100 ದಿನದ ಅಭಿವೃದ್ಧಿ, ಶ್ವೇತಪ‍ತ್ರ ಹೊರಡಿಸಿ: ಯಡಿಯೂರಪ್ಪ

7

100 ದಿನದ ಅಭಿವೃದ್ಧಿ, ಶ್ವೇತಪ‍ತ್ರ ಹೊರಡಿಸಿ: ಯಡಿಯೂರಪ್ಪ

Published:
Updated:

ಬಾಗಲಕೋಟೆ: ‘ರಾಜ್ಯದಲ್ಲಿ ಸರ್ಕಾರ ಇದ್ದೂ ಸತ್ತಂತಿದೆ. ಚುನಾವಣೆಗೆ ಮುನ್ನ ಮೂರು ತಿಂಗಳು ಹಾಗೂ ನಂತರದ ಅವಧಿಯಲ್ಲಿ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ವೇತಪತ್ರ ಹೊರಡಿಸಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿ ₹10 ಸಾವಿರ ಕೋಟಿ ಮೊತ್ತದ ಬಿಲ್ ಬಾಕಿ ಉಳಿದಿದೆ. ಹಾಗಾಗಿ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ವಾಸ್ತವಿಕವಾಗಿ ಆಗಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಕುಮಾರಸ್ವಾಮಿ ಜನರಿಗೆ ತಿಳಿಸಬೇಕು’ ಎಂದು ಒತ್ತಾಯಿಸಿದರು.

’ಕಳೆದ 100 ದಿನಗಳಲ್ಲಿ ವರ್ಗಾವಣೆ ದಂಧೆ ಮಾಡಿರುವುದೇ ಸರ್ಕಾರದ ದೊಡ್ಡ ಸಾಧನೆ, ₹50 ಲಕ್ಷ, 1 ಕೋಟಿ ಕೊಟ್ಟರೆ ಯಾರನ್ನು ಎಲ್ಲಿಗೆ ಬೇಕಾದರೂ ವರ್ಗಾಯಿಸಲಾಗುತ್ತಿದೆ. ಕುಮಾರಸ್ವಾಮಿ ಬೆಂಗಳೂರಿಗೆ ಸೀಮಿತಗೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಮುಖ್ಯಮಂತ್ರಿ ಒಮ್ಮೆಯೂ ಇತ್ತ ಬಂದಿಲ್ಲ. ಅಧಿಕಾರಿಗಳ ಜೊತೆ ಕುಳಿತು ವಾಸ್ತವಿಕ ಸ್ಥಿತಿ ಅರಿಯುವ ಕೆಲಸ ಮಾಡಿಲ್ಲ. ಎರಡು ಸಮನ್ವಯ ಸಮಿತಿ ಸಭೆ ನಡೆಸಿರುವುದೇ ಸಮ್ಮಿಶ್ರ ಸರ್ಕಾರದ ದೊಡ್ಡ ಸಾಧನೆ ಎಂದು ಟೀಕಿಸಿದರು.

ಒಳ ಒಪ್ಪಂದ ಆಗಿಲ್ಲ:

’ವಿಜಯಪುರ–ಬಾಗಲಕೋಟೆ ಸ್ಥಳೀಯ ಸಂಸ್ಥೆ ಉಪಚುನಾವಣೆಯಲ್ಲಿ ಕಾಂಗ್ರೆಸ್–ಬಿಜೆಪಿ ನಡುವೆ ಯಾವುದೇ ಒಳ ಒಪ್ಪಂದ ಆಗಿಲ್ಲ. ಇದರಲ್ಲಿ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. ಚುನಾವಣೆ ಫಲಿತಾಂಶ ಬಂದಾಗ ಗೊತ್ತಾಗುತ್ತದೆ. ನಮ್ಮ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ಸುಮ್ಮನೆ ಅಪಪ್ರಚಾರ ಸಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

’ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ₹50 ಸಾವಿರ ಕೋಟಿ ಬೇಕಿದೆ. ಬೀಳಗಿ ತಾಲ್ಲೂಕಿನಲ್ಲಿ 20 ಗ್ರಾಮಗಳನ್ನು ಸ್ಥಳಾಂತರಿಸಬೇಕಿದೆ. ಆದರೆ ಹಿಂದಿನ ಸಿದ್ದರಾಮಯ್ಯ ಸರ್ಕಾರ ಆಗಲಿ, ಈಗಿನ ಸಮ್ಮಿಶ್ರ ಸರ್ಕಾರ ಆಗಲಿ ಬಜೆಟ್‌ನಲ್ಲಿ ಒಂದು ಪೈಸೆಯನ್ನೂ ಕೊಟ್ಟಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !