ಚುನಾವಣೆ ಕಾವಿನಲ್ಲಿ ‘ಸೌಕರ್ಯ’ ನನೆಗುದಿಗೆ

7
ರಸ್ತೆ, ನೀರು, ಸ್ವಚ್ಛತೆಯತ್ತ ಗಮನ ಹರಿಸದ ನಗರಸಭೆ

ಚುನಾವಣೆ ಕಾವಿನಲ್ಲಿ ‘ಸೌಕರ್ಯ’ ನನೆಗುದಿಗೆ

Published:
Updated:
Deccan Herald

ಹಾವೇರಿ: ನಗರಸಭೆಯು ಚುನಾವಣೆಯ ಅಬ್ಬರದಲ್ಲಿ ಮುಳುಗಿದ್ದರೆ, ನಗರದ ಜನತೆ ಮೂಲಸೌಕರ್ಯ ವಂಚಿತರಾಗಿ ಪರಿತಪಿಸುತ್ತಿದ್ದಾರೆ. ರಸ್ತೆ, ನೀರು, ಸ್ವಚ್ಛತೆ ಸೇರಿದಂತೆ ಮೂಲಸೌಲಭ್ಯಗಳೇ ನನೆಗುದಿಗೆ ಬಿದ್ದಿವೆ.

ಚುನಾವಣೆ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ನಗರಸಭೆ ಮತ್ತಿತರ ಸ್ಥಳಗಳು ಬ್ಯೂಸಿ ಆಗಿವೆ. ಬಡಾವಣೆಗಳ ಸ್ಥಿತಿ ಮಾತ್ರ ಕೇಳುವವರೇ ಇಲ್ಲದಂತಾಗಿದೆ. ಹಾವೇರಿಯು ಅಕ್ಷರಶಃ ಸ್ಲಂ ನಂತಾಗಿದೆ ಎಂದು ಜನತೆ ದೂರಿದ್ದಾರೆ. 

ಎಲ್‌.ಐ.ಸಿ. ಹಿಂಭಾಗ, ಅಲ್ಪಸಂಖ್ಯಾತರ ಭವನದ ರಸ್ತೆ, ಪರಿಸರ ಕಚೇರಿಗಳಿಗೆ‌ ಹೋಗಲು ಅಸಾಧ್ಯವಾದ ಸ್ಥಿತಿ ಇದೆ ಎಂದು ಖಲೀಲ್‌ ಸಾಬ್‌ ಹುಲಗೂರ ದೂರಿದರು.

ಒಳಚರಂಡಿ ಕಾಮಗಾರಿಗಾಗಿ ನಗರದ ಬಡಾವಣೆಗಳಲ್ಲಿನ ಸಿ.ಸಿ. ರಸ್ತೆ ಹಾಗೂ ಡಾಮರು ರಸ್ತೆಗಳನ್ನು ಅಗೆದು ಹಾಕಲಾಗಿದೆ. ವಾಪಸ್ ಸಮರ್ಪಕವಾಗಿ ದುರಸ್ತಿ ಮಾಡದ ಕಾರಣ ಹೊಂಡಗಳು ಬಿದ್ದಿವೆ. ಈಚೆಗೆ ಭಾರಿ ಮಳೆ ಸುರಿಯುತ್ತಿದ್ದರೂ,  ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ಭಾರಿ ಮಳೆಯಿದ್ದರೂ, ಸಮರ್ಪಕ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಶಿವಾಜಿನಗರ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಶಿವಾಜಿನಗರ, ಶಿವಲಿಂಗ ನಗರ, ಅಶ್ವಿನಿನ ನಗರ, ವಿದ್ಯಾನಗರ, ವೈಭವ ಲಕ್ಷ್ಮೀ ಪಾರ್ಕ್, ಉದಯ ನಗರ, ಅಕ್ಕಿಪೇಟೆ, ಪುರದ ಓಣಿ, ಕೆ.ಸಿ.ಸಿ. ಬ್ಯಾಂಕ್ ಮುಂಭಾಗ ನಡೆದಾಡಲೂ ಆಗದ ಸ್ಥಿತಿ ಇದೆ. ಚರಂಡಿಗಳಲ್ಲೂ ಹೂಳು ತುಂಬಿದ್ದು, ರಾಡಿ ರಸ್ತೆಯಲ್ಲೇ ತುಂಬಿ ಹೋಗಿದೆ. ಬಸವೇಶ್ವರನಗರ ಮತ್ತಿತೆರೆಡೆ ಈಚೆಗೆ ಹಾಕಿದ ರಸ್ತೆಗಳೂ ಕಿತ್ತು ಹೋಗಿವೆ. ಹಲವು ಬಡಾವಣೆಗಳಲ್ಲಿ ಕಾಲು ಹಾಕಲೂ ಅಸಾಧ್ಯ ಸ್ಥಿತಿ ನಿರ್ಮಾಣಗೊಂಡಿದೆ.

ಶಿವಲಿಂಗ ನಗರ, ಕೆ.ಸಿ.ಸಿ. ಬ್ಯಾಂಕ್ ಮುಂಭಾಗದಲ್ಲಿ ರಸ್ತೆಯೇ ರಾಡಿಯಾಗಿದೆ ಎಂದು ಶಿವರಾಜ ಪೂಜಾರ ಮತ್ತಿತರರು ಸಮಸ್ಯೆ ಹೇಳಿಕೊಂಡರು.

ನಾನು ಅಭ್ಯರ್ಥಿ:  ‘ನಗರದ ಸ್ಥಿತಿ ಬಗ್ಗೆ ನೀವೇನು ಹೇಳುತ್ತೀರಿ?’ ಎಂದು ಮುಖಂಡರೊಬ್ಬರಿಗೆ ಪ್ರಶ್ನಿಸಲಾಗಿತ್ತು.‘ನಾನು ಟಿಕೆಟ್ ಆಕಾಂಕ್ಷಿ’ ಎಂದು ಪ್ರತಿಕ್ರಿಯೆ ನೀಡಿದ್ದ ಅವರು, ‘ನಾನು ಈಗ ಅಭ್ಯರ್ಥಿ’ ಎಂದು ಈಚೆಗೆ ತಿಳಿಸಿದ್ದರು. ಇದು ನಗರದ ಪುರಪಿತೃಗಳ ಪರಿಸ್ಥಿತಿ. ನಗರದ ಸಮಸ್ಯೆ ಕುರಿತೇ ಸ್ಪಂದಿಸಲು ಹಿಂದೇಟು ಹಾಕುವ ಇಂತಹ ಅಭ್ಯರ್ಥಿಗಳಿಂದ ನಾವೇನು ನಿರೀಕ್ಷಿಸಬಹುದು ಎನ್ನುತ್ತಾರೆ ಶಿವಯೋಗಿ.

ಪೊಲೀಸ್ ಸ್ಥಿತಿ:  ನಗರದ ಎಂ.ಜಿ. ರಸ್ತೆಯಲ್ಲಿ ಏಕಮುಖ ಸಂಚಾರ ಜಾರಿ ಮಾಡಲಾಗಿದೆ. ಆದರೆ, ಇಲ್ಲಿನ ರಸ್ತೆಯಲ್ಲಿ ಹೊಂಡಗಳು ಬಿದ್ದ ಕಾರಣ ವಾಹನ ಸಂಚರಿಸುವುದೇ ದುಸ್ತರವಾಗಿದೆ. ರಸ್ತೆ ಕೆಸರುಮಯವಾಗಿದ್ದು, ಬಿಸಿಲು ಬಂದರೆ ದೂಳು ಹೆಚ್ಚಾಗುತ್ತದೆ. ಹೀಗಾಗಿ ಕರ್ತವ್ಯ ನಿರ್ವಹಿಸುವುದೇ ಸಾಹಸವಾಗಿದೆ ಎಂದು ಪೊಲೀಸರೊಬ್ಬರು ದೂರಿಕೊಂಡರು.

ಮೂಲಸೌಲಭ್ಯ:  ಹಾಲು, ಪತ್ರಿಕೆ ಮತ್ತಿತರ ಅಗತ್ಯ ವಸ್ತುಗಳನ್ನು ಚಳಿ, ಬಿಸಿಲು, ಮಳೆ ಎಂದು ಲೆಕ್ಕಿಸದೇ ಸಮಯಕ್ಕೆ ಸರಿಯಾಗಿ ಪೂರೈಸಬೇಕು. ಆದರೆ, ನಗರದ ಬಡಾವಣೆ ರಸ್ತೆಗಳು ತೀರಾ ಹದಗೆಟ್ಟಿದ್ದು, ಅವಶ್ಯ ವಸ್ತುಗಳ ಪೂರೈಕೆಯೇ ಕಷ್ಟಸಾಧ್ಯವಾಗಿದೆ. ಕೆಲವು ಬಡಾವಣೆಗಳಲ್ಲಿ ದ್ವಿಚಕ್ರ ವಾಹನಗಳು ಮಾತ್ರವಲ್ಲ, ಮನುಷ್ಯರೂ ನಡೆದಾಡದ ಸ್ಥಿತಿ ಇದೆ. ಹೀಗಾಗಿ ಹಾಲು, ಪೇಪರ್, ವಿದ್ಯುತ್, ಕಸ ವಿಲೇವಾರಿ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸುವ ವ್ಯಕ್ತಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ನಮ್ಮ ಪರಿಸ್ಥಿತಿ ಹೇಳತೀರದಾಗಿದೆ ಎನ್ನುತ್ತಾರೆ ಪತ್ರಿಕಾ ವಿತರಕರಾದ ಜಯಪ್ಪ ಬಣಕಾರ.

ಹಲವು ಹುಡುಗರು ಸೈಕಲ್– ಬೈಕಿನಲ್ಲಿ ಜಾರಿ ಬಿದ್ದು ಗಾಯಗೊಂಡ ಘಟನೆಗಳಿವೆ. ಕೆಸರಿನ ಕಾರಣ ನಡೆದಾಡಲೂ ಆಗದೇ ನೋವುಗಳೂ ಆಗಿವೆ ಎಂದು ಶಿವಶಂಕರ ಭಂಗೀಗೌಡ, ಕಿರಣ, ನವೀನ, ಶಮೀರ್ ಮತ್ತಿತರರು ಸಮಸ್ಯೆ ತೋಡಿಕೊಂಡರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !