ಗುರುವಾರ , ಮೇ 13, 2021
24 °C

ಡಿಡಿಪಿಐ ಕಚೇರಿಯಲ್ಲೇ ಸೌಕರ್ಯಕ್ಕೆ ಬರ!

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಕ್ಕಳ ಹಕ್ಕುಗಳ ಶಿಕ್ಷಣ ಕಡ್ಡಾಯ ಕಾಯ್ದೆ ಪ್ರಕಾರ ಕನಿಷ್ಠ ಮೂಲಸೌಕರ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಅರ್ಹ ಶಾಲಾ ವಯಸ್ಸಿನ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಶಾಲೆಗಳಿಗೆ ಕೊಠಡಿ, ಕುಡಿಯುವ ನೀರು, ಶೌಚಾಲಯ, ಕಂಪೌಂಡ್, ಕಂಪ್ಯೂಟರ್ ಮುಂತಾದ ಸೌಲಭ್ಯ ನೀಡುವ ಯೋಜನೆ ರೂಪಿಸಿದೆ.ಆದರೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳು ಮಕ್ಕಳಿಗೆ ತಲುಪುವಲ್ಲಿ ವಿಳಂಬವಾಗುತ್ತಿವೆ ಎಂಬ ಆಕ್ಷೇಪ ಸಾರ್ವಜನಿಕರದು.ಜಿಲ್ಲೆಯ ಎಲ್ಲ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಬೇಕಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಯಲ್ಲೇ ಸೌಲಭ್ಯಗಳಿಗೆ ಬರವಿದೆ ಎಂಬುದು ಗುಲ್ಬರ್ಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಒಳಹೊಕ್ಕು ನೋಡಿದರೆ ತಕ್ಷಣವೇ ಅನುಭವಕ್ಕೆ ಬರುತ್ತದೆ.ಸ್ವಂತ ಕಟ್ಟಡವಿಲ್ಲದೆ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಕಟ್ಟಡದಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಈ  ಇಲಾಖೆಯಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಗೆ ಗ್ರಹಣ ಹಿಡಿದಿದೆ. ಕುಡಿಯುವ ನೀರಿನ ಟ್ಯಾಂಕ್, ಶೌಚಾಲಯ ಕೋಣೆಗಳು ನಿರುಪಯೋಗಿ ಎನ್ನುವಂತಾಗಿವೆ. ಕಚೇರಿ ಸುತ್ತಮುತ್ತ ಜಾಲಿಕಂಟಿ ಬೆಳೆದಿರುವುದರಿಂದ ಹಾವು-ಚೇಳುಗಳ ಆಶ್ರಯ ತಾಣವಾಗಿದೆ.ಈ ಕಚೇರಿಯಲ್ಲಿ ಒಟ್ಟು 30 ಜನ ಸಿಬ್ಬಂದಿಯಿದ್ದು, ಇಬ್ಬರು ಮಹಿಳಾ ಸಿಬ್ಬಂದಿ ಇದ್ದಾರೆ. ಪುರುಷರಿಗಾಗಿ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯಗಳಿವೆ. ಆದರೆ ಇವುಗಳ ಸರಿಯಾದ ನಿರ್ವಹಣೆ ಇಲ್ಲದೆ ಕಚೇರಿಯಲ್ಲಿ ದುರ್ನಾತ ಹಬ್ಬಿದೆ ಎಂದು ಕಚೇರಿ ಸಿಬ್ಬಂದಿ ತಿಳಿಸುತ್ತಾರೆ.ನೇಮಕಾತಿ, ವರ್ಗಾವಣೆ, ಬಡ್ತಿ ಇನ್ನಿತರೆ ಕೆಲಸ ಕಾರ್ಯಗಳಿಗಾಗಿ ಡಿಡಿಪಿಐ ಕಚೇರಿಗೆ ಆಗಮಿಸುವ ಶಿಕ್ಷಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಕಚೇರಿಯಲ್ಲೇ ಸಮಸ್ಯೆಗಳಿರುವಾಗ ನಾವು ಇನ್ನಾರಿಗೆ ದೂರಬೇಕು ಎಂಬುದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರ ಅಳಲು.ಪ್ರತಿಯೊಂದು ಶಾಲೆಯಲ್ಲಿ ಶೌಚಾಲಯ ಇರಬೇಕು ಎಂಬುದು ಸರ್ಕಾರದ ಆದೇಶ. ಆದರೆ ಆ ಆದೇಶವನ್ನು ಜಾರಿಗೆ ತರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಯಲ್ಲೇ ಈ ಸೌಲಭ್ಯಗಳಿಲ್ಲದಿರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದೂ ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.