ಚಿಕ್ಕಬಳ್ಳಾಪುರ: ಔಷಧಿ ಅಂಗಡಿ ಬಂದ್‌ ವಿಫಲ

7
ಬಂದ್‌ ಬೆಂಬಲ ವ್ಯಕ್ತಪಡಿಸಿದ ಔಷಧ ವ್ಯಾಪಾರಿಗಳ ಸಂಘ, ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಎಂದಿನಂತೆ ನಡೆದ ವಹಿವಾಟು

ಚಿಕ್ಕಬಳ್ಳಾಪುರ: ಔಷಧಿ ಅಂಗಡಿ ಬಂದ್‌ ವಿಫಲ

Published:
Updated:
Deccan Herald

ಚಿಕ್ಕಬಳ್ಳಾಪುರ: ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಅವಕಾಶ ನೀಡುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ ಶುಕ್ರವಾರ ಕರೆ ನೀಡಿದ ಬಂದ್ ಜಿಲ್ಲೆಯಲ್ಲಿ ಸಂಪೂರ್ಣ ವಿಫಲವಾಯಿತು. ಎಲ್ಲಾ ತಾಲ್ಲೂಕುಗಳಲ್ಲಿ ಔಷಧಿ ಅಂಗಡಿಗಳು ಎಂದಿನಂತೆ ವಹಿವಾಟು ನಡೆಸಿದವು.

ಈ ಕುರಿತು ಔಷಧ ವ್ಯಾಪಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ಸತೀಶ್ ಬಾಬು ಅವರನ್ನು ವಿಚಾರಿಸಿದರೆ, ‘ಜಿಲ್ಲೆಯ ಔಷಧ ವ್ಯಾಪಾರಿಗಳು ಈ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಒಂದೇ ಒಂದು ಔಷಧಿ ಮಳಿಗೆ ಬಂದ್‌ ಬೆಂಬಲಿಸಿ ಬಾಗಿಲು ಹಾಕಿಲ್ಲ’ ಎಂದು ಹೇಳಿದರು.

‘ಇ–ಫಾರ್ಮಸಿ ವಹಿವಾಟು ವಿರೋಧಿಸಿ ಈ ಹಿಂದೆ ನಾವು ಪ್ರತಿಭಟಿಸಿದಾಗ ನಮಗೆ ಸರಿಯಾಗಿ ಸ್ಪಂದನೆ ಸಿಗಲಿಲ್ಲ. ಅದರಿಂದ ನಷ್ಟವಾಯಿತೇ ವಿನಾ ಲಾಭವಾಗಲಿಲ್ಲ. ಅಪೋಲೊ ಸೇರಿದಂತೆ ದೊಡ್ಡ ಕಂಪೆನಿಗಳ ಔಷಧಿ ಮಳಿಗೆಗಳು ಬಂದ್ ದಿನ ಬಾಗಿಲು ತೆರೆದವು ಅದರಿಂದಾಗಿ ನಮ್ಮ ವ್ಯಾಪಾರ ನಷ್ಟವಾಯಿತು. ಹೀಗಾಗಿ ನಾವು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ’ ಎಂದು ತಿಳಿಸಿದರು.

‘ಔಷಧ ಮತ್ತು ಕಾಂತಿವರ್ಧಕ ಕಾಯ್ದೆ 1940ರ ಪ್ರಕಾರ ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದು ಕಾನೂನು ಬಾಹಿರ. ಹೀಗಾಗಿ ಅದನ್ನು ನಿರ್ಬಂಧಿಸುವಂತೆ ಎರಡು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಈ ಬಗ್ಗೆ ಪ್ರಧಾನಮಂತ್ರಿ ಕಚೇರಿ, ಕೇಂದ್ರ ರಾಸಾಯನಿಕ ಸಚಿವರ ಕಚೇರಿ, ಕೇಂದ್ರ ಔಷಧಿ ನಿಯಂತ್ರಕರಿಗೆ ಪತ್ರ ಬರೆದಿದ್ದೇವೆ’ ಎಂದರು.

‘ರಾಜ್ಯದ ಹೆಚ್ಚುವರಿ ಔಷಧ ನಿಯಂತ್ರಕರಿಗೆ ಸೆ.15 ರಂದು ಸಹ ನಾವು ಮನವಿ ಸಲ್ಲಿಸಿದ್ದೇವೆ. ಅವರು ನಮ್ಮ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆಗೆ ಔಷಧ ವ್ಯಾಪಾರಿಗಳ ಅಖಿಲ ಭಾರತ ಒಕ್ಕೂಟ ನೀಡಿದ ಕರೆಗೆ ಸಹ ನಾವು ಬೆಂಬಲ ವ್ಯಕ್ತಪಡಿಸಿಲ್ಲ’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !