ಭಾನುವಾರ, ಮೇ 9, 2021
27 °C

ಪಠ್ಯಕ್ಕೆ ಸೇರ್ಪಡೆಯಿಂದ ಜಾನಪದ ಉಳಿವು

ಶಿವರಂಜನ್ ಸತ್ಯಂಪೇಟೆ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಉತ್ತಮ ಆರ್ಥಿಕ ಸ್ಥಿತಿ ಹೊಂದುವುದೇ ಜೀವನದ ಪರಮ ಉದ್ದೇಶವಾಗಿರುವ ಇಂದಿನ ಆಧುನಿಕ ದಿನಗಳಲ್ಲಿ ನಮ್ಮ ಸಂಸ್ಕೃತಿಯ ಮೂಲ ಸೆಲೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ನೆಲಮೂಲ ಸಂಸ್ಕೃತಿ ಹೊಂದಿರುವ ಜಾನಪದವನ್ನು ಮರೆತಿರುವುದರಿಂದ ಬದುಕು ಬರಡು ಎನಿಸುತ್ತಿದೆ.ಇಂತಹ ಸಂದಿಗ್ದ ಸಂದರ್ಭದಲ್ಲಿ  ಮತ್ತೆ ಜಾನಪದದೆಡೆಗೆ ಹೊರಳಿ ನೋಡುವುದು ಅಗತ್ಯವಿದೆ. ಜಾನಪದ ಎಂದರೆ ಕೇವಲ ಸಾಹಿತ್ಯವಲ್ಲ. ಬದುಕಿನ ಎಲ್ಲ ಸ್ತರಗಳಿಗೂ ಅನ್ವಯಿಸುವಂಥದ್ದು ಎಂಬುದು ಅಂತರರಾಷ್ಟ್ರೀಯ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅವರ ಅಭಿಮತ.ಕನ್ನಡ ಜಾನಪದ ಬಹು ನೆಲೆಗಳ ಅಧ್ಯಯನ ಎಂಬ ವಿಷಯ ಕುರಿತು ಶುಕ್ರವಾರ ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅಪ್ಪಟ ಜಾನಪದ ಶೈಲಿಯಲ್ಲಿ ಎಲ್ಲ ಬಗೆಯ ಜಾನಪದ ಹಾಡುಗಳನ್ನು ಹಾಡುತ್ತ ಎಲ್ಲರನ್ನು ಮೋಡಿ ಮಾಡಿದ ಅಪ್ಪಗೆರೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದರು.  ಜಾನಪದದ ವ್ಯಾಖ್ಯಾನ?

ಅಪ್ಪಗೆರೆ:
ಜಾನಪದ ಎನ್ನುವುದು ಸಮುದ್ರದ ಮೀನು. ಬಲೆ ಬೀಸಿದಾಗಲೆಲ್ಲ ಮೀನುಗಳು ದಕ್ಕುತ್ತವೆ. ಅದೇರೀತಿ ಜಾನಪದ ಎನ್ನುವುದು ಹುಡುಕಿದಂತೆ ದಕ್ಕುವ ಅಮೂಲ್ಯ ನಿಧಿ. ಇದಕ್ಕೆ ಕೊನೆ ಎಂಬುದೇ ಇಲ್ಲ. ಸೃಷ್ಟಿ, ಸ್ಥಿತಿ, ಲಯ ಹೀಗೆ ಎಲ್ಲ ವಿವರಗಳೂ ಇಲ್ಲಿ ಸಿಗುತ್ತವೆ.ಜಾನಪದ ಹಾಡುಗಳನ್ನು ಹಾಡಲು ತರಬೇತಿ ಅಗತ್ಯವಿದೆಯೇ?

ಅಪ್ಪಗೆರೆ:
ಈಗಿನ ಕಾಲದಲ್ಲಿ ಎಲ್ಲದಕ್ಕೂ ತರಬೇತಿ ಅಗತ್ಯ. ಆದರೆ ಅಲ್ಲಿ ನೈಜತೆ ಕಳೆದು ಹೋಗುವ ಸಂದರ್ಭವೇ ಹೆಚ್ಚಾಗಿರುತ್ತದೆ. ಹೀಗಾಗಿ ಜಾನಪದ ಗಾಯಕರು ಹಾಡಿನ ಅರ್ಥ, ದಾಟಿ, ಹೊಳಹು ತಿಳಿದಿರಬೇಕಾಗುತ್ತದೆ. ಜಾನಪದ ಹಾಡಿನ ಮಹತ್ವ ಜನರಿಗೆ ಮುಟ್ಟಿಸುವುದು ಹೇಗೆ?

ಅಪ್ಪಗೆರೆ:
ಪಾಶ್ಚಿಮಾತ್ಯ ಸಂಗೀತದ ಆರ್ಭಟಗಳ ಮಧ್ಯೆ ಜಾನಪದ ಹಾಡುಗಳನ್ನು ಜನರಿಗೆ ಮುಟ್ಟಿಸುವುದು ತುಂಬಾ ಕಷ್ಟ ಎನಿಸುತ್ತಿದೆ. ಆದರೆ ಯುವಕರು ಈ ದಿಸೆಯಲ್ಲಿ ಮನಸ್ಸು ಮಾಡಬೇಕಷ್ಟೇ.ಶಿಗ್ಗಾವಿಯಲ್ಲಿ ಸ್ಥಾಪನೆಯಾಗಲಿರುವ ಜಾನಪದ ವಿಶ್ವವಿದ್ಯಾಲಯ ಹೇಗಿರಬೇಕು?

ಅಪ್ಪಗೆರೆ:
50 ವರ್ಷಗಳ ಹೆಳೆಯದಾದ ಹಳ್ಳಿಯೊಂದರ ಮಾದರಿಯಲ್ಲಿರಬೇಕು. ಸಂಪೂರ್ಣ ಸಿಮೆಂಟ್‌ಮಯ ಆಗದೇ ಅಪ್ಪಟ ಜಾನಪದ ಶೈಲಿಯಲ್ಲೇ ರಚನೆಯಾಗಬೇಕು. ಜಾನಪದ ಕಲಾವಿದರಿಗೆ ಅಲ್ಲಿ ಬೆಲೆ ಇರಬೇಕು. ವಿಶ್ವವಿದ್ಯಾಲಯದ ಸಂಶೋಧಕರು, ವಿದ್ವಾಂಸರು ಅವರಿಗೆ ಕೇವಲ ಮಾರ್ಗದರ್ಶಕರಾಗಿರಬೇಕು.ನಶಿಸುವ ಅಂಚಿನಲ್ಲಿರುವ ಜಾನಪದ ಉಳಿಸಿಕೊಳ್ಳವುದು ಹೇಗೆ?

ಅಪ್ಪಗೆರೆ:
ನಾಲಿಗೆಯಿಂದ ಕಿವಿಗೆ, ಕಿವಿಯಿಂದ ನಾಲಿಗೆಯಲ್ಲಿ ಹರಿದು ಬಂದ ಜಾನಪದ ಪರಂಪರೆ ಇಂದು ನಶಿಸಿ ಹೋಗುತ್ತಿದೆ. ಜಾನಪದ ಸಾಹಿತ್ಯದ ಅಧ್ಯಯನದಿಂದ ಉದ್ಯೋಗವೂ ಸಿಗುತ್ತಿಲ್ಲ. ಶಾಲಾ-ಕಾಲೇಜುಗಳಲ್ಲಿ ಪಠ್ಯಕ್ರಮ ಅಳವಡಿಸಬೇಕು. ಅಂದಾಗ ಮಾತ್ರ ಜಾನಪದ ಉಳಿಯಲು ಸಾಧ್ಯ.ಪಾಶ್ಚಿಮಾತ್ಯ ದೇಶಗಳಲ್ಲಿ ಜಾನಪದದ ಬಗ್ಗೆ ಪ್ರತಿಕ್ರಿಯೆ ಹೇಗಿದೆ?

ಅಪ್ಪಗೆರೆ:
ಈ ಹಿಂದೆ ಕೇವಲ 15 ದಿನ ಅಮೆರಿಕಾದಲ್ಲಿರಬೇಕೆಂದು ಹೋಗಿದ್ದೆ. ಆದರೆ ಅಲ್ಲಿನ ಜನರ ಪ್ರತಿಕ್ರಿಯೆಯಿಂದಾಗಿ ಮೂರು ತಿಂಗಳು ಉಳಿಯುವಂತಾಯಿತು. ಎರಡು ಬಾರಿ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾಗಲೂ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಆದರೆ ಜಾನಪದ ಹುಟ್ಟಿದ ಈ ನಾಡಿನಲ್ಲೇ ಜಾನಪದ ಉಳಿವಿಗೆ ಹೆಣಗಾಡಬೇಕಾದ ಪರಿಸ್ಥಿತಿ ಬಂದೊದಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.