ಡಾ.ನೀರಜ್ ಪೌರಸನ್ಮಾನ ಇಂದು

7

ಡಾ.ನೀರಜ್ ಪೌರಸನ್ಮಾನ ಇಂದು

Published:
Updated:

ಗುಲ್ಬರ್ಗ: ಜಿಲ್ಲೆಯ ಕಮಲಾಪುರ ಮೂಲದ ಡಾ.ನೀರಜ್ ಪಾಟೀಲ ಲಂಡನ್ ಲ್ಯಾಂಬೆತ್ ಕೌನ್ಸಿಲ್ ಮೇಯರ್ ಆದ ಬಳಿಕ ಇದೇ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸುತ್ತಿದ್ದು, ಇವರ ಗೌರವಾರ್ಥ ಬುಧವಾರ (ಫೆ. 9) ಸಂಜೆ ಪಾಲಿಕೆ ವತಿಯಿಂದ ಪೌರಸನ್ಮಾನ ಆಯೋಜಿಸಲಾಗಿದೆ.ಲ್ಯಾಂಬೆತ್ ವಾರ್ಡ್ ಕೌನ್ಸಿಲರ್ ಆಗಿ ಸತತ ಎರಡನೇ ಬಾರಿಗೆ ಆಯ್ಕೆಯಾದ ಡಾ.ನೀರಜ್ ಕಳೆದ ಮೇ ತಿಂಗಳಲ್ಲಿ ಮೇಯರ್ ಹುದ್ದೆ ಅಲಂಕರಿಸಿದ್ದರು.ಗುಲ್ಬರ್ಗದ ಸೆಂಟ್ ಜೋಸೆಫ್ಸ್ ಶಾಲೆಯಲ್ಲಿ ಏಳನೇ ತರಗತಿ ವರೆಗೆ ಅಭ್ಯಾಸ ಮಾಡಿದ ಇವರು ವೈದ್ಯವೃತ್ತಿಯ ಜತೆಗೆ ಸಮಾಜಸೇವೆಯನ್ನೂ ಹವ್ಯಾಸವಾಗಿ ಬೆಳೆಸಿಕೊಂಡವರು. ಇಂಗ್ಲೆಡ್‌ನ ಪ್ರಮುಖ ಪಕ್ಷವಾದ ಲೇಬರ್ ಪಾರ್ಟಿಯಲ್ಲೂ ಉನ್ನತ ಹುದ್ದೆ ಹೊಂದಿರುವ ಇವರ ಸೇವಾ ಮನೋಭಾವವೇ ಅಲ್ಲಿನ ರಾಜಕೀಯದಲ್ಲಿ ಒಂದೊಂದೇ ಮೆಟ್ಟಲು ಏರಲು ಸಹಕಾರಿಯಾಗಿದೆ.ಲಂಡನ್ ಎನ್‌ಆರ್‌ಐ ಫೋರಂ ಅಧ್ಯಕ್ಷರಾಗಿ, ಲೇಬರ್ ಪಕ್ಷದ ಜನಾಂಗೀಯ ಅಲ್ಪಸಂಖ್ಯಾತ ಕಾರ್ಯಪಡೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರಿಗೆ ಸರ್ರೆ ಹೀಥ್ ಕ್ಷೇತ್ರದಿಂದ ಪಾರ್ಲಿಮೆಂಟಿಗೆ ಸ್ಪರ್ಧಿಸಲು ಪಕ್ಷ ಅವಕಾಶ ನೀಡಿತ್ತು. ಆದರೆ ಕೌನ್ಸಿಲ್ ಸ್ಥಾನವನ್ನೇ ಆಯ್ಕೆಮಾಡಿಕೊಂಡು ಲ್ಯಾಂಬೆತ್ ಕ್ಷೇತ್ರದಿಂದ ಪುನರಾಯ್ಕೆಯಾದರು.ಇಷ್ಟೊಂದು ಉನ್ನತ ಹುದ್ದೆಯಲ್ಲಿದ್ದರೂ ನಿರರ್ಗಳವಾಗಿ ಕನ್ನಡ ಮಾತನಾಡುವ ಇವರು ಮನೆಯಲ್ಲಿ ಇಂದಿಗೂ ಮಾತೃಭಾಷೆಯನ್ನೇ ಆಡುತ್ತಾರೆ. ವೃತ್ತಿಯಲ್ಲಿ ವೈದ್ಯ. ಜನಸೇವೆ ಹವ್ಯಾಸ. ವಾರಕ್ಕೆ ನಾಲ್ಕು ದಿನ ವೈದ್ಯರಾಗಿ ಕಾರ್ಯನಿರ್ವಹಿಸುತ್ತಾರೆ. ಲಂಡನ್‌ನಲ್ಲೂ ಕನ್ನಡನಾಡು ಹೆಮ್ಮೆಪಡುವಂಥ ಸಾಧನೆ ಮಾಡಿದ ನೀರಜ್ ಮೂಲತಃ ಗುಲ್ಬರ್ಗದ ಕಮಲಾಪುರದವರು, ತಂದೆ ಶರತ್‌ಚಂದ್ರ ಪಾಟೀಲ ವಕೀಲರು.

ತಾಯಿ ಪರ್ವತಿದೇವಿ ಪಾಟೀಲ ಪ್ರತಿಷ್ಠಿತ ಎಂ.ಆರ್.ಮೆಡಿಕಲ್ ಕಾಲೇಜಿನ ನಿರ್ದೇಶಕಿ. ಇದೇ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ಎಫ್‌ಆರ್‌ಸಿಎಸ್ ಪದವಿಗಾಗಿ ಲಂಡನ್‌ಗೆ ತೆರಳಿದರು. ಜತೆಜತೆಗೇ ಸಮಾಜಸೇವೆಯನ್ನೂ ಮಾಡುತ್ತಾ ಬಂದ ಇವರನ್ನು ಲೇಬರ್‌ಪಕ್ಷ ಬಹುಬೇಗ ಗುರುತಿಸಿತು. 2006ರಲ್ಲಿ ಲ್ಯಾಂಬೆತ್‌ನಿಂದ ಸ್ಪರ್ಧಿಸಲು ಟಿಕೆಟ್ ನೀಡಿತು. ನಾಲ್ಕು ವರ್ಷದಲ್ಲಿ ಯಶಸ್ವಿ ಕೌನ್ಸಿಲರ್ ಎನಿಸಿಕೊಂಡು ಪಕ್ಷದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡರು.ಗವರ್ನರ್ ಆಫ್ ಗೈಸ್ ಮತ್ತು ಸೆಂಟ್ ಥಾಮಸ್ ಹಾಸ್ಪಿಟಲ್‌ನ ತುರ್ತುಚಿಕಿತ್ಸಾ ವಿಭಾಗದಲ್ಲಿ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿಯೂ ವೈದ್ಯವೃತ್ತಿಯಲ್ಲಿದ್ದು, ಬಿಡುವಿನ ವೇಳೆಯಲ್ಲಿ ಜನಸೇವೆಗೆ ಪತಿಯ ಜತೆ ಕೈಜೋಡಿಸುತ್ತಾರೆ.ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಸಿದ್ಧತೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆಯನ್ನೂ ನೀಡುತ್ತಿದ್ದು, ಇಂಗ್ಲೆಂಡಿನ ಪ್ರಮುಖ ಉದ್ಯಮಿಗಳನ್ನು ಕರೆತರುವಲ್ಲೂ ಪ್ರಮುಖಪಾತ್ರ ವಹಿಸಿದ್ದರು.ಇವರ ಸಹಪಾಠಿಗಳಾಗಿದ್ದ ಡಾ.ಶರಣಪ್ರಕಾಶ ಪಾಟೀಲ ಈಗ ಸೇಡಂ ಕ್ಷೇತ್ರದ ಶಾಸಕ. ಅಂತೆಯೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದಾರೆ. ಇವರ ಮತ್ತೊಬ್ಬ ಸಹಪಾಠಿ ಸೈಯದ್ ಅಬ್ದುಲ್ ರಹೆಮಾನ್ ಪಾಲಿಕೆ ವಿರೋಧ ಪಕ್ಷದ ನಾಯಕ.ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ರೇವುನಾಯಕ ಬೆಳಮಗಿ, ಎನ್.ಧರ್ಮಸಿಂಗ್ ಉಪಸ್ಥಿತಿಯಲ್ಲಿ ಮೇಯರ್ ಸುನಂದಾ ರಾಜಾರಾಮ ಮಾತೋಳಿ ಪೌರಸನ್ಮಾನ ನೀಡಿ ಗೌರವಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry