‘ಲೂಕೆಫೆ’ಯಲ್ಲಿ ಎಲ್ಲವೂ ಉಚಿತ!

7
ಸ್ವಚ್ಛಭಾರತ ಅಭಿಯಾನಕ್ಕೆ ‘ಲೂಕೆಫೆ’ ಸಾಥ್

‘ಲೂಕೆಫೆ’ಯಲ್ಲಿ ಎಲ್ಲವೂ ಉಚಿತ!

Published:
Updated:

ಹೈದರಾಬಾದ್: ದೇಶದ ಎಷ್ಟೋ ಜನನಿಬಿಡ ಪ್ರದೇಶಗಳಲ್ಲಿ ಸಾಮೂಹಿಕ ಶೌಚಾಲಯ ಸೌಲಭ್ಯ ಇಂದಿಗೂ ಮರೀಚಿಕೆ. ಇಲ್ಲೊಂದು ಸಂಸ್ಥೆ ಉಚಿತ ಐಷಾರಾಮಿ ಶೌಚಾಲಯ ಸೇವೆ ಒದಗಿಸುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದೆ.

ಹೈದರಾಬಾದ್‌ ನಗರದಲ್ಲಿ ಎರಡು ಕಡೆ ‘ಲೂಕೆಫೆ’ ನಿರ್ಮಿಸಿರುವ ಕ್ಸೋರಾ ಕಾರ್ಪೋರೇಟ್‌ ಸರ್ವೀಸ್‌ ಸಂಸ್ಥೆ ದೇಶದ ವಿವಿಧೆಡೆ ಐಷಾರಾಮಿ ಶೌಚಾಲಯ ನಿರ್ಮಿಸುವ ಗುರಿಯನ್ನು ಹೊಂದಿದೆ.

ಹವಾನಿಯಂತ್ರಿತ ‘ಲೂಕಫೆ’ಗಳಲ್ಲಿ ಕ್ಯಾಮೆರಾ ಕಣ್ಗಾವಲು ಇದೆ. ಉಚಿತ ವೈಫೈ, ಮೊಬೈಲ್‌ ಚಾರ್ಜಿಂಗ್‌ ಸೌಲಭ್ಯದ ಈ ಶೌಚಾಲಯಗಳು ಸ್ವಯಂ ಸ್ವಚ್ಛತೆ ವ್ಯವಸ್ಥೆಯನ್ನು ಹೊಂದಿವೆ. ಶೌಚಾಲಯ ಬಳಕೆ ಸಂಪೂರ್ಣ ಉಚಿತ. ಇದಕ್ಕೆ ಹೊಂದಿಕೊಂಡೆ ಇರುವ ಕೆಫೆಯ ಆದಾಯದ ಮೂಲಕ ಶೌಚಾಲಯ ನಿರ್ವಹಣೆ ಮಾಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಹೈದರಾಬಾದ್‌ನಿಂದ 20 ಕಿ.ಮೀ ದೂರದ ಮಾಧಪುರದಲ್ಲಿರುವ ಶಿಲ್ಪಾರಾಮಂ ಕಲಾಗ್ರಾಮದ ಎದುರು ದೇಶದ ಮೊದಲ ‘ಲೂಕೆಫೆ’ ಆರಂಭವಾಯಿತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಹೈದರಾಬಾದ್‌ ಕೊಂಡಾಪುರದಲ್ಲಿ ನಿರ್ಮಾಣವಾಗಿದ್ದ ಶ್ವಾನ ಉದ್ಯಾನದ ಬಳಿ ಎರಡನೇ ‘ಲೂಕೆಫೆ’ ಸ್ಥಾಪಿಸಲಾಗಿದೆ.

ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸಿ 170 ಚದರ ಅಡಿ ಪ್ರದೇಶದಲ್ಲಿ ಈ ಶೌಚಾಲಯವನ್ನು ನಿರ್ಮಿಸಲಾಗಿದೆ. ದಿನದ 24 ತಾಸು ಈ ಶೌಚಾಲಯ ಬಳಕೆಗೆ ದೊರೆಯಲಿದೆ. ಅಲ್ಲದೆ, ಗೂಗಲ್‌ ಮ್ಯಾಪ್‌ನಲ್ಲಿಯೂ ಇದು ಎಲ್ಲಿದೆ ಎನ್ನುವ ಮಾಹಿತಿ ದೊರೆಯುತ್ತದೆ. ಜೊತೆಗೆ ‘ಲೂಕೆಫೆ’ ಆ್ಯಪ್‌ ಬಳಿಸಿ ನಿಮ್ಮ ಹತ್ತಿರದಲ್ಲಿ ಈ ಶೌಚಾಲಯ ಎಲ್ಲಿದೆ ಎನ್ನುವುದನ್ನು ತಿಳಿಯಬಹುದಾಗಿದೆ.

‘ಲೂಕೆಫೆ’ ಆರಂಭಿಸಲು ಹಿನ್ನೆಲೆಯಾದ ಸಂಗತಿಗಳನ್ನು english.alarabiya.net ಜಾಲತಾಣಕ್ಕೆ ವಿವರಿಸಿರುವ ಉದ್ಯಮಿ ಅಭಿಷೇಕ್‌ ನಾಥ್‌, ‘ವಿವಿಧ ಕಂಪನಿಗಳ ಮುಖ್ಯಸ್ಥರು ಸೇರಿ ಈ ಯೋಜನೆ ಜಾರಿಗೆ ತಂದಿದ್ದೇವೆ. ಶೌಚಾಲಯ ನಿರ್ಮಿಸುವುದಕ್ಕಿಂತ, ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲು ಎನಿಸಿತ್ತು. ಅದಕ್ಕಾಗಿ ನಮ್ಮದೇ ಆದ ರೀತಿಯಲ್ಲಿ ಅಧ್ಯಯನ ಮಾಡಿದೆವು. ಐಒಟಿ ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ ಶೌಚಾಲಯಗಳು ಸೂಕ್ತ ಎನಿಸಿತು’ ಎಂದು ಹೇಳಿದ್ದಾರೆ.

‘ವಿವಿಧೆಡೆ ಸಾರ್ವಜನಿಕ ಮತ್ತು ಖಾಸಗಿ ಸಾಮೂಹಿಕ ಶೌಚಾಲಯಗಳ ಬಗ್ಗೆ ಸಮೀಕ್ಷೆ ನಡೆಸಿ, ಅವುಗಳು ವಿಫಲವಾಗಿದ್ದೇಕೆ ಎಂದು ಮನಗಂಡ ನಂತರ ಈ ಶೌಚಾಲಯ ಸ್ಥಾಪಿಸಿದೆವು. ಸುಸ್ಥಿರ ಸ್ವಯಂಚಾಲಿತ ಶೌಚಾಲಯಗಳು ಇದಕ್ಕೆ ಪರಿಹಾರವೆಂದು ಕಂಡುಕೊಂಡೆವು. ಮುಂದಿನ 3 ತಿಂಗಳಲ್ಲಿ ವಿವಿಧ ಕಡೆಗಳಲ್ಲಿ ಇನ್ನೂ 60 ಲೂ ಕೆಫೆಗಳ ನಿರ್ಮಾಣದ ಗುರಿಯನ್ನು ಹೊಂದಿದ್ದೇವೆ.  ಸಾರ್ವಜನಿಕರು ಹೆಚ್ಚಾಗಿರುವ ಸ್ಥಳಗಳಲ್ಲಿಯೇ ಈ ಶೌಚಾಲಯಗಳನ್ನು ನಿರ್ಮಿಸಲು ಯೋಜಿಸಿದ್ದೇವೆ. ಬಸ್‌, ರೈಲು ನಿಲ್ದಾಣ, ಸಾರ್ವಜನಿಕ ಕಟ್ಟಡಗಳು... ಹೀಗೆ ವಿವಿಧೆಡೆ ಲೂಕೆಫೆ ನಿರ್ಮಿಸಲಿದ್ದೇವೆ. ಅಂಗವಿಕಲರಿಗೆ ಹೆಚ್ಚು ಅನುಕೂಲವಾಗುವ ದೃಷ್ಟಿಯಿಂದ ವಿನ್ಯಾಸದಲ್ಲಿ ಅಗತ್ಯ ಮಾರ್ಪಾಡು ಮಾಡಿಕೊಳ್ಳಲಾಗಿದೆ’ ಎನ್ನುತ್ತಾರೆ ಅವರು.

‘ಸಾರ್ವಜನಿಕ ಶೌಚಾಲಯಗಳೆಂದರೇ ಮೂಗು ಮುರಿಯುವ ಜನರ ಮನಸ್ಥಿತಿಯನ್ನು ಬದಲಿಸಲು ಲೂಕೆಫೆ ನೆರವಾಗಲಿದೆ. ಸ್ವಚ್ಛ ಮತ್ತು ನಿರ್ಮಲ ಶೌಚಾಲಯಗಳು ಬಳಕೆದಾರರ ವರ್ತನೆಯನ್ನೂ ಬದಲಿಸುತ್ತದೆ. ಸರ್ಕಾರ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ಭಾರತದಲ್ಲಿನ ಶೌಚಾಲಯ ವ್ಯವಸ್ಥೆಯ ಚಿತ್ರಣವನ್ನು ಬದಲಾವಣೆ ಮಾಡಬಹುದು’ ಎನ್ನುವುದು ಅವರ ಅಭಿಪ್ರಾಯ.

Tags: 

ಬರಹ ಇಷ್ಟವಾಯಿತೆ?

 • 15

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !