ವಿ.ವಿಗಳು ನಕಾರಾತ್ಮಕ ಚಿಂತನೆ ಮೂಡಿಸುತ್ತಿವೆ

7
ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಕಳವಳ

ವಿ.ವಿಗಳು ನಕಾರಾತ್ಮಕ ಚಿಂತನೆ ಮೂಡಿಸುತ್ತಿವೆ

Published:
Updated:
Prajavani

ಕೋಲಾರ: ‘ದೇಶದ ವಿಶ್ವವಿದ್ಯಾಲಯಗಳು ಯುವಕರನ್ನು ಜ್ಞಾನವಂತರನ್ನಾಗಿ ರೂಪಿಸುವ ಬದಲು ಯೋಗ್ಯತಾ ಪತ್ರ ನೀಡುವ ಕೇಂದ್ರಗಳಾಗಿವೆ’ ಎಂದು ತುಮಕೂರಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಕಳವಳ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಡಿವಿಜಿ ಪ್ರತಿಷ್ಠಾನವು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಶಿಕ್ಷಣ ಎಂದರೆ ವ್ಯಕ್ತಿತ್ವ ವಿಕಸನ. ಆದರೆ, ವಿ.ವಿಗಳು ಯುವಕರನ್ನು ಕ್ರಿಯಾಶೀಲ ಹಾಗೂ ಆದರ್ಶ ವ್ಯಕ್ತಿಗಳನ್ನಾಗಿಸುವ ಬದಲು ನಕಾರಾತ್ಮಕ ಚಿಂತನೆಯತ್ತ ಕೊಂಡೊಯ್ಯುತ್ತಿವೆ’ ಎಂದು ವಿಷಾದಿಸಿದರು.

‘ಸ್ವಾಮಿ ವಿವೇಕಾನಂದರ ಆದರ್ಶ ಪಾಲನೆಯು ಯುವಕ ಯುವತಿಯರಲ್ಲಿ ಸಕಾರಾತ್ಮಕ ಚಿಂತನೆ ಬಲಗೊಳಿಸುತ್ತದೆ. ಎಲ್ಲವೂ ಬೇಗನೆ ಸಿಗಬೇಕೆಂಬ ದುರಾಸೆ ಬಿಟ್ಟು ಸ್ವಾಭಿಮಾನ ಮತ್ತು ಸ್ವಾವಲಂಬಿಯಾಗಿ ಬದುಕಿದರೆ ಯಶಸ್ಸು ತಾನಾಗಿಯೇ ಲಭಿಸುತ್ತದೆ’ ಎಂದು ಕಿವಿಮಾತು ಹೇಳಿದರು.

‘ವಿವೇಕಾನಂದರು ಸಹಾನುಭೂತಿಯ ಬದುಕು ಬೇಡವೆಂದು ಹೇಳಿದ್ದಾರೆ. ಜತೆಗೆ ಸ್ವಾವಲಂಬನೆಯ ಬಾಳು ಸುಂದರವೆಂಬ ಸಂದೇಶ ಸಾರಿದ್ದಾರೆ. ಯುವಕರು ಚಾರಿತ್ರ್ಯೆಗೆ ಧಕ್ಕೆ ಬಾರದಂತೆ ಒಳ್ಳೆಯ ಗುಣ ಮತ್ತು ಆದರ್ಶ ರೂಢಿಸಿಕೊಂಡರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ವಿಶ್ವಕ್ಕೆ ಆದರ್ಶಪ್ರಾಯ: ‘ಜೇನು ಹುಳುಗಳು ತಿಪ್ಪೆ ಮೇಲೆ ಕೂರುವುದಿಲ್ಲ. ನೊಣಗಳು ತಿಪ್ಪೆ ಮೇಲೆ ಕೂತು ಸಮಾಜವನ್ನು ರೋಗಗ್ರಸ್ಥವಾಗಿಸುತ್ತವೆ. ಯುವಕರು ಸಮಾಜ ಕಲುಷಿತಗೊಳಿಸುವ ನೊಣಗಳಾಗಬೇಕೆ ಅಥವಾ ಜೇನು ಹುಳುಗಳಾಗಬೇಕೆ ಎಂಬುದನ್ನು ಅರಿಯಲು ವಿವೇಕಾನಂದರ ಮಾರ್ಗ ಅನುಸರಿಸಬೇಕು’ ಎಂದು ಸಲಹೆ ನೀಡಿದರು.

‘ವಿಶ್ವೇಶ್ವರಯ್ಯ ಅವರು ವಿವೇಕಾನಂದರ ಜೀವನ ಚರಿತ್ರೆ ಅಧ್ಯಯನ ಮಾಡಿ ಸಕಾರಾತ್ಮಕ ಗುಣ ರೂಢಿಸಿಕೊಂಡಿದ್ದರಿಂದ ಎಂಜಿನಿಯರ್ ಆಗಿ ಇಡೀ ವಿಶ್ವಕ್ಕೆ ಆದರ್ಶಪ್ರಾಯರಾದರು. ಆದರೆ, ದಂತಚೋರ ವೀರಪ್ಪನ್‌ನಲ್ಲಿ ನಕಾರಾತ್ಮಕ ಧೋರಣೆ ಇದ್ದುದರಿಂದ ಸಮಾಜಘಾತುಕ ವ್ಯಕ್ತಿಯಾಗಿ ಬೆಳೆದ’ ಎಂದರು.

ಅಧ್ಯಯನ ಮಾಡಿ: ‘ಯುವಕರು ವಿವೇಕಾನಂದರಂತೆ ಕೀರ್ತಿ ಗಳಿಸಲು ಇಚ್ಛಿಸುವುದಾದರೆ ಮೊದಲು ಅವರ ಜೀವನಚರಿತ್ರೆ ಅಧ್ಯಯನ ಮಾಡಬೇಕು. ವಿವೇಕಾನಂದರು ಜೀವನದುದ್ದಕ್ಕೂ ಚಾಚು ತಪ್ಪದೆ ಆದರ್ಶ ಪಾಲಿಸಿದರು. ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ 2 ಮುಖಗಳೆಂದು ಅರ್ಥ ಮಾಡಿಕೊಂಡು ವಿಶ್ವ ಪರ್ಯಟನೆ ಮಾಡಿ ಸಾಧಿಸಿದ್ದರಿಂದ ಇತಿಹಾಸ ಸೃಷ್ಟಿಸಲು ಸಾಧ್ಯವಾಯಿತು’ ಎಂದು ವಿವರಿಸಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಬಿಸಪ್ಪಗೌಡ, ಪದಾಧಿಕಾರಿಗಳಾದ ಜನಾರ್ದನ್‌, ವೇಣುಗೋಪಾಲ್, ಡಿವಿಜಿ ಪ್ರತಿಷ್ಠಾನದ ಸದಸ್ಯರಾದ ಕೆ.ಪ್ರಹ್ಲಾದರಾವ್, ವಾಣಿ, ಜಯಶ್ರೀ, ಚಂದ್ರಶೇಖರ್, ಚಿನ್ಮಯ ವಿದ್ಯಾ ಸಂಸ್ಥೆ ಅಧ್ಯಕ್ಷ ಚಂದ್ರಪ್ರಕಾಶ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !