮಾಡಲು ವನ್ಯಪ್ರಾಣಿಗಳು ಕಾಯುತ್ತಿರುತ್ತವೆ! “ರಾತೋರಾತ್ರಿ ಹತ್ತಿಪ್ಪತ್ತು ಜಿಂಕೆ, ಕಾಡುಕುರಿ ದಾಳಿ ಮಾಡಿ, ಬೆಳೆದಿದ್ದೆಲ್ಲಾ ಹಾಳು ಮಾಡಿಬಿಡುತ್ತವೆ. ಫುಲ್ ಖಲಾಸ್...” ಎಂದು ನೋವು ತೋಡಿಕೊಳ್ಳುತ್ತಾರೆ ತಾನು ಸಿ. ರಾಠೋಡ.ಬೆಳೆ ರಕ್ಷಣೆಗೆ ರಾತ್ರಿಯಿಡೀ ಪಟಾಕಿ ಹಾರಿಸಿ ಶಬ್ದ ಮಾಡಿ ಪ್ರಾಣಿ ಓಡಿಸುವ ತಂತ್ರವನ್ನು ಅಳವಡಿಸಿಕೊಂಡರೂ ಕಾಡುಪ್ರಾಣಿಗಳು ಅಷ್ಟೇ ಮೆಲ್ಲಗೆ ನುಸುಳಿ ಬೆಳೆ ತಿಂದು ಹೋಗುತ್ತವೆ ಎಂಬುದು ಅವರ ಅಳಲು.ತಾಂಡಾಕ್ಕೆ ಕುಡಿಯುವ ನೀರು ಪೂರೈಸಲು ಟ್ಯಾಂಕ್ ನಿರ್ಮಾಣಗೊಂಡಿದೆ. ಇಲ್ಲಿಗೆ ನೀರು ಸರಬರಾಜು ಮಾಡಲು ಬೋರ್‌ವೆಲ್ ಕೊರೆದು, ಪಂಪ್ ಹಾಗೂ ಪೈಪ್ ಜೋಡಿಸಲಾಗಿದೆ. ಆದರೆ ಈವರೆಗೆ ಒಂದು ಹನಿ ನೀರು ಕೂಡ ಬಂದಿಲ್ಲ. ಏಕೆಂದರೆ ಪಂಪ್‌ಗೆ ಬೇಕಾದ ಕರೆಂಟ್ ಸಂಪರ್ಕವೇ ಇಲ್ಲ!

 

“ನಮಗೆ ಬೇಕಾದ ನೀರು ತರಲು ಏಕೈಕ ಬೋರ್‌ವೆಲ್ ಶಾಲೆ ಆವರಣದಲ್ಲಿದೆ. ಇದು ಕೆಟ್ಟುಹೋದರೆ ಅರ್ಧ ಕಿಲೋಮೀಟರ್ ದೂರದ ಹಳ್ಳದಿಂದ ನೀರು ತರಬೇಕಷ್ಟೇ” ಎಂದು ಮನ್ನು ರಾಠೋಡ ಹೇಳುತ್ತಾರೆ.ತಾಂಡಾದಲ್ಲಿ 5ನೇ ತರಗತಿವರೆಗೆ ಶಾಲೆಯಿದ್ದು, ಒಬ್ಬ ಶಿಕ್ಷಕರು ಇದ್ದಾರೆ. ಅವರು ಶಾಲೆಗೆ ಬಂದರೆ ಮಕ್ಕಳೂ ಬರುತ್ತಾರೆ. ಇಲ್ಲದೇ ಹೋದಾಗ ಶಾಲೆಗೆ ರಜಾ! ಕೆಲವು ವರ್ಷಗಳ ಹಿಂದೆ ನಾಲ್ಕು ಸೋಲಾರ್ ಬೀದಿದೀಪ ಅಳವಡಿಸಲಾಗಿತ್ತು. ನಿರ್ವಹಣೆ ಕೊರತೆಯಿಂದಾಗಿ ಅವು ಕೆಟ್ಟುಹೋಗಿವೆ. ವಿದ್ಯುತ್ ಪೂರೈಕೆಗೆ ಕಂಬ, ತಂತಿ ಹಾಕಲಾಗಿದ್ದರೂ ಸಂಪರ್ಕ ಇನ್ನೂ ಕೊಟ್ಟಿಲ್ಲ. ಹೀಗಾಗಿ ತಾಂಡಾದ ಬೀದಿಯಲ್ಲಿ ಸೌರದೀಪ ಹಾಗೂ ವಿದ್ಯುತ್ ತಂತಿಗಳು ಪಳೆಯುಳಿಕೆಯಂತೆ ಭಾಸವಾಗುತ್ತವೆ.“ನಮ್ಮ ತಾತನ ಕಾಲದಿಂದಲೂ ಇಲ್ಲಿದ್ದೇವೆ. ಆದರೆ ಯಾವುದೇ ಸೌಲಭ್ಯ ಈವರೆಗೆ ಸಿಕ್ಕಿಲ್ಲ. ತುರ್ತು ಕೆಲಸಗಳಿಗೆ 3 ಕಿ.ಮೀ ದೂರದ ಶಾದಿಪುರ ಅಥವಾ 15 ಕಿ.ಮೀ ದೂರದ ಕೊಂಚಾವರಂಗೆ ಹೋಗಬೇಕು. ಅತ್ತ ವನ್ಯಮೃಗಗಳ ಹಾವಳಿ; ಇತ್ತ ಸೌಕರ್ಯಗಳೇ ಸಿಗುತ್ತಿಲ್ಲ. ಬೇರೆ ಕಡೆ ಹೋಗಬೇಕೆಂದರೆ ನಮಗೆ ಜಾಗವೇ ಇಲ್ಲ” ಎಂದು ನಿವಾಸಿಗಳು ನಿಟ್ಟುಸಿರು ಬಿಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry