ಮಂಡ್ಯ: ಒಕ್ಕಣೆಗೆ ತಮಿಳುನಾಡು ಯಂತ್ರ, ಕಾರ್ಮಿಕರ ಬಳಕೆ

7
ಕೃಷಿ ಕಾರ್ಯಕ್ಕೆ ಆಳುಗಳು ಸಿಗದೆ ಪರದಾಟ, ಮಷಿನ್‌ಗೆ ಮೊರೆ ಹೋದ ರೈತರು

ಮಂಡ್ಯ: ಒಕ್ಕಣೆಗೆ ತಮಿಳುನಾಡು ಯಂತ್ರ, ಕಾರ್ಮಿಕರ ಬಳಕೆ

Published:
Updated:

ಮಂಡ್ಯ: ಜಿಲ್ಲೆಯ ರೈತರು ಭತ್ತ, ರಾಗಿ ಹಾಗೂ ಇತರ ಧಾನ್ಯಗಳ ಒಕ್ಕಣೆ ಮಾಡುತ್ತಿದ್ದು ಕೃಷಿ ಕಾರ್ಮಿಕರು ಸಿಗದೆ ಪರದಾಡುತ್ತಿದ್ದಾರೆ. ಇದೇ ಅವಕಾಶ ಸದುಪಯೋಗ ಮಾಡಿಕೊಂಡಿರುವ ತಮಿಳುನಾಡು ಗುತ್ತಿಗೆದಾರರು ತಮ್ಮ ರಾಜ್ಯದಿಂದಲೇ ಯಂತ್ರ, ಕಾರ್ಮಿಕರನ್ನು ತಂದು ಒಕ್ಕಣೆ ಮಾಡಿಸುತ್ತಿದ್ದಾರೆ.

ಕಣದಲ್ಲಿ ಒಕ್ಕಣೆ ಮಾಡಿ ಸುಗ್ಗಿ ಆಚರಿಸುವ ಪರಂಪರೆ ಇತಿಹಾಸ ಸೇರುತ್ತಿದೆ. ಸುಗ್ಗಿ ಸಂಭ್ರಮ ಮರೆಯಾಗುತ್ತಿದ್ದು ರೈತರು ಯಂತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಯಂತ್ರಗಳು ಕೆಲಸವನ್ನು ಸುಲಭವಾಗಿಸಿವೆ. ಆದರೆ ಒಕ್ಕಣೆ ಯಂತ್ರಗಳ ಬಾಡಿಗೆ ಪಾವತಿಸುವುದು ಸಣ್ಣ ಪುಟ್ಟ ರೈತರಿಗೆ ಕಷ್ಟಸಾಧ್ಯವಾಗಿದೆ. ತಮಿಳುನಾಡಿನಿಂದ ಬಂದ ನೂರಾರು ಯಂತ್ರಗಳು ಜಿಲ್ಲೆಯಾದ್ಯಂತ ಒಕ್ಕಣೆ ಕಾರ್ಯ ಮಾಡುತ್ತಿವೆ. ಕಾರ್ಮಿಕರನ್ನೂ ತಮಿಳುನಾಡಿನಿಂದಲೇ ಕರೆತರಲಾಗಿದೆ. ಯಂತ್ರಗಳ ಮಾಲೀಕರು ಪ್ರತಿ ಗಂಟೆಗೆ ₹ 1,600 ದರ ನಿಗದಿ ಮಾಡಿದ್ದಾರೆ. ಒಂದು ಎಕರೆ ಭತ್ತ ಒಕ್ಕಣೆ ಮಾಡಲು ಎರಡು ಗಂಟೆ ಸಮಯ ಹಿಡಿಯುತ್ತದೆ.

ಹೆಚ್ಚು ಜಮೀನು ಇರುವ ರೈತರಿಗೆ ಯಂತ್ರಗಳ ಬಳಕೆಯಿಂದ ಲಾಭವಾಗಿದೆ. ಆದರೆ ಜಿಲ್ಲೆಯ ಬಹುತೇಕ ರೈತರು ಸಣ್ಣ ಭೂ ಹಿಡುವಳಿ ಹೊಂದಿದ್ದಾರೆ. ಅಂಥವರಿಗೆ ಬಾಡಿಗೆ ಪಾವತಿಸುವುದು ಕಷ್ಟವಾಗಿದೆ.  ‘ತಮಿಳುನಾಡಿನಿಂದ ಬಂದಿರುವ ಗುತ್ತಿಗೆದಾರರು ಒಕ್ಕಣೆ ಕಾರ್ಯಕ್ಕೆ ಹೆಚ್ಚು ದರ ನಿಗದಿ ಮಾಡಿದ್ದಾರೆ. ಸರ್ಕಾರ  ಸಹಾಯಧನದಲ್ಲಿ ಕೃಷಿ ಉಪಕರಣ ಮಾರಾಟ ಮಾಡುತ್ತದೆ. ಆದರೆ ಒಕ್ಕಣೆ ಯಂತ್ರ ನೀಡುತ್ತಿಲ್ಲ. ಸ್ಥಳೀಯ ರೈತರ ಬಳಿ ಈ ಯಂತ್ರ ಇದ್ದರೆ ಕಡಿಮೆ ಬಾಡಿಗೆಗೆ ಒಕ್ಕಣೆ ಮಾಡಿಸಬಹುದಾಗಿತ್ತು. ನಮ್ಮ ರೈತರ ಅವಶ್ಯಕತೆಗಳನ್ನು ತಮಿಳುನಾಡು ಜನರು ಬಹಳ ಚೆನ್ನಾಗಿ ಅರಿತಿದ್ದು ಲಾಭ ಮಾಡಿಕೊಳ್ಳುತ್ತಿದ್ದಾರೆ’ ಎಂದು ರೈತ ಕರೀಗೌಡ ಹೇಳಿದರು.

ಹುಲ್ಲು ಯಂತ್ರಪಾಲು: ಯಂತ್ರದಲ್ಲಿ ಒಕ್ಕಣೆ ಕಾರ್ಯ ಮಾಡುತ್ತಿರುವ ಕಾರಣ ರೈತರಿಗೆ ಗುಣಮಟ್ಟದ ಹುಲ್ಲು ದೊರೆಯುತ್ತಿಲ್ಲ. ಚಕ್ರಗಳಿಗೆ ಸಿಲುಕಿ ಹಲ್ಲು ಪುಡಿಪುಡಿಯಾಗುತ್ತಿದೆ. ದೈಹಿಕವಾಗಿ ಒಕ್ಕಣೆ ಮಾಡಿದರೆ ಉತ್ತಮ ಹುಲ್ಲು ದೊರೆಯುತ್ತದೆ. ಯಂತ್ರದಿಂದ ಬಹುತೇಕ ಹುಲ್ಲು ವ್ಯರ್ಥವಾಗುತ್ತಿದೆ. ಪುಡಿಯಾದ ಹುಲ್ಲನ್ನು ಜಾನುವಾರುಗಳು ತಿನ್ನುತ್ತಿಲ್ಲ.

‘ಕೈಯಿಂದ ಭತ್ತ ಬಡಿಯುತ್ತಿದ್ದಾಗ ಚಿನ್ನದಂತಹ ಹುಲ್ಲು ಸಿಗುತ್ತಿತ್ತು. ಆದರೆ ಈಗ ಬಹುತೇಕ ಎಲ್ಲಾ ಹುಲ್ಲು ವ್ಯರ್ಥವಾಗುತ್ತಿದೆ. ಕೆಲವು ಕಡೆ ಪುಡಿಯಾದ ಹುಲ್ಲಿಗೆ ಬೆಂಕಿ ಇಡುತ್ತಿದ್ದಾರೆ. ಒಂದು ಎಕರೆ ಭತ್ತದ ಹುಲ್ಲಿಗೆ ₹ 8 ಸಾವಿರ ಬೆಲೆ ಇತ್ತು. ಆದರೆ ಯಂತ್ರದಿಂದ ಒಕ್ಕಣೆಯಾದ ಎಕರೆ ಹುಲ್ಲಿಗೆ ಕೇವಲ ₹ 3 ಸಾವಿರ ದರವಿದೆ. ಈಗ ಬಹುತೇಕ ರೈತರು ಜಾನುವಾರುಗಳನ್ನು ಸಾಕಿಲ್ಲ. ಹೀಗಾಗಿ ಹುಲ್ಲು ಬೇಡವಾಗಿದೆ’ ಎಂದು ರೈತ ಮುಖಂಡ ಹೊಳಲು ನಾಗರಾಜ್‌ ಹೇಳಿದರು.

ರಸ್ತೆಯಲ್ಲೇ ಒಕ್ಕಣೆ: ಜಿಲ್ಲೆಯ ವಿವಿಧೆಡೆ ರೈತರು ರಸ್ತೆಯಲ್ಲೇ ಒಕ್ಕಣೆ ಮಾಡುತ್ತಿದ್ದಾರೆ. ರಸ್ತೆ ಮಧ್ಯ ಹುಲ್ಲು ಹಾಕಿರುವ ಕಾರಣ ವಾಹನಗಳ ಸಂಚಾರಕ್ಕೆ ದುಸ್ತರವಾಗಿದೆ. ಕೆಲವೆಡೆ ಬೈಕ್‌ ಚಾಲಕರು ಜಾರಿ ಬಿದ್ದಿದ್ದಾರೆ. ಹುಲ್ಲುನ ಮೇಲೆ ವಾಹನ ಓಡಿಸುವುದು ಬಹಳ ಅಪಾಯವಾಗಿದೆ. ಮಳವಳ್ಳಿ, ಕೆ.ಆರ್‌.ಪೇಟೆ ಭಾಗದಲ್ಲಿ ಹೆಚ್ಚಿನ ರೈತರು ರಸ್ತೆ ಒಕ್ಕಣೆಗೆ ಮೊರೆ ಹೋಗಿದ್ದಾರೆ.

ಗಂಡಾಳು ಬೆಂಗಳೂರಿಗೆ, ಹೆಣ್ಣಾಳು ಗಾರ್ಮೆಂಟ್ಸ್‌ಗೆ!
‘ಜಿಲ್ಲೆಯ ಯುವ ರೈತರು ಕೃಷಿ ಕಾರ್ಯ ತ್ಯಜಿಸಿ ಬೆಂಗಳೂರು ಪಾಲಾಗಿದ್ದಾರೆ. ಪುನಶ್ಚೇತನ ಕಾಣದ ಮೈಷುಗರ್‌, ಮಳೆ ಕೊರತೆ, ಬೆಲೆ ಕುಸಿತ ಮುಂತಾದ ಸಮಸ್ಯೆ ಎದುರಿಸಲಾಗದೇ ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಂದೆ ಇದ್ದ ಮುಯ್ಯಿ ಆಳು (ಪರಸ್ಪರ ಕೃಷಿ ಕೆಲಸ) ಪರಿಕಲ್ಪನೆ ಸತ್ತಿದೆ. ರೈತ ಮಹಿಳೆಯರು ಕೂಡ ಸಿದ್ಧ ಉಡುಪು ಕಾರ್ಖಾನೆಗಳಿಗೆ ಕೆಲಸಕ್ಕೆ ಸೇರಿದ್ದಾರೆ. ಗೆಜ್ಜಲಗೆರೆ ಶಾಹಿ ಗಾರ್ಮೆಂಟ್ಸ್‌ಗೆ ಸಾವಿರಾರು ಮಹಿಳೆಯರು ತೆರಳುತ್ತಾರೆ. ಅಲ್ಲದೆ ಬೆಂಗಳೂರಿನ ಗಾರ್ಮೆಂಟ್ಸ್‌ ಕಾರ್ಖಾನೆಗಳಿಗೂ ಹೋಗಿ ಬರುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಕೃಷಿ ಕೆಲಸದಾಳು ಸಿಗುತ್ತಿಲ್ಲ’ ಎಂದು ರೈತ ಮುಖಂಡ ಕೋಣನಹಳ್ಳಿ ಜವರೇಗೌಡ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !