ಗುರುವಾರ , ನವೆಂಬರ್ 21, 2019
23 °C
ವಿದ್ಯಾರ್ಥಿನಿ ಚರಣ್ಯ ಮನವಿಗೆ ಸ್ಪಂದಿಸಿದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ದಡ್ಡಲಕಾಡು ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಭಾಗ್ಯ: ವಿದ್ಯಾರ್ಥಿನಿ ಮನವಿಗೆ ಸ್ಪಂದನೆ

Published:
Updated:
Prajavani

ಮಂಗಳೂರು: ‘ಪಠ್ಯಪುಸ್ತಕ ಬಾರದೇ ಕಂಗಾಲಾಗಿದ್ದ ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡು ಉನ್ನತೀಕರಿಸಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಡೆಗೂ ಪಠ್ಯಪುಸ್ತಕ ಪಡೆಯುವ ಭಾಗ್ಯ ಸಿಕ್ಕಿದೆ. ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಚರಣ್ಯ ನೊಂದು ಮನವಿ ಬರೆದ ಮನವಿ ಪತ್ರಕ್ಕೆ ತತಕ್ಷಣವೇ ಸ್ಪಂದಿಸಿರುವ ಸಚಿವ ಸುರೇಶ್‌ ಕುಮಾರ್‌ ಅವರು ಪಠ್ಯಪುಸ್ತಕ ಪೂರೈಕೆ ಮಾಡಿದ್ದು, ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ವಿದ್ಯಾರ್ಥಿನಿ ಮನವಿಗೆ ಕೂಡಲೇ ಸ್ಪಂದಿಸಿ 1ನೇ ತರಗತಿ 78 ಹಾಗೂ ಬೇರೆ ಬೇರೆ ತರಗತಿಯಲ್ಲಿ ಓದುತ್ತಿರುವ 266 ವಿದ್ಯಾರ್ಥಿಗಳಿಗೆ ಒಟ್ಟು 500 ಪಠ್ಯ ಪುಸ್ತಕಗಳನ್ನು ಪೂರೈಕೆ ಮಾಡುವಂತೆ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಶುಕ್ರವಾರ ಶಾಲೆಗೆ ಪಠ್ಯಪುಸ್ತಕ ಪೂರೈಸಿದ್ದಾರೆ.

ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ಈ ಬಾರಿ ಒಂದನೇ ತರಗತಿ ಇಂಗ್ಲಿಷ್‌ ಪ್ರವೇಶಕ್ಕೆ  ಒಟ್ಟು 108 ವಿದ್ಯಾರ್ಥಿಗಳು ದಾಖಲಾಗಿದ್ದರು. ರಾಜ್ಯ ಸರ್ಕಾರ ಆಯ್ದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆಗೆ ಒತ್ತು ನೀಡಿದ್ದರಿಂದ ಶಾಲೆಯಲ್ಲಿ ಪ್ರವೇಶ ಸಂಖ್ಯೆ ಹೆಚ್ಚಾಗಿತ್ತು.

ಸರ್ಕಾರ ಪ್ರವೇಶ ಪಡೆದ 30 ಮಕ್ಕಳಿಗೆ ಮಾತ್ರ ಇಂಗ್ಲಿಷ್‌ ಕಲಿಕೆಗೆ ಅವಕಾಶ ನೀಡಲಾಗುತ್ತದೆ ಎಂಬ ಸುತ್ತೋಲೆ ಹೊರಡಿಸಿದ ಪರಿಣಾಮ 30 ಮಕ್ಕಳಿಗೆ ಮಾತ್ರ ಪಠ್ಯಪುಸ್ತಕ ಸಿಕ್ಕಿತ್ತು. ಉಳಿದ 78 ಮಕ್ಕಳಿಗೆ ಪಠ್ಯಪುಸ್ತಕ ಸಿಗದೇ ಇರುವುದರಿಂದ ಪಾಲಕರಲ್ಲಿ ಆತಂಕಕ್ಕೆ ಒಳಗಾಗಿದ್ದರು. ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್‌ ಅಂಚನ್‌ ಅವರು ಜಿಲ್ಲೆಯ ಶಿಕ್ಷಣ ಇಲಾಖೆ ಎಲ್ಲ ಅಧಿಕಾರಿಗಳಿಗೂ ಮನವಿ ಸಲ್ಲಿಸಿದರು ಮಕ್ಕಳಿಗೆ ಪಠ್ಯಪುಸ್ತಕ ಪೂರೈಕೆ ಆಗಿರಲಿಲ್ಲ. 

ಇದೇ ಶಾಲೆ 5 ನೇ ತರಗತಿ ವಿದ್ಯಾರ್ಥಿನಿ ಚರಣ್ಯಳಿಗೂ ಕೂಡಾ ಇನ್ನು ಕೆಲ ಪುಸ್ತಕಗಳು ಸಿಗದೇ ಇರುವುದರಿಂದ ನೊಂದು ಸಚಿವ ಸುರೇಶ್‌ ಕುಮಾರ್‌ ಅವರಿಗೆ ಶಾಸಕ ರಾಜೇಶ್‌ ನಾಯ್ಕ್‌ ಅವರ ಮೂಲಕ ಮನವಿ ಬುಧವಾರ ಮನವಿ ಪತ್ರ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಸ್ಥಳೀಯ ಶಾಸಕ ರಾಜೇಶ್‌ ನಾಯ್ಕ ಹಾಗೂ ಪ್ರಕಾಶ್ ಅಂಚನ್‌ ಅವರು ಶಿಕ್ಷಣ ಸಚಿವರನ್ನು ಭೇಟಿ ಮಾಡಿ ವಿದ್ಯಾರ್ಥಿನಿಯ ಮನವಿ ಪತ್ರವನ್ನು ಸಚಿವರಿಗೆ ನೀಡಿದ್ದರು.

ವಿದ್ಯಾರ್ಥಿನಿ ಚರಣ್ಯ ಮನವಿ ಪತ್ರ ಸಲ್ಲಿಸುತ್ತಿದ್ದಂತೆ ಸಚಿವರು ಇಲಾಖೆ ಅಧಿಕಾರಿಗಳಿಗೆ ಅಗತ್ಯ ಪುಸ್ತಕ ಪೂರೈಕೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅದಕ್ಕೆ ಸ್ಪಂದಿಸಿರುವ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ದಡ್ಡಲಕಾಡು ಶಾಲೆ 1ನೇ ತರಗತಿಯಲ್ಲಿ ಓದುವ 78 ಮಕ್ಕಳಿಗೆ ಹಾಗೂ ಉಳಿದ ತರಗತಿಯಲ್ಲಿ ವ್ಯಾಸಂಗ ಮಾಡುವ 266 ಮಕ್ಕಳಿಗೆ ಎಲ್ಲ ಪಠ್ಯಪುಸ್ತಕ ಪೂರೈಕೆ ಮಾಡಿದ್ದಾರೆ ಎಂದು ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಹಾಗೂ ಶ್ರೀ ಜಯದುರ್ಗಾ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಪ್ರಕಾಶ್‌ ಅಂಚನ್‌ ತಿಳಿಸಿದರು.

ಕಳೆದ ನಾಲ್ಕು ತಿಂಗಳಿಂದ ಪುಸ್ತಕ ಸಿಗದೇ ಆತಂಕದಲ್ಲಿದ್ದ ವಿದ್ಯಾರ್ಥಿಗಳಿಗೆ ಶುಕ್ರವಾರ ಪಠ್ಯಪುಸ್ತಕ ಹಂಚಿಕೆ ಮಾಡಲಾಗಿದೆ. ಎಲ್ಲ ಮಕ್ಕಳು ಖುಷಿಪಟ್ಟರು. ಶಿಕ್ಷಣ ಮಂತ್ರಿಗಳು ವಿದ್ಯಾರ್ಥಿನಿಯ ಮನವಿಗೆ ಸ್ಪಂದಿಸಿ ಕೂಡಲೇ ಸ್ಪಂದನೆ ಮಾಡಿರುವುದು ಶ್ಲಾಘನೀಯ. ಸರ್ಕಾರಿ ಶಾಲೆಗಳಲ್ಲಿ ಸಕಾಲದಲ್ಲಿ ಪಠ್ಯಪುಸ್ತಕ, ಶೂ, ಸಮವಸ್ತ್ರಗಳು ಸಿಗದೇ ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ. ರಾಜ್ಯದಲ್ಲಿರುವ 50 ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂತಹ ಸ್ಥಿತಿ ಇದೆ. ಸಚಿವರು ಈ ಬಗ್ಗೆ ಮತ್ತಷ್ಟು ಕಾಳಜಿ ವಹಿಸಬೇಕು ಎಂದು ಪ್ರಕಾಶ್‌ ಅಂಚನ್‌ ಅವರು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)