ಸೋಮವಾರ, ಸೆಪ್ಟೆಂಬರ್ 16, 2019
22 °C

ಅಪಘಾತದ ಮಡಿದವನ ಅಂಗಾಂಗ ದಾನ; ಸಾಗಣೆಗೆ ‘ಹಸಿರು ಪಥ’ ಸೌಲಭ್ಯ ಕಲ್ಪಿಸಿದ ಪೊಲೀಸರು

Published:
Updated:
Prajavani

ಮಂಗಳೂರು: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಗುರುವಾರ ರಾತ್ರಿಯಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ಕೇರಳದ ಕಾಸರಗೋಡು ಜಿಲ್ಲೆಯ ವ್ಯಕ್ತಿಯೊಬ್ಬರ ಬಹು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬದವರು ಸಾರ್ಥಕತೆ ಮೆರೆದರು. ಅಂಗಾಂಗಗಳ ಸಾಗಣೆಗೆ ಪೊಲೀಸರು ‘ಹಸಿರು ಪಥ’ ಕಲ್ಪಿಸಿ ನೆರವಾದರು.

ಕಾಸರಗೋಡು ಜಿಲ್ಲೆಯ ಚಂದ್ರಶೇಖರ್‌ (48) ಮೇ 11ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರನ್ನು ನಗರದ ಇಂಡಿಯಾನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗಾಯಾಳುವಿನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಗುರುವಾರ ರಾತ್ರಿ ವೈದ್ಯರು ಪ್ರಕಟಿಸಿದ್ದರು. ತಕ್ಷಣವೇ ವೈದ್ಯರೊಂದಿಗೆ ಸಮಾಲೋಚಿಸಿದ ಅವರ ಕುಟುಂಬದ ಸದಸ್ಯರು, ಸ್ವಯಂಪ್ರೇರಿತವಾಗಿಯೇ ಗಾಯಾಳುವಿನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು.

ಚಂದ್ರಶೇಖರ್‌ ಅವರ ಕಣ್ಣುಗಳು, ಹೃದಯದ ಕವಾಟಗಳು, ಯಕೃತ್ತು ಮತ್ತು ಮೂತ್ರಕೋಶಗಳನ್ನು ಕುಟುಂಬ ಒಪ್ಪಿಗೆ ಸೂಚಿಸಿತ್ತು. ಅಂಗಾಂಗ ಕಸಿಗೆ ಸಂಬಂಧಿಸಿದ ಪ್ರಕ್ರಿಯೆಗೆ ಅನುಮೋದನೆ ನೀಡುವ ‘ಜೀವ ಸಾರ್ಥಕತೆ’ ಪ್ರಾದೇಶಿಕ ಮಟ್ಟದ ಸಮಿತಿಯು ತ್ವರಿತವಾಗಿ ಒಪ್ಪಿಗೆ ನೀಡಿತ್ತು.

ಹಸಿರು ಪಥ:

ಗಾಯಾಳುವಿನ ಹೃದಯದ ಕವಾಟಗಳು ಮತ್ತು ಯಕೃತ್ತನ್ನು ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಕಸಿ ಮಾಡಲಾಗುತ್ತಿದೆ. ಶುಕ್ರವಾರ ಮಧ್ಯಾಹ್ನದ ಬಳಿಕ ಅಂಗಾಂಗಗಳನ್ನು ಬೇರ್ಪಡಿಸಲಾಯಿತು.

ಸಂಜೆ 4.15ಕ್ಕೆ ಹೃದಯದ ಕವಾಟಗಳು ಮತ್ತು ಯಕೃತ್ತನ್ನು ವಿಶೇಷ ಆಂಬುಲೆನ್ಸ್‌ನಲ್ಲಿ ಇರಿಸಿ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಯಿತು. ಅಲ್ಲಿಂದ ಸಂಜೆ 5.15ರ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದರು. ಬಳಿಕ ಆಂಬುಲೆನ್ಸ್‌ ಮೂಲಕ ಫೋರ್ಟಿಸ್‌ ಆಸ್ಪತ್ರೆಗೆ ತಲುಪಿಸಲಾಯಿತು.

ಸಂಜೆ 4.15ಕ್ಕೆ ಇಂಡಿಯಾನ ಆಸ್ಪತ್ರೆಯಿಂದ ಹೊರಟ ಆಂಬುಲೆನ್ಸ್‌ ಬಜ್ಪೆಯ ವಿಮಾನ ನಿಲ್ದಾಣ ತಲುಪುವವರೆಗೂ ನಗರದ ಸಂಚಾರ ವಿಭಾಗದ ಪೊಲೀಸರು ‘ಹಸಿರು ಪಥ’ ಕಲ್ಪಿಸಿದ್ದರು. ಆಂಬುಲೆನ್ಸ್‌ಗೆ ಮುಂಗಾವಲು ಮತ್ತು ಬೆಂಗಾವಲು ಒದಗಿಸಲಾಗಿತ್ತು. ಈ ವಾಹನಗಳ ಹೊರತಾಗಿ ಶೂನ್ಯ ಸಂಚಾರ ಪಥ ನಿರ್ಮಿಸಲಾಗಿತ್ತು.

ಮಣಿಪಾಲದವರೆಗೆ ಪೈಲಟ್‌ ಸೌಲಭ್ಯ: ಒಂದು ಮೂತ್ರಕೋಶವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿರುವ ರೋಗಿಗೆ ಕಸಿ ಮಾಡಲಾಗುತ್ತಿದೆ. ಇಂಡಿಯಾನ ಆಸ್ಪತ್ರೆಯಿಂದ ಮಣಿಪಾಲಕ್ಕೆ ಆಂಬುಲೆನ್ಸ್‌ನಲ್ಲೇ ಮೂತ್ರಕೋಶವನ್ನು ಸಾಗಿಸಲಾಯಿತು. ಈ ವಾಹನ ವೇಗವಾಗಿ ತಲುಪಲು ಅನುಕೂಲವಾಗುವಂತೆ ಪೊಲೀಸರು ಮುಂಗಾವಲು (ಪೈಲಟ್‌) ಸೌಲಭ್ಯ ಒದಗಿಸಿದ್ದರು.

ಒಂದು ಮೂತ್ರಕೋಶವನ್ನು ಇಂಡಿಯಾನ ಆಸ್ಪತ್ರೆಯಲ್ಲಿನ ರೋಗಗೆ ಕಸಿ ಮಾಡಲಾಗಿದೆ. ಕಣ್ಣುಗಳನ್ನೂ ಸ್ಥಳೀಯವಾಗಿಯೇ ಕಸಿ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದರು.

Post Comments (+)