ರಣಜಿ ಕ್ರಿಕೆಟ್: ಮಿಥುನ್ ಮಿಂಚು; ಸುಚಿತ್ ಸ್ಪಿನ್ ಸೊಬಗು

7
ನೂರನೇ ರಣಜಿ ಪಂದ್ಯವಾಡುತ್ತಿರುವ ವಿನಯ್; ಅರ್ಧಶತಕ ಗಳಿಸಿದ ಗಣೇಶ್ ಸತೀಶ್

ರಣಜಿ ಕ್ರಿಕೆಟ್: ಮಿಥುನ್ ಮಿಂಚು; ಸುಚಿತ್ ಸ್ಪಿನ್ ಸೊಬಗು

Published:
Updated:
Deccan Herald

ನಾಗಪುರ: ಜಮ್ತಾ ಕ್ರೀಡಾಂಗಣದಲ್ಲಿ ಮಂಗಳವಾರ ‘ಕನ್ನಡಿಗ’ರದ್ದೇ ಪಾರುಪತ್ಯ.  ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ ಮತ್ತು ಸ್ಪಿನ್ನರ್ ಜೆ. ಸುಚಿತ್ ಮಿಂಚಿದರು. ಅವರ ಪರಿಣಾಮಕಾರಿ ದಾಳಿಗೆ ತಿರುಗೇಟು ನೀಡಿದ್ದು ವಿದರ್ಭ ತಂಡದಲ್ಲಿರುವ ದಾವಣಗೆರೆಯ ಗಣೇಶ್ ಸತೀಶ್!

ಇದರಿಂದಾಗಿ ದಿನದಾಟದ ಕೊನೆಗೆ ವಿದರ್ಭ ತಂಡವು 87 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 245 ರನ್‌ಗಳನ್ನು ಗಳಿಸಿದೆ.  ಶ್ರೀಕಾಂತ್ ವಾಘ್ (ಬ್ಯಾಟಿಂಗ್ 37) ಮತ್ತು ಲಲಿತ್ ಎಂ ಯಾದವ್ (ಬ್ಯಾಟಿಂಗ್ 7) ಕ್ರೀಸ್‌ನಲ್ಲಿದ್ದಾರೆ. 

ಬೆಳಿಗ್ಗೆ ಟಾಸ್ ಗೆದ್ದ ಆತಿಥೇಯ ವಿದರ್ಭ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕದ ಮಧ್ಯಮವೇಗಿ ಅಭಿಮನ್ಯು ಮಿಥುನ್ ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ಆರಂಭಿಕ ಜೋಡಿ ಸಂಜಯ್ ರಾಮಸ್ವಾಮಿ ಮತ್ತು ಫೈಜ್ ಫಜಲ್ ಅವರ ವಿಕೆಟ್ ಕಬಳಿಸಿದರು. ಆಗ ತಂಡವು 11.5 ಓವರ್‌ಗಳಲ್ಲಿ 31 ರನ್‌ ಮಾತ್ರ ಗಳಿಸಿತ್ತು. ಈ ಹಂತದಲ್ಲಿ ವಾಸೀಂ ಜಾಫರ್ ಜೊತೆಗೂಡಿದ ಗಣೇಶ್ ಸತೀಶ್ ತಂಡಕ್ಕೆ ಚೇತರಿಕೆ ನೀಡಿದರು.

ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ್ದ ಇಬ್ಬರೂ ಆಟಗಾರರು ಮೂರನೇ ವಿಕೆಟ್ ಜೊತೆಯಾಟದಲ್ಲಿ  85 ರನ್‌ ಗಳಿಸಿದರು. 46ನೇ ಓವರ್‌ನಲ್ಲಿ ಸ್ಟುವರ್ಟ್‌ ಬಿನ್ನಿ ಎಸೆತದಲ್ಲಿ ಜಾಫರ್ ಕ್ಲೀನ್‌ಬೌಲ್ಡ್‌ ಆದರು. ನಂತರ ಗಣೇಶ್ ಜೊತೆಗೂಡಿದ ಅಕ್ಷಯ್ ವಾಡಕರ್ (31; 48ಎಸೆತ, 3ಬೌಂಡರಿ) ಸ್ವಲ್ಪ ವೇಗವಾಗಿ ರನ್‌ ಗಳಿಸಿದರು. ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 63 ರನ್‌ಗಳನ್ನು ಸೇರಿಸಿದರು. ಗಣೇಶ್ 126 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು.59ನೇ ಓವರ್‌ನಲ್ಲಿ ಎಡಗೈ ಜೆ. ಸುಚಿತ್ ಎಸೆತದಲ್ಲಿ ಕರುಣ್ ನಾಯರ್‌ಗೆ ಕ್ಯಾಚಿತ್ತರು. 

ನೂರನೇ ರಣಜಿ ಪಂದ್ಯ ಆಡುತ್ತಿರುವ ನಾಯಕ ವಿನಯಕುಮಾರ್ ಅಪೂರ್ವ ವಾಂಖೆಡೆ (12 ರನ್) ವಿಕೆಟ್ ಕಬಳಿಸಿದರು. ಇದರಿಂದಾಗಿ ಮತ್ತೊಮ್ಮೆ ತಂಡವು ಕುಸಿಯುವ ಭೀತಿ ಎದುರಾಗಿತ್ತು. ಸುಚಿತ್ ಅಕ್ಷಯ್ ವಾಡಕರ್ ಮತ್ತು ಆಧಿತ್ಯ ಸರವಟೆ ಅವರ ವಿಕೆಟ್‌ಗಳಣ್ನೂ ಕಬಳಿಸಿದರು. 

ಪದಾರ್ಪಣೆ ಪಂದ್ಯವಾಡುತ್ತಿರುವ ಕರ್ನಾಟಕ ವಿಕೆಟ್‌ಕೀಪರ್ ಬಿ.ಆರ್. ಶರತ್ ಎರಡು ಕ್ಯಾಚ್ ಪಡೆದರು. ಬ್ಯಾಟ್ಸ್‌ಮನ್ ಕೆ.ವಿ. ಸಿದ್ಧಾರ್ಥ್, ಮಧ್ಯಮವೇಗಿ ಪ್ರಸಿದ್ಧ ಕೃಷ್ಣ  ಅವರೂ ರಣಜಿ ಕ್ರಿಕೆಟ್ ಪಯಣ ಆರಂಭಿಸಿದರು.

ಕರ್ನಾಟಕದ ಪ್ರಮುಖ ಆಟಗಾರರಾದ ಮಯಂಕ್ ಅಗರವಾಲ್ ಮತ್ತು ಕೃಷ್ಣಪ್ಪ ಗೌತಮ್ ಅವರು ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ ‘ಎ’ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ವೆಸ್ಟ್ ಇಂಡೀಸ್ ವಿರುದ್ಧದ ಟ್ವೆಂಟಿ–20 ಸರಣಿಯಲ್ಲಿ  ಭಾರತ ತಂಡದಲ್ಲಿ ಆಡಿದ್ದರು. ಭಾನುವಾರ ಸರಣಿ ಮುಕ್ತಾಯವಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !