ಭಾನುವಾರ, ಮಾರ್ಚ್ 26, 2023
31 °C
ಅಲೋಶಿಯಸ್‌ ಕಾಲೇಜು ವಾರ್ಷಿಕೋತ್ಸವದಲ್ಲಿ ಹುಲಿ ತಜ್ಞ ಡಾ.ಉಲ್ಲಾಸ ಕಾರಂತ

ವನ್ಯಜೀವಿ ಸಂರಕ್ಷಣೆ ಮನುಷ್ಯ ಕೇಂದ್ರಿತವಾಗಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ವನ್ಯಜೀವಿ ಸಂರಕ್ಷಣೆ ಯಾವಾಗಲೂ ಮನುಷ್ಯಕೇಂದ್ರಿತ ಆಗಿರಬೇಕು. ಈ ಪ್ರಕ್ರಿಯೆಯಲ್ಲಿ ನಾವು ಮನುಷ್ಯರ ಜೀವವನ್ನು ಲೆಕ್ಕಿಸದೇ ಇದ್ದರೆ ಅದೊಂದು ದೋಷಪೂರಿತ ಅಥವಾ ತಪ್ಪು ಗ್ರಹಿಕೆಯ ಕೆಲಸವಾಗುತ್ತದೆ’ ಎಂದು ನ್ಯೂಯಾರ್ಕ್‌ನ ವೈಲ್ಡ್‌ಲೈಫ್‌ ಕನ್ಸರ್ವೇಷನ್‌ ಸೊಸೈಟಿಯ ಡೈರೆಕ್ಟರ್‌ ಫಾರ್‌ ಸೈನ್ಸ್‌–ಏಷ್ಯಾ ಡಾ.ಉಲ್ಲಾಸ ಕಾರಂತ ಹೇಳಿದರು.

ನಗರದ ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಶುಕ್ರವಾರ ನಡೆದ 139ನೇ ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ‘ವನ್ಯಜೀವಿ ಸಂರಕ್ಷಣೆಯ ಕೆಲಸದಲ್ಲಿ ಮಾನವೀಯತೆಗೆ ಮೊದಲ ಆದ್ಯತೆ ದೊರಕಬೇಕು’ ಎಂದರು.

ವನ್ಯಜೀವಿಗಳ ಸಂರಕ್ಷಣೆಯು ಬದುಕು ಮತ್ತು ಇತರೆ ಜೀವಿಗಳನ್ನು ಬದುಕಲು ಬಿಡು ಎಂಬ ತತ್ವದ ಮೇಲೆ ನಡೆಯುತ್ತದೆ. ಅದನ್ನು ಒಂದು ನಿರ್ದಿಷ್ಟ ವಿಷಯವನ್ನಾಗಿ ನೋಡಿದಾಗ, ಪರಿಸರದ ಮೇಲಿನ ಪ್ರೀತಿ, ನೈಸರ್ಗಿಕ ಸಂಪನ್ಮೂಲಗಳ ಕೊರತೆ, ಪರಿಸರ ಸಂರಕ್ಷಣೆ ಎಲ್ಲವನ್ನೂ ಒಳಗೊಳ್ಳುತ್ತದೆ ಎಂದು ಹೇಳಿದರು.

‘ನನ್ನ ಬಾಲ್ಯದ ದಿನಗಳಲ್ಲಿ ಭಾರತದ ಶೇಕಡ 80ರಷ್ಟು ಜನರು ಬಡತನದಲ್ಲಿ ಜೀವಿಸುತ್ತಿದ್ದರು. ಆದರೆ, ಈಗ ಬಡತನ ಗಣನೀಯವಾಗಿ ತಗ್ಗಿದೆ. ಮನುಷ್ಯನ ಜೀವನದ ಗುಣಮಟ್ಟದಲ್ಲಿನ ಸುಧಾರಣೆಯು ಯಾಂತ್ರಿಕತೆಯನ್ನು ಬಯಸುತ್ತದೆ. ಅದು ನೇರವಾಗಿ ಭೂಮಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಹಜವಾಗಿಯೇ ಮನುಷ್ಯನನ್ನೂ ಬಾಧಿಸುತ್ತದೆ’ ಎಂದು ಉಲ್ಲಾಸ ಕಾರಂತ ಹೇಳಿದರು.

ಅಭಿವೃದ್ಧಿ ಎಂಬುದು ಸಂಪೂರ್ಣವಾಗಿ ಕೆಟ್ಟದ್ದಲ್ಲ. ಆದರೆ, ಕೆಟ್ಟ ಅಭಿವೃದ್ಧಿ ಯೋಜನೆಗಳು ಬಾರದಂತೆ ಎಚ್ಚರಿಕೆ ವಹಿಸಬೇಕು. ಕೆಟ್ಟ ಯೋಜನೆಗಳು ಪರಿಸರ, ವನ್ಯಜೀವಿಗಳ ಮೇಲೆ ಕೆಟ್ಟ ಪರಿಣಾಮ ಬೀರುವುದರ ಜೊತೆಗೆ ಮನುಷ್ಯನ ಮೇಲೂ ದುಷ್ಪರಿಣಾಮ ಉಂಟುಮಾಡುತ್ತವೆ. ಈ ಕುರಿತು ಸಕಾಲಿಕವಾಗಿ ತಿಳಿವಳಿಕೆ ಹೊಂದುವುದು ಅಗತ್ಯ ಎಂದರು.

ಸೇಂಟ್‌ ಅಲೋಶಿಯಸ್‌ ಸಮೂಹ ಸಂಸ್ಥೆಗಳ ರೆಕ್ಟರ್‌ ಫಾದರ್‌ ಡಯನಿಷಿಯಸ್‌ ವಾಝ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್‌ ಮಾರ್ಟಿಸ್‌ ವಾರ್ಷಿಕ ವರದಿ ಮಂಡಿಸಿದರು. ಅಲೋಶಿಯಸ್‌ ಸಮೂಹ ಸಂಸ್ಥೆಗಳ ರಿಜಿಸ್ಟ್ರಾರ್‌ ಡಾ.ಎ.ಎಂ.ನರಹರಿ, ಹಣಕಾಸು ಅಧಿಕಾರಿ ಫಾದರ್‌ ಮೆಲ್ವಿನ್ ಲೋಬೊ, ಸೇಂಟ್‌ ಅಲೋಶಿಯಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ ಅಂಡ್‌ ಇನ್ಫರ್ಮೇಶನ್‌ ನಿರ್ದೇಶಕ ಫಾದರ್‌ ಡೆಂಝಿಲ್‌ ಲೋಬೊ, ವಾರ್ಷಿಕೋತ್ಸವ ಆಚರಣೆಯ ಸಂಚಾಲಕರಾದ ಪ್ರೊ.ರಾಜಗೋಪಾಲ್ ಭಟ್‌, ಡಾ.ಸರಸ್ವತಿ, ಸ್ಟೂಡೆಂಟ್ಸ್‌ ಕೌನ್ಸಿಲ್‌ ಅಧ್ಯಕ್ಷ ರೆಲ್ಸ್ಟನ್‌ ಲೋಬೊ ವೇದಿಕೆಯಲ್ಲಿದ್ದರು.

ಕಾಲೇಜಿನ ತುಂಬಾ ಸಂಭ್ರಮ: ಸೇಂಟ್‌ ಅಲೋಶಿಯಸ್‌ ಕಾಲೇಜಿನ ಶಾಂತಿ ಉದ್ಯಾನದ ಮುಂಭಾಗದಲ್ಲಿನ ಮೈದಾನದಲ್ಲಿರುವ ಬಯಲು ವೇದಿಕೆಯಲ್ಲಿ ಸಮಾರಂಭ ನಡೆಯಿತು. ವಿವಿಧ ಪದವಿ ತರಗತಿಗಳ ಅಂತಿಮ ವರ್ಷದಲ್ಲಿರುವ ಸಾವಿರಾರು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಂಭ್ರಮದಿಂದ ಕಾಲೇಜು ದಿನಾಚರಣೆಯಲ್ಲಿ ಪಾಲ್ಗೊಂಡರು.

ಗಾಯನ, ನೃತ್ಯ, ಪ್ರಹಸನ ಸೇರಿದಂತೆ ಆಕರ್ಷಕ ಮನರಂಜನಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಹಾಗೂ ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದವರಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿ, ಗೌರವಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.