ಗುರುವಾರ , ಮೇ 13, 2021
16 °C

ಯತೀಮ್‌ಖಾನ: 60ಲಕ್ಷಕ್ಕೂ ಅಧಿಕ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದ ಯತೀಮಖಾನಾ ಅಂಜಮನ್ ಅನ್ಸುರಸುಫಾ ಸಂಸ್ಥೆಯ ಹಿಂದಿನ ಆಡಳಿತ ಮಂಡಳಿಯು ಪಾರದರ್ಶಕತೆ ಕಾಯ್ದುಕೊಳ್ಳದೇ, ಕಾನೂನು ಅನುಸರಿಸದ ಪರಿಣಾಮ 60 ಲಕ್ಷ ರೂಪಾಯಿಗೂ ಅಧಿಕ ನಷ್ಟ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಸಂಸ್ಥೆಗೆ ಲೆಕ್ಕ ಪರಿಶೋಧಕರನ್ನು ನಿಯೋಜಿಸಬೇಕು.ಹಾಗೂ ಹಿಂದಿನ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಕರ್ನಾಟಕ ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಂಸ್ಥೆಯ ಆಡಳಿತಾಧಿಕಾರಿ, ಪ್ರಾದೇಶಿಕ ಆಯುಕ್ತ ಡಾ.ರಜನೀಶ್ ಗೋಯಲ್ ಪತ್ರ ಬರೆದಿದ್ದಾರೆ.ಆಡಳಿತ ಮಂಡಳಿಯ ಪ್ರಭಾರ ವಹಿಸಿಕೊಂಡ ಕೂಡಲೇ ಪ್ರಾದೇಶಿಕ ಆಯುಕ್ತರು ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿನ ಆರ್ಥಿಕ ಸ್ಥಿಗತಿ ಕುರಿತು ಲೆಕ್ಕ ತಪಾಸಣೆ ಕೈಗೊಳ್ಳಲು ಕಂದಾಯ ಲೆಕ್ಕ ಪರಿಶೋಧಕರನ್ನು ನಿಯೋಜಿಸಿದ್ದರು.ಲೆಕ್ಕ ಪರಿಶೋಧಕರು ಸಲ್ಲಿಸಿದ ವರದಿಯ ಅನ್ವಯ, ಬ್ಯಾಂಕ್ ಖಾತೆಯಿಂದ ನಗದೀಕರಿಸಿದ 46,49,000 ರೂಪಾಯಿಯನ್ನು ವೆಚ್ಚ ಮಾಡಿರುವ ಬಗ್ಗೆ ದಾಖಲೆ ದೊರಕಿಲ್ಲ. ದಾನಿಗಳಿಂದ ಸ್ವೀಕರಿಸಿದ ಹಣ ಮತ್ತು ಸಾಮಗ್ರಿಗಳ ಬಗ್ಗೆ ದಾಖಲೆಯನ್ನು ಇಟ್ಟುಕೊಂಡಿಲ್ಲ. ಖರೀದಿ ಮತ್ತು ವೆಚ್ಚಗಳ ಬಗ್ಗೆ ಪಾರದರ್ಶಕತೆ ಉಳಿಸಿಕೊಂಡಿಲ್ಲ.ದಾಸ್ತಾನು ಬಗ್ಗೆಯೂ ಮಾಹಿತಿ ಇಲ್ಲ. ಹೀಗಾಗಿ ಖರೀದಿಸಿದ ಸೊತ್ತುಗಳು ಸರಿಯಾಗಿ ಬಳಕೆಯಾಗಿವೆಯೇ ಎಂಬ ಸಂಶಯಗಳು ಮೂಡುತ್ತಿವೆ. ವಕೀಲರಿಗೆ ಪಾವತಿಸುವ ನಿಟ್ಟಿನಲ್ಲಿ 2,28,795 ರೂಪಾಯಿಯನ್ನು ನೀಡಲಾಗಿದೆ. ಆದರೆ ಯಾವ ವಕೀಲರಿಗೆ, ಯಾವ ಮೊಕದ್ದಮೆಗಾಗಿ ನೀಡಲಾಗಿದೆ ಎಂಬ ಬಗ್ಗೆ ವಿವರಗಳು ಲಭ್ಯವಾಗಿಲ್ಲ.ಸಂಸ್ಥೆಯ ಹೆಸರಿನಲ್ಲಿ ದದ್ದಾಪುರ ಸರ್ವೇ ಸಂಖ್ಯೆ 32ರಲ್ಲಿ 7 ಎಕರೆ 24 ಗುಂಟೆ  ಜಮೀನು ಇದೆ. ಆದರೆ ಈ ಜಮೀನನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಅತಿಕ್ರಮಣಗೊಂಡಿರುವ ಬಗ್ಗೆ ಸಂಶಯಗಳಿವೆ. ಸಂಸ್ಥೆಯ ಜಮೀನಿನಲ್ಲಿರುವ ವಾಣಿಜ್ಯ ಮಳಿಗೆ, ವಸತಿ ಗೃಹಗಳು, ಮನೆಗಳಿಂದ ಪ್ರಸ್ತುತ ಮಾರುಕಟ್ಟೆ ದರಕ್ಕೆ ಸಮಾನಾಗಿ ಸಮರ್ಪಕವಾಗಿ ಬಾಡಿಗೆ ಸ್ವೀಕರಿಸಿಲ್ಲ.

 

ಅಲ್ಲದೇ ಕರಾರನ್ನು ಮಾಡಿಕೊಂಡಿಲ್ಲ. ಹೀಗಾಗಿ 60 ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾಗಿರುವ ಬಗ್ಗೆ ಸಂಶಯವಿದೆ ಎಂದು ಲೆಕ್ಕ ಪರಿಶೋಧಕರು ವರದಿ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.