ಡಿ.12 ರಂದು ‘ಬೆಳಗಾವಿ ಚಲೋ’

7
ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಆಗ್ರಹ

ಡಿ.12 ರಂದು ‘ಬೆಳಗಾವಿ ಚಲೋ’

Published:
Updated:

ಚಿಕ್ಕಬಳ್ಳಾಪುರ: ‘ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘ ವತಿಯಿಂದ ಡಿಸೆಂಬರ್ 12 ರಂದು ‘ಬೆಳಗಾವಿ ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದು ಎನ್‌ಪಿಎಸ್‌ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ವಿ.ಬಾಲರಾಜ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಗಾವಿಯಲ್ಲಿ ಡಿ.12 ರಂದು ಅಹೋರಾತ್ರಿ ಧರಣಿ ನಡೆಸಲು ಸಂಘ ತೀರ್ಮಾನಿಸಿದ್ದು, ಅದಕ್ಕೆ ರಾಜ್ಯದ ಎಲ್ಲ ಜಿಲ್ಲೆಯಿಂದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಜಿಲ್ಲೆಯಿಂದ ಕೂಡ ಸುಮಾರು 400 ನೌಕರರು ಹೋಗುತ್ತಿದ್ದಾರೆ’ ಎಂದು ತಿಳಿಸಿದರು.

ಸಂಘದ ರಾಜ್ಯ ಸಮಿತಿ ಸದಸ್ಯ ನಾಗೇಶ್‌ ಮಾತನಾಡಿ, ‘ಎನ್‌ಪಿಎಸ್‌ ಯೋಜನೆಯಲ್ಲಿ 12 ವರ್ಷಗಳಿಂದ ನಮಗೆ ಆಗುತ್ತಿರುವ ಅನ್ಯಾಯದ ಪರಿಣಾಮ ಇತ್ತೀಚಿನ ಕೆಲ ವರ್ಷಗಳಲ್ಲಿ ನಮಗೆ ಅರಿವಾಗುತ್ತಿದೆ. ನೂರಾರು ನೌಕರರು ಮೃತಪಟ್ಟಿದ್ದಾರೆ. ನಿವೃತ್ತಿ ಹೊಂದಿದ್ದಾರೆ. ಅಂತಹವರ ಕುಟುಂಬಕ್ಕೆ ಪಿಂಚಣಿ ವೃದ್ಧಾಪ್ಯ ವೇತನಕ್ಕಿಂತ ಕಡಿಮೆ ಬರುತ್ತಿದೆ. ₹70 ಸಾವಿರ ಸಂಬಳ ಪಡೆಯುತ್ತಿರುವವರು ಇವತ್ತು ₹700 ಪಿಂಚಣಿ ಪಡೆಯುವ ಹೊತ್ತು ಬಂದಿದೆ’ ಎಂದರು.

‘ಈಗಾಗಲೇ ಹಲವು ರೀತಿಯಲ್ಲಿ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವಂತೆ ಹೋರಾಟ ನಡೆಸಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದಾದ್ಯಂತ ರಕ್ತದಾನ ಶಿಬಿರ ಆಯೋಜಿಸಿದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಅವರು ಸಮಿತಿ ರಚನೆ ಭರವಸೆ ಕೊಟ್ಟಿದ್ದಾರೆ. ಆದರೆ ನಮಗೆ ಸಮಿತಿ ರಚನೆಯ ಅವಶ್ಯಕತೆ ಇಲ್ಲ. ದೆಹಲಿ ಸರ್ಕಾರದ ಮಾದರಿಯಲ್ಲಿ ಎನ್‌ಪಿಎಸ್‌ ರದ್ದುಗೊಳಿಸುವಂತಹ ದಿಟ್ಟ ನಿರ್ಧಾರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೈಗೊಳ್ಳಬೇಕು. ಅದಕ್ಕಾಗಿ ಒತ್ತಾಯಿಸಲು ನಾವು ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ’ ಎಂದು ಹೇಳಿದರು.

ಸಂಘದ ಪದಾಧಿಕಾರಿಗಳಾದ ವಿಷ್ಣುವರ್ಧನ್, ಅಮರ್, ಶಿವಕುಮಾರ್, ಫಣಿಕೃಷ್ಣ ಪ್ರಸಾದ್, ರವೀಂದ್ರ, ಮಂಜುನಾಥ್, ರವೀಂದ್ರನಾಥ್, ವಿದ್ಯಾಸಾಗರ್ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !