ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಆಗ್ರಹ

7
ವಿವಿಧ ಸಂಘಟನೆಗಳಿಂದ ಜಾಗೃತಿ ಅಭಿಯಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುತ್ತೋಲೆ ಕಟ್ಟುನಿಟ್ಟಿನ ಜಾರಿಗೆ ಒತ್ತಾಯ

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಆಗ್ರಹ

Published:
Updated:
Deccan Herald

ಚಿಕ್ಕಬಳ್ಳಾಪುರ: ಎಲ್ಲ ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆಗಳು, ಕಚೇರಿಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಪ್ರಧಾನ ಭಾಷೆಯಾಗಿ ಬಳಕೆಯಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ಜನಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಕರ್ನಾಟಕ ರಕ್ಷಣಾ ಸೇನೆ ಮತ್ತು ಗ್ರಾನೈಟ್ ಮತ್ತು ಟೈಲ್ಸ್‌ ಕಾರ್ಮಿಕರ ಸಂಘದ ಸಹಯೋಗದಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಶನಿವಾರ ಈ ಸಂಘಟನೆಗಳ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ದಾರಿಯುದ್ದಕ್ಕೂ ಮಳಿಗೆಗಳ ಮಾಲೀಕರಿಗೆ ನಾಮಫಲಕಗಳಲ್ಲಿ ಕನ್ನಡ ಬಳಸುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಮುಖಂಡ ಅಗ್ರಹಾರ ಮೋಹನ್, ‘ರಾಜ್ಯದಲ್ಲಿ ಎಲ್ಲ ಬಗೆಯ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ ಬಳಕೆಯಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುತ್ತೋಲೆ ಇದೆ. ಆದರೆ ಅದು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಹೀಗಾಗಿ ನಾಮಫಲಕಗಳಲ್ಲಿ ಕನ್ನಡ ಮೂಲೆಗುಂಪಾಗುತ್ತಿದೆ’ ಎಂದು ಆರೋಪಿಸಿದರು.

‘ಬೇರೆ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗೆ ಮೊದಲ ಆದ್ಯತೆ ದೊರೆಯುತ್ತದೆ. ಆದರೆ ನಮ್ಮಲ್ಲಿ ಅನ್ಯಭಾಷೆಗಳ ಹಾವಳಿ ಹೆಚ್ಚಾಗಿ ನಾಮಫಲಕಗಳಲ್ಲಿ ಕನ್ನಡ ಮರೀಚಿಕೆಯಾಗಿದೆ. ಗಡಿ ಭಾಗದ ಈ ಜಿಲ್ಲೆಯಲ್ಲಿ ಕನ್ನಡ ಕಡೆಗಣನೆ ಅತಿಯಾಗಿದೆ. ಇದು ನಿಲ್ಲಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ನಾಮಫಲಕಗಳಲ್ಲಿ ಕನ್ನಡ ಬಳಸಬೇಕು ಎಂದು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನ ಆರಂಭಿಸಿದ್ದೇವೆ. ಇದನ್ನು ಜಿಲ್ಲೆಯಾದ್ಯಂತ ವಿಸ್ತರಿಸುತ್ತೇವೆ’ ಎಂದರು.

ಕರ್ನಾಟಕ ರಕ್ಷಣಾ ಸೇನೆ ಪ್ರಧಾನ ಕಾರ್ಯದರ್ಶಿ ನಂಜರಾಜು, ಮುಖಂಡರಾದ ವಿನಯ್‌ಕುಮಾರ್, ಪ್ರಕಾಶ್, ರವಿಕುಮಾರ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !