ಭಾನುವಾರ, ಮೇ 9, 2021
25 °C

ಮೀಸಲಾತಿ: ಬ್ರಾಹ್ಮಣರಾಗುವ ದಲಿತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮೀಸಲಾತಿ ಪಡೆದ ದಲಿತರು ಬ್ರಾಹ್ಮಣರಾಗುತ್ತಿದ್ದಾರೆ. ಬ್ರಾಹ್ಮಣರು ದಲಿತರಾಗುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ ಹೇಳಿದರು.ಗುಲ್ಬರ್ಗದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ನಡೆದ ಸಮಿತಿಯ ವಿಭಾಗೀಯ ಮಟ್ಟದ ಪ್ರಥಮ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಉದ್ಯೋಗಕ್ಕೆ ಸೇರಿದ ಮೇಲೆ ಮನೆಯಲ್ಲಿ ಹೋಮ-ಹವನ, ಹಣೆಗೆ ನಾಮ, ಮೂಗಿನ ತನಕ ಆಸೆಯಿದ್ದರೂ ಮಾಂಸಾಹಾರ ಮಹಾಪಾಪ ಎಂಬಂತೆ ವರ್ತಿಸುತ್ತಾರೆ. ಬಾಡಿಗೆ ಮನೆ ಸಿಗುವುದಿಲ್ಲ, ಕೀಳಾಗಿ ಕಾಣುತ್ತಾರೆ ಎಂಬ ಕಾರಣ ಹೇಳುತ್ತಾರೆ ಎಂದ ಅವರು, ಸ್ವಾತಂತ್ರ್ಯ ಬಂದು ಅರ್ಧಶತಮಾನ ಕಳೆದರೂ ಅಡ್ಡ ಬಿದ್ದು ನಾಮ ಹಾಕಿಸಿಕೊಳ್ಳುವ, ಅರ್ಜಿ ಹಿಡಿದು ಅಂಗಲಾಚುವ ಪರಿಸ್ಥಿತಿ ಹೋಗಿಲ್ಲ ಎಂದು ವಿಷಾದಿಸಿದರು.ಒಬ್ಬ ಉದ್ಯೋಗಸ್ಥ ಉಳಿದ 10 ಮಂದಿ ನಿರುದ್ಯೋಗಿಗಳಿಗೆ ಆತ್ಮವಿಶ್ವಾಸ ತುಂಬಬೇಕು ಎಂಬ ಉದ್ದೇಶದಿಂದ ಡಾ.ಬಿ.ಆರ್. ಅಂಬೇಡ್ಕರ್ ಮೀಸಲಾತಿ ಕಲ್ಪಿಸಿದರು. ಆದರೆ ಉದ್ಯೋಗಸ್ಥ, ವಿದ್ಯಾವಂತ ಮತ್ತು ಬಡ ದಲಿತರ ಮಧ್ಯೆ ಅಂತರ ಬೆಳೆಯುತ್ತಿದೆ. ಮೀಸಲಾತಿ ಪಡೆದವರು ಸಮಾಜದ ಬಗ್ಗೆ ಚಿಂತಿಸುವ, ಸಾಮಾಜಿಕ ಪ್ರಜ್ಞೆಯಿಂದ ಒಂದಾಗುವ ತುರ್ತು ಇದೆ ಎಂದರು.ರಾಜ್ಯದಲ್ಲಿನ 6,96,242 ಹುದ್ದೆಗಳ ಪೈಕಿ 5,40,890 ಹುದ್ದೆಗಳು ಮಾತ್ರ (2009 ಮಾರ್ಚ್) ಭರ್ತಿಯಾಗಿವೆ. ಉಳಿದ ಹುದ್ದೆಯನ್ನು ಭರ್ತಿ ಮಾಡಿದರೆ ಮೀಸಲಾತಿಯಲ್ಲಿ ಕನಿಷ್ಠ 20 ಸಾವಿರಕ್ಕೂ ಹೆಚ್ಚು ಜನರಿಗೆ ಅವಕಾಶ ಸಿಗಲಿದೆ ಎಂದ ಅವರು ಸಂವಿಧಾನದಲ್ಲಿ ಅವಕಾಶ ಇದ್ದರೂ, ವಾಸ್ತವವಾಗಿ ಶೇ.15ರಷ್ಟೂ ಮೀಸಲಾತಿಯನ್ನು ನೀಡಲಾಗಿಲ್ಲ ಎಂದರು.ಇಂದೂ ನಡೆಯುತ್ತಿರುವ ಬಹಿಷ್ಕಾರ, ಜಾತಿ ದೌರ್ಜನ್ಯ ಪ್ರಕರಣಗಳನ್ನು ಕಂಡರೆ ನಮಗೆ ಸಿಕ್ಕಿರುವ `ಶೇಕಡಾ~ ಸ್ವಾತಂತ್ರ್ಯ ಎಷ್ಟು? ಎಂಬ ಪ್ರಶ್ನೆ ಮೂಡುತ್ತದೆ. ಲಾಭ ಪಡೆದ ಬಳಿಕ ಅಂಬೇಡ್ಕರ್ ವಿಚಾರವನ್ನು ಅಡವಿಡಬಾರದು. ವಿಚಾರಗಳ ಆಚಾರ ಅಗತ್ಯ, ಹೊರತು ಕೇವಲ ಪ್ರಚಾರವಲ್ಲ ಎಂದರು. ಸಣ್ಣವ ತಪ್ಪು ಮಾಡಿದರೆ ದೊಡ್ಡದು ಮಾಡ್ತಾರೆ. ದೊಡ್ಡವ ಮಾಡಿದರೆ ಮುಚ್ಚಿ ಹಾಕ್ತಾರೆ. ಇಂಥ ಪರಿಸ್ಥಿತಿಯಲ್ಲಿ ಸಮಾಜದ ಋಣ ತೀರಿಸಲು ನಾವು ಆತ್ಮಾವಲೋಕನ ಮಾಡಿಕೊಂಡು ಪ್ರಾಮಾಣಿಕತೆಯಿಂದ ಗುರಿಯತ್ತ ಮುನ್ನಡೆಯಬೇಕು ಎಂದು ಪಶುಸಂಗೋಪನಾ ಮತ್ತು ಗ್ರಂಥಾಲಯ ಖಾತೆ ಸಚಿವ ರೇವುನಾಯಕ ಬೆಳಮಗಿ ಹೇಳಿದರು.ನಮ್ಮದು (ರಾಜಕಾರಣಿಗಳು) ತಾತ್ಕಾಲಿಕ, ನಿಮ್ಮದು (ನೌಕರರು) ಶಾಶ್ವತ ಸರ್ಕಾರ. ಹೀಗಾಗಿ ಗ್ರಾಮೀಣ, ಬಡವರ ಸಮಸ್ಯೆ ಪರಿಹರಿಸಲು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.ವೈದ್ಯ ಡಾ.ಅಂಬರಾಯ ಎಸ್.ರುದ್ರವಾಡಿ, ಪ್ರಾಧ್ಯಾಪಕ ಲಿಂಗಣ್ಣ ಗೋನಾಳ, ಡಾ.ಅರುಣಕುಮಾರ ನರೋಣಕರ್, ಸಮಿತಿಯ ಕೆ. ಪ್ರಕಾಶ, ಅಳಗಪ್ಪ, ನಾಡಿಗೇರ್, ನಾಗರಾಜ ನಾಗುರೆ, ಶಂಕರ ಕಿಲ್ಲೇಕರ್, ಆರ್. ಮೋಹನ್ ಮತ್ತಿತರರು ಇದ್ದರು. ವಿಜಾಪುರ, ಯಾದಗಿರಿ, ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸರ್ಕಾರಿ ನೌಕರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.