ಸೋಮವಾರ, ಮೇ 16, 2022
30 °C

ನಗುವಿನಿಂದ ಉತ್ತಮ ಆರೋಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ನಗು ಮಾನವನಿಗೆ ಮಾತ್ರ ದೊರೆತ ಅಮೂಲ್ಯ ಅವಕಾಶ. ಸದಾ ನಗು ನಗುತ್ತ ಹಸನ್ಮುಖಿಯಾಗಿ ಇರುವುದರಿಂದ ಅನಾರೋಗ್ಯ ಸುಳಿಯುವುದಿಲ್ಲ. ನಗುವಿನಿಂದ ದೇಹದ 360 ನರಗಳಲ್ಲಿ ರಕ್ತ ಸಂಚರಿಸುವುದರಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ ಎಂದು ಶಾಸಕ ಸುನೀಲ ವಲ್ಯ್‌ಪುರ ತಿಳಿಸಿದರು.ಅವರು ಭಾನುವಾರ ಇಲ್ಲಿನ ಭವಾನಿ ಮಂದಿರದಲ್ಲಿ ದಸರಾ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ನಗೆ ಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯುವ ಮುಖಂಡ ಗೌತಮ ಪಾಟೀಲ್ ಮಾತನಾಡಿ ನಗೆ ಹಬ್ಬದಂತಹ ಕೂಟಗಳಿಂದ ಭ್ರಾತೃತ್ವ ಭಾವನೆ ವೃದ್ಧಿಸುತ್ತದೆ ಎಂದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಬಾಷೀತ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ರೇವಣಸಿದ್ದಪ್ಪ ಮಜ್ಜಗಿ, ಬಿಜೆಪಿ ಮುಖಂಡ ರವಿ ಪಾಟೀಲ, ರಾಮರೆಡ್ಡಿ ರಾಜಾಪುರ ಹಾಗೂ ಸಬ್ ಇನ್ಸ್‌ಪೆಕ್ಟರ್ ಮಹಾಂತೇಶ ಪಾಟೀಲ್ ವೇದಿಕೆಯಲ್ಲಿದ್ದರು.ನಗೆ ಝಲಕ್....ಪ್ರಯಾಣಿಕರನ್ನು ಹೊತ್ತು ಸಾಗಿದ ಬಸ್ ನಿಲ್ಲಿಸಲು ಮಾರ್ಗ ಮಧ್ಯೆ ಕಂಡಕ್ಟರ್ ಸಿಳ್ಳೆ ಹಾಕಿ ಜನಿವಾರದವರು ಇಳಕೊಳ್ಳರ‌್ರಿ. ಬೇಗ ಬನ್ನಿ ಎಂದ, ಜನಿವಾರ ಧರಿಸಿದ್ದ ಶೇ.90 ಪ್ರಯಾಣಿಕರು ನಾಮುಂದು ತಾಮುಂದು ಎಂದು ಬಸ್‌ನಿಂದ ಇಳಿದೆ ಬಿಟ್ಟರು. ಬಸ್ ಮುಂದಿನ ಊರಿನ ಕಡೆಗೆ ಹೊರಟಿತು. ನಂತರ ಮರಳಿ ಬಂದ ಬಸ್ ತಡೆದು ಮೊದಲು ಇಳಿದಿದ್ದ ಪ್ರಯಾಣಿಕರು ತೋಳೇರಿಸಿ ಕಂಡಕ್ಟರ್ ಜತೆ ಜಗಳಕ್ಕೆ ನಿಂತು ಬಸ್‌ನಿಂದ ಇಳಿಸಿದ್ದಕ್ಕೆ ಕಾರಣ ಕೇಳಿದರು. ಆಗ ಕಂಡಕ್ಟರ್ ಹೇಳಿದ ಜನಿವಾರ ಊರಿಗೆ ಬಸ್ ಹೋಗುವುದಿಲ್ಲ.

 

ಹೀಗಾಗಿ ಜನಿವಾರದವರು ಇಲ್ಲೇ ಇಳಿಯಿರಿ ಟ್ಯಾಕ್ಸಿ ಹಿಡಿದು ಹೋಗಬಹುದು ಎಂದೆ. ಇದರಲ್ಲಿ ನನ್ನದೇನು ತಪ್ಪಿದೆ ಎಂದಾಗ ಪ್ರಯಾಣಿಕರು ಫಜೀತಿ... ಹೀಗೆ ನಗೆ ಬುಗ್ಗೆ ಚಿಮ್ಮಿಸಿದವರು ಶಾಸಕ ಸುನೀಲ ವಲ್ಯ್‌ಪುರ.ಕಾರ್ಯಕ್ರಮಕ್ಕೆ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಬಂದೀರಿ. ಚಿಂಚೋಳಿ ಜನಾ ಒಳ್ಳೆಯವರು ಎಂದುಕೊಂಡಿದ್ದೇನೆ. ದಿನಾ ಟಿ.ವಿ. ಧಾರಾವಾಹಿ ನೋಡುತ್ತ ಕಣ್ಣೊರೆಸಿಕೊಳ್ಳುವ ತಾಯಂದಿರು ಈವತ್ತು ಇಲ್ಲಿ ಯಾಕ್ ಸೇರಿದ್ದಾರೆ ಅಂತ ಈಗ ಅರ್ಥಾತು. ಯಾಕ್ ಗೊತ್ತಾ. ಈವತ್ತು ಭಾನುವಾರ ಧಾರಾವಾಹಿ ಇಲ್ಲ. ಹೀಗೆ ನಗೆ ಕಾರಂಜಿ ಚಿಮ್ಮಿಸಿದವರು ಶಿಕ್ಷಕ ದೇವಾನಂದ ಸಾವಳಗಿ.ಲೇ ಗುಂಡ ನಾಲ್ಕು ಬಾರಿ ಫೇಲಾಗಿದ್ದಿ ಬುದ್ದಿ ಇಲ್ವೇನಲೇ ಮಗನಾ, ಜ್ಯೋತಿನಾದರೂ ನೋಡಿ ಕಲಿ ಲೇ ಮಗನೇ. ನೋಡು ಆ ಮಗು ಎಷ್ಟು ಬೇಗ ಉತ್ತರ ಕೊಟ್ತು. ಹೌದು ಸರ್ ಅವಳ ನೋಡಿಯೇ  ನಾ ನಾಲ್ಕು ಬಾರಿ ಫೇಲಾಗಿದ್ದು, ಎಂದು ಮರು ಉತ್ತರ ನೀಡಿದಾಗ ಶಿಕ್ಷಕ ತಬ್ಬಿಬ್ಬು ಹೀಗೆ ನಗೆ ಗಡಲಲ್ಲಿ ತೇಲಿಸಿದವರು ಬೀದರಿನ ವೈಜನಾಥ ಸಜ್ಜನಶೆಟ್ಟಿ.ಶಿಕ್ಷಕ ಮರೆಪ್ಪ ಭಜಂತ್ರಿ ಅವರ ಗಾಯನ ಸುಧೆ, ಕಲಾವಿದ ಶಂಕರಜಿ ಹೂವಿನ ಹಿಪ್ಪರ್ಗಿ ಅವರ ಏಕಾಭಿನಯ ನೆರೆದ ಜನರನ್ನು ರಂಜಿಸಿತು. ನರಸಪ್ಪ ಬೀರಾಪುರ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಲಾಮೂರು ನಿರೂಪಿಸಿದರು. ವಿಠಲ್‌ಸಿಂಗ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.