ಸುರಕ್ಷಿತ ಚಾಲನೆಗೆ ನಿಯಮ ಪಾಲನೆ ಅಗತ್ಯ

ಸೋಮವಾರ, ಮೇ 27, 2019
23 °C
ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟದ ದುಷ್ಪರಿಣಾಮ ಕುರಿತು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜಾಗೃತಿ ಕಾರ್ಯಕ್ರಮ

ಸುರಕ್ಷಿತ ಚಾಲನೆಗೆ ನಿಯಮ ಪಾಲನೆ ಅಗತ್ಯ

Published:
Updated:
Prajavani

ಚಿಕ್ಕಬಳ್ಳಾಪುರ: ‘ಪ್ರಯಾಣಿಕರ ಪ್ರಾಣ ಸದಾ ಚಾಲಕರ ಕೈಯಲ್ಲಿ ಇರುತ್ತದೆ. ಆದ್ದರಿಂದ ಚಾಲಕರು ತಮ್ಮ ಜವಾಬ್ದಾರಿ ಅರಿತು, ತಪ್ಪದೆ ಸಂಚಾರ ನಿಯಮಗಳನ್ನು ಪಾಲಿಸುತ್ತ ಸುರಕ್ಷಿತವಾಗಿ ವಾಹನ ನಡೆಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ದೇವರಾಜ್‌ ಹೇಳಿದರು.

ನಗರದ ಹೊರವಲಯದ ಚಿತ್ರಾವತಿ ಬಳಿಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಕೆಎಸ್‍ಆರ್‌ಟಿಸಿ ವಾಹನ ಮಾಲೀಕರು ಹಾಗೂ ಚಾಲಕರ ಸಂಘ, ಕಾರ್ಮಿಕ ಇಲಾಖೆ ಹಾಗೂ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರಕು ಸಾಗಾಣಿಕೆ ವಾಹನ, ಟ್ರ್ಯಾಕ್ಟರ್, ಟ್ರೈಲರ್ ವಾಹನಗಳಲ್ಲಿ ಕೂಲಿ ಕಾರ್ಮಿಕರು, ಶಾಲಾ ಮಕ್ಕಳು ಹಾಗೂ ಪ್ರಯಾಣಿಕರನ್ನು ಸಾಗಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಾಹನ ಚಾಲಕರು, ಮಾಲೀಕರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಾಣ ಪ್ರತಿಯೊಬ್ಬರಿಗೂ ಅತ್ಯಮೂಲ್ಯವಾದ್ದದು. ಆದ್ದರಿಂದ ಇನ್ನೊಬ್ಬರ ಪ್ರಾಣ ಹಾನಿ ಮಾಡುವ ಹಕ್ಕು ಯಾರಿಗೂ ಇಲ್ಲ. ಹಾಗಾಗಿ ವಾಹನ ಚಾಲನೆ ಮಾಡುವಾಗ ಸಾರಿಗೆ ಮತ್ತು ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬರೂ ಚಾಚೂ ತಪ್ಪದೇ ಪಾಲಿಸಬೇಕು. ಸುರಕ್ಷತೆಗಾಗಿ ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ತಿರುವುಗಳಲ್ಲಿ ಸಿಗ್ನಲ್ ದೀಪಗಳನ್ನು ಬಳಸಬೇಕು. ಇಬ್ಬರಿಗಿಂತ ಹೆಚ್ಚು ಜನರು ಪ್ರಯಾಣಿಸಬಾರದು’ ಎಂದು ತಿಳಿಸಿದರು.

‘ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ವಾಹನ ಚಲಾಯಿಸಲು ನೀಡುವುದು ಅಪರಾಧ. ಕಾನೂನು ಉಲ್ಲಂಘಿಸುವವರ ವಿರುದ್ಧ
ಪ್ರಕರಣ ದಾಖಲಿಸಿಕೊಂಡು ಶಿಕ್ಷೆಗೆ ಒಳಪಡಿಸಬಹುದು. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಕಾನೂನುಗಳನ್ನು ಗೌರವಿಸುವ ಕೆಲಸ ಮಾಡಬೇಕು. ಮನುಷ್ಯರಾದ ನಾವು ಜೀವನದಲ್ಲಿ ಶಿಸ್ತು, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು’ ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗಿರೆಡ್ಡಿ ಮಾತನಾಡಿ, ‘ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಗಂಭೀರ ಅಪರಾಧ. ಚಾಲನೆಯ ವೇಳೆ ಮೊಬೈಲ್ ಬಳಸುವುದು ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತದೆ. ರಾತ್ರಿ ವೇಳೆ ವಾಹನಗಳಿಗೆ ಹೆಚ್ಚು ಪ್ರಕಾಶಮಾನವಾದ ದೀಪಗಳನ್ನು ಬಳಸಬಾರದು. ವಾಯು ಮಾಲಿನ್ಯ ಉಂಟು ಮಾಡದ ರೀತಿಯಲ್ಲಿ ವಾಹನಗಳನ್ನು ಸುಸಜ್ಜಿತವಾಗಿ ಇಟ್ಟುಕೊಂಡಿರಬೇಕು’ ಎಂದು ಹೇಳಿದರು.

‘ಚಾಲಕರು ಬಳಿ ವಾಹನ ಚಾಲನಾ ಪರವಾನಗಿ ಮತ್ತು ವಾಹನಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಜತೆಗೆ ದಾಖಲೆಗಳ ಒಂದು ಪ್ರತಿಯನ್ನು ತಮ್ಮ ಬಳಿ ಸದಾ ಇಟ್ಟುಕೊಳ್ಳಬೇಕು. ನಿಲುಗಡೆ ನಿಷೇಧಿತ ಪ್ರದೇಶದಲ್ಲಿ, ಪಾದಚಾರಿ ಮಾರ್ಗದಲ್ಲಿ ವಾಹನಗಳ ನಿಲುಗಡೆ, ಪಾದಚಾರಿ ಮಾರ್ಗಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಬಾರದು’ ಎಂದು ತಿಳಿಸಿದರು.

ವಾಹನ ತಪಾಸಣಾಕಾರಿ ಕಮಲ್‌ ಬಾಬು, ‘ವಾಹನ ಖರೀದಿಸಿದ ಕೂಡಲೇ ಸಂಬಂಧಪಟ್ಟವರ ಹೆಸರಿಗೆ ನೋಂದಾಯಿಸಿಕೊಳ್ಳಬೇಕು. ಕಾಲಕಾಲಕ್ಕೆ ವಾಹನಕ್ಕೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. 18 ವರ್ಷ ದಾಟಿದ ಬಳಿಕ ಚಾಲನೆ ಕಲಿಯುವ ಪೂರ್ವದಲ್ಲಿ ಇಲಾಖೆಯ ನಿಯಮಗಳನ್ನು ಪಾಲಿಸಬೇಕು. ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಿಗೆ ಹೊಂದಿರಬೇಕು. ಸಮವಸ್ತ್ರ ಧರಿಸಿರಬೇಕು. ಇಲ್ಲವಾದಲ್ಲಿ ದಂಡ, ಮುಟ್ಟುಗೋಲಿಗೆ ಗುರಿಯಾಗಬೇಕಾಗುತ್ತದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಲಾ, ಕೆಎಸ್‍ಆರ್‌ಟಿಸಿ ವಿಭಾಗೀಯ ನಿಯಂತ್ರಣಾಕಾರಿ ಮಂಜುನಾಥ್, ಸಂಚಾರಿ ಪೊಲೀಸ್ ಠಾಣೆ ಎಎಸ್‍ಐ ಗೋಪಾಲ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಪ್ರಕಾಶ್, ಕಾರ್ಮಿಕ ನಿರೀಕ್ಷಕ ಸೋಮಶೇಖರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !