ಮಂಗಳವಾರ, ಮೇ 17, 2022
26 °C

ಬಾಲಗ್ರಹ ಪೀಡೆಗೆ ಘನತ್ಯಾಜ್ಯ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಸ್ವಚ್ಚ ಹಾಗೂ ಸುಂದರ ಪಟ್ಟಣದ ಕನಸು ಇಲ್ಲಿನ ಅವಳಿ ಪಟ್ಟಣಗಳಾದ ಚಿಂಚೋಳಿ ಚಂದಾಪುರ ನಾಗರಿಕರಿಗೆ ಗಗನಕುಸುಮವಾಗಿದೆ. ಕೋಟ್ಯಾಂತರ ರೂ.ಗಳ ಅನುದಾನ ನೀರಿನಂತೆ ಸರ್ಕಾರದಿಂದ ಹರಿದರೂ ಕೂಡ ಕೇವಲ ಸಿಮೆಂಟ್ ರಸ್ತೆಗೆ ಮಾತ್ರ ಪಟ್ಟಣ ಪಂಚಾಯಿತಿಯ ಅಭಿವೃದ್ಧಿ ಸೀಮೀತವಾದಂತೆ ಕಾಣುತ್ತಿದೆ ಎಂಬುದು ಸಾಮಾನ್ಯ ನಾಗರಿಕರ ಆರೋಪವಾಗಿದೆ.ಪಟ್ಟಣದಲ್ಲಿ ಸಂಗ್ರಹವಾಗುವ ವಿವಿಧ ತರಹದ ತ್ಯಾಜ್ಯಗಳನ್ನು ಕೊಳೆಯುವ ಹಾಗೂ ಕೊಳೆಯದ ಮತ್ತು ಸುಡುವ, ಸುಡದ ವಸ್ತುಗಳನ್ನು ಬೇರ್ಪಡಿಸಿ ಅದನ್ನು ಸಂಸ್ಕರಿಸಿ ಸಮರ್ಪಕವಾಗಿ ಬಳಸಿಕೊಂಡು ಸಾವಯವ ಗೊಬ್ಬರ ತಯಾರಿಸಿ ಮಾರಾಟದ ಮೂಲಕ ಪಂಚಾಯಿತಿಗೆ ಆದಾಯ ಮೂಲ ಹೆಚ್ಚಿಸಿಕೊಳ್ಳಲು ನೆರವಾಗುವ ಘನತ್ಯಾಜ್ಯ ವಿಲೇವಾರಿ ಘಟಕ ಬಾಲಗ್ರಹ ಪೀಡೆಗೆ ಒಳಗಾಗಿ ಬೊಕ್ಕಸ ಬರೀದು ಮಾಡಿ ಕೇವಲ ಕಾಗದಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣಿಸುತ್ತಿದೆ.ಸಿಬ್ಬಂದಿಕೊರತೆಯಿಂದ ಬಳಲುತ್ತಿರುವ ಇದು ಕಳೆದ 2/3 ವರ್ಷಗಳಿಂದ ಅಸ್ತಿ ಪಂಜರದಂತೆ ಕಾಣುತ್ತಿದ್ದು, ಅಂದಾಜು ಎರಡುವರೆ ಎಕರೆ ಜಾಗದಲ್ಲಿ ತಲೆ ಎತ್ತಿದೆ. ಗೇಟ್, ಒಂದು ಕೋಣೆ ಹಾಗೂ ಸಿಮೆಂಟ್ ರಸ್ತೆ, ಚರಂಡಿ ಮತ್ತು ಫೆನ್ಸಿಂಗ್ ಒಳಗೊಂಡಿದೆ.ಸರ್ಕಾರ ಹಣ ಮಂಜೂರು ಮಾಡಿ ಇದಕ್ಕೆ ಬಳಸಿ ಎಂದ ಮೇಲೆ ಅಧಿಕಾರಿಗಳು ಅದರಂತೆ ಮಾಡುತ್ತಾರೆ ಆದರೆ ಅದನ್ನು ನಡೆಸಿಕೊಂಡು ಹೋಗಲು ಸಿಬ್ಬಂದಿ ನೀಡದಿರುವುದು ಮೇಲಧಿಕಾರಿಗಳ ಬೇಜವಾಬ್ದಾರಿಗೆ ಕನ್ನಡಿಯಾಗಿದೆ.ಅಧಿಕಾರಿಗಳ ನಿರ್ಲಕ್ಷದಿಂದಾಗಿ ಉದ್ದೇಶಿತ ಕಾರ್ಯ ಶುರು ಮಾಡದ ಕಾರಣ ಜಾನುವಾರುಗಳು ಮೇಯಲು ಸುರಕ್ಷಿತ ತಾಣವಾಗಿ ಘನ ತ್ಯಾಜ್ಯ ವಿಲೇವಾರಿ ಘಟಕ ಗೋಚರಿಸುತ್ತಿದೆ.

 

ಹೀಗಾಗಿ ಪಟ್ಟಣದಲ್ಲಿ ದೊರೆಯುವ ಕಸವನ್ನು 2/3 ಕಿ.ಮೀ ದೂರ ತೆಗೆದುಕೊಂಡು ಹೋಗಲು ಟ್ರ್ಯಾಕ್ಟರ್‌ಗೆ ಹೆಚ್ಚಿನ ಡಿಸೆಲ್ ಬೇಕಾಗುತ್ತದೆಂಬ ಕುಂಟುನೆಪವೊಡ್ಡಿ ತ್ಯಾಜ್ಯವನ್ನು ಪಟ್ಟಣದ ಮಹಾಂತೇಶ್ವರ ಮಠದ ರಸ್ತೆಗೆ ಹೊಂದಿಕೊಂಡಿರುವ ಕಲಬಾವಿ ರಸ್ತೆಯ ಬದಿಯಲ್ಲಿ ಸಾಲುಗಟ್ಟಿ ಗುಡ್ಡೆಹಾಕಿ ಅದಕ್ಕೆ ಬೆಂಕಿ ಹಚ್ಚಿ ಮರಳುತ್ತಿದ್ದಾರೆ.ಇಲ್ಲಿ ಸದಾ ಕಾಲ ತ್ಯಾಜ್ಯ ಸುಡುತ್ತ ಯಾವುದೋ ಕಾರ್ಖಾನೆ ಉಗುಳುವಂತೆ ಹೊಗೆ ಉಗುಳುತ್ತಿರುತ್ತ ತ್ಯಾಜ್ಯ ಮಾಲಿನ್ಯಕ್ಕೆ ಕಾರಣವಾಗಿದೆ.ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಶುಚಿತ್ವ ಕಾಪಾಡಬೇಕಾದ ಪಟ್ಟಣ ಪಂಚಾಯಿತಿಯೇ ಮಾಲಿನ್ಯ ನಿಯಂತ್ರಣಕ್ಕೆ ಶ್ರಮಿಸದಿರುವುದು ನಾಗರಿಕರಿಗೆ ಮುಜುಗರ ತಂದಿದೆ.ಬಜಾರ್‌ನ ಬೀದಿಗಳಲ್ಲಿ ದೊರೆಯುವ ತ್ಯಾಜ್ಯಗಳಲ್ಲಿ ಪ್ಲಾಸ್ಟಿಕ್ ಹೆಚ್ಚಾಗಿರುವುದರಿಂದ ಅದನ್ನು ಇತರೆ ತ್ಯಾಜ್ಯಗಳೊಂದಿಗೆ ಟ್ರ್ಯಾಕ್ಟರ್‌ನಲ್ಲಿ ಸಾಗಿಸಿ ಬೆಂಕಿ ಹಚ್ಚುತ್ತಿರುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.