ಗುರುವಾರ , ಡಿಸೆಂಬರ್ 12, 2019
27 °C
ಕೆ.ಸಿ ವ್ಯಾಲಿ 3ನೇ ಹಂತದ ಎತ್ತುವಳಿ ಪಂಪ್‌ಹೌಸ್ ಉದ್ಘಾಟನಾ ಕಾರ್ಯಕ್ರಮ

ಶಿಷ್ಟಾಚಾರ ಉಲ್ಲಂಘನೆ ಆರೋಪ: ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆಯ 3ನೇ ಹಂತದ ಎತ್ತುವಳಿ ಪಂಪ್‌ಹೌಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ಜಿಲ್ಲಾಡಳಿತ ಶಿಷ್ಟಾಚಾರ ಉಲ್ಲಂಘಿಸಿದೆ’ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಸದಸ್ಯರು ಕಪ್ಪುಪಟ್ಟಿ ಧರಿಸಿ ಕಾರ್ಯಕ್ರಮದ ವೇದಿಕೆ ಬಳಿ ಶನಿವಾರ ಧರಣಿ ನಡೆಸಿದರು.

ತಾಲ್ಲೂಕಿನ ನರಸಾಪುರ ಕೆರೆ ಸಮೀಪ ನಿರ್ಮಿಸಿರುವ ಕೆ.ಸಿ ವ್ಯಾಲಿ ಯೋಜನೆಯ 3ನೇ ಎತ್ತುವಳಿ ಪಂಪ್‌ಹೌಸ್‌ನ ಉದ್ಘಾಟನಾ ಕಾರ್ಯಕ್ರಮವನ್ನು ಜಿಲ್ಲಾಡಳಿತ ಶನಿವಾರ ಹಮ್ಮಿಕೊಂಡಿತ್ತು. ನರಸಾಪುರ ಜಿ.ಪಂ ಕ್ಷೇತ್ರದ ಸದಸ್ಯೆ ರೂಪಶ್ರೀ, ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

‘ಬೇರೆ ಜಿ.ಪಂ ಕ್ಷೇತ್ರದ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಕಡೆಗಣಿಸಲಾಗಿದೆ’ ಎಂದು ಆರೋಪಿಸಿ ಜಿ.ಪಂ ಅಧ್ಯಕ್ಷೆ ಗೀತಮ್ಮ ಮತ್ತು ಉಪಾಧ್ಯಕ್ಷೆ ಯಶೋದಾ, ಸದಸ್ಯರಾದ ರೂಪಶ್ರೀ, ಅರುಣ್‌ಪ್ರಸಾದ್, ಸಿ.ಎಸ್.ವೆಂಕಟೇಶ್‌ ಧರಣಿ ನಡೆಸಿ, ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು.

ಆಗ ಮಧ್ಯಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ‘ಆಹ್ವಾನ ಪತ್ರಿಕೆಯಲ್ಲಿ ತಪ್ಪಾಗಿದೆ, ಮುಂದೆ ಇಂತಹ ತಪ್ಪು ಆಗದಂತೆ ಎಚ್ಚರ ವಹಿಸಲಾಗುವುದು. ಒಳ್ಳೆಯ ಕಾರ್ಯಕ್ರಮ ಅಡ್ಡಪಡಿಸಬೇಡಿ’ ಎಂದು ಧರಣಿನಿರತರಿಗೆ ಮನವಿ ಮಾಡಿದರು.

‘ಅಭಿವೃದ್ಧಿ ಕಾರ್ಯಕ್ರಮದಲ್ಲಿ ರಾಜಕೀಯ ಬೇಡ, ನೀರು ಕೊಡುವ ಸದುದ್ದೇಶದ ಈ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರೆ ರೈತ ವಿರೋಧಿಯಾಗುತ್ತೀರಿ. ಯಾವುದೇ ಭಿನ್ನಾಭಿಪ್ರಾಯವಿದ್ದರೆ ಕಾರ್ಯಕ್ರಮ ಮುಗಿದ ನಂತರ ಮಾತನಾಡೋಣ’ ಎಂದು ಮನವೊಲಿಸುವ ಪ್ರಯತ್ನ ಮಾಡಿದರು.

ಅಡ್ಡಿಪಡಿಸಬೇಡಿ: ಸಂಸದ ಕೆ.ಎಚ್.ಮುನಿಯಪ್ಪ ಧರಣಿನಿರತರ ಬಳಿ ತೆರಳಿ, ‘ಇದೊಂದು ಪವಿತ್ರ ಕಾರ್ಯಕ್ರಮ. ಈ ತಪ್ಪು ಅಧಿಕಾರಿಗಳಿಂದ ಆಗಿದೆಯೇ ಹೊರತು ಜಿಲ್ಲಾಡಳಿತದಿಂದಲ್ಲ. 3 ದಶಕದ ಇತಿಹಾಸದಲ್ಲಿ ಜಿಲ್ಲೆಯ ಜನ ನೀರು ನೋಡಿಲ್ಲ. ಎಲ್ಲೆಡೆ ಬರ ಪರಿಸ್ಥಿತಿ ಇದೆ. ಇಂತಹ ಕಾರ್ಯಕ್ರಮಕ್ಕೆ ಅಡ್ಡಿಪಡಿಸಬೇಡಿ’ ಎಂದು ಕೋರಿದರು.

ಇದಕ್ಕೆ ಸ್ಪಂದಿಸಿದ ಜಿ.ಪಂ ಸದಸ್ಯ ಸಿ.ಎಸ್.ವೆಂಕಟೇಶ್, ‘ನಿಮ್ಮ ಮಾತಿಗೆ ಬೆಲೆ ಕೊಡುತ್ತೇವೆ. ನಾವು ವೇದಿಕೆಗೆ ಬರುವುದಿಲ್ಲ. ಹೊರ ಹೋಗಿ ಪ್ರತಿಭಟನೆ ಮುಂದುವರಿಸುತ್ತೇವೆ’ ಎಂದು ಹೇಳಿ ಕಾರ್ಯಕ್ರಮದ ಸ್ಥಳದಿಂದ ನಿರ್ಗಮಿಸಲು ಮುಂದಾದರು.

ಆಗ ಮುನಿಯಪ್ಪ ಅವರೇ ಧರಣಿನಿರತರ ಕೈಹಿಡಿದು ವೇದಿಕೆಗೆ ಕರೆದುಕೊಂಡು ಬಂದರು. ಬಳಿಕ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು