ಸೋಮವಾರ, ಸೆಪ್ಟೆಂಬರ್ 28, 2020
29 °C
ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿಕೆ

ಕೋಲಾರ: ಜಿಲ್ಲೆಯಲ್ಲಿ ಅಂಗವಿಕಲರ ಸಮಗ್ರ ಸರ್ವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಪುನರ್ವಸತಿ ಕಾರ್ಯಕರ್ತರ ಮೂಲಕ ಕೈಗೊಂಡಿರುವ ಅಂಗವಿಕಲರ ಸಮಗ್ರ ಸರ್ವೆ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಶೀಘ್ರವೇ ಮಾಹಿತಿ ಲಭ್ಯವಾಗಲಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದರು.

ಜಿಲ್ಲಾಡಳಿತ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ಈವರೆಗೆ 44,303 ಮಂದಿ ಅಂಗವಿಕಲರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ನಗರ ಪ್ರದೇಶದಲ್ಲೂ ಅಂಗವಿಕಲರನ್ನು ಗುರುತಿಸಲು ಒತ್ತು ನೀಡಲಾಗುವುದು’ ಎಂದರು.

‘ವಿವಿಧೊದ್ದೇಶಿತ ಪುನರ್ವಸತಿ ಕಾರ್ಯಕರ್ತರ ಬೇಡಿಕೆ ಸಂಬಂಧ ಜಿಲ್ಲಾಡಳಿತದ ಮಟ್ಟದಲ್ಲಿ ಸಾಧ್ಯವಾಗುವ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಕೆಎಸ್‌ಆರ್‌ಟಿಸಿ ಮೂಲಕ 3,286 ಮಂದಿಗೆ ರಿಯಾಯಿತಿ ದರದ ಬಸ್‌ ಪಾಸ್‌ ವಿತರಿಸಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ 23,987 ಮಂದಿಗೆ ಪಿಂಚಣಿ ನೀಡಲಾಗುತ್ತಿದೆ. ಅರ್ಹರು ಕಂದಾಯ ಅದಾಲತ್‌ನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬಹುದು’ ಎಂದು ಸಲಹೆ ನೀಡಿದರು.

‘ಅಂಗವಿಕಲರ ಹಕ್ಕು, ಸಮಾನತೆ, ಮುಖ್ಯವಾಹಿನಿಯಲ್ಲಿ ಕೆಲಸ ಮಾಡಲು ಸೌಲಭ್ಯ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು 1992ರಿಂದ ವಿಶ್ವ ಅಂಗವಿಕಲರ ದಿನ ಆಚರಿಸುತ್ತಿದೆ. ಅಂಗವಿಕಲರು ಸೃಷ್ಟಿಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಸ್ವಾವಲಂಬಿ ಹಾಗೂ ಸದೃಢ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಇಲಾಖೆ ಆರಂಭ: ‘ಸರ್ಕಾರವು ಅಂಗವಿಕಲರ ಶಿಕ್ಷಣ, ಉದ್ಯೋಗ, ಸಾಮಾಜಿಕ ಭದ್ರತೆ, ಪುನರ್ವಸತಿಗಾಗಿ ರಾಜ್ಯದಲ್ಲಿ 1988ರಲ್ಲೇ ಅಂಗವಿಕಲರ ಕಲ್ಯಾಣ ಇಲಾಖೆ ಆರಂಭಿಸಿ ಹಲವು ಕಾರ್ಯಕ್ರಮ ಜಾರಿಗೊಳಿಸುತ್ತಾ ಬಂದಿದೆ. ಆರೋಗ್ಯ ಇಲಾಖೆಯು ಅಂಗನವಾಡಿ, ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರೀಯ ಬಾಲ ಸುರಕ್ಷಾ ಯೋಜನೆಯಡಿ ಆರೋಗ್ಯ ತಪಾಸಣೆ ನಡೆಸಿ ಅನಾರೋಗ್ಯ ಸಮಸ್ಯೆ ಕಂಡುಬಂದಲ್ಲಿ ಚಿಕಿತ್ಸೆ ನೀಡುತ್ತಿದೆ. ವೈದ್ಯಕೀಯ ಪ್ರಾಧಿಕಾರವು ಅಂಗವಿಕಲರಿಗೆ ಪ್ರಮಾಣಪತ್ರ ನೀಡುತ್ತಿದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ಅಂಗವಿಕಲರ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ 432 ಅರ್ಜಿ ವಿಲೇವಾರಿಯಾಗಿದ್ದು, 245 ಅರ್ಜಿಗಳ ಪರಿಶೀಲನೆ ನಡೆದಿದೆ. ಆಧಾರ್‌ ಯೋಜನೆಯಡಿ 8 ವರ್ಷಗಳಲ್ಲಿ 102 ಮಂದಿಗೆ ₹ 1 ಲಕ್ಷ ಸಾಲ ಸೌಲಭ್ಯ ಕಲ್ಪಿಸಲಾಗಿದ್ದು, ಇದರಲ್ಲಿ ₹ 50 ಸಬ್ಸಿಡಿ ಇದೆ. ಈ ವರ್ಷ 420 ಅರ್ಜಿ ಸಲ್ಲಿಕೆಯಾಗಿದ್ದು, ಇವುಗಳನ್ನು ಶೀಘ್ರವೇ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಶಾಪವಲ್ಲ: ‘ಅಂಗವೈಕಲ್ಯ ಶಾಪವಲ್ಲ. ಮಗು ಅಂಗವಿಕಲವಾಗಿ ಹುಟ್ಟುವುದರಲ್ಲಿ ಪೋಷಕರ ಪಾತ್ರ ಇರುವುದಿಲ್ಲ. ಕಾರಣಾಂತರದಿಂದ ಅಂಗವಿಕಲರಾಗಿ ಹುಟ್ಟುವ ಮಕ್ಕಳಿಗೆ ಮೋಸ ಮಾಡಬಾರದು. ಅವರನ್ನು ತಮ್ಮ ಮಕ್ಕಳಂತೆಯೇ ಕಾಣಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ ಅಧಿಕಾರಿಗಳಿಗೆ ಮನವಿ ಮಾಡಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತಪರೀಕ್ಷೆ, ಸ್ಕ್ಯಾನಿಂಗ್ ಸೇರಿದಂತೆ ಎಲ್ಲಾ ವೈದ್ಯಕೀಯ ಪರೀಕ್ಷೆಯಲ್ಲೂ ಅಂಗವಿಕಲರನ್ನು ಕಾಯಿಸದೆ ಆದ್ಯತೆ ಮೇಲೆ ಸೇವೆ ನೀಡಲಾಗುತ್ತಿದೆ’ ಎಂದು ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾರಾಯಣಸ್ವಾಮಿ ತಿಳಿಸಿದರು.

ಕ್ರೀಡಾಪಟುಗಳಿಗೆ ಸನ್ಮಾನ: ಅಂಗವಿಕಲ ಕ್ರೀಡಾಪಟುಗಳಾದ ಅನಿತಾ ಹಾಗೂ ಎನ್.ನಾಗೇಶ್, ವಿವಿಧೊದ್ದೇಶ ಪುನರ್ವಸತಿ ಕಾರ್ಯಕರ್ತರಾದ ವೈ.ಬಿ.ಶ್ರೀನಿವಾಸಗೌಡ ಮತ್ತು ಎಂ.ಎಲ್.ಶ್ರೀನಾಥ್ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಸೌಮ್ಯ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಎಂ.ವೆಂಕಟರಾಮಪ್ಪ, ನಂದಾದೀಪ ಸಂಸ್ಥೆ ಮುಖ್ಯಸ್ಥ ಅಪ್ಪುರಾವ್, ವಾದಿರಾಜ ಟ್ರಸ್ಟ್‌ ಮುಖ್ಯಸ್ಥೆ ಶಾರದಾ, ಅಂತರಗಂಗೆ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಪ್ರಜ್ಞಾ, ಕಾರ್ಯದರ್ಶಿ ಶಂಕರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು