ಇಸ್ರೇಲ್ ಮಾದರಿ ಕೃಷಿಗೆ ಅನುದಾನ ಬಿಡುಗಡೆ

7
ಬರ ಪರಿಸ್ಥಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಸಚಿವ ಶಿವಶಂಕರರೆಡ್ಡಿ ಹೇಳಿಕೆ

ಇಸ್ರೇಲ್ ಮಾದರಿ ಕೃಷಿಗೆ ಅನುದಾನ ಬಿಡುಗಡೆ

Published:
Updated:
Prajavani

ಕೋಲಾರ: ‘ಜಿಲ್ಲೆಯಲ್ಲಿ ಇಸ್ರೇಲ್ ಮಾದರಿ ಕೃಷಿ ಚಟುವಟಿಕೆ ನಡೆಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ’ ಎಂದು ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ ಹಾಗೂ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ಜಿಲ್ಲೆಯ ಬರ ಪರಿಸ್ಥಿತಿ ಸಂಬಂಧ ಇಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯ 5 ಸಾವಿರ ಎಕರೆಯಲ್ಲಿ ಇಸ್ರೇಲ್ ಮಾದರಿ ಕೃಷಿ ನಡೆಸಲು ಗುರಿಯಿದೆ. ಬರ ಪರಿಹಾರಕ್ಕೆ ಜಿಲ್ಲೆಗೆ ₹ 57.45 ಕೋಟಿ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದಲ್ಲಿ ಅನುದಾನದ ಕೊರತೆಯಿಲ್ಲ’ ಎಂದರು.

‘ಜಿಲ್ಲೆಯಲ್ಲಿ ಸದ್ಯಕ್ಕೆ ಮೇವಿನ ಸಮಸ್ಯೆಯಿಲ್ಲ. 14 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನಿದೆ. 6,640 ರೈತರಿಗೆ ಮಿನಿ ಕಿಟ್ ವಿತರಿಸಿ, ಮೇವು ಬೆಳೆಸಲಾಗಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಕಪಕ್ಕದ ರಾಜ್ಯಗಳಲ್ಲಿ ಮೇವು ಖರೀದಿಗೆ ಟೆಂಡರ್ ನಡೆಸಲಾಗಿದ್ದು, ಅಗತ್ಯವಿದ್ದರೆ ಪಡೆದುಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿ ಸದಸ್ಯರು, ‘ಬೇರೆ ರಾಜ್ಯಗಳಲ್ಲಿ ಮೇವು ಖರೀದಿಸಿ ಸಾಗಾಣೆ ಮಾಡುವ ವೆಚ್ಚವನ್ನು ಇಲ್ಲಿನ ರೈತರಿಗೆ ನೀಡಿ ಮೇವು ಬೆಳೆಸುವುದು ಉತ್ತಮ. ಇದಕ್ಕೆ ಆದ್ಯತೆ ಕೊಡಿ’ ಎಂದು ಸಲಹೆ ನೀಡಿದರು.

‘ಒಕ್ಕೂಟದಿಂದ 1 ಎಕರೆಗೆ ಮೇವು ಕಿಟ್ ಮತ್ತು ಮೇವು ಬೆಳೆಯಲು ₹ 3 ಸಾವಿರ ನೀಡಲಾಗಿತ್ತು. ಒಕ್ಕೂಟವು ಈಗ ಆರ್ಥಿಕ ಮುಗ್ಗಟ್ಟಿನಲ್ಲಿರುವುದರಿಂದ ಮೇವು ಕಿಟ್‌ ನೀಡಿಲ್ಲ’ ಎಂದು ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಸ್ವಾಮಿ ಮಾಹಿತಿ ನೀಡಿದರು.

ಜಾಲಿ ತೆರವುಗೊಳಿಸಿ: ‘2 ಜಿಲ್ಲೆಗಳಲ್ಲಿರುವ 3 ಸಾವಿರಕ್ಕೂ ಹೆಚ್ಚಿನ ಕೆರೆಗಳಲ್ಲಿ ಬೆಳೆದಿರುವ ಜಾಲಿ ಮರ ತೆರವುಗೊಳಿಸಬೇಕು. ಹೂಳು ತೆಗೆದು ಅಚ್ಚುಕಟ್ಟು ಮತ್ತು ತೂಬುಗಳನ್ನು ಭದ್ರಪಡಿಸಿದರೆ ನೀರು ಸಂಗ್ರಹಣೆ ಸಾಮರ್ಥ್ಯ ಹೆಚ್ಚುತ್ತದೆ. 5 ವರ್ಷದಲ್ಲಿ ಅವಳಿ ಜಿಲ್ಲೆಗಳು ಮಲೆನಾಡಿನಂತಾಗುತ್ತವೆ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟರು.

‘ಹೂಳು ತೆಗೆದ ನಂತರ ಸಾಧಾರಣ ಮಳೆಯಾದರೂ ಕೆರೆಗಳಲ್ಲಿ ಸದಾ ನೀರು ಇರುತ್ತದೆ. ಇದಕ್ಕೆ ಅನುದಾನ ನೀಡಬೇಕು. ರೈತರ ಬೆಳೆಗಳಿಗೆ ಮಾರುಕಟ್ಟೆ ಮತ್ತು ಶೈತ್ಯಾಗಾರದ ವ್ಯವಸ್ಥೆ ಮಾಡಬೇಕು. ನೀರಿನ ಸಮಸ್ಯೆ ಎದುರಾಗಲಿರುವುದರಿಂದ 5 ತಿಂಗಳಗೆ ಕ್ರಿಯಾಯೋಜನೆ ರೂಪಿಸಬೇಕು. ಪ್ರತಿ ತಾಲ್ಲೂಕಿನಲ್ಲೂ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಸಲಹೆ ನೀಡಿದರು.

ಅಧಿಕಾರಿಗಳ ವಿರುದ್ಧ ಕಿಡಿ: ‘ಅಧಿಕಾರಿಗಳು ಅನುಮತಿ ನೀಡದ ಕಾರಣ 1 ಸಾವಿರ ಅಡಿಗಿಂತ ಹೆಚ್ಚಿನ ಆಳಕ್ಕೆ ಕೊಳವೆ ಬಾವಿ ಕೊರೆಯುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರು ಬಂದಿವೆ. ಜಿಲ್ಲೆಯಲ್ಲಿ 1 ಸಾವಿರ ಅಡಿಗೆ ನೀರು ಸಿಗುತ್ತದೆಯೇ?’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ನೀರಿನ ಸಮಸ್ಯೆ: ‘ಸದ್ಯ 10 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು, 3 ಗ್ರಾಮಗಳಿಗೆ ಟ್ಯಾಂಕರ್ ಮತ್ತು 7 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂದೆ 151 ಗ್ರಾಮ ಮತ್ತು 80 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

‘ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗಾಗಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ಗ್ರಾಮೀಣ ಭಾಗದಿಂದ ಈವರೆಗೆ 113 ದೂರು ಬಂದಿದ್ದು, 73 ನಿವಾರಣೆಯಾಗಿವೆ. ನಗರ ಪ್ರದೇಶದಲ್ಲಿ 222 ದೂರು ಬಂದಿದ್ದು, 199 ನಿವಾರಣೆಯಾಗಿವೆ. ಬೆಳೆ ಪರಿಹಾರಕ್ಕೆ ₹ 26.75 ಕೋಟಿ, ಮೇವು ಖರೀದಿಗೆ ₹ 21 ಕೋಟಿ, ಕುಡಿಯುವ ನೀರಿನ ಸೌಲಭ್ಯಕ್ಕೆ ಗ್ರಾಮೀಣ ಮತ್ತು ನಗರ ಪ್ರದೇಶಕ್ಕೆ ತಲಾ 5 ಕೋಟಿ ಅಗತ್ಯವಿದೆ’ ಎಂದರು.

‘ನರೇಗಾ ಅನುಷ್ಠಾನದಲ್ಲಿ ಜಿಲ್ಲೆಯು ಶೇ 108ರಷ್ಟು ಪ್ರಗತಿ ಸಾಧಿಸಿ, ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೇರಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಹೇಳಿದರು.

ಸಂವಾದ: ಸಭೆ ಬಳಿಕ ಸಮಿತಿ ಸದಸ್ಯರೊಂದಿಗೆ ನಡೆದ ಸಂವಾದದಲ್ಲಿ ರೈತ ಮುಖಂಡರು, ‘ಬರಗಾಲವು ಘೋಷಣೆಗೆ ಸೀಮಿತವಾಗದೆ ರೈತರಿಗೆ ಅನುಕೂಲವಾಗಬೇಕು. ಎಪಿಎಂಸಿಯಲ್ಲಿ ಕಮಿಷನ್‌ ದಂಧೆಗೆ ಕಡಿವಾಣ ಹಾಕಬೇಕು. ಹೂವಿನ ಮಾರುಕಟ್ಟೆ ತೆರೆಯಬೇಕು. ರೇಷ್ಮೆಗೂಡಿಗೆ ನೀಡುವ ರಕ್ಷಣಾತ್ಮಕ ಬೆಲೆ ಎಲ್ಲರಿಗೂ ಸಿಗಬೇಕು’ ಎಂದು ಮನವಿ ಮಾಡಿದರು.

ಸಮಿತಿ ಸದಸ್ಯರು ಹಾಗೂ ಸಚಿವರಾದ ಡಿ.ಸಿ.ತಮ್ಮಣ್ಣ, ವೆಂಕಟರಮಣಪ್ಪ, ಎಸ್‌.ಆರ್‌.ಶ್ರೀನಿವಾಸ್‌, ಜಿ.ಪಂ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋದಾ, ಕೃಷಿ ಇಲಾಖೆ ಕಾರ್ಯದರ್ಶಿ ಮಹೇಶ್ವರರಾವ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !