ಗುರುವಾರ , ಫೆಬ್ರವರಿ 25, 2021
24 °C

ಜಾತಿ ಮತ್ತು ಆತ್ಮವಂಚನೆ

ದೀಪಾ ಹಿರೇಗುತ್ತಿ Updated:

ಅಕ್ಷರ ಗಾತ್ರ : | |

Prajavani

ತೆಲಂಗಾಣದ ಮೆಹಬೂಬ್‍ನಗರ ಜಿಲ್ಲೆಯ ಗ್ರಾಮವೊಂದರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ನೆಲದ ಮೇಲೆ, ಬೇರೆ ಸದಸ್ಯರು ಕುರ್ಚಿಯ ಮೇಲೆ ಕೂತ ಚಿತ್ರ ಇತ್ತೀಚೆಗೆ ವೈರಲ್ ಆಗಿತ್ತು. ಕಾರಣ ಎಲ್ಲರಿಗೂ ಗೊತ್ತಿರುವುದೇ. ಅಧ್ಯಕ್ಷರು ದಲಿತ ಸಮುದಾಯಕ್ಕೆ ಸೇರಿದವರು. ಮೇಲ್ಜಾತಿ ಸದಸ್ಯರ ಎದುರು ಕುರ್ಚಿಯ ಮೇಲೆ ಕೂರುವುದುಂಟೇ? ಆದರೆ, ಫೇಸ್‌ಬುಕ್‍ನಲ್ಲಿ ಓಡಾಡುತ್ತಿದ್ದ ಈ ಚಿತ್ರದ ನೈಜತೆ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದರು. ಕೆಲವರಂತೂ, ಖಾತರಿ ಮಾಡಿಕೊಳ್ಳದೇ ಪೋಸ್ಟ್ ಮಾಡಬೇಡಿ ಎಂದು ಅದನ್ನು ಶೇರ್ ಮಾಡಿದವರಿಗೆ ಉಚಿತ ಸಲಹೆಯನ್ನೂ ನೀಡಿದರು.

ಹುಟ್ಟಿನಿಂದ ಸಾವಿನವರೆಗೆ ಜಾತಿ ವ್ಯವಸ್ಥೆ ಆಚರಿಸುತ್ತಿರುವ ನಾವು, ಇಂತಹ ಘಟನೆಗಳ ಬಗ್ಗೆ ವ್ಯಕ್ತಪಡಿಸುವ ಅಚ್ಚರಿ ನಮ್ಮೊಳಗಿನ ದ್ವಂದ್ವಗಳಿಗೆ ಕನ್ನಡಿ ಹಿಡಿದಂತಿದೆ. ಕೆಳಜಾತಿಯವರಿಗೆ ಹಿತ್ತಲ ಕಡೆಯೋ, ಜಗುಲಿ ಮೇಲೋ, ಬೇರೆಯದೇ ಪಾತ್ರೆಯಲ್ಲೋ, ಬಾಳೆ ಎಲೆಯಲ್ಲೋ ಊಟ– ತಿಂಡಿ ಕೊಡುವುದನ್ನು, ಕೆಳಜಾತಿಯವರನ್ನು ಯಜಮಾನರ ಚೋಟುದ್ದದ ಹುಡುಗ ಸಹ ಏಕವಚನದಲ್ಲಿ ಮಾತನಾಡಿಸುವುದನ್ನು, ‘ನಮ್ಮ ಮಕ್ಕಳು ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರನ್ನು ಮಾತ್ರ ಲವ್‌ ಮಾಡದಿರಲಿ’ ಎಂದು ಹೈ ಪ್ರೊಫೈಲ್ ವಿದ್ಯಾವಂತರು ಸಹ ಹೇಳುವುದನ್ನು ಕೇಳುತ್ತಲೇ ಇರುತ್ತೇವೆ. ಹೀಗೆ, ದೇಶದಲ್ಲಿ ಆಳವಾಗಿ ಬೇರು ಬಿಟ್ಟಿರುವ ಜಾತಿ ವ್ಯವಸ್ಥೆ ಬಗ್ಗೆ ಜಾಣಕುರುಡುತನ ತೋರಿಸುವುದು ನಮ್ಮ ಹಿಪೋಕ್ರಸಿಯ ದೊಡ್ಡ ಉದಾಹರಣೆ.

ಜಾತಿ ಗೀತಿ ಎಲ್ಲ ಹಿಂದೆ ಇತ್ತು, ಈಗ ಇಲ್ಲ ಎನ್ನುವ ಅಭಿಪ್ರಾಯ ಬಹಳ ಮಂದಿಯದು. ಒಲೆ ಬದಲಾದರೂ ಬೆಂಕಿ ಬದಲಾಗದಂತೆ ಜಾತಿ ಸರ್ವವ್ಯಾಪಿಯಾಗಿದೆ. ಪತ್ರಕರ್ತ ಪಿ.ಸಾಯಿನಾಥ್ ದೇಶದಾದ್ಯಂತ ಮಾಡಿದ ಅಧ್ಯಯನದಲ್ಲಿ, ದಲಿತರಿಗಾಗುತ್ತಿರುವ ತಾರತಮ್ಯದ ವಿಧಗಳನ್ನು ಪಟ್ಟಿ ಮಾಡುತ್ತಾರೆ. ಹರಿಯಾಣದಂತಹ ರಾಜ್ಯಗಳಲ್ಲಿ ಬಹಳಷ್ಟು ದಲಿತ ಸರಪಂಚರಿಗೆ ಕುರ್ಚಿಯೇ ಇರುವುದಿಲ್ಲ! ಉತ್ತರ
ಪ್ರದೇಶದ ಬುಂದೇಲಖಂಡದ ಪಂಚಾಯಿತಿಗಳಲ್ಲಿ ಪ್ರಮುಖ ತೀರ್ಮಾನ ತೆಗೆದುಕೊಳ್ಳಬೇಕಾದರೆ ದಲಿತ ಸದಸ್ಯರನ್ನು ಬೆದರಿಸಿ ಊರ ಹೊರಗಿನ ದೇವಸ್ಥಾನಗಳಿಗೆ ಯಾತ್ರೆ ಕಳುಹಿಸಲಾಗುತ್ತದೆ! ದೆಹಲಿಯ ಪ್ರಮುಖ ವೈದ್ಯಕೀಯ ಕಾಲೇಜು ಹಾಸ್ಟೆಲ್‍ನ ಒಂದು ಅಂತಸ್ತು ಕೇವಲ ದಲಿತ ವಿದ್ಯಾರ್ಥಿಗಳಿಗೆ ಮೀಸಲು! 

ಉತ್ತರ ಭಾರತದ ಹಲವೆಡೆ ಶಾಲೆಗಳಲ್ಲಿ ಸ್ವಚ್ಛತೆ, ಶೌಚಾಲಯ ಶುಚಿಗೊಳಿಸುವ ಕೆಲಸ ದಲಿತ ಮಕ್ಕಳದೇ! ‘ನಮ್ಮ ಮಗ ನಮ್ಮಂತೆ ಸಂಡಾಸು ತೊಳೆಯುವುದು ಬೇಡ ಎಂದು ಶಾಲೆಗೆ ಕಳಿಸಿದರೆ, ಅಲ್ಲೂ ಅದೇ ಕೆಲಸ’ ಎಂದು ಅಲವತ್ತುಕೊಳ್ಳುತ್ತಿರುವುದು ಒಬ್ಬ ತಾಯಿ ಮಾತ್ರವಲ್ಲ! ಇಂದಿಗೂ ಬಹಳಷ್ಟು ಹಳ್ಳಿಗಳಲ್ಲಿ ಮೇಲ್ವರ್ಗದವರ ಕೇರಿಗಳನ್ನು ದಾಟುವಾಗ ದಲಿತರು ಚಪ್ಪಲಿ ತೆಗೆದಿಡಬೇಕು, ದಲಿತ ಪೋಸ್ಟ್ ಮ್ಯಾನ್ ಸೈಕಲ್ ನಿಲ್ಲಿಸಿ ನಡೆದುಕೊಂಡೇ ಹೋಗಬೇಕು. ದಲಿತರು ಒಳ್ಳೆಯ ಬಟ್ಟೆ ಹಾಕಿಕೊಂಡರೆ, ಮೀಸೆ ಹುರಿಗೊಳಿಸಿ
ಕೊಂಡರೆ, ಮದುವೆಗಳಲ್ಲಿ ಕುದುರೆ ಮೇಲೆ ಮೆರವಣಿಗೆ ಬಂದರೆ, ನರ್ತಿಸಿದರೆ ಸಹಿಸದ ಮನಸ್ಥಿತಿ ಜೀವಂತವಿದೆ. ಮೇಲ್ಜಾತಿಯವರನ್ನು ಅನುಕರಿಸುವ ಈ ದುಸ್ಸಾಹಸಕ್ಕೆ ದಲಿತರು ತಮ್ಮ ಪ್ರಾಣಗಳನ್ನೇ ಕಳೆದುಕೊಳ್ಳಬೇಕಾಗುತ್ತದೆ. ಎದೆಗಂದಾಯ ವಿರೋಧಿಸಿ ತನ್ನ ಸ್ತನಗಳನ್ನೇ ಕೊಯ್ದು ಕೊಟ್ಟು ಪ್ರಾಣ ನೀಗಿದ ನಂಗೆಲಿಯ ತ್ಯಾಗಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ.

ಜಾತಿಯ ಕಾರಣಕ್ಕೆ ಮನೆ ಕೊಡದೇ ಇರುವುದು ನಗರಗಳಲ್ಲಿ ರಾಜಾರೋಷವಾಗಿ ನಡೆದಿದೆ. ಕಚೇರಿಗಳಲ್ಲಿ ಪರೋಕ್ಷವಾಗಿ ಅವಮಾನಿಸುವುದು ನಡೆದೇ ಇದೆ. ಮೀಸಲಾತಿಯಿಂದ ಎಲ್ಲ ಕ್ಷೇತ್ರಗಳಲ್ಲಿ ಗುಣಮಟ್ಟವೇ ಹಾಳಾಗಿ ಹೋಗಿದೆ ಎಂಬ ಮಾತುಗಳನ್ನು ದಲಿತ ಸಹೋದ್ಯೋಗಿಗಳೆದುರೇ ಎಗ್ಗಿಲ್ಲದೇ ಉದುರಿಸುವ ಜನರಿದ್ದಾರೆ. ಬಹುಸಂಖ್ಯೆಯ ಈ ಮನಸ್ಥಿತಿಯ ಉದ್ಯೋಗಿಗಳೆದುರು ವಾದ ಮಾಡಲಾಗದೇ, ಅನುಭವಿಸಲಾರದೇ ಒದ್ದಾಡುವವರ ಸಂಖ್ಯೆ ದೊಡ್ಡದಿದೆ.

ಕಾಲೇಜುಗಳ ಪ್ರವೇಶ ಪಡೆಯುವಾಗಲೂ ಇದನ್ನು ಗಮನಿಸಬಹುದು. ಮೇಲ್ವರ್ಗದವರು ವಿಜ್ಞಾನ ವಿಭಾಗದಲ್ಲಿ ಹೆಚ್ಚಿದ್ದರೆ, ದಲಿತ ಮಕ್ಕಳ ಸಂಖ್ಯೆ ಕಲಾ ವಿಭಾಗದಲ್ಲಿ ಜಾಸ್ತಿ. ದಲಿತ ಮಕ್ಕಳು ವಿಜ್ಞಾನ ವಿಭಾಗ ಸೇರಿ ಕಡಿಮೆ ಅಂಕ ತೆಗೆದಾಗ, ‘ಇವರೆಲ್ಲಾ ಯಾಕೆ ಇಲ್ಲಿ ಸೇರ್ತಾರೋ, ಆರ್ಟ್ಸ್ ಅಥವಾ ಐಟಿಐಗೋ ಸೇರಬಹುದಪ್ಪಾ’ ಎಂದ ಉಪನ್ಯಾಸಕರ ಬಗ್ಗೆ ಸ್ನೇಹಿತರೊಬ್ಬರು ಹೇಳುತ್ತಿದ್ದರು. ಇನ್ನು ಮೀಸಲಾತಿಯ ಉದ್ದೇಶವನ್ನೇ ಅರ್ಥ ಮಾಡಿಕೊಳ್ಳದೆ ಅದನ್ನು ವಿರೋಧಿಸುವವರ ಸಂಖ್ಯೆ ಹೆಚ್ಚುತ್ತಿದೆ. ಮೀಸಲಾತಿ ಪಡೆಯುತ್ತಿರುವವರು ದಲಿತರಷ್ಟೇ ಎಂದು ಸ್ವತಃ ಮೀಸಲಾತಿಯ ಫಲಾನುಭವಿಗಳಾದ ಹಿಂದುಳಿದ ವರ್ಗದವರೂ ತಿಳಿದಿರುವುದು ಮತ್ತೊಂದು ದುರಂತ. ಇನ್ನು ಅಲ್ಲಿ ಇಲ್ಲಿ ನಡೆಯುತ್ತಿದ್ದ ಮರ್ಯಾದೆಗೇಡು ಹತ್ಯೆಗಳು ಮನೆಬಾಗಿಲಿಗೇ ಬಂದಿವೆ. ಹೀಗೆ ಹೆಜ್ಜೆಹೆಜ್ಜೆಗೂ ಜಾತಿಯ ತಾರತಮ್ಯ ಕಣ್ಣಿಗೆ ರಾಚುವಂತಿದೆ. ಜಾತಿ ನಿರ್ಮೂಲನೆ ಅಷ್ಟು ಸುಲಭವಲ್ಲ. ಆದರೆ ಜಾತ್ಯತೀತರಾಗುವುದು ಸಾಧ್ಯ. ಕೊನೇಪಕ್ಷ ಜಾತಿಯೇ ಇಲ್ಲ ಎಂದು ನಮ್ಮನ್ನು ನಾವೇ ವಂಚಿಸಿಕೊಳ್ಳುವುದಿದೆಯಲ್ಲ, ಅದನ್ನು ಬಿಟ್ಟು ಬಿಡಬೇಕಾಗಿರುವುದು ಇಂದಿನ ತುರ್ತು ಕೂಡ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.