ಶನಿವಾರ, ಮೇ 8, 2021
18 °C

ವಿದ್ಯುತ್ ಅಸ್ತವ್ಯಸ್ತ: ಶಾಸಕ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಕಲ್ಲಿದ್ದಲು ಅಭಾವದಿಂದಾಗಿ ಬಳ್ಳಾರಿ ಮತ್ತು ರಾಯಚೂರು ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರಗಳ ಕೆಲ ಘಟಕಗಳು ಉತ್ಪಾದನೆ ಸ್ಥಗಿತಗೊಳಿಸಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ಸಾಕಷ್ಟು ವ್ಯತ್ಯಯವಾಗಿದ್ದು ಕಳೆದ ಎರಡು ದಿನಗಳಿಂದ ಕುಷ್ಟಗಿ ಸೇರಿದಂತೆ ಇಲ್ಲಿಯ 220 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ, ಯಲಬುರ್ಗಾ ಮತ್ತಿತರೆ ತಾಲ್ಲೂಕುಗಳಲ್ಲಿ ವಿದ್ಯುತ್ ಪೂರೈಕೆ ಇಲ್ಲದೆ ರೈತರು, ಸಾರ್ವಜನಿಕರು ಕಂಗಾಲಾಗಿದ್ದಾರೆ.ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಆಂಧ್ರಪ್ರದೇಶದಲ್ಲಿ ಹೋರಾಟ ನಡೆಯುತ್ತಿರುವುದರಿಂದ ಕಲ್ಲಿದ್ದಲು ಗಣಿ ಕಾರ್ಮಿಕರೂ ಅದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಾಗಾಗಿ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಸ್ಥಗಿತಗೊಂಡಿರುವುದರಿಂದ ಸಮಸ್ಯೆ ಉದ್ಭವಿಸಿದೆ ಎಂಬುದು ತಿಳಿದುಬಂದಿದೆ. ಅಲ್ಲದೇ ಅನಿಯಮಿತ ಲೋಡ್ ಶೆಡ್ಡಿಂಗ್ ಮುಂದುವರೆದಿದ್ದು ಪರಿಸ್ಥಿತಿ ಇನ್ನಷ್ಟು ಹದಗೆಡುವ ಲಕ್ಷಣಗಳು ಕಂಡುಬಂದಿವೆ.ಶಾಸಕರ ಆಕ್ರೋಶ: ತಾಲ್ಲೂಕಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತೊಂದರೆಗೊಳಗಾಗಿರುವ ರೈತರ ಸಂಕಷ್ಟದ ಸ್ಥಿತಿಯನ್ನು ಗಮನಿಸಿದ ಶಾಸಕ ಅಮರೇಗೌಡ ಬಯ್ಯಾಪೂರ ಸೋಮವಾರ 220 ಕೆ.ವಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿದ್ದ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಹಳ್ಳಿಗಳಿಗೆ ಕನಿಷ್ಟ ಆರು ತಾಸು ಮೂರು ಫೇಸ್ ವಿದ್ಯುತ್ ನೀಡುವುದಾಗಿ ಸರ್ಕಾರ ಹೇಳಿದ್ದರೂ ಒಂದು ಎರಡು ತಾಸು ಸಹ ಇಲ್ಲದಂತಾಗಿದೆ, ಮಳೆಯೂ ಇಲ್ಲ ಹಾಗಾಗಿ ಬೆಳೆಗಳೆಲ್ಲ ಒಣಗುತ್ತಿವೆ, ಬೀಜ, ಗೊಬ್ಬರ ಇತ್ಯಾದಿ ಖರ್ಚುಗಳಿಗೆ ಮಾಡಿದ ಸಾಲದ ಕೂಪದಲ್ಲಿ ರೈತರು ಕೊಳೆಯುತ್ತಿದ್ದಾರೆ ರೈತರ ಸಂಕಷ್ಟದ ಸ್ಥಿತಿಗೆ ರಾಜ್ಯ ಸರ್ಕಾರವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಮಸ್ಯೆ ಕುರಿತು ವಿವರಿಸಿದ ಕೇಂದ್ರದ ಎ.ಇ.ಇ ತಿರುಪತಿ ಕಮತರ, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಕೇಂದ್ರಗಳ ಕೆಲ ಘಟಕಗಳು ಬಂದ್ ಆಗಿದ್ದು ಬೇಡಿಕೆ ಮತ್ತು ಉತ್ಪಾದನೆಯಲ್ಲಿ ಅಜಗಜಾಂತರ ವ್ಯತ್ಯಾಸವಾಗಿದೆ. ಕುಷ್ಟಗಿ 220 ಕೆ.ವಿ ಕೇಂದ್ರಕ್ಕೆ ನೀಡಬೇಕಿದ್ದ 140 ಮೆಗಾವ್ಯಾಟ್ಸ್ ಪೈಕಿ ಕೇವಲ 40 ಮೆಗಾವ್ಯಾಟ್ಸ್ ಪೂರೈಕೆಯಾಗುತ್ತಿದೆ. ಇದೇ ಪರಿಸ್ಥಿತಿ ಇನ್ನೂ ಎರಡು ಮೂರು ದಿನ ಮುಂದುವರೆಯಲಿದೆ. ಇದರಲ್ಲೇ ಯಲಬುರ್ಗಾ, ಕನಕಗಿರಿ, ಇಳಕಲ್ ಇತರೆ 110 ಕೆ.ವಿ ಕೇಂದ್ರಗಳಿಗೆ ಸಮನಾಗಿ ಹಂಚಿಕೆ ಮಾಡುವುದು ದುಸ್ತರವಾಗಿದೆ ಎಂದರು.ಈ ಬಗ್ಗೆ ಶಾಸಕ ಬಯ್ಯಾಪೂರ, ಬೆಂಗಳೂರಿನಲ್ಲಿರು ಎಲ್.ಡಿ.ಸಿ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರಿಂದಲೂ ಅದೇ ಉತ್ತರ ಬಂದಿತು. ಅದಕ್ಕೆ ಸಿಡಿಮಿಡಿಗೊಂಡ ಶಾಸಕರು, ರಾಜ್ಯದಲ್ಲಿನ ಎಲ್ಲ ಜಲಾಶಯಗಳು ಭರ್ತಿಯಾಗಿವೆ, ಥರ್ಮಲ್ ಘಟಕಗಳು  ಸ್ಥಗಿತಗೊಂಡರೆ ತುರ್ತಾಗಿ ಬೇರೆ ರಾಜ್ಯಗಳಿಂದಲಾದರೂ ತರಿಸಬೇಕಿತ್ತು ಎಂದರು.

 

ಅಲ್ಲದೇ ವಿದ್ಯುತ್ ಸಮಸ್ಯೆ ಕುರಿತು ಯಾವುದೇ ಸೂಚನೆ ನೀಡದೇ ಏಕಾಏಕಿ ಬಂದ್ ಮಾಡುವುದರಿಂದ ಜನರಿಗೆ ಎಷ್ಟು ಸಮಸ್ಯೆಯಾಗುತ್ತಿದೆ ಎಂಬುದು ನಿಮಗೆ ಗೊತ್ತಿದೆಯೆ? ಎಂದು ತರಾಟೆಗೆ ತೆಗೆದುಕೊಂಡರು. ಹಣದ ಕೊರತೆ ಇಲ್ಲ ಎಂದು ಹೇಳುವ ರಾಜ್ಯ ಸರ್ಕಾರ ರೈತರ ನೆರವಿಗೆ ಬರುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.