ಸೋಮವಾರ, ಮಾರ್ಚ್ 30, 2020
19 °C

ಸಂಗೀತದಷ್ಟೇ ಆಹಾರವೂ ಇಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಅಡುಗೆ ಬಗ್ಗೆ ವಿಶೇಷ ಆಸಕ್ತಿ ಇಲ್ಲದಿದ್ದರೂ, ಆಗಾಗ್ಗೆ ನನ್ನ ಕೈರುಚಿಯನ್ನು ಸವಿಯುವ ಅವಕಾಶ ಮನೆಯವರಿಗೆ ದೊರೆಯುತ್ತಿರುತ್ತದೆ. ಅಪರೂಪಕ್ಕೆ ಅಡುಗೆ ಮಾಡಿದರೂ ತುಂಬಾ ರುಚಿಯಾಗಿ ಮಾಡುತ್ತೇನೆ. ಗೂಗಲ್‌, ಯೂಟ್ಯೂಬ್‌ನಲ್ಲಿ ನೋಡಿ ಹೊಸ ರುಚಿಗಳನ್ನು ಪ್ರಯತ್ನಿಸುತ್ತಿರುತ್ತೇನೆ. 

ಒಂಬತ್ತನೇ ತರಗತಿಯಲ್ಲಿದ್ದಾಗ ನಾನು ಮೊದಲು ಪ್ರಯೋಗಿಸಿದ್ದ ಅಡುಗೆ ಗೋಬಿ ಮಂಚೂರಿ. ತುಂಬಾ ಚೆನ್ನಾಗಿತ್ತು. ರುಚಿನೋಡಿ ಎಲ್ಲರೂ ಹೊಗಳಿದ್ದರು. ಪಾಕಪ್ರವೀಣೆ ಎಂಬುದು ಆಗಲೇ ಸಾಬೀತಾಗಿತ್ತು. ನನ್ನ ಊಟವನ್ನು ನಿರ್ವಹಿಸುವಷ್ಟರ ಮಟ್ಟಿಗೆ ಅಡುಗೆ ಜ್ಞಾನವಿದೆ.

ಜಂಕ್‌ ಫುಡ್‌ಗಳನ್ನು ಮಾಡುವುದು, ತಿನ್ನುವುದು ಎರಡೂ ಇಷ್ಟ. ನನ್ನ ಪತಿಗೂ ಅಡುಗೆ ಬರುತ್ತದೆ. ಆದರೆ ಅವರು ಮಾಡುವುದು ಕಡಿಮೆ. ನಾನು ಮಾಡುವ ಹುಳಿ (ಸಾಂಬಾರ್) ಅವರಿಗೆ ತುಂಬಾ ಇಷ್ಟ. ದಾಲ್‌, ಜೀರಾ ರೈಸ್‌ನ್ನು ಇಷ್ಟಪಟ್ಟು ತಿನ್ನುತ್ತಾರೆ. ನಾನು ಮೊದಲ ಬಾರಿಗೆ ನನ್ನ ಪತಿಗೆ ಮಾಡಿ ಬಡಿಸಿದ ಖಾದ್ಯ ಫ್ರೈಡ್‌ ರೈಸ್‌, ಪಾಲಕ್‌ ಪನ್ನೀರ್ ತುಂಬಾ ಇಷ್ಟಪಟ್ಟು ತಿಂದಿದ್ದರು. 

ಮನೆ ಅಡುಗೆಗಳೇ ನನ್ನ ಆದ್ಯತೆ. ಸ್ನೇಹಿತರು, ಆಪ್ತರ ಜೊತೆ ಹೊರಗಡೆ ಹೋದಾಗ ದಕ್ಷಿಣ ಭಾರತೀಯ ಅಡುಗೆಗಳನ್ನು ತಿನ್ನುತ್ತೇನೆ. ಇಟಾಲಿಯನ್‌ ಆಹಾ‌ರಗಳೂ ಇಷ್ಟವಾಗುತ್ತವೆ. ತುಂಬಾ ಆಸೆ ಪಟ್ಟು ತಿನ್ನುವುದು ಗಾಡಿ ಗೋಬಿ, ಗೋಬಿ ನ್ಯೂಡಲ್ಸ್‌, ಗೋಬಿ ರೈಸ್‌.

ಅಮ್ಮ ಮಾಡುವ ಅಡುಗೆಯಲ್ಲಿ ಕ್ಯಾರೆಟ್‌ ಖೀರು, ಹಯಗ್ರೀವ, ಕರಿದ ತಿನಿಸುಗಳು ಇಷ್ಟ. ಸಿಹಿತಿಂಡಿಗಳಿಗಿಂತಲೂ ಚಾಟ್ಸ್‌, ರಸ್ತೆ ಬದಿಯ ಆಹಾರಗಳನ್ನು ಹೆಚ್ಚು ಸೇವಿಸುತ್ತೇನೆ. 

ಎಲ್ಲ ರೀತಿಯ ಆಹಾರಗಳನ್ನು ತಿಂದರೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುವುದು ನನ್ನ ಭಾವನೆ. ನನ್ನ ದೇಹ ಎಲ್ಲ ಶೈಲಿಯ ಆಹಾರಗಳಿಗೆ ಒಗ್ಗಿಕೊಂಡಿರುವುದರಿಂದ ಯಾವುದೇ ಆಹಾರ ತಿಂದರೂ ಗಂಟಲು ಕೆಡುವುದು, ಹಾಡಲು ಸಾಧ್ಯವಾಗದಿರುವ ಪರಿಸ್ಥಿತಿ ಉದ್ಭವಿಸುವುದಿಲ್ಲ.

ಆಲೂ ಟಿಕ್ಕಿ ಹೀಗೆ ಮಾಡಿ...

ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ, ಮೊಸರು, ಜೀರಿಗೆ ಪುಡಿ, ಕಾರದ ಪುಡಿ, ದನಿಯಾ ಪುಡಿ, ಬೆಲ್ಲ, ಹುಣಸೆ ಹಣ್ಣು, ಕೊತ್ತಂಬರಿ ಸೊಪ್ಪು, ಈರುಳ್ಳಿ

ಮಾಡುವ ವಿಧಾನ:  5 ಮದ್ಯಮ ಗಾತ್ರದ ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಮ್ಯಾಶ್‌ ಮಾಡಿ ಇಡಿ. ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಕಾರದ ಪುಡಿ, ಅರ್ಧ ಚಮಚ ಜೀರಿಗೆ ಪುಡಿ, ಅರ್ಧ ಚಮಚ ದನಿಯಾ ಪುಡಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ ಕಲಸಬೇಕು. ಈ ಮಿಶ್ರಣವನ್ನು ಸಣ್ಣ ಸಣ್ಣ ಕಟ್ಲೇಟ್ ಆಕಾರಕ್ಕೆ ಲಟ್ಟಿಸಿ, ತವಾದ ಮೇಲೆ ಅಡುಗೆ ಎಣ್ಣೆ ಹಾಕಿ ಶ್ಯಾಲೊ ಪ್ರೈ ಮಾಡಬೇಕು. ನಂತರ ನೀರಿಗೆ ಬೆಲ್ಲ, ಹುಣಸೆ ಹಣ್ಣು ಹಾಕಿ ಚೆನ್ನಾಗಿ ಕುದಿಸಿ, ಅದಕ್ಕೆ ಕಾರದ ಪುಡಿ, ಜೀರಿಗೆ ಪುಡಿ ಹಾಕಿ ತಯಾರಿಸಿದ ಮಿಶ್ರಣವನ್ನು ಕಟ್ಲೇಟ್‌ ಮೇಲೆ ಹಾಕಿ ಅದರ ಮೇಲೆ ಮೊಸರು, ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಉದುರಿಸಿದರೆ ಆಲೂ ಟಿಕ್ಕಿ ಸವಿಯಲು ಸಿದ್ಧ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು