ಗುರುವಾರ , ನವೆಂಬರ್ 21, 2019
25 °C
‘ಬಂಧನ್’ ಶಾಖೆಯಲ್ಲಿ ಕಳವು ಪ್ರಕರಣ l ನೇಪಾಳ ಗ್ಯಾಂಗ್‌ ಸದಸ್ಯ ಬಂಧನ

ಬ್ಯಾಂಕ್‌ ದೋಚಲೆಂದೇ ಸೆಕ್ಯುರಿಟಿ ಗಾರ್ಡ್ ಆಗಿದ್ದ!

Published:
Updated:
Prajavani

ಬೆಂಗಳೂರು: ಬಸವೇಶ್ವರನಗರದ ಬಂಧನ್ ಬ್ಯಾಂಕ್ ಶಾಖೆಯಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು, ಬ್ಯಾಂಕ್‌ ಕಟ್ಟಡದಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿದ್ದ ವ್ಯಕ್ತಿಯೇ ನೇಪಾಳದ ಗ್ಯಾಂಗ್‌ ಕಟ್ಟಿಕೊಂಡು ಕೃತ್ಯ ಎಸಗಿದ್ದ ಸಂಗತಿಯನ್ನು ಪತ್ತೆ ಮಾಡಿದ್ದಾರೆ.

‘ಸಿದ್ಧಯ್ಯ ಪುರಾಣಿಕ ರಸ್ತೆಯಲ್ಲಿರುವ ಶಾಖೆಯಲ್ಲಿ ಜುಲೈ 21ರಂದು ರಾತ್ರಿ ಕಳ್ಳತನ ನಡೆದಿತ್ತು. ₹ 1.68 ಲಕ್ಷವನ್ನು ಆರೋಪಿಗಳು ಕದ್ದೊಯ್ದಿದ್ದರು. ಇನ್‌ಸ್ಪೆಕ್ಟರ್ ಸೋಮಶೇಖರ್ ನೇತೃತ್ವದ ತಂಡ ತನಿಖೆ ನಡೆಸಿದಾಗ, ಇದು ನೇಪಾಳದ ಗ್ಯಾಂಗ್‌ನ ಕೃತ್ಯವೆಂಬುದು ಗೊತ್ತಾಗಿದೆ. ಗ್ಯಾಂಗ್‌ನ ಅಶೋಕ ಬಹಾದ್ದೂರ್ ಸಿಂಗ್ (23) ಎಂಬಾತನನ್ನು ಬಂಧಿಸಲಾಗಿದೆ. ಆತ ನ್ಯಾಯಾಂಗ ಬಂಧನ
ದಲ್ಲಿದ್ದಾನೆ. ಪ್ರಮುಖ ಆರೋಪಿ ದೀಪಕ್ ಸೇರಿ ಐವರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬ್ಯಾಂಕ್‌ ಶಾಖೆ ಇರುವ ಕಟ್ಟಡದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಅಶೋಕ, ಕೃತ್ಯ ನಡೆದಾಗಿನಿಂದ ನಾಪತ್ತೆಯಾಗಿದ್ದ. ಆತನ ಬಗ್ಗೆ ಮಾಹಿತಿ ಕಲೆಹಾಕಿದಾಗ, ನೇಪಾಳದವ ಎಂಬುದು ತಿಳಿಯಿತು. ನಗರದಲ್ಲೇ ಪರಿಚಯಸ್ಥರ ಜೊತೆಗಿದ್ದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ವಿವರಿಸಿದರು.

‘ಬಂಧಿತ ಅಶೋಕ, ಗ್ಯಾಂಗ್‌ನಲ್ಲಿದ್ದ ಸದಸ್ಯರೆಲ್ಲರ ಹೆಸರು ಹೇಳಿದ್ದಾನೆ. ಅವರ ಬಂಧನಕ್ಕೆ ಪ್ರಯತ್ನಿಸಲಾಗುತ್ತಿದ್ದು, ತನಿಖೆ ದೃಷ್ಟಿಯಿಂದ ಅವರೆಲ್ಲರ ಹೆಸರುಗಳನ್ನು ಗೋಪ್ಯವಾಗಿರಿಸಲಾಗಿದೆ’ ಎಂದರು.

3 ತಿಂಗಳು ನಿಗಾ ವಹಿಸಿ ಕೃತ್ಯ: ‘ಪ್ರಮುಖ ಆರೋಪಿ ದೀಪಕ್ ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಬಂಧನ್‌ ಬ್ಯಾಂಕ್‌ ಕಟ್ಟಡದಲ್ಲೇ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸಕ್ಕೆ ಸೇರಿದ್ದ. ಕಟ್ಟಡದಲ್ಲಿದ್ದ ಕೊಠಡಿಯೊಂದರಲ್ಲಿ ಪತ್ನಿ ಜೊತೆ ವಾಸವಿದ್ದ’ ಎಂದು ಪೊಲೀಸರು ಹೇಳಿದರು.

‘ಬ್ಯಾಂಕ್‌ ವಹಿವಾಟು ಗಮನಿಸುತ್ತಿದ್ದ ದೀಪಕ್, ಬ್ಯಾಂಕ್ ಸಿಬ್ಬಂದಿ ನಿತ್ಯವೂ ಸಂಜೆ ಲಕ್ಷಾಂತರ ರೂಪಾಯಿ ಹಣವನ್ನು ಲಾಕರ್‌ನಲ್ಲಿ ಇಟ್ಟು ಹೋಗುತ್ತಿದ್ದದ್ದನ್ನು ನೋಡುತ್ತಿದ್ದ. ಆ ಹಣ ಕಳವು ಮಾಡಲು ಯೋಚಿಸಿ, ತನ್ನ ನೇಪಾಳದ ಸ್ನೇಹಿತರ ಜೊತೆ ಚರ್ಚಿಸಿ ಸಂಚು ರೂಪಿಸಿದ್ದ.’

‘ಸಂಚಿನಂತೆ ಮೂರು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದ ದೀಪಕ್, ತನ್ನ ಕೆಲಸಕ್ಕೆ ಅಶೋಕನನ್ನು ಸೇರಿಸಿದ್ದ. ಸೆಕ್ಯುರಿಟಿ ಗಾರ್ಡ್‌ ಕೆಲಸ ಮಾಡುತ್ತಲೇ ಅಶೋಕ, ಬ್ಯಾಂಕ್ ವಹಿವಾಟು ಗಮನಿಸುತ್ತಿದ್ದ. ಕಳವು ಮಾಡುವುದು ಹೇಗೆ ಎಂದು ಯೋಜನೆ ಸಹ ಸಿದ್ಧಪಡಿಸಿದ್ದ’ ಎಂದು ಪೊಲೀಸರು ಹೇಳಿದರು.

ಸಿನಿಮೀಯ ರೀತಿಯಲ್ಲಿ ಕೃತ್ಯ: ‘ಜುಲೈ 21ರಂದು ರಾತ್ರಿ ಶಾಖೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ ಆರೋಪಿಗಳು, ಸಿ.ಸಿ.ಟಿ.ವಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸಿದ್ದರು. ಕಸ್ಟಮರ್ ಗ್ಯಾಲರಿಯಲ್ಲಿದ್ದ ‘ಅಲಾರಾಂ’ ಸಹ ಆಫ್ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಗ್ಯಾಸ್ ಕಟರ್ ಬಳಸಿ ತಿಜೋರಿ ಹಾಗೂ ಲಾಕರ್‌ಗಳನ್ನು ಕತ್ತರಿಸಿದ್ದರು. ತಿಜೋರಿಯಲ್ಲಿ ₹ 1.68 ಲಕ್ಷ ಹಣ ಸಿಕ್ಕಿತ್ತು. ಲಾಕರ್‌ನಲ್ಲಿ ಏನು ಸಿಕ್ಕಿರಲಿಲ್ಲ. ಬ್ಯಾಂಕ್‌ ಸಿಬ್ಬಂದಿ ಮರುದಿನ ಶಾಖೆಗೆ ಬಂದಾಗಲೇ ಕೃತ್ಯ ಗಮನಕ್ಕೆ ಬಂದಿತ್ತು. ಶಾಖೆಯ ವ್ಯವಸ್ಥಾಪಕ ಗೌರವ್ ಸನ್ಯಾಲ್ ದೂರು ನೀಡಿದ್ದರು’ ಎಂದರು.

‘₹ 20 ಲಕ್ಷದಿಂದ ₹ 30 ಲಕ್ಷ ಇರುತ್ತಿತ್ತು’

‘ಶಾಖೆಯ ತಿಜೋರಿಯಲ್ಲಿ ನಿತ್ಯವೂ ₹ 20 ಲಕ್ಷದಿಂದ ₹ 30 ಲಕ್ಷ ಹಣವಿರುತ್ತಿತ್ತು. ಅದನ್ನು ತಿಳಿದುಕೊಂಡೇ ಆರೋಪಿಗಳು ಕಳುವಿಗೆ ಸಜ್ಜಾಗಿದ್ದರು. ಆದರೆ, ಜುಲೈ 21ರಂದು ಹೆಚ್ಚು ಹಣ ಸಂಗ್ರಹವಾಗಿರಲಿಲ್ಲ. ಅಂದು ರಾತ್ರಿಯೇ ಕೃತ್ಯ ಎಸಗಿದ್ದ ಆರೋಪಿಗಳಿಗೆ ಕಡಿಮೆ ಹಣ ಸಿಕ್ಕಿತ್ತು’ ಎಂದು ಪೊಲೀಸರು ಹೇಳಿದರು. 
 

ಪ್ರತಿಕ್ರಿಯಿಸಿ (+)