400 ಮಕ್ಕಳಲ್ಲಿ ‘ಕೆರಾಟೋಕನಸ್‌’ ಸೋಂಕು!

ಶನಿವಾರ, ಮೇ 25, 2019
32 °C

400 ಮಕ್ಕಳಲ್ಲಿ ‘ಕೆರಾಟೋಕನಸ್‌’ ಸೋಂಕು!

Published:
Updated:

ಈ ವರ್ಷದಲ್ಲೇ 400ಕ್ಕೂ ಹೆಚ್ಚು ಮಕ್ಕಳಲ್ಲಿ ‘ಕೆರಾಟೋಕನಸ್‌’ ಸೋಂಕು ಕಂಡುಬಂದಿದೆ. ಕಳೆದ ವರ್ಷ 480 ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಮಕ್ಕಳ ಭವಿಷ್ಯದ ದೃಷ್ಟಿ ಯಿಂದ ಇದೊಂದು ಅಪಾಯಕಾರಿ ಬೆಳವಣಿಗೆ ಎಂದು ವೈದ್ಯಲೋಕ ಆತಂಕ ವ್ಯಕ್ತಪಡಿಸಿದೆ.

ಏನಿದು ‘ಕೆರಾಟೋಕನಸ್‌’?

ಕೆರಾಟೋಕನಸ್‌ ತೀವ್ರ ತೆರನಾದ ಕಣ್ಣಿನ ರೋಗ. ಸೋಂಕು ಕಾಣಿಸಿಕೊಂಡ ಕಣ್ಣಿನ ಮುಂಭಾಗದಲ್ಲಿರುವ ವೃತ್ತಾಕಾರದ ಕಾರ್ನಿಯಾ ನಿಧಾನವಾಗಿ ತೆಳುವಾಗುತ್ತಾ ಶಂಕಾಕೃತಿಯಂತೆ ಊದಿಕೊಳ್ಳುತ್ತದೆ. ಬೆಳಕು ಶಂಕಾಕೃತಿ ಕಾರ್ನಿಯಾ ಮೇಲೆ ಬಿದ್ದಾಗ ನೇರವಾಗಿ ಪ್ರತಫಲನಗೊಳ್ಳುವ ಬದಲು ವಾರೆಯಾಗಿ ಅಕ್ಷಿಪಟಲದ (ರೆಟಿನಾ) ಮೇಲೆ ಪ್ರತಿಫಲನಗೊಳ್ಳುತ್ತದೆ. ಇದು ವಿಕಾರ ಮತ್ತು ವಕ್ರ ದೃಷ್ಟಿದೋಷಕ್ಕೆ ಕಾರಣವಾಗುತ್ತದೆ. 

ದಿನವಿಡೀ ಮೊಬೈಲ್‌, ದೂಳು ಹಾಗೂ ಮಣ್ಣಿನಲ್ಲಿ ಆಡುವ ಮಕ್ಕಳು ಆಗಾಗ ಕಣ್ಣು ಉಜ್ಜುತ್ತಲೇ ಇದ್ದರೂ ಪೋಷಕರು ಇದನ್ನು ಸಾಮಾನ್ಯ ಸೋಂಕು ಎಂದು ನಿರ್ಲಕ್ಷಿಸುವುದೇ ಹೆಚ್ಚು. ಕಣ್ಣು ಉಜ್ಜುವುದು ‘ಕೆರಾಟೋಕನಸ್‌’ ನಂತಹ ಅಪಾಯಕಾರಿ ರೋಗದ ಲಕ್ಷಣ ಎಂಬುದು ಹಲವರಿಗೆ ತಿಳಿದಿಲ್ಲ. 

‘ಈ ಸೋಂಕನ್ನು ನಿರ್ಲಕ್ಷಿಸಿದರೆ, ಶಾಶ್ವತವಾಗಿ ಕಣ್ಣನ್ನು ಕಳೆದುಕೊಳ್ಳಬೇಕಾಗುತ್ತದೆ. ತುರಿಕೆಯ ಕಾರಣಕ್ಕಾಗಿ ಮಕ್ಕಳು ಕಣ್ಣನ್ನು ಉಜ್ಜುತ್ತಲೇ ಇರುತ್ತಾರೆ. ಇದರಿಂದ ಸೋಂಕು ಹೆಚ್ಚಿ, ದೃಷ್ಟಿ ಮಂದಾಗುತ್ತದೆ. ಕನ್ನಡಕ ಹಾಕಿದರೂ ಕಣ್ಣು ಕಾಣದಿದ್ದಾಗ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ಈ ಹಂತವನ್ನೂ ದಾಟಿದ್ದರೆ, ಕಣ್ಣಿನ ಕಸಿಯೇ ಅನಿವಾರ್ಯ’ ಎಂದು ಅಗರವಾಲ್‌ ಐ ಹಾಸ್ಪಿಟಲ್‌ನ ವೈದ್ಯ ಡಾ.ರಘು ನಾಗರಾಜ್‌ ಹೇಳಿದರು. 

‘ಕೆರಾಟೋಕನಸ್‌ ಸೋಂಕಿಗೆ ಒಳಗಾದರೆ ಆರಂಭದಲ್ಲಿ ಸ್ವಲ್ಪ ದೃಷ್ಟಿ ಮಂದಾಗುತ್ತದೆ. ನಿಧಾನವಾಗಿ ದೃಷ್ಟಿ ಕಳೆದುಕೊಳ್ಳುತ್ತಾರೆ. ಶಸ್ತ್ರಚಿಕಿತ್ಸೆ ಬಳಿಕವೂ ಸರಿಯಾದ ಶುಶ್ರೂಷೆ ಸಿಗದಿದ್ದರೆ ಕಣ್ಣು ಮಂಜಾಗುವ ಸಾಧ್ಯತೆ ಇದೆ. ಇದು 8ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಅಗತ್ಯವಾದ ಚಿಕಿತ್ಸೆ ಸಿಗದಿದ್ದರೆ 35 ವರ್ಷದವರೆಗೂ ಮುಂದುವರಿಯುತ್ತದೆ’ ಎಂದು ಡಾ.ರವಿ ಮಾಹಿತಿ ನೀಡಿದರು. 

‘ಇತ್ತೀಚಿನ ದಿನಗಳಲ್ಲಿ 18 ವರ್ಷದ ಯುವಕ, ಯುವತಿಯರಲ್ಲೂ ಇದು ಕಾಣಿಸಿಕೊಳ್ಳುತ್ತಿದೆ. ಮೊಬೈಲ್‌ ಸ್ಕ್ರೀನ್‌ನ ಬೆಳಕು, ಕಣ್ಣಿಗೆ ನೇರವಾಗಿ ತೊಂದರೆ ಮಾಡುತ್ತಿದೆ. ಕೆರಾಟೋಕನಸ್‌ ಲಕ್ಷಣಗಳು ಕಂಡುಬಂದರೂ ಈ ಮೊದಲು ರೋಗವನ್ನು ಖಚಿತಪಡಿಸಲು ಬೇಕಾದ ತಂತ್ರಜ್ಞಾನದ ಕೊರತೆ ಇತ್ತು. ಈಗ ಹಾಗಿಲ್ಲ. ಮೊದಲೇ ಗೊತ್ತಾಗುತ್ತದೆ. ಆದರೆ ರೋಗಿಗಳನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬರುವುದು ಪೋಷಕರ ಜವಾಬ್ದಾರಿ. ಮಕ್ಕಳು ಆಗಾಗ ಕಣ್ಣು ಉಜ್ಜುತ್ತಿದ್ದರೆ, ಸೋಂಕಿನ ಔಷಧಿ ನೀಡಿ ಸುಮ್ಮನಾಗಿಬಿಡುತ್ತಾರೆ. ಯಾವುದೇ ಪರೀಕ್ಷೆ ಮಾಡಿಸಲು ಮುಂದಾಗುತ್ತಿಲ್ಲ’ ಎಂದು ಅವರು ಆತಂಕ ವ್ಯಕ್ತಪಡಿಸಿದರು. 

‘ಡಾ.ಅಗರವಾಲ್‌ ಆಸ್ಪತ್ರೆಗೆ ದಾಖಲಾಗಿದ್ದ 25 ವರ್ಷದ ಯುವರಾಜ್‌ ಅವರಿಗೂ ಕೆರಾಟೋಕನಸ್‌ ಕಂಡುಬಂದಿತ್ತು. ಮೊದಲು ಅವರು ನಿರ್ಲಕ್ಷಿಸಿದ್ದರು. ಬಳಿಕ ಅಗರವಾಲ್‌ನಲ್ಲಿ ಚಿಕಿತ್ಸೆ ಪಡೆದರು. ಈಗ ಅವರಿಗೆ ಶಸ್ತ್ರಚಿಕಿತ್ಸೆಯಾಗಿದೆ. ಕಣ್ಣು ಮೊದಲಿನಿಂತೆ ದೃಷ್ಟಿ ಪಡೆದುಕೊಂಡಿದೆ. ಆದರೆ ಅವರಿಗೆ ಸಾಕಷ್ಟು ಆರೈಕೆಯ ಅಗತ್ಯವಿರುತ್ತದೆ’ ಎಂದು ವೈದ್ಯರು ಹೇಳಿದರು.‌

ಸರ್ಜರಿ ಹಾಗೂ ಚಿಕಿತ್ಸೆಯ ವೆಚ್ಚ

ಆರಂಭಿಕ ಹಂತದಲ್ಲಿ ಪತ್ತೆಯಾದರೆ ಕಡಿಮೆ ಖರ್ಚಿನಲ್ಲಿ ಇದನ್ನು ಗುಣಪಡಿಸಬಹುದು. ಸರ್ಜರಿ ಹಂತ ತಲುಪಿದರೆ ₹20 ರಿಂದ ₹30 ಸಾವಿರ ಖರ್ಚಾಗುತ್ತದೆ. ಈ ಚಿಕಿತ್ಸೆಯಲ್ಲಿ ಹಣಕ್ಕಿಂತ ಮುಖ್ಯವಾದದ್ದು ಕಣ್ಣುಗಳ ಆರೋಗ್ಯ. ದೃಷ್ಟಿ ತೀರಾ ಮಂದ ಆಗಿದ್ದ ಸಂದರ್ಭದಲ್ಲಿ ಸರ್ಜರಿಯಾದರೂ ಕೆಲವರಿಗೆ ಕಣ್ಣು ಮರಳದಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ರೋಗ ಲಕ್ಷಣಗಳನ್ನು ತಿಳಿದುಕೊಂಡು ಬೇಗ ಚಿಕಿತ್ಸೆ ಪಡೆಯುವುದೇ ಎಲ್ಲಕ್ಕಿಂತ ಉತ್ತಮವಾದ ವಿಧಾನ.

ಕಣ್ಣನ್ನು ದಾನ ಮಾಡುವವರ ಸಂಖ್ಯೆ ಭಾರತದಲ್ಲಿ ತೀರಾ ಕಡಿಮೆ ಇದೆ. ಒಮ್ಮೆ ಕಣ್ಣು ಕಳೆದುಕೊಂಡರೆ ಅದನ್ನು ಮರಳಿ ಪಡೆಯುವ ಮಾರ್ಗ ಕಠಿಣವಾಗಿದೆ. ಪ್ರತಿದಿನ ಮರಣ ಹೊಂದುವವರಲ್ಲಿ ಶೇ 1ರಷ್ಟು ಜನರು ನೇತ್ರದಾನ ಮಾಡಿದರೂ ಸಾಕು. ಆದರೆ ಇದು ಆಗುತ್ತಿಲ್ಲ.

ಡಾ.ರಘು ನಾಗರಾಜ್‌, ಅಗರವಾಲ್‌ ಐ ಹಾಸ್ಪಿಟಲ್‌ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !