ವಕೀಲೆ ಆತ್ಮಹತ್ಯೆ; ಕಾರ್ಪೊರೇಟರ್ ವಿರುದ್ಧ ಎಫ್‌ಐಆರ್

7

ವಕೀಲೆ ಆತ್ಮಹತ್ಯೆ; ಕಾರ್ಪೊರೇಟರ್ ವಿರುದ್ಧ ಎಫ್‌ಐಆರ್

Published:
Updated:

ಬೆಂಗಳೂರು: ಮಹದೇವಪುರದ ಉದಯನಗರದಲ್ಲಿ ಸೋಮವಾರ ರಾತ್ರಿ ಧರಣಿ (27) ಎಂಬ ವಕೀಲೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳೀಯ ಕಾರ್ಪೊರೇಟರ್ ಸುರೇಶ್ ಸೇರಿದಂತೆ ಏಳು ಮಂದಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

‘ಕುಡಿಯುವ ನೀರಿಗಾಗಿ ಹಾಗೂ ರಸ್ತೆಗೆ ಜಾಗ ಬಿಡುವ ವಿಚಾರಕ್ಕೆ ಇತ್ತೀಚೆಗೆ ಸ್ಥಳೀಯರೊಂದಿಗೆ ಜಗಳವಾಗಿತ್ತು. ಈ ಸಂಬಂಧ ಮಗಳು ಮಹದೇವಪುರ ಠಾಣೆಗೆ ದೂರು ಕೊಟ್ಟಿದ್ದಳು. ಆದರೆ, ಪೊಲೀಸರು ಸರಿಯಾಗಿ ತನಿಖೆ ನಡೆಸಿರಲಿಲ್ಲ. ಈ ವಿವಾದದಲ್ಲಿ ಮಧ್ಯಪ್ರವೇಶ ಮಾಡಿದ್ದ ಎ.ನಾರಾಯಣಪುರ ವಾರ್ಡ್ ಕಾರ್ಪೊರೇಟರ್ ಸುರೇಶ್, ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಸ್ಥಳೀಯರಿಗೆ ಅನುಕೂಲ ಮಾಡಿಕೊಟ್ಟಿದ್ದರು’ ಎಂದು ಧರಣಿ ತಾಯಿ ಆರೋಪಿಸಿದ್ದಾರೆ.

‘ಇದೇ ವಿಚಾರವಾಗಿ ಸೋಮವಾರ ಮಧ್ಯಾಹ್ನ ಕೂಡ ಸ್ಥಳೀಯರೊಂದಿಗೆ ಗಲಾಟೆಯಾಗಿತ್ತು. ಆ ನಂತರ ಮಗಳು ಕೋಣೆಗೆ ತೆರಳಿ ನೇಣಿಗೆ ಶರಣಾಗಿದ್ದಳು. ಆಕೆಯ ಸಾವಿಗೆ ಕಾರ್ಪೊರೇಟರ್‌ ಅವರೇ ನೇರ ಹೊಣೆ’ ಎಂದು ಅವರು ದೂರು ಕೊಟ್ಟಿದ್ದಾರೆ.

‘ವೈಟ್‌ಫೀಲ್ಡ್ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಕಾರ್ಪೊರೇಟರ್ ಶಿರಡಿಗೆ ಹೋಗಿದ್ದು, ಅವರು ನಗರಕ್ಕೆ ಬರುತ್ತಿದ್ದಂತೆಯೇ ವಿಚಾರಣೆಗೆ ಕರೆಯುತ್ತೇವೆ’ ಎಂದು ಪೊಲೀಸರು ಹೇಳಿದರು.

5 ಅಡಿ ಜಾಗಕ್ಕೆ ಗಲಾಟೆ: ಧರಣಿ ಅವರು ಉದಯನಗರದಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಸುತ್ತಿದ್ದರು. ಓಡಾಡುವುದಕ್ಕೆ 5 ಅಡಿ ಜಾಗ ಬಿಡುವಂತೆ ಸ್ಥಳೀಯರು ಕೇಳಿದ್ದರು. ಅದಕ್ಕೆ ಧರಣಿ ಹಾಗೂ ಅವರ ತಾಯಿ ಒಪ್ಪಿರಲಿಲ್ಲ. ಇತ್ತ ಸಂಧಾನಕ್ಕೆ ಬಂದ ಕಾರ್ಪೊರೇಟರ್ ಸಹ ಜಾಗ ಬಿಡುವಂತೆ ಹೇಳಿದ್ದು ತಾಯಿ–ಮಗಳಿಗೆ ಮತ್ತಷ್ಟು ಬೇಸರ ತಂದಿತ್ತು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !