ಶನಿವಾರ, ಜನವರಿ 25, 2020
16 °C

ಬರ ನಿರ್ವಹಣೆಗೆ ಬದ್ಧರಾಗಿ: ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ:  ಬರಗಾಲದಿಂದ ತತ್ತರಿಸಿರುವ ತಾಲ್ಲೂಕಿನ ಬರ ನಿರ್ವಹಣೆಗೆ ಸರ್ಕಾರ ಬದ್ಧವಾಗಿದ್ದು.ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡದೇ ಇಲ್ಲಿನ ಎಲ್ಲ ಸಮಸ್ಯೆಗಳಿಗೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಾಕೀತು ಮಾಡಿದರು.



ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನೈಸರ್ಗಿಕ ವಿಕೋಪದಿಂದ ಈ ಭಾಗದ ರೈತರು ಸೇರಿದಂತೆ ಜನ-ಜಾನುವಾರಗಳ ಸಮಸ್ಯೆಗಳನ್ನು ನಿವಾರಿಸಲು ತಾಲ್ಲೂಕು ಆಡಳಿತ ಮತ್ತು ಜನಪ್ರತಿನಿಧಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.



ಕುಡಿಯುವ ನೀರು, ಮೇವು ಮತ್ತು ಉದ್ಯೋಗ ಒದುಗಿಸುವಲ್ಲಿ ತಾರತಮ್ಯ ಮಾಡಬಾರದು. ತಳಮಟ್ಟದಿಂದ ವರದಿ ನೀಡಿ. ತಾಲ್ಲೂಕಿನ ಸಮಗ್ರ ಬರ ಸ್ಥಿತಿ-ಗತಿಯ ಮಾಹಿತಿ ತೆಗೆದುಕೊಂಡು ಪರಿಹಾರ ಕ್ರಮಗಳನ್ನು ಕಂಡುಕೊಳ್ಳಬೇಕು. ಪ್ರಸಕ್ತ ತೊಗರಿ ಬೆಳೆಯಲ್ಲಿ ಕಡಿಮೆ ಇಳುವರಿಂದ ರೈತರು ಆತಂಕದಲ್ಲಿದ್ದಾರೆ. ತಾಲ್ಲೂಕಿನ ಐದು ವಲಯಗಳ ಮಳೆಯ ಕೊರತೆ ಮತ್ತು ಇಳುವರಿ ಕುರಿತು ಸತ್ಯಾಂಶದ ವರದಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.



ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಶಾಂತಪ್ಪ ಟಕ್ಕಳಕಿ ಅವರು ತಾಲ್ಲೂಕಿನ 18 ಲಕ್ಷ ರೂಪಾಯಿ ಕುಡಿಯುವ ನೀರು ಪೂರೈಸಲು 36 ಕೊಳವೆಬಾವಿ ಮಂಜೂರಾಗಿದ್ದು. 15 ಲಕ್ಷ ರೂ.ಇತರೆ ವೆಚ್ಚಕ್ಕಾಗಿ ಮೀಸಲಿರಿಸಿದೆ ಎಂದು ಮಾಹಿತಿ ನೀಡಿದರು.



  ಸಚಿವರು ಜನವರಿ ಅಂತ್ಯದವರೆಗೆ  ಕುಡಿಯುವ ನೀರಿನ ಸಮಸ್ಯೆಯ ಸ್ಥಳಗಳ ಬಗ್ಗೆ ಮಾಹಿತಿ ಪಡೆದು. ಮುಂದಿನ ಬೇಸಿಗೆಯಲ್ಲಿ ನೀರು ಸಿಗುವ ಸ್ಥಳದಲ್ಲಿ ಸಿದ್ಧತೆ ಮಾಡಿಕೊಂಡು ನೀರಿನ ಸಮಸ್ಯೆ ತೀವ್ರಗೊಳ್ಳದಂತೆ ಯೋಜನೆ ರೂಪಿಸಲು ತಿಳಿಸಿದರು.



ಅವಶ್ಯಕವಾದ ಮೇವು ದಾಸ್ತಾನು ಮಾಡಿಕೊಂಡು ಸಮರ್ಪಕವಾಗಿ ಹಂಚಿಕೆ ಮಾಡಬೇಕೆಂದು ಪಶು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.



ಸಭೆಯಲ್ಲಿ ಮಳೆ-ಬೆಳೆ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಸ್ಥಳ ಪರಿಶೀಲನೆ ನಡೆಸಿಲ್ಲ ಮತ್ತು ಈಗಿರುವ ಮಾಹಿತಿ ಸರಿಯಿಲ್ಲ ಎಂದು ಶಾಸಕ ಸುಭಾಷ ಗುತ್ತೇದಾರ, ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದಾರಾಮ ಪ್ಯಾಟಿ, ಪೂಜಾ ರಮೇಶ ಕಂಬಾರ ದೂರಿದ್ದರು.

 ಇಕ್ಕಳಕಿ ಧಂಗಾಪೂರ,ಮಾದನಹಿಪ್ಪರಗಾ ಮತ್ತು ಪಟ್ಟಣದ ನೀರಿನ ಸಮಸ್ಯೆ ಬಗೆಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಹೈಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ, ಜಿಲ್ಲಾಧಿಕಾರಿ ಡಾ. ಆರ್.ವಿಶಾಲ, ಪುರಸಭೆ ಅಧ್ಯಕ್ಷೆ ಶಕುಂತಲಾ ಕುಂಬಾರ, ಉಪಾಧ್ಯಕ್ಷ ಹಮೀದ್ ಅನ್ಸಾರಿ, ತಾಲ್ಲೂಕು ಪಂಚಾಯಿತ ಉಪಾಧ್ಯಕ್ಷ ಕುಶಪ್ಪಗೌಡ ಪಾಟೀಲ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕೆಂಚಣ್ಣನವರ, ತಹಸೀಲ್ದಾರ್ ಇಲಿಯಾಸ್ ಅಹ್ಮದ ಸೇರಿದಂತೆ ಶಿಕ್ಷಣ, ಪಶುಸಂಗೋಪಣೆ, ಸಮಾಜ ಕಲ್ಯಾಣ,ಕೃಷಿ, ಆರೋಗ್ಯ, ಅರಣ್ಯ, ತೋಟಗಾರಿಕೆ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲೆಯ ಅನುಷ್ಠಾನ ಅಧಿಕಾರಿಗಳು ಪಾಲ್ಗೊಂಡಿದರು.

ಪ್ರತಿಕ್ರಿಯಿಸಿ (+)