ಶುಕ್ರವಾರ, ಮೇ 27, 2022
31 °C

3 ಗಾಲಿ ಬದುಕು ಮೂರಾಬಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಸಿಲು 40 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ. ವಯಸ್ಸು 60ಕ್ಕೂ ಹೆಚ್ಚು. ಅರ್ಧ ಶತಮಾನದಿಂದಲೂ ಮೂರು ಚಕ್ರದ ಸೈಕಲ್ ತುಳಿದು ಸವೆಸಿದ ಬದುಕು. ಸಾಗಿಸಿದ ಸರಕು, ಸಂಚರಿಸಿದ ಪ್ರಯಾಣಿಕರು ಹಲವು. ಬೇಸಿಗೆಯಲ್ಲಿ ಬಿಸಿಲಿನ ಸಂಕಷ್ಟ, ಮಳೆಗಾಲದಲ್ಲಿ ಮಳೆಯ ಕಷ್ಟ. ಈ ನಡುವೆ ಬಾಡಿಗೆ ಸಿಕ್ಕರೆ ಅದೃಷ್ಟ. ಇಲ್ಲವೇ ಬರಿಗೈಯಲ್ಲಿ ಮನೆಗೆ. ಇಳಿ ವಯಸ್ಸಿನಲ್ಲೂ ನಿವೃತ್ತಿ ಇಲ್ಲದ ಕಷ್ಟಕರ ಬದುಕು. ಇದು ಗುಲ್ಬರ್ಗದ ಬೀದಿ ಬೀದಿಯಲ್ಲಿ ಕಾಣುವ ನಿತ್ಯ ನೋಟ. `14 ವರ್ಷದಿಂದ  ಸೈಕಲ್ ತುಳಿದೂ ತುಳಿದೂ ಕಾಲು ಕುದುರೆ ಕಾಲಿನಂತಾಗಿವೆ. ಆದರೆ ಇನ್ನೂ ಜೋಪಡಿ ಬದುಕು ಬದಲಾಗಿಲ್ಲ. ಆಟೊ ರಿಕ್ಷಾಗಳು ಬಂದ ಮೇಲೆ ನಮ್ಮ ಬಾಡಿಗೆ ಕಡಿಮೆಯಾಗಿದೆ. ದಿನಕ್ಕೆ 50-100 ರೂಪಾಯಿ ಸಿಕ್ಕಿದರೆ ಹೆಚ್ಚು. ಸರ್ಕಾರದ ಯಾವ ಸವಲತ್ತೂ ಸಿಕ್ಕಿಲ್ಲ~ ಎನ್ನುವ ನಗರದ ಸೈಕಲ್ ರಿಕ್ಷಾ ಚಾಲಕ ಶರಣಪ್ಪ ಅವರ ಮಾತಿನಲ್ಲೇ ಸೈಕಲ್ ರಿಕ್ಷಾ ಸವಾರರ ಬದುಕಿನ ಅಳಲಿದೆ. ಇವರಿಗೆ ಸಂಘಟನೆ-ಸವಲತ್ತುಗಳು ಇಂದಿಗೂ ಇಲ್ಲ. ಇಂದಿಗೂ ಹಲವರಿಗೆ ಸ್ವಂತ ಸೂರಿಲ್ಲ.  ನಮ್ಮ ದೇಶದ ಪರಂಪರೆಯಲ್ಲಿ ಸೈಕಲ್ ರಿಕ್ಷಾಗಳಿಗೆ ತನ್ನದೇ ಸ್ಥಾನವಿದೆ. ದೇಶದ ಪ್ರಮುಖ ಪಟ್ಟಣಗಳಲ್ಲಿ ಇವುಗಳು ಬಳಕೆಯಲ್ಲಿತ್ತು. ಅದರಲ್ಲೂ ದಿಲ್ಲಿ, ಹರಿಯಾಣ, ಪಂಜಾಬ್ ಮತ್ತಿತರೆಡೆ ಈಗಲೂ ಬಳಕೆಯಲ್ಲಿವೆ. ಪ್ರಪಂಚದಲ್ಲೇ ಅತಿ ಹೆಚ್ಚು ಸೈಕಲ್ ರಿಕ್ಷಾ ಹೊಂದಿರುವ ಬಾಂಗ್ಲಾ ದೇಶದ ಢಾಕಾವನ್ನು ಸೈಕಲ್ ರಿಕ್ಷಾಗಳ ರಾಜಧಾನಿ ಎನ್ನುತ್ತಾರೆ.`40-45 ವರ್ಷಗಳ ಹಿಂದೆ ಸೈಕಲ್ ರಿಕ್ಷಾಗಳು ಪ್ರಮುಖ ಸಂಚಾರ ಸಾಧನ.  20 ವರ್ಷಗಳಿಂದ  ಸಂಖ್ಯೆ ಕಡಿಮೆಯಾಗಿದೆ. ಟಂಟಂ, ಆಟೊ ರಿಕ್ಷಾ, ಗೂಡ್ಸ್ ರಿಕ್ಷಾಗಳು ಬಂದ ಮೇಲೆ ವ್ಯಾಪಾರಿಗಳೂ ಇವರನ್ನು ಆಶ್ರಯಿಸುತ್ತಿಲ್ಲ~ ಎನ್ನುತ್ತಾರೆ ಎಚ್.ಕೆ.ಸಿ.ಸಿ. ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ.ಆದರೆ ಇವರ ವ್ಯವಹಾರದಲ್ಲಿ ಚೌಕಾಸಿಗೆ ಅವಕಾಶ ಇಲ್ಲ. ಮೊದಲೇ ದರ ನಿಗದಿ ಪಡಿಸಿ, ಸರಕು-ಜನರನ್ನು ಕೊಂಡೊಯ್ಯುತ್ತಾರೆ.ಹಿರಿ ಜೀವ: ಚಾಲಕರಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರು. ಹಿಂದಿನಿಂದಲೇ ಈ ವೃತ್ತಿ ನಡೆಸುತ್ತಿದ್ದವರು. ಹೊಸಮುಖಗಳಿಲ್ಲ. ನಗರದ ಶಹಾಬಜಾರ, ಸೂಪರ್ ಮಾರ್ಕೆಟ್, ಗಂಜ್, ರೈಲ್ವೆ ನಿಲ್ದಾಣ ರಸ್ತೆಗಳಲ್ಲಿ ಕಂಡುಬರುವ ಚಾಲಕರಲ್ಲಿ ಬಹುತೇಕರು ಮಂದಿ 60ರ ಗಡಿ ದಾಟಿದವರೇ. ಅಂದಿನಿಂದ ಇಂದಿನ ತನಕ ಇದೇ ವೃತ್ತಿಯಲ್ಲಿ ಉಳಿದುಕೊಂಡಿದ್ದಾರೆ. `ಯುವಕರು ಆಟೋ ರಿಕ್ಷಾ ಓಡಿಸುತ್ತಾರೆ. ಇಲ್ಲ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಆದರೆ  ಈ ವೃತ್ತಿಯತ್ತ ಸುಳಿಯುವುದಿಲ್ಲ~ ಎನ್ನುತ್ತಾರೆ ಸೂಪರ್ ಮಾರ್ಕೆಟ್ ಬಳಿ ಸೈಕಲ್ ರಿಕ್ಷಾ ಚಲಾಯಿಸುವ ಶಿವಣ್ಣ.

ಸರಕು ಸಾಗಾಟ: ಗುಲ್ಬರ್ಗದಲ್ಲಿ ಈಗ ಪ್ರಯಾಣಕ್ಕಾಗಿ ಸೈಕಲ್‌ರಿಕ್ಷಾ ಅವಲಂಬಿಸುವವರಿಲ್ಲ. ಆದ್ದರಿಂದ ಸರಕು ಸಾಗಾಟಕ್ಕಷ್ಟೇ ಸೀಮಿತವಾಗಿದೆ. ಕೆಲವರು ಶಾಲಾ ಮಕ್ಕಳನ್ನು ಕರೆದೊಯ್ಯುತ್ತಾರೆ. ಇಲ್ಲವೇ ತರಕಾರಿ ಚೀಲ, ಕಟ್ಟಿಗೆ, ಉಪಕರಣ ಮತ್ತಿತರ ಸರಕು ಸಾಗಾಟ ಮಾಡುತ್ತಾರೆ. ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಸುಮಾರು ಎರಡು ಕ್ವಿಂಟಲ್ ಭಾರದ ಸರಕು ಸಾಗಿಸುತ್ತಾರೆ.ಬಾಡಿಗೆ ವ್ಯವಸ್ಥೆ: ಸೈಕಲ್ ರಿಕ್ಷಾ ಬಾಡಿಗೆಗೆ ಪಡೆದು ದುಡಿಯುವ ಮಂದಿಯೂ ಇದ್ದಾರೆ. ಹಿಂದೆ ಚಾಲಕರು ಮಾಲೀಕನಿಗೆ ದಿನಕ್ಕೆ 15 ರೂಪಾಯಿ ನೀಡಬೇಕಿತ್ತು. ಇಂದು ಅದು 25ಕ್ಕೇರಿದೆ. ಆದರೆ ಬಾಡಿಗೆದಾರ ಮಾಲಕರ ಸಂಖ್ಯೆ ಕಡಿಮೆ.ಪರಿಸರ ಸ್ನೇಹಿ: ಹೈದರಾಬಾದ್‌ನಲ್ಲಿ ಸೈಕಲ್ ರಿಕ್ಷಾ ಸಿದ್ಧಗೊಳ್ಳುತ್ತದೆ. ಗುಲ್ಬರ್ಗದಲ್ಲಿ ರಿಪೇರಿ ಮಾತ್ರ. ಸೈಕಲ್ ರಿಕ್ಷಾಗಳು ಸಂಪೂರ್ಣ ಪರಿಸರ ಸ್ನೇಹಿ. ಇವು ಯಂತ್ರಚಾಲಿತ ವಾಹನಗಳಂತೆ ಹೊಗೆ ಉಗುಳುವುದಿಲ್ಲ.ವಾತಾವರಣ ಕೆಡಿಸುವುದಿಲ್ಲ. ಆದರೂ ಅವುಗಳ ವೇಗದ ಮುಂದೆ ನಿಲ್ಲಲ್ಲಾಗುತ್ತಿಲ್ಲ. ಆದರೆ ಈಗಲೂ ನಗರದ ಗಂಜ್, ಸೂಪರ್ ಮಾರ್ಕೆಟ್‌ಗಳಲ್ಲಿ ಸರಕು ಸಾಗಿಸಲು ಸೈಕಲ್ ರಿಕ್ಷಾಗಳನ್ನು ಬಳಸುತ್ತಿರುವುದು ಇವರ ಬದುಕಿನ ಆಶಾಕಿರಣ.ಪರ್ಯಾಯ ವೃತ್ತಿಗೆ ಸಹಕಾರ

`ಸೈಕಲ್ ರಿಕ್ಷಾ ಚಾಲನೆಯು ಅಧಿಕ ಶ್ರಮದ ಕೆಲಸವಾಗಿದ್ದು, ದೈಹಿಕ ಸ್ವಾಸ್ಥ್ಯಕ್ಕೂ ಹಾನಿಯಿದೆ. ಆದರೆ ಸೈಕಲ್ ರಿಕ್ಷಾಕ್ಕೆ ಧನ ಸಹಾಯ ಇಲ್ಲ. ಬದಲಾಗಿ ವಾಹನ ಚಾಲನಾ ತರಬೇತಿ ಪಡೆದ ಪರಿಶಿಷ್ಟ ಪಂಗಡದವರಿಗೆ ಸರಕು ಸಾಗಾಟ ವಾಹನ ಖರೀದಿಸಲು ಸಹಾಯ ನೀಡುತ್ತೇವೆ. ಸುಮಾರು 25ಸಾವಿರ ರೂಪಾಯಿ ಸಬ್ಸಿಡಿ ಹಾಗೂ 25ಸಾವಿರ ರೂಪಾಯಿ ಬ್ಯಾಂಕ್ ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎಂ. ಚಂದ್ರಕಾಂತ ಹೇಳುತ್ತಾರೆ. ಸುಮಾರು ಹದಿನೈದು ವರ್ಷಗಳ ಹಿಂದೆ ನಗರದ ಸೈಕಲ್ ರಿಕ್ಷಾಗಳಿಗೆ ಮೋಟರ್ ಅಳವಡಿಸಿ ಚಾಲಾಯಿಸುವ ಪ್ರಯತ್ನ ವಿಫಲಗೊಂಡದನ್ನು ಅವರು ನೆನಪಿಸುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.